ವಿಷಾದ, ದುಃಖ, ಆಕ್ರೋಶ, ವ್ಯಂಗ್ಯ, ಮಡುಗಟ್ಟಿದ ದುಃಖ- ಎಲ್ಲವೂ ಬೆರೆತ ಒಂದು ನೀಳ್ಗತೆ ಇದು


"ಎಲ್ಲೋ ಶುರುವಾಗುವ ಕಾದಂಬರಿ, ಒಂದೊಂದೇ ಪಾತ್ರಗಳನ್ನು, ಅವುಗಳ ನೋವುಗಳನ್ನು ಕೂಡಿಕೊಂಡು, ನಮ್ಮ ನಡುವೆಯೇ, ಬೇರೆಬೇರೆ ಕಾಲಗಳ ನಡುವೆ ನದಿಯಂತೆ ಹರಿದೂ ಹರಿದೂ ಕಡೆಗೆ ದಲಿತರ ಮಾರ್ಗದರ್ಶಕ ಅಂಬೇಡ್ಕರ್ ಜಯಂತಿಯನ್ನು ಬಂದು ಸೇರುತ್ತದೆ," ಎನ್ನುತ್ತಾರೆ ವಿಕಾಸ್ ನೇಗಿಲೋಣಿ. ಅವರು ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಗುರುಪ್ರಸಾದ್ ಕಂಟಲಗೆರೆ ಅವರ ಅಟ್ರಾಸಿಟಿ ಕಾದಂಬರಿಯನ್ನು ಒಂದೇ ಉಸುರಿಗೆ ಓದಿ ಮುಗಿಸಿದೆ. ಎಷ್ಟು ಆವರಿಸಿಕೊಂಡ ಕಾದಂಬರಿ ಎಂದರೆ ವಿಷಾದ, ದುಃಖ, ಆಕ್ರೋಶ, ವ್ಯಂಗ್ಯ, ಮಡುಗಟ್ಟಿದ ದುಃಖ- ಎಲ್ಲವೂ ಬೆರೆತ ಒಂದು ನೀಳ್ಗತೆ ಇದು.

ಎಲ್ಲೋ ಶುರುವಾಗುವ ಕಾದಂಬರಿ, ಒಂದೊಂದೇ ಪಾತ್ರಗಳನ್ನು, ಅವುಗಳ ನೋವುಗಳನ್ನು ಕೂಡಿಕೊಂಡು, ನಮ್ಮ ನಡುವೆಯೇ, ಬೇರೆಬೇರೆ ಕಾಲಗಳ ನಡುವೆ ನದಿಯಂತೆ ಹರಿದೂ ಹರಿದೂ ಕಡೆಗೆ ದಲಿತರ ಮಾರ್ಗದರ್ಶಕ ಅಂಬೇಡ್ಕರ್ ಜಯಂತಿಯನ್ನು ಬಂದು ಸೇರುತ್ತದೆ. ಆದರೆ ಯಾವ ಜಾತಿಯವರು ಶೋಷಣೆಗೊಳಗಾಗಿದ್ದಾರೋ ಅವರಿಗೆ ನ್ಯಾಯ ಮಾತ್ರ ಸಿಗುವುದಿಲ್ಲ.

ಅಟ್ರಾಸಿಟಿ, ಒಟ್ಟಾಗಿ ಜಾತಿ ನಿಂದನೆ, ದಲಿತರ ಅವಮಾನದ ಕತೆಯಾಗಿ ಕಂಡರೂ, ಅದನ್ನು ನೀವು ಅತ್ಯಂತ ತಮಾಷೆ ಅಥವಾ ವ್ಯಂಗ್ಯದಲ್ಲಿ ಕಟ್ಟಿದ್ದರೂ ಆಳದಲ್ಲಿ ಇದು ಎತ್ತುವ ಪ್ರಶ್ನೆಗಳು ಬಹಳ ಬಹಳ ಮುಖ್ಯ ಅನ್ನಿಸಿತು. ದಲಿತರ ಕೇರಿಯಿಂದ ಮಹಾನಗರಕ್ಕೆ ಹೋಗಿ, ತನ್ನ ವಿದ್ಯೆ, ಪ್ರತಿಭೆಯಿಂದ ಬೆಳೆಯಲೆತ್ನಿಸಿದ ಸರೋಜಾ ಸತ್ತು ಹೋಗಿದ್ದು, ತೆಂಗಿನ ಕಾಯಿ ತೆಗೆಯುವ ನುರಿತ ಕುಶಲಕರ್ಮಿಯೊಬ್ಬ ವಿದ್ಯುತ್ ತಂತಿ ರಿಪೇರಿಗೆ ಹೋಗಿ ಹೆಣವಾಗಿದ್ದು, ಕಾಮುಕನೊಬ್ಬನ ತೃಷೆಗೆ ರತ್ನ ಬಲಿಯಾಗಿದ್ದು, ತನ್ನ ಜಮೀನಿನಲ್ಲೇ ಕಳ್ಳತನ ಆರೋಪಕ್ಕೆ ಸಿಕ್ಕಿದ ಚಂದ್ರ ಊರು ಬಿಟ್ಟಿದ್ದು- ಇವೆಲ್ಲವೂ ಕೇವಲ ಕತೆಯಲ್ಲ, ಘಟನೆಯಲ್ಲ. ಅದು ಶೋಷಣೆಯ ದೊಡ್ಡ ಪರಂಪರೆಯ ಕೆಲವು ಕೊಂಡಿಗಳಷ್ಟೇ.

ಅದರಲ್ಲೂ ತನ್ನದೇ ತೋಟವನ್ನು ಮಾರಿದವನ ಮೊಮ್ಮಕ್ಕಳು, ಅದು ತಮ್ಮದೇ ಜಮೀನು, ಭೂಮಿ ಮತ್ತು ಅದು ತಮಗೆ ಸಿಗಬೇಕಾಗಿದ್ದು ಅಂತ ಹೋರಾಡುವುದು, ಆದರೆ ಅದನ್ನು ಸೊಸೆಯೊಬ್ಬಳು ತಾವು ಬೆಳೆಸಿದ ತೋಟ ಅದಲ್ಲ ಅಂತ ನಿರಾಕರಿಸುವುದು- ಈ ಘಟನೆ ಯಾಕೋ ತೀರಾ ತೀರಾ ಆಳದಲ್ಲಿ ಹೊಕ್ಕು ಕಾಡಿತು.

ವಸ್ತುವಿಗೆ ಹೊರತಾಗಿಯೂ ಈ ಕಾದಂಬರಿ ಅದರ ಸ್ಟ್ರಕ್ಚರ್ ನಿಂದ ಬಹಳ ಚೆನ್ನಾಗಿದೆ. ಒಬ್ಬ ಪೌರ ಕಾರ್ಮಿಕ ಬೆಳಿಗ್ಗೆ ಹಸಿ ಕಸ, ಒಣ ಕಸ ತುಂಬಿಕೊಳ್ಳುವಾಗ ಕತೆ ಶುರುವಾಗಿ ಬೇರೆ ಬೇರೆ ಸ್ಥಳ, ಕಾಲಕ್ಕೆ ಹೋಗಿ ಕಡೆಗೆ ಒಂದು ಕಡೆ ಸೇರುವ ತಂತ್ರ ಅದ್ಭುತವಾಗಿದೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎನ್ನುವ ಸಿದ್ಧಲಿಂಗಯ್ಯನವರ ಸಾಲನ್ನು ಈ ಕಾದಂಬರಿ ಅಕ್ಷರಶಃ ದಲಿತ ಪಾತ್ರಗಳ ಮೂಲಕ ಕಟ್ಟಿ ನಿಲ್ಲಿಸಿದೆ. ಜೊತೆಗೆ ದಲಿತ ಅನ್ನುವುದು ಹೇಗೆ ಒಂದು ಪೊಲಿಟಿಕಲ್ ಮ್ಯಾನುಪುಲೇಶನ್ ಕೂಡ ಅನ್ನುವುದನ್ನೂ ಈ ಕಾದಂಬರಿ ವ್ಯಂಗ್ಯದಲ್ಲಿ ಹೇಳುತ್ತಾ ಹೋಗುತ್ತದೆ.

- ವಿಕಾಸ್ ನೇಗಿಲೋಣಿ

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...