ಒಂದು ಸಾಹಿತ್ಯ ಕೃತಿಯ ವಸ್ತು, ಭಾಷೆ, ತಂತ್ರದ ನಿಜವಾದ ಅಧ್ಯಯನವೆಂದರೆ ಆ ಸಮಾಜದ ಒಟ್ಟು ಸಂಸ್ಕ್ರತಿಯ ಬಹುಮುಖಿ ಅಧ್ಯಯನವೆಂದೂ ಲೇಖಕ ಕಟ್ಟಿದ ಅಖಂಡ ಬದುಕಿನ ಪರಿಪ್ರೇಕ್ಷ್ಯದ ಅಧ್ಯಯನವೆಂದೂ ಅರ್ಥವೆಂಬುದನ್ನು ಮತ್ತೆ ನಿರ್ವಚಿಸುವಷ್ಟು 'ಕೋಳಿ ಅಂಕ'ದ ಕಥೆಗಳು ಸಶಕ್ತವಾಗಿವೆ ಎನ್ನುತ್ತಾರೆ ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ. ಅವರು ಲೇಖಕ ಕುರುವ ಬಸವರಾಜ್ ಅವರ ‘ಕೋಳಿ ಅಂಕ’ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..
ಕೃತಿ: ಕೋಳಿ ಅಂಕ
ಲೇಖಕ: ಕುರುವ ಬಸವರಾಜ್
ಪುಟ: 120
ಬೆಲೆ: 100
ಮುದ್ರಣ: 2020
ಪ್ರಕಾಶನ:ಕಿ.ರಂ.ಪ್ರಕಾಶನ
ಡಾ. ಕುರುವ ಬಸವರಾಜು ನಮ್ಮ ಗ್ರಾಮ ಸಂವೇದನೆಯ ವಿಶಿಷ್ಟ ಕಥೆಗಾರ. ಜಾನಪದ ಲೋಕದೊಂದಿಗಿನ ಒಡನಾಟವೂ ಅವರ ಹಳ್ಳಿಗಾಡಿನ ಸಂಸ್ಕೃತಿಯ ಶೋಧನೆಗೆ ಜೊತೆಯಾಗಿರುವುದರ ಲಾಭವನ್ನು ನಾವು ಅವರ 2021ರ ಮಾಸ್ತಿ ಕಥಾ ಪುರಸ್ಕಾರ ಪಡೆದಿರುವ 'ಕೋಳಿ ಅಂಕ'ದ ಕಥೆಗಳಲ್ಲಿ ಗಮನಿಸಬಹುದು. ಕನ್ನಡದಲ್ಲಿ ಗ್ರಾಮೀಣ ಪರಿಸರದ ವಸ್ತುವುಳ್ಳ ಬಹುಬಗೆಯ ಕಥಾ ಸಂಕಲನಗಳು ಮಾಸ್ತಿಯವರ ಕಾಲದಿಂದಲೂ ಮೊದಲ್ಗೊಂಡು ಹೇರಳವಾಗಿ ಪ್ರಕಟವಾಗಿವೆ. ಆದರೆ ಡಾ. ಕುರುವ ಬಸವರಾಜು ಅವರ 'ಕೋಳಿ ಅಂಕ' ತೆರೆದು ತೋರುವ ಗ್ರಾಮ್ಯ ಭಾಷೆಯ ಬದುಕು,ಲಯಗಳು ತುಂಬ ಅಪರೂಪದ್ದು.
ಹತ್ತು ಕಥೆಗಳು ಇಲ್ಲಿವೆ. ಈ ಲೇಖಕರ ಕಥೆಗಳ ಒಟ್ಟಾರೆ ಲಕ್ಷಣವೆಂದರೆ ಅದೊಂದು ಗ್ರಾಮ್ಯ ಸಾಂಸ್ಕೃತಿಕ ಪ್ರಕ್ರಿಯೆಗಳ ದಾಖಲೆಯಂತಿರುವುದು. ಈ ಸಂಕಲನದ ಅನೇಕ ಕಥೆಗಳು ಮಾನವನ ಸಾಂಘಿಕ ಜೀವನದ ಅಭೀಪ್ಸೆಯ ಅಂತರಾಳದಲ್ಲಿ ಹುದುಗಿರಬಹುದಾದ ಮೂಲಭೂತ ಸಮಸ್ಯೆಗಳನ್ನು ಬೆದಕುತ್ತವೆ. ಆ ಮುಖೇನ ಅದರೆಲ್ಲ ಸಾಧ್ಯತೆ-ಸಂಕೀರ್ಣತೆಗಳನ್ನು ತನ್ನೊಡಲಿಗೆ ವಸ್ತುವಾಗಿಸಿಕೊಂಡು ದುಡಿಸಿಕೊಳ್ಳುತ್ತವೆ.
'ಉತ್ತರಿಸು ತಾಯೆ' ಎಂಬ ಕಥೆ ಮಾತ್ರ ಹಳ್ಳಿಯ ಮುಗ್ಧ ಜೀವವಾದ ತಾಯಿಯ ಮೌಢ್ಯ ಮತ್ತು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ವೈದ್ಯಳಾಗಿರುವ ಮಗಳ ಮನೋಭೂಮಿಕೆಯ ಸಂಘರ್ಷವನ್ನು ಮುಖಾಮುಖಿಯಾಗಿಸುತ್ತದೆ. ಉಳಿದಂತೆ ಉರಿ, ಯಾತಕ್ಕೆ ಮಳೆ ಹೋದವೋ, ಕುಡುಗೋಲು, ಬೆಂಕಿ ಮುಂತಾದ ಕಥೆಗಳು ನಮ್ಮ ದೇಶದ ಹಳ್ಳಿಗಾಡಿನ ಜೀವಗಳ ಹಲವು ಅಗೋಚರ ಮುಖಗಳನ್ನು ಓದುಗರಿಗೆ ದರ್ಶಿಸುವಂತೆ ರಚನೆಗೊಂಡಿವೆ.
'ಕೋಳಿ ಅಂಕ' ಸಂಕಲನದುದ್ದಕ್ಕೂ 'ಗ್ರಾಮ ಭಾರತ'ದ ಪಡಿನೆರಳಿದೆ. ಅತ್ತ ಬಯಲುಸೀಮೆ, ಇತ್ತ ಅರೆ ಮಲೆನಾಡು ಸೀಮೆಯ ಹಳ್ಳಿ ಜನರ ಹೃದಯವಂತಿಕೆ, ಔದಾರ್ಯ, ಕ್ರೌರ್ಯ, ಹಿಂಸಾಪ್ರವೃತ್ತಿ, ಸೇಡು, ಕಿಲಾಡಿತನ, ಸಹಜಪ್ರೀತಿ, ತಾಕತ್ತು, ಮುಗ್ಧತೆ, ಮೌಢ್ಯ, ನಂಬಿಕೆಗಳು, ಜೀವನಮೌಲ್ಯ ಮುಂತಾದ ಗುಣಗಳ ಅನಾವರಣದ ಮೂಲಕ ಮನುಷ್ಯ ತಾನು ಬದುಕಿ ಉಳಿಯಲು ಯಾವೆಲ್ಲ ಅವತಾರಗಳನ್ನು ಬದಲಿಸುತ್ತಿರುತ್ತಾನೆಂಬ ಸಂಗತಿಗಳನ್ನು ಲೇಖಕರು ಅತ್ಯಂತ ಸೂಕ್ಷ್ಮಗ್ರಹಿಕೆಯ ಮೂಲಕ ಕಾಣಿಸುತ್ತಾರೆ. ನಮ್ಮ ಗ್ರಾಮಗಳ ಚಿತ್ರಣ ಬದಲಾಗುತ್ತಿರುವ ಕಾಲದಲ್ಲಿ ಸೇಡು-ಕ್ರೌರ್ಯಗಳು ಮುನ್ನೆಲೆಗೆ ಬರುತ್ತಿರುವ, ಮಾನವೀಯತೆ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭವನ್ನು ಬಸವರಾಜು ಅವರು ಅತ್ಯಂತ ವಿಷಾದದಿಂದ ಇಲ್ಲಿನ ಕಥೆಗಳಲ್ಲಿ ಚಿತ್ರಿಸುತ್ತಾರೆ. ಬದಲಾದ ಜಾಗತಿಕ ವಿದ್ಯಮಾನಗಳು ನಮ್ಮ ಹಳ್ಳಿಗಾಡಿನ ಜನರ ಬದುಕನ್ನು ಹೇಗೆಲ್ಲಾ ಮೂರಾಬಟ್ಟೆಯಾಗಿಸಿದವು, ನಗರದ ಹಿಂಸೆಯ ಮತ್ತೊಂದು ಒಳಚಾಚುವಿಕೆಯ ರೂಪ ಹಳ್ಳಿಗಾಡನ್ನು ಈ ಸ್ಥಿತಿಗೆ ತಂದಿರಬಹುದಾದ ಕಾರಣಗಳನ್ನು ಈ ಕಥೆಗಳು ಅಷ್ಟಾಗಿ ಚರ್ಚಿಸ ಹೋಗಿಲ್ಲವಾದರೂ ಬೇರೆ ಬೇರೆ ಮಗ್ಗುಲುಗಳ ಮೂಲಕ ಪರೋಕ್ಷವಾಗಿ ಆ ಸಂಗತಿಗಳನ್ನು ಬೆದಕುತ್ತವೆಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿವೆ.
ಇಲ್ಲಿರುವ ಅನೇಕ ಯಶಸ್ವಿ ಕಥೆಗಳು ಬಸವರಾಜು ಅವರ ಕಥನ ಶೈಲಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ. ಅವುಗಳ ನಡುವೆ 'ಯಾತಕ್ಕೆ ಮಳೆ ಹೋದವೋ' ತನ್ನ ಸೂಕ್ಷ್ಮ ವರ್ಣನಾ ಕೌಶಲದಿಂದ ಓದುಗರನ್ನು ಬೆರಗಾಗಿಸುತ್ತದೆ. ಈ ಕಥೆಯಲ್ಲಿ ಲೇಖಕರು ಕಾಣಿಸುವ ಬರಗಾಲದ ಬಿಡಿ ಬಿಡಿ ಚಿತ್ರಗಳು ಪ್ರಕೃತಿ ವೈಮನಸ್ಸಿನ ಸ್ತಬ್ಧ ಚಿತ್ರಗಳ ಮೆರವಣಿಗೆಯಂತೆ ಗೋಚರಿಸುತ್ತವೆ. ತಾಳಿ ಕೈಗಿಟ್ಟು ಕಾಳು ಕಡಿ ಪಡೆದು ಓಡುವ ಹೆಣ್ಣು ಜೀವದ ಚಿತ್ರವೊಂದು ಆ ಬಗೆಯದು. ಕೇವಲ ಒಂದು ಸಾಲಿನಲ್ಲಿ ಆಕೆಯ ಕಡು ಬಡತನದ ಚಿತ್ರವನ್ನು ಬರೆದು ಬಿಡುವ ಬಸವರಾಜು ಅವರ ಅನನ್ಯ ಶೈಲಿಗೊಂದು ಉದಾಹರಣೆಯಿದು. ಅಂತೆಯೇ ಊರಾಚೆಯ ತಿಮ್ಮಿ ಎರಡು ಮಕ್ಕಳ ಜೊತೆ ಮತ್ತೊಂದು ಹಾಲ್ಗೂಸಿನ ಕತ್ತು ಹಿಚುಕಿ ತಾನೂ ಉರುಲು ಹಾಕಿಕೊಂಡಳೆಂಬ ವಿವರ ಕೂಡ ಮನಸ್ಸನು ಗಾಢವಾಗಿ ತಟ್ಟುತ್ತದೆ. ಯು. ಆರ್. ಅನಂತಮೂರ್ತಿಯವರ 'ಬರ' ಕಥೆಗಿಂತ ಭಿನ್ನವಾದ ಬರ್ಬರ ಬದುಕಿಗೆ ಕಾರಣವಾಗುವ ಧಾರುಣತೆ ಈ ಕಥೆಯೊಡಲಲ್ಲಿ ಅಡಕವಾದಂತಿದೆ.
ಹಾಗೆಂದು ಇಲ್ಲಿ ಬರಿಯ ನೋವು-ದುಃಖಗಳ ವರ್ಣನೆಯೇ ತುಂಬಿದೆಯೆಂದಲ್ಲ. ಅವುಗಳ ಸಂಖ್ಯೆ ಹೆಚ್ಚಿವೆಯೆನಿಸಿದರೆ ಅದು ಆಕಸ್ಮಿಕವೂ ಅಲ್ಲ! 'ಯಾತಕ್ಕೆ ಮಳೆ ಹೋದವೋ' ಕಥೆಯಲ್ಲಿಯೇ ಬರುವ ಹೋರಿಗಳ ಸೊಗಸಾದ ವರ್ಣನೆಯನ್ನೂ ಮರೆಯುವಂತಿಲ್ಲ. ಆ ವರ್ಣನೆಯನ್ನೊಮ್ಮೆ ಗಮನಿಸಿ:
" ಹನುಮಜ್ಜನ ಹೋರಿಗಳೆಂದರೆ ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಹೆಸರುವಾಸಿ. ಹೋರಿಗಳು ಜಾತ್ರೆಗೆ ಬಂದವೆಂದರೆ ಸರ್ಕಸ್ಸಿನ ಪ್ರಾಣಿಗಳನ್ನು ನೋಡಲು ಮುತ್ತಿರುವಂತೆ ಮುತ್ತಿರುತ್ತಿದ್ದರು ಜನ. ಜಾತ್ರೆಗೆ ಬಂದವ ಹನುಮಜ್ಜನ ಹೋರಿ ನೋಡದೆ ಹೋಗುವವನೆ ಅಪರೂಪ. ಆ ಹೋರಿಗಳೋ ಹರೆಯದ ಗರಡಿ ಹುಡುಗರಂತೆ. ಎರಡೂ ಅವಳಿ-ಜವಳಿಯೋ ಎಂಬಂತೆ. ಭುಜ, ನಡ, ತಲೆ, ಕೊಂಬು, ಕಾಲು, ಬಾಲ, ಸುಳಿ, ಸುತ್ತು ಯಾವುದರಲ್ಲೂ ಯಾರೂ ಬೊಟ್ಟು ಮಾಡಿ ತೋರಿಸುವಂತಿಲ್ಲ. ಹೆಜ್ಜೆ ಹಾಕಿದರೆ ಕುದುರೆಗಳಂತೆ, ಬೇಸಾಯಕ್ಕೆ ಹೂಡಿದರೆ ನೇಗಿಲು, ಕುಂಟೆ, ಕುಳ ಗಟ್ಟಿ ಇದ್ದಾವೋ ಇಲ್ಲವೋ ನೋಡಿಯೇ ಹೂಡಬೇಕು. ಹದಿನಾರು, ಹದಿನೆಂಟು, ಇಪ್ಪತ್ತು ಚೀಲ ಗಾಡಿಗೆ ಹೇರಿದರೂ ಪುಟ ಪುಟಿಸಿಯೇ ಹೆಜ್ಜೆ ಹಾಕಿಯಾವು.ಜಾತ್ರೆಗೆ ಬಂದವರು ಪೆಂಟೆಯಲ್ಲಿ ಇವು ನಿಂತ ನಿಲುವನ್ನು ನೋಡಿ 'ಇವೇನು ಹೋರಿಗಳೋ ಸಲಗಗಳೋ' ಅನ್ನದೆ ಇದ್ದಾರೆಯೇ? ಹಾಗಿದ್ದರೂ ಹೊಟ್ಟೆಯ ಕೆಳಗೆ ಆಡೋ ಮಕ್ಕಳು ನುಸಿದರೂ ಸುಮ್ಮನಿರುವಂತಹ ಸಾಧುಗಳೂ ಹೌದು"
ಈ ಮೇಲಿನ ವರ್ಣನೆಯಲ್ಲಿ ಎದುರುಗೊಳ್ಳುವ ಪದಗಳಲ್ಲಿ ಗ್ರಾಮೀಣ ಸೊಗಡಿನ ಗಂಧ ಆಹಾ ಎನ್ನುವಂತೆ ಪಸರಿಸುತ್ತದೆ. ನಮ್ಮ ಮನೆಯಲ್ಲೂ ಇಂತಹ ಹೋರಿಗಳಿದ್ದಿದ್ದರೆ! ಎಂಬ ಭಾವನೆಯನ್ನು ಎಲ್ಲರ ಮನದಲ್ಲೂ ಮೂಡಿಸುವಷ್ಟು ಸಶಕ್ತವಾದ ವಿವರಣೆಯಿದು. ಆದರೆ ಈ ಹೋರಿಗಳೂ ಕೂಡ ಬರಗಾಲದ ಬೇಗೆಯ ಕಾಳ್ಗಿಚ್ಚಿಗೆ ಬಲಿಯಾಗಿ ಸುಟ್ಟುಹೋದಾಗ ಹನುಮಜ್ಜನ ವೃದ್ಧಜೀವ ಕೂಡ ಹೋರಿಗಳ ಜೊತೆಗೇ ಹೊರಟುಹೋಗುವುದು ದುರಂತ. ಬಸವರಾಜು ಅವರ ಲೇಖನಿಯ ಶೈಲಿಗೆ ಇದೊಂದು ಪುಟ್ಟ ಉದಾಹರಣೆಯಾಗಿ ಉಲ್ಲೇಖಿಸಿರುವೆನಷ್ಟೇ.
ಉಳಿದಂತೆ, ಹಳ್ಳಿಗಾಡಿನ ಕಡೆಯ ವೈವಿಧ್ಯಮಯವಾದ ಪಾತ್ರಗಳನ್ನು ಇಲ್ಲಿನ ಕಥಾಲೋಕ ನಮ್ಮ ಕಣ್ಣ ಮುಂದಿರಿಸುತ್ತದೆ. ಡಾ. ಕುರುವ ಬಸವರಾಜು ಅವರ ಕಥಾ ಜಗತ್ತಿನಲ್ಲಿ ಬರುವ ಬಗೆ ಬಗೆಯ ಪಾತ್ರಗಳನ್ನೇ ಒಂದು ಸಮಾಜಶಾಸ್ತ್ರೀಯ ಅಧ್ಯಯನದ ಪರಿಪ್ರೇಕ್ಷ್ಯದಲ್ಲಿ ವಿವರಿಸಿಕೊಳ್ಳಬಹುದು. ಬಸವರಾಜು ಅವರ ಜಾನಪದೀಯ ಆಸಕ್ತಿ ಮತ್ತು ತಜ್ಞತೆ, ವಿದ್ವತ್ತುಗಳು ಮಾನವನ ವರ್ತನೆಗಳನ್ನು ಅಭ್ಯಾಸ ಮಾಡಲು ಪ್ರೇರಪಣೆಯೊದಗಿಸಿ, ಆ ಓದಿನ ಅಗಾಧ ಅನುಭವಗಳನ್ನು ಕಥೆಯಾಗಿ ಕಟ್ಟಲು ನೆರವಾಗಿದೆ. ಹಾಗೆ ನೋಡಿದರೆ ಈ ಬಗೆಯಲ್ಲಿ ನಮ್ಮ ಗ್ರಾಮ್ಯ ಸಂಸ್ಕೃತಿಯನ್ನು ಮನಃಶಾಸ್ತ್ರೀಯ ದೃಷ್ಟಿಯಿಂದ ಕಥೆಯಾಗಿಸಿದ ಕಥನಕಾರರು ವಿರಳ.
ಸಾಹಿತ್ಯ ಕೃತಿಯೊಂದರ ಅಧ್ಯಯನವನ್ನು ಬಹುಶಃ ಅದರ ವಸ್ತು, ರೀತಿ, ತಂತ್ರದ ಭಿನ್ನ ಅಧ್ಯಯನವೆಂದು ಸರಳೀಕರಿಸುವುದೇ ತಪ್ಪು. ಒಂದು ಸಾಹಿತ್ಯ ಕೃತಿಯ ವಸ್ತು, ಭಾಷೆ, ತಂತ್ರದ ನಿಜವಾದ ಅಧ್ಯಯನವೆಂದರೆ ಆ ಸಮಾಜದ ಒಟ್ಟು ಸಂಸ್ಕ್ರತಿಯ ಬಹುಮುಖಿ ಅಧ್ಯಯನವೆಂದೂ ಲೇಖಕ ಕಟ್ಟಿದ ಅಖಂಡ ಬದುಕಿನ ಪರಿಪ್ರೇಕ್ಷ್ಯದ ಅಧ್ಯಯನವೆಂದೂ ಅರ್ಥವೆಂಬುದನ್ನು ಮತ್ತೆ ನಿರ್ವಚಿಸುವಷ್ಟು 'ಕೋಳಿ ಅಂಕ'ದ ಕಥೆಗಳು ಸಶಕ್ತವಾಗಿವೆ ಎಂಬ ಮಾತನ್ನು ಹೇಳುತ್ತ ಈ ಸಂಕಲನಕ್ಕೆ ಮಾಸ್ತಿ ಕಥಾ ಪುರಸ್ಕಾರ ಪಡೆದಿರುವ ಡಾ. ಕುರುವ ಬಸವರಾಜು ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಕೃತಿಯನ್ನು ಓದ ಬಯಸುವವರಿಗೆ ಮಾಹಿತಿ ಕೆಳಗಿನ ಚಿತ್ರದಲ್ಲಿದೆ.
ಕೋಳಿ ಅಂಕ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...
©2024 Book Brahma Private Limited.