‘ಎಸಳು’ ಕೃತಿಯು ದೇವು ಪತ್ತಾರ ಅವರ ಸಂಪಾದಿತ ವಿ. ಕೃ ಗೋಕಾಕ ಅವರು ವಿವಿಧ ಕೃತಿಗಳಿಗೆ ಅಂದರೆ ಒಟ್ಟು 44 ಕೃತಿಗಳಿಗೆ ಬರೆದ ಮುನ್ನಡಿಗಳ ಸಂಗ್ರಹವಾಗಿದೆ. ಬರಿ ಪದ್ಯವಾಗದ ಕಾವ್ಯ (ವಿ. ಜಿ ಭಟ್ಟ), ಆತ್ಮಪರೀಕ್ಷಣದ ಜೋಗುಳ (ಚೆನ್ನವೀರ ಕಣವಿ), ಬಣ್ಣ ಬಣ್ಣದ ಇಂದ್ರಧನುಸ್ಸು ( ದಿನಕರ ದೇಸಾಯಿ), ಅರಳುವ ಒಲವಿನ ಅಲರು (ರಾಮಚಂದ್ರ ಕೊಟ್ಟಲಗಿ), ಚಿತ್ತಾಕರ್ಷಕ ಪ್ರೇಮಗೀತೆಗಳ ಸಾತ್ವಿಕತೆ (ಮಹಾದೇವ ಬಣಕಾರ), ಸ್ವರವೆತ್ತಿ ನಿಂತ ವ್ಯಂಜನದ ಸ್ವರ್ಣಮಾಯೆ (ಸು. ರಂ ಎಕ್ಕುಂಡಿ), ಕರುಳಬಳ್ಳಿಯ ಕರುಳಿನ ವಚನ (ವಿವಿಧ ಕವಿಗಳು), ಸತ್ವವಿರುವ ಬೀಜ- ಕೊಂಕಿಲ್ಲದ ಅಂಕುರ (ಜಿನದತ್ತ ದೇಸಾಯಿ), ಸಮುದ್ರದಾಚೆಯ ಅಭಿವ್ಯಕ್ತಿಯ (ವಿ. ಕೃ ಗೋಕಾಕ, ಚೆನ್ನವೀರಕಣವಿ), ಮರಳುವಿಕೆ ಮೀರಿನಿಂತ ಅರಳುಗಳ ಚೆಂದ (ಅಂಬಿಕಾತನಯದತ್ತ), ಮೈಮಸೆದ ಹದದ ಚಿನ್ನದ ಗೆರೆ (ಜಿ.ವಿ ಕುಲಕರ್ಣಿ), ಜಾಗೃತ ಅಂತಃಕರಣ-ಕಲ್ಪಕತೆಯ ಅನುಸಂಧಾನ (ಚಂದ್ರಶೇಖರ ಪಾಟೀಲ), ಚಿಕ್ಕೆವೆಳಕಿನಲಿ ಕಳೆಯದ ಪರಿಹಾಸ (ಆರ್. ವ್ಹಿ. ಹೊರಡಿ), ಕೇದಗೆ ಹೊಡೆಯ ಕಂಪು (ಗಂಗಾಧರ ಚಿತ್ತಾಲ), ಛಂದೋಗತ್ತಿಗೆ ಕುಂದಿಲ್ಲದ ನಿರರ್ಗಳತೆ(ಗಿರಡ್ಡಿ ಗೋವಿಂದರಾಜ), ರೋಮ್ಯಾಂಟಿಕ್ ಶೈಲಿಗೆ ನವ್ಯದ ಬೆರಕೆ (ಅರವಿಂದ ನಾಡಕರ್ಣಿ), ಬುದ್ದಿ ಹೃದಯಗಳ ಸಮ್ಮಿಲನ (ಬಿ.ಎ ಸನದಿ), ನವ್ಯಪ್ರಜ್ಞೆಯ ಕವಿತೆಗಳು (ಅಲ್ಲಮ್ಮಪ್ರಭು ಛಬ್ಬಿ), ಪ್ರಜ್ಞಾವಿಕಾಸದ ವಿಶಾಲಕಾವ್ಯ/ ಹೇಮಂತ (ಎಚ್. ಬಿ. ಕುಲಕರ್ಣಿ), ನಿಸರ್ಗೋಪಾಸನೆ-ಮಾನವಾಂತಃಕರಣದ ಕವಿತೆ (ಸಿದ್ದಯ್ಯ ಪುರಾಣಿಕ), ವಿರೋಧಾಭಾಸಗಳೇ ಜೀವಾಳ (ಬೆಟಗೇರಿ ಕೃಷ್ಣಶರ್ಮ, ಆನಂದಕಂದ), ಹಳ್ಳಿಗೆ ಹಿಡಿದ ಕನ್ನಡಿ (ಬಾ. ಕೃ. ಲಕ್ಷ್ಮೇಶ್ವರ), ಎರಡು ಸಂಸ್ಕೃತಿ- ಚಿತ್ತವೃತ್ತಿಗಳ ಸಂಘರ್ಷ (ಅನು : ಗುರುರಾಜ ಭೀ. ಜೋಶಿ). ಮಹಾತ್ಯಾಗಕ್ಕೆ ಅಣಿಗೊಳಿಸಿದ ಮಮತೆ (ನಾರಾಯಣ ಸಂಗಮ), ಅಷ್ಟಪೈಲು ಮಾದರಿಯ ಸತ್ಯದ ಹುಡುಕಾಟ (ನಾ. ಕಸ್ತೂರಿ), ನೆಗ್ಗಲಿ ಮುಳ್ಳುಗಂಟಿಗಳ ನಡುವಿನ ದೇವದಾರು (ದೇಸಾಯಿ ದತ್ತಮೂರ್ತಿ), ಬಣ್ಣಬಣ್ಣಗಳಿಂದ ಸಿಂಗರಿಸಕೊಂಡ ಬೆಳಕಿನ ಕಿರಣ (ಜಿ.ಬಿ ಜೋಶಿ), ವಿಡಂಬನೆ-ಚಿತ್ರಶಕ್ತಿ-ವಾಸ್ತವಿಕತೆ ಬೆರೆತ ಪ್ರಯೋಗ (ಶ್ರೀರಂಗ), ರಮ್ಯ ಮರುಳ್ಗಳ ಪೋಣಿಸಿದ ದೃಶ್ಯಕಾವ್ಯ (ಕೃಷ್ಣಮೂರ್ತಿ ಪುರಾಣಿಕ್ಯ), ಸಂಭಾಷಣೆಗಳ ಮಾಧುರ್ಯ (ಬೇಂದ್ರೆ ಲಕ್ಷ್ಮಣರಾಯರು), ದೃಶ್ಯಕಾವ್ಯಾತ್ಮಕ ಚರಿತ್ರ (ಟಿ.ಎಚ್.ಎಂ. ಸದಾಶಿವಯ್ಯನವರು), ಸೌಂದರ್ಯ ಮಾರ್ಗದಿಂದ (ಗೆಳೆಯರ ಗುಮಪು, ರಾ.ಬ. ಜಾಗಿರದಾರ), ಸ್ವಚ್ಛಂದ ಮನಸಿನ ಲಹರಿ (ಜಿ.ಬಿ ಜೋಶಿ), ಸಾಹಿತ್ಯ ಮಾಲೆಯ ಓದಿನ ಅನುಭವ (ದೇಶಪಾಂಡೆ ಮನೋಹರರಾಯ), ಒಡಮೂಡಿದ ಆತ್ಮಪುರುಷನ ಮೂರುತಿ (ವಿ. ಕೃ ಗೋಕಾಕ್), ಸ್ಮೃತಿಪಥದ ರನ್ನಮಂಜಿನಲ್ಲಿ ನೋಡಿದ ಕಥನ (ಜಿ. ವಾಮನ ಭಟ್ಟ), ಮಂಜಿನಾಚೆ ಬೆಳಗುವ ಚಿರಂತನ ಚೆಲುವು (ರಾ.ಯ ಧಾರವಾಡಕರ), ರಸಾತ್ಮಕ ವಿಮರ್ಶೆಯಾದ ಪ್ರೀತಿ (ಪಂಚಾಕ್ಷರಿ ಹಿರೇಮಠ), ಜಾಗೃತ ಕಲಾಪ್ರಜ್ಞೆಯ ಚೆಲುವು (ಬಿ. ಆರ್. ವಾಡಪ್ಪಿ), ಹಳ್ಳಿಯ ಬಯಲಿನ ಸ್ವಚ್ಛಂದ ಕಲ್ಪನಾಶಕ್ತಿ (ಕಾಪಸೆ ರೇವಪ್ಪ), ಮನ ಸೆಳೆವ ಮೋಹಕ ಕಥನಶೈಲಿ (ಶ್ರೀಸ್ವಾಮಿ), ಲಾಲಿತ್ಯ ಸುಭತೆಗಳಿರುವ ಕತೆಗಳು (ವರದರಾಜ ಹುಯಿಲಗೋಳ), ಮಾಧುರ್ಯದೊಡನೆ ಬೆರೆತ ಓಜಸ್ಸು (ಹಿರೇಮಲ್ಲೂರು ಈಶ್ವರನ್), ರಸಿಕತೆ -ಪಾಂಡಿತ್ಯ-ಪರಿಶ್ರಮದ ಸಮ್ಮಿಲನ (ಎಸ್. ಅನಂತನಾರಾಯಣ), ಅನುಬಂಧ-1, ಅನುಬಂಧ-2, ಅನುಬಂಧ-3, ಅನುಬಂಧ-4ಗಳನ್ನು ಒಳಗೊಂಡಿದೆ.
ಕೃತಿಯ ಕುರಿತು ಅಭಿನವ ಪ್ರಕಾಶನದ ನ. ರವಿಕುಮಾರ ಅವರು, ‘ಕನ್ನಡದಲ್ಲಿ ಮುನ್ನುಡಿಗಳಿಗೆ ತನ್ನದೇ ಆದ ಪರಂಪರೆ ಇದೆ. ಮಾತ್ರವಲ್ಲ; ಅವುಗಳಿಗೆ ಚಾರಿತ್ರಿಕವಾದ ಮಹತ್ವ ಕೂಡ ಇದೆ. ಆ ಕುರಿತ ಅಧ್ಯಯನವಾಗಬೇಕಿದೆ. ಆದರೆ, ಅಂಥ ಮುನ್ನುಡಿಗಳು ಸುಲಭವಾಗಿ ಸಿಗುವಂತಾಗಬೇಕು. ಈಗಾಗಲೇ ಬೇಂದ್ರೆಯವರ ಮುನ್ನುಡಿಗಳ ಸಂಕಲನ, ಯು. ಆರ್. ಅನಂತಮೂರ್ತಿ ಅವರು ಬರೆದ ಮುನ್ನುಡಿಗಳ ಸಂಕಲನ, ಹೀಗೆ ಕೆಲವು ಬಂದಿವೆ. ಇನ್ನೂ ಕೆಲವು ಆಯಾ ಲೇಖಕರ ವಿಮರ್ಶಾ ಸಂಕಲನಗಳಲ್ಲಿ, ಇತರ ಬರಹಗಳ ಜೊತೆಗೆ ಪ್ರಕಟಗೊಂಡಿವೆ. ಇನ್ನೂ ಕೆಲವಕ್ಕೆ ಅಂಥ ಭಾಗ್ಯ ಕೂಡ ಒದಗಿ ಬಂದಿಲ್ಲ. ವಿ. ಕೃ. ಗೋಕಾಕರು ಕನ್ನಡ ಸಾಹಿತ್ಯ ಕಂಡ ಅಪರೂಪದ ವಿದ್ವಾಂಸರು ಮಾತ್ರವಲ್ಲ; ಚಿಂತನಶೀಲ ಪ್ರತಿಭೆ ಕೂಡ, ಅವರ ಹಲವು ಮುನ್ನುಡಿಗಳು, ಬರಹಗಳು, ಭಾಷಣಗಳು, ಇಂಗ್ಲಿಷ್ ಲೇಖನಗಳು ಓದುಗರಿಗೆ ದೊರೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾಡಿದ ಪ್ರಯತ್ನಗಳಲ್ಲಿ ಮುಖ್ಯವಾದುದು ಈ ಸಂಕಲನ. ಮತ್ತೊಂದು ಆಯಾಮದಲ್ಲಿಯೂ ಈ ಸಂಕಲನಕ್ಕೆ ಮಹತ್ವವಿದೆ. ಇಲ್ಲಿ ಮುನ್ನುಡಿ ಬರೆದವರು ಎಷ್ಟು ಮುಖ್ಯವೋ, ಅದರಲ್ಲಿರುವ ಸಾಹಿತ್ಯಕ ಮೌಲ್ಯ ಎಷ್ಟು ಮುಖ್ಯವೋ ಅದರಷ್ಟೆ ಬರೆದ ಪುಸ್ತಕ ಮತ್ತು ಲೇಖಕರೂ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾದುದು. ಹೀಗಾಗಿ, ಈ ಸಂಕಲನಕ್ಕೆ ಚಾರಿತ್ರಿಕ ಮೌಲ್ಯ ತನ್ನಿಂತಾನೆ ಲಭ್ಯವಾಗಿದೆ ’ ಎಂದಿದ್ದಾರೆ.
©2024 Book Brahma Private Limited.