‘ಬದುಕೊಂದು ಭಾವಗೀತೆ’ ಲೇಖಕ ರಮೇಶಬಾಬು ಯಾಳಗಿ ದ್ವಿಪದಿಗಳ ಸಂಕಲನ. ಒಟ್ಟು 913 ದ್ವಿಪದಿಗಳಿವೆ. ಜೀವನದ ವಿವಿಧ ರಂಗ, ಘಟನೆ, ಆಗು, ಹೋಗುಗಳು ದ್ವಿಪದಿಗಳ ಕಾವ್ಯಾಂಶವಾಗಿವೆ. ತಾಯಿ, ರೈತ, ಗೆಳೆಯ, ಪ್ರೇಮ, ಜಗಳ, ಪರಿವಾರ, ಕಷ್ಟ, ನಷ್ಟ, ಹೀಗೆ ಅನೇಕ ವಿಷಯಗಳ ಬಗ್ಗೆ ಚಿಂತಿಸಿ-ಮಂಥಿಸಿ, ಅಳೆದು-ತೂಗಿ ರಚಿಸಿದ್ದಾರೆ.
ದ್ವಿಪದಿ, ತ್ರಿಪದಿ, ಚೌಪದಿ, ಹಾಯ್ಕು-ಗಜಲ್ ಇವೆಲ್ಲ ಕವಿತೆ ಎಂಬ ತಾಯಿ ಹಡೆದ ವಿವಿಧ ಗುಣಗಳುಳ್ಳ ಮಕ್ಕಳಂತೆ. ಹತ್ತಿಪ್ಪತ್ತು ಸಾಲುಗಳಲ್ಲಿ ಕವಿತೆ ಮೂಡಿ ಬರಲಿಕ್ಕೆ, ವಿಷಯ ಅರಳಲಿಕ್ಕೆ ಸಾಧ್ಯತೆ ಇದೆ. ಆದರೆ ದ್ವಿಪದಿ, ತ್ರಿಪದಿಗಳಲ್ಲಿ ಚುಟುಕಾಗಿ ಒಂದು ವಿಷಯ ಹೇಳಲಿಕ್ಕೆ ವಿಶೇಷ ಪ್ರತಿಭೆ ಬೇಕು. ಆ ಪ್ರತಿಭೆ ಇಲ್ಲಿದೆ. ಇಲ್ಲಿ ಒಂದೇ ವಸ್ತುವಿನ ಬಗ್ಗೆ ಅನೇಕ ದ್ವಿಪದಿಗಳಿವೆ. ಈ ಕೃತಿಯಲ್ಲಿ ಯುವಕರಿಗೆ ನೀತಿಯ ಪಾಠವಿದೆ. ಕೌಟುಂಬಿಕ ಜೀವನಕ್ಕೆ ಬೇಕಾದ ಸುಂದರ ಸಂದೇಶವಿದೆ, ಸತ್ಸಂಗದ ಸವಿ ಇದೆ, ಆಧ್ಯಾತ್ಮದ ಅನುಭಾವವಿದೆ. ಅನಾಚಾರಿಗಳಿಗೆ ಬುದ್ಧಿಯ ವಾದವಿದೆ. ಸೋಮಾರಿಗಳಿಗೆ ಎಚ್ಚರಿಸುವ ಸಂಗೀತವಿದೆ. ಬದುಕಿನಲ್ಲಿ ಬರುವ ಎಲ್ಲ ಪ್ರಸಂಗಗಳಲ್ಲಿ ನಾವು ಹೇಗೆ ಬದುಕಬೇಕೆಂಬುದನ್ನು ತೋರಿಸುವ ಬೆಳಕಿದೆ. ಜಿಟಿ-ಜಿಟಿ ಮಳೆ ಬಂದು ಭೂಮಿಯನ್ನು ಚೆನ್ನಾಗಿ ಹಸಿ ಮಾಡುವಂತೆ ಯಾಳಗಿ ಅವರ ಒಂದೊಂದು ದ್ವಿಪದಿಗಳು ಓದುಗರ ಮನೋಭೂಮಿಕೆಯನ್ನು ತಣಿಸುತ್ತವೆ. ಕಾಯಕದ ಪ್ರಜ್ಞೆ, ಆದರ್ಶ ದಾಂಪತ್ಯ, ಬದುಕಿನ ಸಮಸ್ಯೆಗಳು ಸಹಜ, ಒತ್ತಡದ ಜೀವನದ ಪರಿಣಾಮ, ರೈತರ ಬಗ್ಗೆ ಕಾಳಜಿ, ಯೋಧರಿಗೆ ಗೌರವ, ಸಿರಿ ಬಂದಾಗ ಹಿಗ್ಗಬೇಡ ಬಡತನ ಬಂದಾಗ ಕುಗ್ಗಬೇಡ, ಬದುಕೊಂದು ಜೇನು, ಸ್ವಾಭಿಮಾನದಿಂದ ಬದುಕು, ತುಳಿದರೂ ಬೆಳೆಯುತ್ತದೆ ಹುಲ್ಲು, ಬರಗಾಲದ ಬವಣೆ, ಭಾವೈಕ್ಯತೆಯ ಮಹತ್ವಸ ಸಾಮರಸ್ಯದ ಹಬ್ಬಗಳು ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕನ್ನು ಚೆಲ್ಲಿದ್ದಾರೆ. ಓದುಗರ ಮನೋದರ್ಪಣದಲ್ಲಿ ಗಾಢವಾಗಿ ಪ್ರತಿಬಿಂಬಿಸುವಂತೆ ದ್ವಿಪದಿಗಳು ಬರೆಯುವಲ್ಲಿ ಲೇಖಕರು ಸಫಲರಾಗಿದ್ದಾರೆ.
©2024 Book Brahma Private Limited.