ವಿರಹ ನೂರು ನೂರು ತರಹ, ಮನೋವ್ಯಾಧಿಯ ಪ್ರತಿಬಿಂಬ..


"ಕಥೆಗಾರರು ಔದ್ಯೋಗಿಕ ಮತ್ತು ಕೌಟುಂಬಿಕ ಬದುಕಿನ ಪರಿಸರದಲ್ಲಿನ ಇಂತಹ ಸೂಕ್ಷ್ಮತೆಗಳ ಬಗ್ಗೆ ಗಮನಿಸಿಕೊಂಡೇ ತಮ್ಮ ಕಥೆಯೊಳಗೆ ಈ ವಿರಹ ವೇದನೆಯ ತೊಳಲಾಟದ ಪ್ರಸಂಗವನ್ನು ಕೇಂದ್ರವಸ್ತುವಾಗಿರಿಸಿಕೊಂಡು ಗ್ರಾಮ್ಯಶೈಲಿ ಗಾದೆಗಳ ಪದಪುಂಜದ ಸಂಪತ್ತನ್ನ ಪ್ರಾವೀಣ್ಯತೆಯಿಂದ ಓದುಗರನ್ನು ಕುತೂಹಲಕಾರಿಯಾಗಿ ಸೂಜಿಗಲ್ಲಿನಂತೆ ಮನಸೆಳೆಯುವ ಪ್ರಸಂಗಗಳ ಕಥಾ ವಿಸ್ತರಣೆಯಲ್ಲಿ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು," ಎನ್ನುತ್ತಾರೆ ಮನುಶ್ರೀ ಸಿದ್ದಾಪುರ. ಅವರು ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟವಾದ ಮೋದೂರು ತೇಜ ಅವರ ‘ಕಿಚ್ಚಿಲ್ಲದ ಬೇಗೆಯಲಿ' ಕತೆ ಕುರಿತು ಬರೆದ ವಿಮರ್ಶೆ.

ಮೋದೂರು ತೇಜ ಅವರ 'ಕಿಚ್ಚಿಲ್ಲದ ಬೇಗೆಯಲಿ' ಕಥೆಯು ವೈವಾಹಿಕ ಜೀವನದಲ್ಲಿ ಹಾಸಿಗೆ ಸುಖವು ಸಮತೋಲನ ತಪ್ಪಿದರೆ ಮುಂದಿನ ವೈವಾಹಿಕ ದಾಂಪತ್ಯ ಜೀವನವು ಗಾಳಿಗೊಡ್ಡಿದ ದೀಪದ ಪರಿಯಾಗುತ್ತದೆ ಎಂಬ ಮಾರ್ಮಿಕವಾದ ನೈಜತೆಯನ್ನು ಬಿಂಬಿಸುತ್ತದೆ. ಜೀವನಾನುಭವದ ಕ್ರಮದಂತೆ ಯೌವ್ವನದ ಹೊಸ್ತಿಲಲ್ಲಿರುವ ಹೆಣ್ಣಿಗೆ ವಿವಾಹವು ಸಾಮಾಜಿಕ ವ್ಯವಸ್ಥೆಯಲ್ಲಿನ ಒಂದು ಕಟ್ಟಳೆಯಾಗಿರುತ್ತದೆ. ಮನೆಯ ಹಿರಿಯರ ಒಮ್ಮತದಿ ಒಮ್ಮೆಯಾದ ಮದುವೆಗೆ ಮತ್ತೊಬ್ಬರ ಜೊತೆಗೆ ಮರುಮದುವೆಯಾಗಲು ಮನೆತನ ಹಾಗೂ ಸಾಮಾಜಿಕ ಕಟ್ಟಳೆಗಳ ಅವಕಾಶವಿರುವುದಿಲ್ಲ. ಮದುವೆ ಎಂದರೆ ಮಕ್ಕಳ ಆಟವಲ್ಲ, ಚೆಂದಕ್ಕೆ ಬಳೆ ತೊಟ್ಕಂಡು ಆಮೇಲೆ ಕೊಡವಿದರೆ ಹೋಗುವಂತದಲ್ಲ. ಮನೆಯ ಪೋಷಕರು, ಮನೆತನದ ಹಿರಿಕರು ಸಮಾಲೋಚನೆ ನಡೆಸುವ ಮುಖೇನ ಹೆಣ್ಣಿನ ಅಥವ ಗಂಡಿನ ಭವಿಷ್ಯದ ಬದುಕಿನ ದೃಷ್ಟಿಯಿಂದ ಆತುರದ, ದುಡುಕಿನ ನಿರ್ಧಾರ ಕೈಗೊಳ್ಳದೆ ಮಹತ್ವದ ದೃಢ ನಿರ್ಧಾರದಿಂದೊಂದಿಗೆ ಮದುವೆಯಾಗುವ ಇರ್ವರ ಭಾವನೆಗಳ ಮಾತುಗಳಿಗೆ ಆದ್ಯತೆ ನೀಡಬೇಕಾದುದು ಬಹುಮುಖ್ಯ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ಸೂಚ್ಯವಾಗಿ ಎಚ್ಚರಿಸಿದ್ದಾರೆ.

ಸಂಭ್ರಮ, ಸಂತೋಷದಿಂದ ಸದಾಕಾಲ ದಾಂಪತ್ಯದ ಜೀವನ ಸಾಗಬೇಕಾದರೆ ಲೈಂಗಿಕ ಸಂತೃಪ್ತಿಯು ಮಹತ್ವದ ಅವಕಾಶವಾಗಿರುತ್ತದೆ. ಹೆಣ್ಣಿಗೆ ವಿರಹ ವೇದನೆಗಿಂತ ಬೇರೊಂದು ತೃಪ್ತಿಯ ಪ್ರಸಂಗವು ಅಮುಖ್ಯ ಎನಿಸುತ್ತದೆ ಎಂಬುದು ಅಷ್ಟೇ ಸತ್ಯ. ಅದರಲ್ಲೂ ತಾನು ಮನಸಾರೆ ಇಷ್ಟ ಪಟ್ಟವನು ಸಿಗಲಿಲ್ಲ, ಕಟ್ಟಿಕೊಂಡವನಿಂದ ಸುಖ ಸಿಗ್ತಾ ಇಲ್ಲ, ಕುಟುಂಬದ ಮರ್ಯಾದೆ ಮತ್ತು ಗೌರವದಿಂದ ಅಡ್ಡದಾರಿ ಹಿಡಿಯುವ ಮನಸಿನ ಗೊಂದಲಗಳು ಮನೋವ್ಯಾಕುಲತೆಯಿಂದ ಪ್ರಕ್ಷುಬ್ಧಗೊಂಡ ಮನಸ್ಥಿತಿ ಅಂಕುರಗೊಂಡಾಗ, ಎಂತಹ ಅನುಭವದ ಮಾನಸಿಕ ವೈದ್ಯರ ಪ್ರಯತ್ನವೂ ವ್ಯರ್ಥ ಎಂಬ ಅಂಶವನ್ನು ಗಮನಿಸಿದಾಗ ಕಾಮತೃಷೆಯು ಮಾನಸಿಕ ಒತ್ತಡಗಳಿಂದ ಹಗುರಗೊಳಿಸುತ್ತದೆ ಎನ್ನುವ ಸತ್ಯವನ್ನು ಅರಿಯಬೇಕಾಗುವುದು ಅಷ್ಟೇ ಮುಖ್ಯವಾದ ಅಂಶವಾಗಿದೆ.

ಕಥೆಗಾರರು ಔದ್ಯೋಗಿಕ ಮತ್ತು ಕೌಟುಂಬಿಕ ಬದುಕಿನ ಪರಿಸರದಲ್ಲಿನ ಇಂತಹ ಸೂಕ್ಷ್ಮತೆಗಳ ಬಗ್ಗೆ ಗಮನಿಸಿಕೊಂಡೇ ತಮ್ಮ ಕಥೆಯೊಳಗೆ ಈ ವಿರಹ ವೇದನೆಯ ತೊಳಲಾಟದ ಪ್ರಸಂಗವನ್ನು ಕೇಂದ್ರವಸ್ತುವಾಗಿರಿಸಿಕೊಂಡು ಗ್ರಾಮ್ಯಶೈಲಿ ಗಾದೆಗಳ ಪದಪುಂಜದ ಸಂಪತ್ತನ್ನ ಪ್ರಾವೀಣ್ಯತೆಯಿಂದ ಓದುಗರನ್ನು ಕುತೂಹಲಕಾರಿಯಾಗಿ ಸೂಜಿಗಲ್ಲಿನಂತೆ ಮನಸೆಳೆಯುವ ಪ್ರಸಂಗಗಳ ಕಥಾ ವಿಸ್ತರಣೆಯಲ್ಲಿ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು.

ಕಥೆಯ ವಸ್ತುವಿನ ಆಯ್ಕೆಯಲ್ಲಿ ಪ್ರಸ್ತುತ ವಿದ್ಯಮಾನದಲ್ಲಿನ ಜ್ವಲಂತ ನಿದರ್ಶನ( ಐಟಿ-ಬೀಟಿ ಕಂಪನಿಗಳಲ್ಲಿ ದುಡಿವ ವರ್ಗ) ಎಂಬಂತಹ ಸಮಸ್ಯೆಯನ್ನು ಕಥಾವಸ್ತುವಾಗಿಸಿ, ಸಮಾಜಕ್ಕೆ ಜಾಗೃತಗೊಳಿಸುವ ಸಂದೇಶ ನೀಡುವ ದೃಷ್ಟಿಯಿಂದಲೂ ಸೂಕ್ತವೆಂಬಂತೆ ಹೆಣ್ಣಿನ ವಿರಹ ವೇದನೆ, ಲೈಂಗಿಕ ಅತೃಪ್ತಿಯ ಮಾನಸಿಕ ತೊಳಲಾಟದಂತಹ ಅಂಶಗಳನ್ನೊಳಗೊಂಡ ವಾಸ್ತವದ ಚಿತ್ರಣವನ್ನು ಕೊಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಆರಂಭಿಕ ವಚನಗಾರ್ತಿ ಅಕ್ಕನ....... "ಎಲ್ಲರಿಗೆ ಹಂಗಿತಿಯಾದೆನವ್ವ" ಎಂಬ ಮಾರ್ಮಿಕವಾದ ವಚನದೊಂದಿಗೆ ಆರಂಭವಾಗುವ ಕಥೆಯು ವಿರಹ ಯಾತನೆಯಿಂದ ಕಂಗೆಟ್ಟು ಮಾನಸಿಕ ತೊಳಲಾಟದಂತಹ ಏಕಾಂತ, ಒಂಟಿತನ, ಅತೃಪ್ತ ಬಯಕೆಗಳಂತಹ ಹೆಣ್ಣಿನ ಮಾನಸಿಕ ತಾಕಲಾಟದ ಮನೋವ್ಯಾಧಿ ರೋಗಿಯನ್ನು ಸೈಕಿಯಾಟ್ರಿಸ್ಟ್ ಬಳಿಗೆ ಕರೆತರುವ ಪ್ರಯತ್ನದೊಂದಿಗೆ ಸಾಗುತ್ತ, ಗಂಡಿನ ಪೂರ್ವಪರ ಮಾಹಿತಿ ತಿಳಿಯದೆ ನೆರೆಹೊರೆಯವರ ನಾಲಿಗೆ ಚಪಲದ ಮಾತುಗಳಿಗೆ ಹಿತ್ತಾಳೆ ಕಿವಿಯಾಗಿ, ದುಡುಕಿನ ಅವಿವೇಕತನದಿ ಆತುರದ ನಿರ್ಧಾರದಿಂದ ಹೆಣ್ಣಿನ ಭಾವನೆಗಳಿಗೆ ಅವಕಾಶ ನೀಡದೆ ಮಾಡಿದ ಮದುವೆಯಿಂದ ಉಂಟಾದ ಮಾನಸಿಕ ರೋಗಕ್ಕೆ ಟ್ರೀಟ್ ಮೆಂಟ್ ಗಾಗಿ ನಗರದ ಆಸ್ಪತ್ರೆಗೆ ಕರೆತಂದು ಮನೋವೈದ್ಯರ ಕೌನ್ಸಿಲಿಂಗ್ ಮಾಹಿತಿಯಿಂದ ಅಘಾತಗೊಂಡು, ರೂಪಳ ಭವಿಷ್ಯತ್ತು ನೆನೆದು ಕಂಗಾಲಾದ ಮನಸ್ಥಿತಿಯು ಫ್ಯಾನ್ ಗಾಳಿ ತಂಪಿಗೂ ಬೆವರುತೊಡಗುವಲ್ಲಿಗೆ ಅಂತ್ಯವಾಗುತ್ತದೆ. ಅಂದರೆ ಪರಿಸ್ಥಿತಿಯು ಕೈ ಮೀರಿದಾಗ ಯಾವ ಸಲಹೆಗಳು ಉಪಯೋಗಕ್ಕೆ ಬರುವುದಿಲ್ಲ ಎಂಬ ಸತ್ಯವನ್ನು ಮನಗಾಣಬೇಕು.( ನೀರೊಳಗಿರ್ದುಂ ಬೆಮರ್ದನ್ ಉರಗಪತಾಕಂ) ಎಂಬ ಕವಿವಾಣಿ ನೆನಪಿಸುವಂತಾಯಿತು.

ಕಥೆಗಾರರು ಇಡೀ ಕಥೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಮಾಜಿಕ ವ್ಯವಸ್ಥೆಯಲ್ಲಿನ ಮನೆತನದ ಮರ್ಯಾದೆ, ಕೌಟುಂಬಿಕ ಅಂತಸ್ತು, ಮಲತಾಯಿಯ ಧೋರಣೆ, ಅಪ್ಪನ ಕಲಬೆರಕೆ ವಾತ್ಸಲ್ಯ, ಬಸುರಿ ಬಯಕೆ, ಅಜ್ಜಿ ಮನೆಯ ಸೋದರಮಾವಂದಿರ ಮುತವರ್ಜಿ, ಸಾಹುಕಾರರ ಕೃಷಿ ಕೆಲಸಕ್ಕೆ ಕೆಳಜಾತಿ ಕೂಲಿಕಾರರು, ಹಳ್ಳಿಯಿಂದ ನಗರದ ಕಾಲೇಜಿನ ವ್ಯಾಸಂಗ ಸಮಯದಲ್ಲಿ ಪ್ರೀತಿ-ಪ್ರೇಮಕ್ಕೆ ಜಾತಿಅಡ್ಡಿಯಂತಹ ವಾಸ್ತವದ ಚಿತ್ರಣದ ಬಳಕೆಯಿಂದ ಕಥೆಯ ಪುಷ್ಟಿಗೆ ಇಂಬುಕೊಟ್ಟಿದ್ದಾರೆ ಎನ್ನಬಹುದು. ಜೊತೆಗೆ ಗೆಳೆತನದ ಮಹತ್ವದ ಬಗ್ಗೆ ಹೇಳುವಲ್ಲಿ ಸುಜಾತ ಮತ್ತು ಶ್ರಾವಣಿಯರ ನಡುವಿನ ಕಾಲೇಜು ವ್ಯಾಸಂಗ ಸಮಯದಲ್ಲಿನ ಸಲಿಗೆ,ಆಪತ್ಕಾಲದಲ್ಲಿ ಶ್ರಾವಣಿಗೆ ಮಾಡಿದ ಸಹಾಯ ಉತ್ತಮ ಮನೋವೈದ್ಯರಾಗಿ ಆಪ್ತಸಲಹಾ ಕೇಂದ್ರದ ಸ್ಥಾಪನೆಯಿಂದ ಎತ್ತರಕ್ಕೆ ಬೆಳೆದಿದ್ದು,ಕೃತಜ್ಞತಾಭಾವದ ಸ್ಮರಣೆ ಮಾಡುವಂತಹ ಪ್ರಸಂಗಗಳನ್ನು ಕಥೆಕಟ್ಟುವ ಚಾಲನೆಗೆ ತಂತ್ರಗಾರಿಕೆಯಾಗಿವೆ ಎಂದು ಗುರುತಿಸಬಹುದಾಗಿದೆ.

ಬಹುಮುಖ್ಯವಾಗಿ ಗಮನಿಸಬೇಕಾದುದು ಆಪ್ತ ಸಲಹಾ ಕೇಂದ್ರದ ಪ್ರಶಾಂತತೆಯ ಪರಿಸರ. ಗೋಡೆಗೆ ನೇತುಹಾಕಿರುವ ಮಾನಸಿಕ ಒತ್ತಡಗಳಿಗೆ ಸಿಲುಕಿದವರಿಗೆ ಸಮಚಿತ್ತದಿಂದ ಮತ್ತು ಮಂದಹಾಸ ಬೀರುತ ಮನೋರೋಗ ನಿವಾರಣೆ ಮಾಡುತ್ತಿದ್ದ ಬುದ್ಧ ಹಾಗೂ ಪ್ರಸಿದ್ಧ ಮನೋವಿಜ್ಞಾನಿಗಳಾದ ಸಿಗ್ಮಾಂಡ್ ಫ್ರಾಯ್ಡ್,ಕಾರ್ಲ್ ಯೂಂಗ್ ಫೋಟೊಗಳ ಬಳಕೆ ಪ್ರಾಸಂಗಿಕವಾಗಿ ಅತ್ಯಂತ ಸೂಕ್ತ ಎನಿಸಿದೆ. ಅದರಲ್ಲೂ ಮಾನಸಿಕ ತೊಳಲಾಟದಂತಹ ಮೆಂಟಲ್ ಡಿಪ್ರೆಸ್ ಆಗಿ ಅಬ್ ನಾರ್ಮಲ್ ಸ್ಥಿತಿಯಲ್ಲಿರುವ ಮನೋರೋಗಿಗಳಿಗೆ ಕ್ಲಿನಿಕ್ ಒಳಗಡೆ ಸದ್ದಿಲ್ಲದ ಸೀಲಿಂಗ್ ಫ್ಯಾನ್, ಘಾಸಿಗೊಂಡ ಮನಸ್ಸುಗಳಿಗೆ ಮ್ಯೂಸಿಕ್ ಥೆರಪಿ ಎಂಬ ಸಂಗೀತ ಪ್ರಥಮ ಚಿಕಿತ್ಸಕ ಪದ್ದತಿ, ಬದುಕನ್ನು ಪ್ರೀತಿಸುವಂತೆ ಉತ್ತೇಜಿತ ಲೋಕಾನುಭವದ ನುಡಿಮುತ್ತುಗಳು ಗೋಡೆ ಬರಹಗಳಾಗಿ ಅಲಂಕಾರಗೊಂಡು ನೆಮ್ಮದಿಯ ಶಿಸ್ತಿನ ವಾತಾವರಣದ ಬಗ್ಗೆ ಸೊಗಸಾಗಿ ಬಿಂಬಿತವಾಗಿದೆ.

ಈ ಕಥೆಯು ಓದುಗರ ಸೆಳೆಯುವ ಇನ್ನೊಂದು ಮುಖ್ಯ ಅಂಶವೆಂದರೆ ಜೀವನಾನುಭವದ ಗ್ರಾಮ್ಯಶೈಲಿಯ ಜನಪದೀಯ ಪದಸಂಪತ್ತು. ಈ ಗಾದೆಯ ನುಡಿಗಟ್ಟಿನ ಬಳಕೆಯಿಂದಾಗಿ ಕಥೆಗೆ ಮೆರಗು ಬಂದಿದೆ ಅಂತ ಹೇಳವಲ್ಲಿಯೂ ಕಥಾಶೈಲಿಗೆ ನಾವು ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಉದಾಹರಣೆಗಾಗಿ ಗಮನಿಸಬಹುದಾದರೆ," ತಿದ್ದಿದ ಬೊಂಬೆ ತರ ಇದ್ದವಳು ನೋಡು ನೋಡ್ತಲೆ ಸಪ್ಪೆದಂಟು ಒಣಗಿದಂಗೆ", "ಅಂಗೈಯಲ್ಲಿ ಬೆಣ್ಣೆಯಿಟ್ಟುಕೊಂಡು ತುಪ್ಪಕ್ಕೆ ಯಾಕೆ ಹುಡುಕಾಟ" , " ಒಬ್ಬ ಮಗಳಂತ ಮುದ್ದು ಮಾಡಿದರೆ ಮಾಳಿಗೆ ಹತ್ತಿ ಮಿಂಡ್ರನ ನೋಡಿದ್ಲಂತೆ", "ಬೆಟ್ಟಕ್ಕೆ ಬಟ್ಟೆ ಹೊದ್ದಿಸೋಕಾಗಲ್ಲ ಆಡಿಕೊಳ್ಳೊ ಜನರ ಬಾಯಿ ಮುಚ್ಚಿಸೋಕಾಗಲ್ಲ", "ಇದ್ರೆ ಕಣ್ಣುರಿ ಹೋದ್ರೆ ಹೊಟ್ಟೆ ಉರಿ" ಮುಂತಾದ ಜನಪದರ ಅನುಭವದ ನುಡಿಗಟ್ಟುಗಳ ಪ್ರಾಸಂಗಿಕ ಬಳಕೆಯಿಂದ ಕಥಾವಸ್ತುವಿನ ಹಿನ್ನೆಲೆಗೆ ಹೆಚ್ಚುಗಾರಿಕೆ ಬಂದಿದೆ ಅಂತಲೇ ಹೇಳಬಹುದು.

ಇಡೀಯಾಗಿ ಅವಲೋಕಿದಾಗ ಪ್ರಸ್ತುತ ತಾಂತ್ರಿಕತೆ ವಾತಾವರಣದ ವಿದ್ಯಮಾನದಲ್ಲಿ ಐಟಿ-ಬೀಟಿ ಕಂಪನಿಗಳಂತಹ ವಲಯದಲ್ಲಿನ ದಾಂಪತ್ಯ ಜೀವನದ ನೈಜ ಚಿತ್ರಣದ ಕಥನವಾಗಿದೆ. ಅದರಲ್ಲೂ ಒಬ್ಬ ಹೆಣ್ಣಿನ ವಿರಹ ಯಾತನೆಯು ಏಕಾಂತ ಮೌನ, ನಿರ್ಲಿಪ್ತತೆ, ಮಾನಸಿಕ ತುಮಲ, ತೊಳಲಾಟದಂತಹ ಗಂಭೀರ ಸ್ವರೂಪದ ಪರಿಣಾಮಗಳಿಂದ ಭವಿಷ್ಯದ ದಾಂಪತ್ಯ ಜೀವನವು ದೊಡ್ಡ ಅಪಾಯದ ಸುಳಿವಿಗೆ ಸಿಲುಕುವ ಇಡೀ ಬದುಕಿನ ಅಸ್ಥಿರತೆಯ ಎಚ್ಚರಿಕೆ ಸಂದೇಶ ಸಾರಿದೆ. ಹಾಗೆಯೇ ಇವರ ಕಥೆಗಳಲ್ಲಿ ಯಾವುದೇ ಮೌಲ್ಯಗಳ ಬಿತ್ತುವ ಭಾರದಲ್ಲಿ ನಲುಗದೆ ಅನುಭ ನಿವೇದನೆಯ ನೆಲೆಗಟ್ಟಿನೊಳಗೆ ಪ್ರತಿಬಿಂಬಿಸುವಂತಹವು. ಕಥೆ ಹೆಣೆಯುವಿಕೆಯಲ್ಲಿ ಕಥನಾಶೈಲಿ, ಅನುಭವದ ಭಟ್ಟಿ ಇಳಿಸುವಿಕೆಯಲ್ಲಿನ ಗಟ್ಟಿತನದ ಮಾತುಗಳು ಸಂಭಾಷಣೆಯ ವಿಧಾನದ ಮುಖೇನ ಕಥೆಗಳ ಸತ್ವತೆಯನ್ನು ಹೆಚ್ಚುತ್ತಲೇ ಪ್ರಬುದ್ಧತೆಯ ಛಾಪು ಮೂಡಿಸುತ್ತಿದ್ದಾರೆ. ಈ ಕಥೆಯೊಳಗೆ ಅಂತಃಕರಣದ ತಾತ್ವಿಕ ಆಲೋಚನಾ ಕ್ರಮವನ್ನೊಳಗೊಂಡ ಅರ್ಥಪೂರ್ಣ ಕಥಾ ಚೌಕಟ್ಟನ್ನು ನಿರ್ಮಿಸಿರುವ ಬಗ್ಗೆ ಗೋಚರಿಸುತ್ತದೆ. ಹೀಗಾಗಿಯೇ ಇವರ ಮಠದೊಳಗಣ ಕಿಚ್ಚು, ಅರ್ಧಕ್ಕೆ ನಿಂತ ಚಿತ್ರಗಳು, ಹುಲಿವೇಷದಂತಹ ಕಥಾ ಸಂಕಲನಗಳಲ್ಲಿನ ಕಥೆಗಳು ಓದುಗರ ಮನಸ್ಸನ್ನು ಸೆಳೆಯುವಲ್ಲಿ ಸಫಲತೆ ಕಂಡುಕೊಳ್ಳುತ್ತಿವೆ. ಇವರ ಕಥೆಗಳಲ್ಲಿ ದಟ್ಟ ಜೀವನಾನುಭವದ ಸೃಜನಶೀಲತೆಯ ಸಾಹಿತ್ಯ ವಿಸ್ತರಣೆಯಾಗುತ್ತಿರುವುದನ್ನು ಕಾಣಬಹುದಾಗಿದೆ.

- ಮನುಶ್ರೀ ಸಿದ್ದಾಪುರ.

MORE FEATURES

ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು

26-12-2024 ಬೆಂಗಳೂರು

“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...

ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ

26-12-2024 ಬೆಂಗಳೂರು

“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ...

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..

26-12-2024 ಬೆಂಗಳೂರು

“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...