ಉತ್ತರ ಕರ್ನಾಟಕದ ನೆಲದ ಕಥೆಯನ್ನು ಓದಬೇಕೆಂಬ ನನ್ನ ಆಸೆಯನ್ನು ಪೂರೈಸಿದ್ದು ಲೇಖಕ ವಸುಧೇಂದ್ರರ ಕಥೆಗಳು. ಉತ್ತರ ಕರ್ನಾಟಕದ ಬಗೆಗಿನ ಲೇಖಕರ ಕಥೆಗಳು ಬೇರೆ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಬರಹಗಾರ ನವೀನಕೃಷ್ಣ ಭಟ್, ಉಪ್ಪಿನಂಗಡಿ. ಖ್ಯಾತ ಲೇಖಕರು ಹಾಗೂ ಪ್ರಕಾಶಕರು ವಸುಧೇಂದ್ರ ಅವರ ಯುಗಾದಿ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ಇಲ್ಲಿದೆ..
ಯುಗಾದಿ - ವಸುಧೇಂದ್ರ
ಹಲವು ಕಾರಣಗಳಿಂದ ನನ್ನ ಸಾಹಿತ್ಯ ಓದಿಗೆ ಎರಡು ತಿಂಗಳುಗಳ ದೀರ್ಘ ಬಿಡುವನ್ನು ತೆಗೆದುಕೊಂಡಿದ್ದೆ. ಬಿಡುವಿನ ಬಳಿಕ ಯಾವುದೇ ಪುಸ್ತಕವನ್ನು ಕೈಗೆತ್ತಿಕೊಂಡರೂ ಹಿಂದಿನ ಓದಿನ ಲಯವನ್ನು (rhythm) ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನನ್ನ ಹಿಂದಿನ ಓದಿನ ಲಯವನ್ನು ಕಂಡುಕೊಳ್ಳುವಲ್ಲಿ ಸಹಕರಿಸಿದ್ದು ವಸುಧೇಂದ್ರರ 'ಯುಗಾದಿ' ಕಥಾಸಂಕಲನ.
ಈ ಕೃತಿಯಲ್ಲಿ 24 ಸಣ್ಣ ಕಥೆಗಳಿವೆ. ಇಲ್ಲಿರುವ ಕೆಲವು ಕಥೆಗಳು ಹಲವು ಪುಟಗಳಿಗೆ ಸೀಮಿತವಾದರೆ; ಮತ್ತೊಂದಿಷ್ಟು ಕಥೆಗಳು ಕೇವಲ ಒಂದೋ ಎರಡೋ ಪುಟಕ್ಕೆ ಸೀಮಿತವಾಗಿದ್ದರೂ ಕಥೆಗಳು ಕಟ್ಟಿಕೊಡುವ ಧ್ವನಿ ಮಹತ್ವದ್ದಾಗಿದೆ.
ಕಾರ್ಪೊರೇಟ್, ಸಾಫ್ಟ್ ವೇರ್ ಪ್ರಪಂಚಕ್ಕೆ ಸಂಬಂಧಿಸಿದ ಕಥೆಗಳು ಇಲ್ಲಿ ಪ್ರಮುಖವಾಗಿ ಇವೆಯಾದರೂ ಎಲ್ಲಿಯೂ ಏಕತಾನತೆ ಕಾಡುವುದಿಲ್ಲ. ಕಂಪೆನಿಯ ಒಳಗೆ ನಡೆಯುವ ಘಟನೆಗಳು, ಅದು ವೈಯಕ್ತಿಕ ಬದುಕಿಗೆ ಉಂಟುಮಾಡುವ ಪರಿಣಾಮಗಳೇ ಮುಂತಾದವುಗಳು ವಿವಿಧ ಕಥೆಗಳಲ್ಲಿ ಬಣ್ಣಿಸಲ್ಪಟ್ಟಿದೆ.
ಉತ್ತರ ಕರ್ನಾಟಕದ ನೆಲದ ಕಥೆಯನ್ನು ಓದಬೇಕೆಂಬ ನನ್ನ ಆಸೆಯನ್ನು ಪೂರೈಸಿದ್ದು ಲೇಖಕ ವಸುಧೇಂದ್ರರ ಕಥೆಗಳು. ಉತ್ತರ ಕರ್ನಾಟಕದ ಬಗೆಗಿನ ಲೇಖಕರ ಕಥೆಗಳು ಬೇರೆ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಸದ್ರಿ ಕಥಾಸಂಕಲನದಲ್ಲಿಯೂ ತಮ್ಮ ಊರು (ಬಳ್ಳಾರಿ), ಊರಿನ ಜನರ ಕಥೆಗಳಿವೆ.
ಇದರ ಜೊತೆಗೇ ನನ್ನ ಗಮನ ಸೆಳೆದಿದ್ದು 'ನಮ್ಮ ನಮ್ಮೊಳಗೆ' ಕಥೆ. ಇಲ್ಲಿ ಕಾಶ್ಮೀರಿಯೊಬ್ಬನ ಬದುಕಿನ ದುರಂತ ಕಥೆಯನ್ನೂ, ಕಾಶ್ಮೀರಿಯೊಬ್ಬ ಸಮಾಜದಲ್ಲಿ ಎದುರಿಸುತ್ತಿದ್ದ/ಎದುರಿಸುತ್ತಿರುವ ಅವಜ್ಞೆ, ಅವಮಾನಗಳನ್ನೂ ತೆರೆದಿಟ್ಟಿದೆ. ಈ ಕಥೆ ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾಯಿತು.
ಅಕ್ಕನ ಜೀವನವನ್ನು ದಡಕ್ಕೆ ಸೇರಿಸುವಲ್ಲಿ ತಮ್ಮನೊಬ್ಬ ಪಟ್ಟ ಪಾಡನ್ನು ತಿಳಿಸುವ 'ಪಾರ್ಥೇನಿಯಮ್' ಕಥೆ ಹೃದ್ಯವಾಗಿ ಚಿತ್ರಿತವಾಗಿದೆ. ಲೇಖಕರ ಇತರ ಕಥೆಗಳಿಗಿಂತ ವಿಭಿನ್ನವಾದ ಕಥೆ 'ಬೇರೇನಿಲ್ಲ, ಒಂಚೂರು ಪ್ರೀತಿ!' ಕಥೆಯನ್ನು ಹೆಣೆಯುವಲ್ಲಿ ಲೇಖಕರ ಉಳಿದ ಕಥೆಗಳಿಗಿಂತ ಇದೊಂದು ವಿಶಿಷ್ಠವಾದ ಪ್ರಯೋಗ ಅಂತ ಅನ್ನಿಸಿತು; ಈ ಕಥೆಯೂ ನನಗೆ ಇಷ್ಟವಾಯಿತು.
ಈ ಕಥಾಸಂಕಲನಕ್ಕೆ ಯು. ಆರ್. ಅನಂತಮೂರ್ತಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಲಭಿಸಿದೆ. ಇಲ್ಲಿರುವ ಬಹುತೇಕ ಹೆಚ್ಚಿನ ಕಥೆಗಳೂ ಬರೆದುದು ಸುಮಾರು 20 ರಿಂದ 25 ವರ್ಷಗಳ ಹಿಂದೆ. ಲೇಖಕರ ಭಟ್ಟಿ ಇಳಿಸಿದ ಗಟ್ಟಿ ಅನುಭವಗಳೇ ಕಥೆಗಳಾಗಿವೆ. ಒಟ್ಟಿನಲ್ಲಿ ಮನಸ್ಸನ್ನು ಉಲ್ಲಸಿತವಾಗಿಸಿದ ಒಳ್ಳೆಯ ಓದು.
- ನವೀನಕೃಷ್ಣ ಭಟ್, ಉಪ್ಪಿನಂಗಡಿ
“ಕಾದಂಬರಿಯ ರಚನಾ ಬಂಧ ಬಿಗಿಯಾಗಿದ್ದು ಎಲ್ಲೂ ಸಡಿಲ ತುದಿಗಳು ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ, ಪ್ರಾಮಾಣಿಕತೆಗ...
“ಲೇಖಕಿ ಗಾಯತ್ರಿ ಅನಂತ್ ಮಹಿಳಾ ಹಾಗೂ ಯುವ ಬರಹಗಾರರಿಗೆ ಉತ್ತೇಜನ ನೀಡುವ ಅಗತ್ಯತೆಯ ಬಗ್ಗೆ ಅರಿವು ಚೆಲ್ಲಿದ್ದಾರೆ...
“ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆ...
©2025 Book Brahma Private Limited.