ಗುಹಾ ಅವರು ಆರಿಸಿಕೊಳ್ಳುವ ವಿಷಯ ವೈವಿಧ್ಯತೆಗಳು ವಿಶಿಷ್ಟವಾದುದಾಗಿವೆಯಾದರೂ ಭಿನ್ನ ಎನ್ನಿಸುವುದು ಅವರು ಅದನ್ನು ನಿರೂಪಿಸುವ ರೀತಿಯಿಂದಾಗಿ. ಒಂದು ಘಟನೆಯನ್ನು ಹೇಳುತ್ತಲೇ ಅದರ ಸುತ್ತಲ ಪರಿಸರವನ್ನು, ಸಾಮಾಜಿಕ ರಾಜಕೀಯ ಮತ್ತಿತರ ಕಾರಣಗಳನ್ನು, ಘಟನೆ ನಡೆಯಲು ಪ್ರೇರೇಪಿಸಿದ ಐತಿಹಾಸಿಕ ಸತ್ಯಗಳನ್ನು ಆತುರಾತುರವಾಗಿ ನಿವೇದಿಸದೆ, ನಿರಾತಂಕವಾಗಿ ಹೇಳುತ್ತಾರೆ ಎನ್ನುತ್ತಾರೆ ವಿಮರ್ಶಕ ಮೋಹನ್ ಕುಮಾರ್ ಡಿ ಎನ್. ಅವರ ಲೇಖಕ ರಾಮಚಂದ್ರ ಗುಹಾ ಅವರು ಬರೆದು ಅನುವಾದಕ ಜಿ ಎನ್ ರಂಗನಾಥ ರಾವ್ ಅನುವಾದಿಸಿರುವ "ದೇಶಪ್ರೇಮಿಗಳು ಮತ್ತು ಪಕ್ಷಪಾತಕರು" ಕರತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
"ದೇಶಪ್ರೇಮಿಗಳು ಮತ್ತು ಪಕ್ಷಪಾತಕರು"
ಮೂಲ : ರಾಮಚಂದ್ರ ಗುಹಾ
ಅನುವಾದ : ಜಿ ಎನ್ ರಂಗನಾಥ ರಾವ್
ಪುಟಗಳು : 446, ಬೆಲೆ : 300/-
ಪ್ರಕಾಶನ : ಸಪ್ನ ಬುಕ್ ಹೌಸ್
ಈ ಪುಸ್ತಕ ರಾಮಚಂದ್ರ ಗುಹಾ ಅವರ ಪ್ರಬಂಧಗಳ ಸಂಕಲನ. ಹಲವಾರು ವೈವಿಧ್ಯಮಯ ಸಂಗತಿಗಳ ಬಗ್ಗೆ ಬಹು ದೀರ್ಘವಾಗಿ, ವಸ್ತುನಿಷ್ಠತೆಯಿಂದ ರಚಿಸಿದ ಸಂಪ್ರಬಂಧಗಳಿವು. ವಿಷಯ ನಿರೂಪಣೆಯಲ್ಲಿ ಅಗ್ರಮಾನ್ಯ ಅಂತರವನ್ನು ಕಾಯ್ದುಕೊಂಡಿವೆ. ಗುಹಾ ಅವರು ಏನನ್ನೇ ಬರೆದರೂ ಸಮಾಜದ ಬಗೆಗಿನ ಕುರಿತಾದುದೇ ಆಗಿದೆ. ಸಮಾಜವನ್ನೊಳಗೊಂಡ ಎಲ್ಲಾ ವಿಧಿ ವಿಧಾನಗಳೂ ಅವರ ಬರವಣಿಗೆಯ ವಸ್ತುವಾಗಿದೆ. ಮೂಲಭೂತವಾಗಿ ಗುಹಾ ಅವರು ಇತಿಹಾಸಕಾರರಾದರೂ ಸಂಶೋಧಕ ದೃಷ್ಟಿಕೋನದಿಂದಲೇ ಎಲ್ಲವನ್ನೂ ಬಗೆಯುವ, ನೋಡುವ ಗುಣವುಳ್ಳವರು. ತಾವು ಹೇಳುವುದೇನನ್ನೂ ಬೀಳುಬೀಸಾಗಿ ಸುಮ್ಮನೆ ಒಗೆಯುವ ಜಾಯಮಾನ ಅವರದಲ್ಲ. ಪ್ರತಿಯೊಂದು ಘಟನೆಗಳಿಗೆ ಸಾಕ್ಷ್ಯವನ್ನೊದಗಿಸುತ್ತಾರೆ, ಸಂಬಂಧಪಟ್ಟ ಆಕರ ಮೂಲ ಮಾಹಿತಿಯನ್ನು ಪೂರಕ ಓದಿಗೆ ನೀಡುತ್ತಾರೆ, ನಿರ್ಧಿಷ್ಟವಾದ ರೆಫರೆನ್ಸ್ ನೀಡಿಯೇ ತಮ್ಮ ಬರಹವನ್ನು ಧೃಢೀಕರಿಸುತ್ತಾರೆ.
ಗುಹಾ ಅವರು ಆರಿಸಿಕೊಳ್ಳುವ ವಿಷಯ ವೈವಿಧ್ಯತೆಗಳು ವಿಶಿಷ್ಟವಾದುದಾಗಿವೆಯಾದರೂ ಭಿನ್ನ ಎನ್ನಿಸುವುದು ಅವರು ಅದನ್ನು ನಿರೂಪಿಸುವ ರೀತಿಯಿಂದಾಗಿ. ಒಂದು ಘಟನೆಯನ್ನು ಹೇಳುತ್ತಲೇ ಅದರ ಸುತ್ತಲ ಪರಿಸರವನ್ನು, ಸಾಮಾಜಿಕ ರಾಜಕೀಯ ಮತ್ತಿತರ ಕಾರಣಗಳನ್ನು, ಘಟನೆ ನಡೆಯಲು ಪ್ರೇರೇಪಿಸಿದ ಐತಿಹಾಸಿಕ ಸತ್ಯಗಳನ್ನು ಆತುರಾತುರವಾಗಿ ನಿವೇದಿಸದೆ, ನಿರಾತಂಕವಾಗಿ ಹೇಳುತ್ತಾರೆ. ಈ ಶೈಲಿ, ಮೊದಲೇ ಹೇಳಿದಂತೆ, ತುಸು ಧೀರ್ಘವಾದುದಾಗಿದೆಯಾದರೂ ಹಿಂದೆ ನಡೆದ ಘಟನೆಗಳನ್ನು ಆಮೂಲಾಗ್ರವಾಗಿ ಅರಿತುಕೊಳ್ಳಲು ಸಹಾಯಕಾರಿಯಾಗುತ್ತವೆ. ಘಟನೆಗೆ ಕಾರಣವಾದ ಎಲ್ಲಾ ಮೂಲಭೂತ ಅಂಶಗಳನ್ನು ಕೇಂದ್ರಬಿಂದುವಿನಲ್ಲಿ ಸಮಾಗಮಗೊಳಿಸಿ ತೀರ್ಪನ್ನು ನೀಡುವ ಕಾಯಕ ಅವರು ಮಾಡುವುದಿಲ್ಲ. ಹೀಗಾಗಿಯೇ ಅವರ ಬರಹಗಳು ಸತ್ಯಶೋಧಕವೂ, ಅನ್ವೇಷಣಾ ಗುಣವುಳ್ಳದ್ದಾಗಿದೆ.
ಇಲ್ಲಿಯ ತನಕ ರಾಮಚಂದ್ರ ಗುಹಾ ಅವರ ನಾಲ್ಕೈದು ಪುಸ್ತಕಗಳನ್ನು ಓದಿರುವೆ. ಅದರ ಬಗ್ಗೆ ಕುರಿತು ನಾನು ಬರೆದ ಅಭಿಪ್ರಾಯಗಳನ್ನು ಓದಿದ ನನ್ನ ಕೆಲವು ಓದುಗ ಮಿತ್ರರು, ಅವರನ್ನು ಎಡ ಪಂಥಕ್ಕೆ ಸೇರಿದ ಲೇಖಕನೆಂದು ವಿಂಗಡಿಸಿದ್ದರು. ನನಗೇಕೋ ಸರಿಯೆನಿಸಿರಲಿಲ್ಲ. ಇತಿಹಾಸವನ್ನು ಪೂರ್ವಾಗ್ರಹಪೀಡಿತರಾಗದೆ, ಯಾವ ಪಂಥ ಪಂಗಡಗಳ ಗೊಡವೆಯಿಂದಿಲ್ಲದಿದ್ದಾಗ ಮಾತ್ರ ಅರಿಯಬಲ್ಲರು ಎನ್ನುವ ಅಂಶವನ್ನು ಈ ಕೃತಿ ಮತ್ತೊಮ್ಮೆ ಸಾಬೀತುಗೊಳಿಸಿತು. ಗುಹಾ ಎಡರೂ ಅಲ್ಲ, ಬಲರೂ ಅಲ್ಲ. ಇತಿಹಾಸದ ನಿಜ ವ್ಯಾಖ್ಯಾನವನ್ನು ನೀಡುವ ಗುಂಪಿಗೆ ಸೇರಿದವರು. ಅದಕ್ಕೆ ಅವರು ಬರೆದ ಹಲವಾರು ಪ್ರಬಂಧಗಳೇ ಇಲ್ಲಿ ಸಾಕ್ಷ್ಯ ನುಡಿದಿವೆ. ನನ್ನ ಈ ನಂಬಿಕೆ ಸುಳ್ಳಾಗುವ ತನಕ ಗುಹಾ ಅವರು ಒಬ್ಬ ಸಂಶೋಧಕನಿಗಿಂತ, ಇತಿಹಾಸಕಾರನಿಗಿಂತ ತಾನು ನಂಬಿದ ಸಿದ್ಧಾಂತಕ್ಕೆ ಗೌರವ ನೀಡುವ ಘನತೆಯುಳ್ಳ ವ್ಯಕ್ತಿಯಾಗಿ ನನಗೆ ಹೆಚ್ಚು ಒಗ್ಗುತ್ತಾರೆ.
*****
ಭಾರತದ ಗಣರಾಜ್ಯದ ಸಿದ್ಧಾಂತ ನೀತಿಯು ಸ್ವಾತಂತ್ರ್ಯ ಬಂದ ಹೊಸತರಲ್ಲಿ ಚದುರಿ ಹೋಗಿದ್ದ ಹತ್ತು ಹಲವು ಸಂಸ್ಥಾನಗಳನ್ನು ಒಗ್ಗೂಡಿಸಿ ರಾಷ್ಟ್ರೀಯತೆಯನ್ನು ಮತ್ತು ಐಕ್ಯತೆಯನ್ನು ಮೂಡಿಸಿದವು. ಭಾರತದ ಒಕ್ಕೂಟಕ್ಕೆ ಅಷ್ಟು ಸುಲಭವಾಗಿ ವಿಲೀನಗೊಳ್ಳಲು ಒಪ್ಪಿಕೊಳ್ಳದ ಹಲವು ಸಂಸ್ಥಾನಗಳ ವಿರೋಧ ಪ್ರಬಲವಾಗಿಯೇ ಇತ್ತು. ಹಲವು ದೀರ್ಘಕಾಲೀನ ಮಾತುಕತೆ ಮತ್ತು ಸಂಧಾನ ಮತ್ತು ಕೆಲವೆಡೆ ಸೈನ್ಯ ಪ್ರಯೋಗದ ನಂತರ ಭಿನ್ನಾಭಿಪ್ರಾಯ ಹೊಂದಿದ್ದ ಸಂಸ್ಥಾನಗಳು ಒಕ್ಕೂಟಕ್ಕೆ ಸೇರಲು ನಿರ್ಧರಿಸಿದವು. ಸ್ವಾತಂತ್ರ್ಯ ಗಳಿಸಿದ ಇಷ್ಟು ದಶಕಗಳ ನಂತರವೂ, ಭಾರತದ ಅವಿಭಾಜ್ಯ ಅಂಗವಾಗಿರುವ, ಆದರೆ ಇನ್ನೂ ಪ್ರಜಾಸತ್ತೆಗೊಳಪಡದೆ, ಭಾರತದ ಸಂವಿಧಾನ ಮತ್ತು ಒಕ್ಕೂಟ ರಚನೆಯನ್ನು ಪ್ರತಿರೋಧಿಸುತ್ತ, ಸ್ವಾಯತ್ತತೆ ಮತ್ತು ಸ್ವಯಮಾಡಳಿತಕ್ಕಾಗಿ ಅಂತರ್ ಕಲಹ ಯುದ್ಧವನ್ನು ಮುಂದುವರೆಸಿರುವ ಆ ಮೂರು ರಾಜ್ಯಗಳಾದರೂ ಯಾವುವು? ಅವು ನಾಗಾಲ್ಯಾಂಡ್, ಕಾಶ್ಮೀರ ಮತ್ತು ಮಣಿಪುರ! ಹಾಗೆ ಈ ಮೂರೂ ರಾಜ್ಯಗಳು ಏನೆಲ್ಲಾ ಶಾಂತಿ ಸಂಧಾನಗಳು, ಮಾತುಕತೆಗಳಾದರೂ ಭಾರತದ ಕಾನೂನನ್ನು ಒಲ್ಲೆ ಎನ್ನುತ್ತಿರುವುದಕ್ಕೆ ಕಾರಣಗಳೇನು? ಪ್ರತಿಗಾಮಿಗಳ ಪ್ರತ್ಯೇಕತೆಯ ಹಿಂದಿರುವ ಬೇಡಿಕೆಗಳೇನು? ಎನ್ನುವ ಸೂಕ್ಷ್ಮ ಸಂಗತಿಗಳನ್ನು ಮೊದಲ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ರಾಜ್ಯ ಮತ್ತು ದೇಶದ ಹಿತಾಸಕ್ತಿಗಿಂತಲೂ ಮುಖ್ಯವಾಗಿ ರಾಜಕೀಯ ಹಿತಾಸಕ್ತಿಗಳು ಹೇಗೆಲ್ಲಾ ಸಮಸ್ಯೆಯನ್ನು ಬಗೆಹರಿಸದಂತೆ ತಡೆಹಿಡಿದಿರುವ ಅಂಶವಾಗಿದೆ ಎನ್ನುವ ಅಂಶಗಳ ಜೊತೆಗೆ ಭಾರತದ ಗಣತಂತ್ರಕ್ಕೆ ಮಾರಕವಾಗಿರುವ ನಕ್ಸಲಿಸಂ, ಮಾವೋಗಳ ಉಪಟಳ, ಅಭಿವೃದ್ಧಿಯ ಹೆಸರಿನಲ್ಲಿ ಆದಿವಾಸಿಗಳ ಸ್ಥಳಾಂತರ, ಆನಂತರದ ಅವರ ಸಂಕಷ್ಟ ಬದುಕು ಎಲ್ಲದರ ಕುರಿತು ಇಲ್ಲಿ ಹೇಳಲಾಗಿದೆ.
ದೇಶದ ಸರ್ವವರ್ಗದ ಹಿತಾಸಕ್ತಿ ಕಾಯುವ ಮತ್ತು ಸ್ವರಾಜ್ಯಕ್ಕಾಗಿ ನಡೆಯುವ ಹೋರಾಟದ ರೂಪುರೇಷೆಗಳನ್ನು ಧ್ಯೇಯವನ್ನಾಗಿರಿಕೊಂಡು ಆರಂಭಗೊಂಡ ಸಮಾನ ಮನಸ್ಕರ ವೇದಿಕೆಯಾದ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ ಹೇಗೆ ಜೀ ಹುಝೂರ್! ಎನ್ನುವ, ಚಮಚಾಗಿರಿ ನಡೆಸುವ ದುರವಸ್ಥೆಗೆ ಬಂದು ತಲುಪಿತು? ಅದಕ್ಕಿರುವ ಕಾರಣಗಳೇನು? ಎನ್ನುವುದನ್ನು ಎರಡನೆಯ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ಜಾತ್ಯಾತೀತ ಕಲ್ಪನೆಯನ್ನು ಆದರ್ಶವಾಗಿರಿಸಿಕೊಂಡಿದ್ದ ಒಂದು ಕಾಲದ ರಾಷ್ಟೀಯ ಪಕ್ಷ ನೆಹರು ಮತ್ತು ಶಾಸ್ತ್ರಿಗಳ ಸಾವಿನ ನಂತರ ದೇಶದ ಒಳಿತನ್ನು ಕಾಲಕಸವನ್ನಾಗಿಸಿ ಸ್ವಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಪಕ್ಷವಾಯಿತು ಎನ್ನುವುದನ್ನು ಹಲವು ಘಟನೆಗಳ ಮೂಲಕ ನಿರೂಪಿಸಿದ್ದಾರೆ. ಇಂದಿರಾಗಾಂಧಿಯ ದುರಾಡಳಿತ, ಭ್ರಷ್ಟತೆ, ಪುತ್ರ ವ್ಯಾಮೋಹ, ಪಕ್ಷಪಾತ, ಸ್ವಹಿತಾಸಕ್ತಿ ಮತ್ತು ತುರ್ತು ಪರಿಸ್ಥಿತಿಗಳ ಬಗ್ಗೆ ಕೂಲಂಕುಷವಾಗಿ ಹಲವು ಆಯಾಮಗಳ ನೋಟ ನೀಡಲಾಗಿದೆ. ಇದಲ್ಲದೆಯೇ, ಇಂದಿರಾ ಮತ್ತು ಸಂಜಯ್ ನಂತರ ಬಂದ ರಾಜೀವ್ ಗಾಂಧಿ, ಸೋನಿಯಾ, ರಾಹಲ್ ಅವರುಗಳ ವಂಶಾಡಳಿತದ ಹೇರಿಕೆ ಹೇಗೆ ಕಾಂಗ್ರೆಸ್ ಪಕ್ಷವನ್ನು ಅದಃಪತನದತ್ತ ನಡೆಸಿತು ಎನ್ನುವುದನ್ನೂ ಹೇಳಲಾಗಿದೆ.
ಮೂರನೆಯ ಪ್ರಬಂಧದಲ್ಲಿ, ಹಿಂದುತ್ವದ ಅಮೇಲೇರಿಸಿಕೊಂಡ ಪಕ್ಷ ಮತ್ತು ವ್ಯಕ್ತಿಗಳು ಭಾರತೀಯ ರಾಜಕಾರಣದಲ್ಲಿ ಸಾಗಿ ಬಂದ ಬಗೆಯನ್ನು ಚಿತ್ರಿಸಲಾಗಿದೆ. ಧರ್ಮಾಧಾರಿತ ರಾಜಕಾರಣ ಭಾರತಕ್ಕೆ ಮಾತ್ರವಲ್ಲ; ಜಾಗತಿಕವಾಗಿ ಅಳವಡಿಸಿಕೊಳ್ಳಬಹುದಾದ ಆದರ್ಶ ಮತ್ತು ರಾಜತಾಂತ್ರಿಕ ನೀತಿಯಲ್ಲ ಎನ್ನುವುದರ ಕುರಿತಾಗಿ ಹೇಳಲಾಗಿದೆ. ಧರ್ಮವನ್ನು ಆಧರಿಸಿದ ಹಿಂದುತ್ವವಾದಿಗಳ ಸಿದ್ಧಾಂತಗಳು ಹೇಗೆ ಆದರ್ಶ ಸಮಾಜಕ್ಕೆ ಹಾನಿಕಾರಕ, ಮುಳುವಾಗಬಲ್ಲವು? ಎನ್ನುವುದನ್ನೂ ಹೇಳಲಾಗಿದೆ. ಯಾವುದೇ ದೇಶದ ಅಭಿವೃದ್ಧಿ ತಾನು ಅಳವಡಿಸಿಕೊಂಡಿರುವ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಭಾರತದಂತಹ ಬಹುಶ್ರುತ ಮತ್ತು ಜಾತ್ಯಾತೀತ ದೇಶಕ್ಕೆ ಧರ್ಮ ಮತ್ತು ಹಿಂದುತ್ವ ಸಮಾನ ಘಾಸಿಗಳನ್ನುಂಟು ಮಾಡುವ ಹಾನಿಕಾರಕ ಅಂಶಗಳು.
ನಾಲ್ಕನೆಯ ಪ್ರಬಂಧದಲ್ಲಿ, ಅತ್ತ ಎಡವೂ ಅಲ್ಲದ ಇತ್ತ ಬಲವೂ ಅಲ್ಲದ ವಾಮಪಂಥದ ಬಗ್ಗೆ, ಅವುಗಳ ಉಗಮ, ಅಳವಡಿಸಿಕೊಂಡ ನೀತಿ ಸಿದ್ಧಾಂತ, ಬೆಳೆದು ಬಂದ ಬಗೆ, ಭಾರತದ ಜಾತ್ಯಾತೀತ ರಾಜಕಾರಣವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ದಕ್ಷತೆ ಮತ್ತು ಛಾತಿ ಈ ಪಕ್ಷಗಳಿಗಿದೆಯೇ ಇಲ್ಲವೇ? ವಿವಿಧತೆಯಲ್ಲಿ ಏಕತೆಯೇ ಮೂಲಾಧಾರವಾಗಿರುವ ದೇಶದಲ್ಲಿ ವಾಮಪಂಥದ ಸಮಾಜವಾದ, ಕಾರ್ಮಿಕ ಸಂಘಟನೆಗಳ ಪುರೋಭಿವೃದ್ಧಿ ಹೆಸರಲ್ಲಿ ನಡೆಸುವ ಭ್ರಷ್ಟಾಚಾರ, ಏಕತಾವಾದ, ಅನುದಾರನೀತಿ, ಚಳುವಳಿ, ಶಸ್ತ್ರಾಸ್ತ್ರ ಹೋರಾಟ, ಮಾರ್ಕ್ಸಿಸಂ, ಕಮ್ಯುನಿಸ್ಟ್ ಸಿದ್ಧಾಂತಗಳು, ಆಡಳಿತ ಕೇಂದ್ರೀಕರಣದ ಅಸಲೀಯತ್ತು..ಹತ್ತು ಹಲವು ಅಂಶಗಳ ಬಗ್ಗೆ ಚರ್ಚಿಸಲಾಗಿದೆ. ಅಖಂಡ ಸಾರ್ವಭೌಮತ್ವ ಮತ್ತು ಸಾಂವಿಧಾನಿಕ ಕಟ್ಟುಪಾಡುಗಳ ಆಧಾರದ ಮೇಲೆ ನಿಂತಿರುವ ಭಾರತಕ್ಕೆ ವಾಮಪಂಥದ ನೀತಿನಿಯಮಗಳು ಭದ್ರ ಮತ್ತು ಸುರಕ್ಷತಾ ಭವಿಷ್ಯವನ್ನು ನೀಡಲಾರವು.
ಅಣ್ಣಾ ಹಜಾರೆ ಎನ್ನುವ ಹಿರಿಯ ಗಾಂಧಿವಾದಿಯ ನೆನಪಿರಬೇಕಲ್ಲ? 2011ರಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ಮೂಲಕ ದೇಶಾದ್ಯಂತ ಹೆಸರಾದವರು. ಹಾಗೆ ಬೆಳಗಾನ ಎದ್ದು ದಿಢೀರನೆ ಹೆಸರಾಗುವಂತೆ ಮಾಡಿದ್ದು ಮಾಧ್ಯಮ ಲೋಕ! ಅದಷ್ಟೇ ಮಾಡಿದ್ದರೆ ಪರವಾಗಿಲ್ಲ; ಹಜಾರೆ ಅವರನ್ನು ಗಾಂದಿಗೆ ಹೋಲಿಕೆ ಮಾಡಿದ್ದು ಮಾಧ್ಯಮ ಲೋಕದ ಅತಿ ಹೀನ ಕೃತ್ಯವಾಗಿತ್ತು. ಗಾಂಧಿಗೂ ಮತ್ತು ಹಜಾರೆಗೂ ಎಲ್ಲಿಂದೆಲ್ಲಿಯ ಹೋಲಿಕೆ? ಹೇಗೆ ಗಾಂಧಿ ಮತ್ತು ಹಜಾರೆಯವರ ಸಮಾನ ಹೋಲಿಕೆ ಸರಿಯಲ್ಲ ಎನ್ನುವುದನ್ನು ಇಬ್ಬರ ವ್ಯಕ್ತಿತ್ವದ ಅನಾವರಣಗೊಳಿಸುವ ಮೂಲಕ ಐದನೆಯ ಪ್ರಬಂಧದಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿಯನ್ನು ನೇತಾರನೆಂದು ಬಿಂಬಿಸುವ ಭರದಲ್ಲಿ ಮಾಧ್ಯಮ ಲೋಕ ಸೃಷ್ಠಿಸುತ್ತಿರುವ ಅವಾಂತರಗಳನ್ನು ಈ ಮೂಲಕ ಬಿಂಬಿಸಲಾಗಿದೆ. ಜೊತೆಗೆ ಯುಪಿಎ ಕೂಟದ ಮೈತ್ರಿ ಸರಕಾರದ ಮೊದಲ ಅವಧಿಯ ವೈಫಲ್ಯಗಳು ದೇಶಾದ್ಯಂತ ಪ್ರತಿದಿನವೂ ಯುವಕರ ಅಂತರಂಗದಲ್ಲಿ ಅನುರಣಿಸಿ ಆಡಳಿತದ ವಿರುದ್ಧ ಆಕ್ರೋಶವನ್ನುಂಟು ಮಾಡಿದ್ದವು? ಮತ್ತು ಎಲ್ಲದರ ಮೊತ್ತವಾಗಿ ಅಣ್ಣಾ ಹಜಾರೆ ಉಪವಾಸ ಕೂರಲು ಪ್ರೇರೇಪಿಸಿದ್ದವು ಎನ್ನುವ ಅಂಶಗಳ ಜೊತೆಗೆ ಉದ್ದೇಶಿತ ಲೋಕಪಾಲ್ ಮಸೂದೆಯು ಹೇಗೆ ಹಜಾರೆ ಸುತ್ತಲ ಬಳಗದಿಂದಲೇ ನಿಷ್ಕ್ರಿಯಗೊಂಡಿತು ಎನ್ನುವುದನ್ನು ಹೇಳಲಾಗಿದೆ.
ಗಾಂಧಿ ಮತ್ತು ನಮ್ಮ ನಂಬಿಕೆಗಳು ಮೇಲ್ಮುಖದಲ್ಲಿ ಹೇಗೆ ಪರಸ್ಪರ ವೈರೋಧದಿಂದ ಕೂಡಿದ್ದರೂ, ವಾಸ್ತವಿಕವಾಗಿ ಅತ್ಯವಶ್ಯಕವಾಗಿ ಅನುಸರಿಸಬೇಕಾದ, ಜಾರಿಗೊಳಿಸಬೇಕಾದ ಸಾಂಸ್ಥಾನಿಕ ಚಿಂತನೆಗಳನ್ನಷ್ಟೇ ಒಳಗೊಂಡಿಲ್ಲದೆ ಜಾಗತಿಕವಾಗಿಯೂ ಪ್ರತಿನಿಧಿಸಲ್ಪಸುವ ಗುಣವುಳ್ಳದ್ದು ಎನ್ನುವುದನ್ನು ಆರನೆಯ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
ಏಳನೆಯ ಪ್ರಬಂಧದಲ್ಲಿ, 1947ರಲ್ಲಿ ನೆಹರು ಅಧಿಕಾರ ವಹಿಸಿಕೊಂಡಾಗಿನಿಂದ 1965ರಲ್ಲಿ ಸಾಯುವ ತನಕ ಅವರ ಮೇಲೆ ಮೂಡಿದ ಕೀರ್ತಿ ಖ್ಯಾತಿ, ಯಶಸ್ಸು ಅಪ ಯಶಸ್ಸು, ನಂಬಿಕೆ ಅಪನಂಬಿಕೆ ಇವುಗಳ ಕುರಿತಾಗಿ ಚರ್ಚಿಸಲಾಗಿದೆ. ಇದೊಂಥರಾ ನೆಹರು ವ್ಯಕ್ತಿತ್ವದ ಮೇಲಿದ್ದ ಮಿಥ್ಯಾರೋಪಗಳ ಕುರಿತಾದ ಅಧ್ಯಾಯ. ಜೊತೆಗೆ, ಹೇಗೆ ನೆಹರು ಜಾತ್ಯಾತೀತರಾಗಿದ್ದರು? ಆರಂಭದಲ್ಲಿ ಅವರಿಗಿದ್ದ ಅಡೆತಡೆಗಳೇನು? ಅದನ್ನೆಲ್ಲ ಹೇಗೆ ಸಮರ್ಥವಾಗಿ ನಿಭಾಯಿಸಿದರು? ಭಾರತದ ಪ್ರಜಾಸತ್ತೆಯನ್ನು ಗಮನಿಸುವ, ಪ್ರಶ್ನಿಸುವ ಮತ್ತು ಸಂಶಯದ ನೋಟ ಬೀರುವ ಜಾಗತಿಕ ಅಡ್ಡಿ ಆತಂಕಗಳ ಜೊತೆಯಲ್ಲೇ ಆಂತರಿಕವಾಗಿ ಎದುರಿಸಿದ ಸವಾಲುಗಳೇನು? ನೆಹರು ಅವರಿಗಿದ್ದ ರಾಜತಾಂತ್ರಿಕ ನೈಪುಣ್ಯತೆ, ಅಂತರ್ರಾಷ್ಟೀಯ ವರ್ಚಸ್ಸು, ರಾಜಕೀಯ ಮುತ್ಸದ್ದಿತನ ಹೇಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದವು ಎನ್ನುವ ಅಂಶಗಳನ್ನು ಚರ್ಚಿಸಲಾಗಿದೆ. ಭಾರತ ಕಂಡ ಅಪ್ರತಿಮ ರಾಜಕಾರಣಿಯೊಬ್ಬನ ಬದುಕು, ಕಾಲಕಾಲಕ್ಕೂ ಆದರ್ಶ ಮತ್ತು ಅನುಕರಣೀಯವಾಗಬೇಕಿದ್ದ ಆತನ ಜೀವನಗಾಥೆ 1962ರ ಚೀನಾ ಜೊತೆಗಿನ ಯುದ್ಧದಲ್ಲಿ ಸೋತ ಬಳಿಕ ಅವಸಾನದತ್ತ ಸಾಗಿದ್ದು ನಿಜವಾದ ದುರಂತ. ಯುದ್ಧ ಸೋಲಲು ನೆಹರು ಒಬ್ಬರೇ ಕಾರಣರಾಗಿರಲಿಲ್ಲ ಎನ್ನುವ ಅಂಶ ಇಂದಿಗೂ ಅಸಂಖ್ಯಾತ ಮಂದಿಗೆ ತಿಳಿದಿಲ್ಲ. ಅದರ ಹಿಂದೆ ಅನೇಕ ಮಂದಿಯ ಕಾಣದ ಕೈಗಳು ಇದ್ದವು ಎನ್ನುವುದಕ್ಕಿಂತ ಬೆಳಕಿಗೆ ಬಾರದ ಅಸಲೀ ರಾಜತಾಂತ್ರಿಕ ಕಾರಣಗಳಿದ್ದವು. ಅದನ್ನೆಲ್ಲ ಬದಿಗೊತ್ತಲಾಯಿತು. ಸೋಲನ್ನಷ್ಟೇ ಬಿಂಬಿಸಲಾಯಿತು. ಹೀಗಾಗಿ ನೆಹರು ಅವರ ಬದುಕು ಏರಿಳಿತಗಳ ಮೇಲೋಗರ ಮತ್ತು ದುರಂತಮಯ.
ಎಂಟನೆಯ ಪ್ರಬಂಧದಲ್ಲಿ, ಏಷ್ಯಾ ನಾಗರೀಕತೆಗಳ ಸಂಘರ್ಷ, ಭಾರತ - ಚೀನಾ ನಡುವಿನ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮರುಚಿಂತನೆಗಳ ಬಗ್ಗೆ ಚರ್ಚಿಸಲಾಗಿದೆ. 1962ರ ಯುದ್ಧಕ್ಕೆ ಚೀನಾಗಿದ್ದ ಕಾರಣಗಳೇನು? ರಾಜಕೀಯ ಒತ್ತಡಗಳೇನಿತ್ತು? ಭಾರತ ಅನುಸರಿಸಿದ್ದ ಆಲಿಪ್ತ ನೀತಿ ಹೇಗೆ ಭಾರತಕ್ಕೇ ಮುಳುವಾಯಿತು? 1950ರಲ್ಲೇ ಪಟೇಲರು ನೀಡಿದ್ದ ಮುನ್ಸೂಚನೆಯನ್ನು ಕಡೆಗಣಿಸಿದ್ದಾದರೂ ಏಕೆ? ಯುದ್ಧದ ಸೋಲಿಗೆ ಸ್ವತಃ ನೆಹರು ಕೊಟ್ಟ ಕಾರಣ ಮತ್ತು ಹೇಳಿಕೆಗಳೇನು? ಎನ್ನುವುದರ ಕುರಿತು ಬೆಳಕು ಚೆಲ್ಲುತ್ತದೆ. ಶತಮಾನಗಳ ಕಾಲ ಶಾಂತಿ ಮತ್ತು ಸೌಹಾರ್ದತೆಗಳಿಂದ, ಅತ್ಯುತ್ಕೃಷ್ಟ ಮತ್ತು ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಾಳಿ ಬದುಕಿದ್ದ ದೇಶಗಳೆರಡೂ ಬದ್ದ ವೈರಿಗಳಂತೆ ಕಾದಾಡಲು ಟಿಬೆಟ್'ನ ಪಾತ್ರವಿದೆಯೇ? ಬೌದ್ಧಗುರು ದಲೈಲಾಮಾ ಗಡೀಪಾರಾದಾಗ ಆಶ್ರಯವೋದಗಿಸಿದ ಭಾರತದ ನಡೆ ಯುದ್ಧವನ್ನು ಮಾಡಲು ಹಿಂದೇಟು ಹಾಕುತ್ತಿದ್ದ ಚೀನಾವನ್ನು ಪ್ರೇರೇಪಿಸಿತೇ? ಯುದ್ಧವನ್ನು ತಡೆಯುವ ಸಲುವಾಗಿ ಸ್ವತಃ ಚೀನಾ ಪ್ರಧಾನಿಯೇ ಭಾರತಕ್ಕೆ ಬಂದು ನೀಡಿದ ಪರಿಹಾರೋಪಾಯವೇನು? ಇದ್ದಿದ್ದರಲ್ಲಿ ಭಾರತ ಅದನ್ನು ಅನುಸರಿಸಬಹುದಿತ್ತು ಮತ್ತು ಯುದ್ಧವನ್ನು ತಪ್ಪಿಸಬಹುದಿತ್ತು. ಹಾಗೆ ಚೀನಾ ಸೂಚಿಸಿದ ಪರಿಹಾರವನ್ನು ಭಾರತ (ನೆಹರು) ಏಕೆ ಅನುಷ್ಠಾನಗೊಳಿಸಲಾಗಲಿಲ್ಲ? ಎನ್ನುವ ಹತ್ತು ಹಲವು ಅಂಶಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
ಸ್ವಾಯತ್ತತೆ, ನಿರಂಕುಶ ಪ್ರಭುತ್ವ ಮತ್ತು ಪ್ರತ್ಯೇಕತೆಯ ಹಾದಿ ಹಿಡಿದವರಿಗೆ ರಾಜಿ ಸಂಧಾನ ಮತ್ತು ಅನುಸರಣೆಗಳು ಒಳ್ಳೆಯ ಮಾರ್ಗವಾಗಬಲ್ಲದು ಎನ್ನುವುದನ್ನು ಒಂಭತ್ತನೆಯ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ಉದಾಹರಣೆಗೆ, ಏಕಭಾಷಾ ಸೂತ್ರವನ್ನು ಅನುಸರಿಸಿದ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಭಾಷಾ ವೈಷಮ್ಯ ಮತ್ತು ಕೋಮುವಾದಿ ಗಲಭೆಗಳಿಗೆ ಸಿಕ್ಕು ತತ್ತರಿಸಿ ನಲುಗಿದವೆನ್ನುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಪಶ್ಚಿಮ ಪಾಕಿಸ್ತಾನದ ಕಟ್ಟರ್ ಉರ್ದು ಹೇರಿಕೆ ಬಂಗಾಳಿ ಅತ್ಯಧಿಕವಾಗಿ ಮಾತನಾಡುತ್ತಿದ್ದ ಪೂರ್ವ ಪಾಕಿಸ್ತಾನ ಪ್ರಾಂತ್ಯದಲ್ಲಿ ಹೊಸ ದೇಶ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಘಟನೆ ಇರಬಹುದು, ಇಪ್ಪತ್ತೈದು ವರ್ಷಗಳ ಕಾಲ ಭಾಷೆ ಮತ್ತು ಸಾಂಸ್ಥಿಕತೆಗಾಗಿ ಲಕ್ಷಕ್ಕೂ ಮೀರಿ ಪ್ರಾಣವನ್ನು ಬಲಿ ಪಡೆದ ಶ್ರೀಲಂಕಾದಲ್ಲಿನ ತಮಿಳು ಈಲಂಗಳ ಉಗ್ರ ಹೋರಾಟವಿರಬಹುದು.. ರಾಜೀಸೂತ್ರವನ್ನು ಅನುಸರಿಸಿದ್ದಿದ್ದರೆ ಬಯಸಿದಷ್ಟು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲಾಗಿದಿದ್ದರೂ ಗರಿಷ್ಠ ಮಟ್ಟದ ರಿಯಾಯತಿಗಳನ್ನಾದರೂ ಹೊಂದಬಹುದಾಗಿತ್ತು ಎನ್ನುವ ಅಂಶ ಈ ಪ್ರಬಂಧದಿಂದ ಮನದಟ್ಟಾಗುತ್ತದೆ.
ಹತ್ತನೆಯ ಪ್ರಬಂಧವು, ದ್ವಿಭಾಷೆಯ ಅನುಸರಣೆ ಹೇಗೆ ಭಾರತವನ್ನು ವಿವಿಧತೆಯಿಂದ ಗುರುತಿಸುತ್ತಲೇ ಅಖಂಡತ್ವವನ್ನು ಪ್ರತಿಪಾದಿಸುತ್ತಿವೆ ಎನ್ನುವುದನ್ನು ಹೇಳುತ್ತದೆ. ಭಾರತೀಯ ವಿಶ್ವವಿದ್ಯಾಲಯಗಳು ಬೆಳೆದು ಬಂದ ಬಗೆಯನ್ನು ಹನ್ನೊಂದನೆಯ ಪ್ರಬಂಧದಲ್ಲಿ, ದೆಹಲಿಯಲ್ಲಿರುವ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಒಂದು ಕಾಲಕ್ಕೆ ವಿದ್ವಾಂಸರ ನೆಲೆವೀಡಾಗಿದ್ದು ಕುಟುಂಬ ರಾಜಕಾರಣಕ್ಕೆ (ಸೋನಿಯಾ ಮತ್ತು ರಾಹುಲ್) ಸಿಕ್ಕು ಸವಕಲಾಗಿ ಹೋದದ್ದರ ಬಗ್ಗೆ ಹನ್ನೆರಡನೆಯ ಪ್ರಬಂಧದಲ್ಲಿ, ಭಾರತದಲ್ಲಿ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್'ನ ಇತಿಹಾಸವನ್ನು ಹದಿಮೂರನೆಯ ಪ್ರಬಂಧದಲ್ಲಿ, ಬೆಂಗಳೂರಿನ ಪುರಾತನ ಪುಸ್ತಕಾಲಯವಾದ ಪ್ರೀಮಿಯರ್ ಬುಕ್ ಶಾಪ್ ಬಗ್ಗೆ ಮತ್ತು ಅಲ್ಲಿ ಬರುತ್ತಿದ್ದ ಘನ ಪಂಡಿತ ಅನೇಕ ಓದುಗರು, ಅನಂತಮೂರ್ತಿ, ಕಾರ್ನಾಡ್ ಅವರಿಗೆ ಮಳಿಗೆಯ ಮಾಲೀಕ ಟಿ ಎನ್ ಶಾನ್'ಭಾಗ್ ಅವರ ಜೊತೆಗಿದ್ದ ಒಡನಾಟ ಮತ್ತದರ ಅಂತ್ಯಕಾಲದ ಬಗೆ ಹದಿನಾಲ್ಕನೆಯ ಪ್ರಬಂಧದಲ್ಲಿ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯ ಜೊತೆ ತಮಗಿರುವ ಬಾಂಧವ್ಯದ ಕುರಿತು ಹದಿನೈದನೆಯ ಪ್ರಬಂಧದಲ್ಲಿ ಹೇಳಲಾಗಿದೆ. ವಿಶೇಷವೆಂದರೆ, ಅವಶ್ಯವಿರುವೆಡೆಯಲ್ಲೆಲ್ಲಾ, ರಾಮಚಂದ್ರ ಗುಹಾ ಅವರು ತಮ್ಮ ವೈಯಕ್ತಿಕ ಅನುಭವವನ್ನು ನೀಡಿರುವುದು ಓದುವಿಕೆಯನ್ನು ಹೆಚ್ಚು ಆಪ್ತಗೊಳಿಸುವ ಸಂಗತಿಯಾಗಿದೆ. ಗುಹಾ ಅವರು ಬೆಂಗಳೂರಿನ ಖಾಯಂ ನಿವಾಸಿ ಅನ್ನುವ ಸಂಗತಿಯೇನೋ ತಿಳಿದಿದೆ. ಆದರೆ ಅವರ ಖಾಸಗೀ ಬದುಕಿನ ಅನೇಕ ಸಂಗತಿಗಳನ್ನು, ಮೊದಲೇ ಹೇಳಿದಂತೆ, ಎಲ್ಲಿ ಬೇಕೋ ಅಲ್ಲಿ ಅವಶ್ಯವಿರುವೆಡೆಯಲ್ಲಿ ಪ್ರಬಂಧಕ್ಕೆ ಪೂರಕವಾಗಿ ಹೇಳಿದ್ದಾರೆ. ಪುಸ್ತಕದಲ್ಲಿನ ಪ್ರತಿಯೊಂದು ಪ್ರಬಂಧವೂ ಅಧ್ಯಯನಶೀಲವಾದದ್ದು. ಗುಹಾ ಅವರನ್ನು ಕಾಂಗ್ರೆಸ್ ವಕ್ತಾರನೆಂದು ತಿಳಿದವರೇ ಹೆಚ್ಚು. ಆದರೆ ತಾನು ಯಾವ ಪಂಥ, ಪಂಗಡ ಮತ್ತು ಸಿದ್ಧಾಂತದ ಪ್ರತಿಪಾದಕನಲ್ಲ ಎನ್ನುವ ಸಂಗತಿಯನ್ನು ಪುಸ್ತಕದುದ್ದಕ್ಕೂ ತಾವು ಕಾಂಗ್ರೆಸ್ಸನ್ನು ಎದುರಿಸಿದ, ವಿರೋಧಿಸಿದ ರೀತಿ ನೀತಿಗಳ ಹಲವು ದೃಷ್ಟಾಂತಗಳ ಮೂಲಕ ತೆರೆದಿಡುತ್ತಾರೆ. ಹಾಗಂತ ಹಿಂದುತ್ವದ ಪ್ರತಿಪಾದಕರಲ್ಲ; ಅದರಲ್ಲಿನ ಹುಳುಕುಗಳನ್ನು, ರಾಜಕೀಯ ಸೂತ್ರ ಸಂಬಂಧೀ ವಿನಾಶಕಾರಿ ಅಂಶಗಳನ್ನೂ ಓದುಗರೆದುರಿಡುತ್ತಾರೆ. ನಿಶ್ಚಯಿಸುವುದು ನಮಗೇ ಬಿಟ್ಟದ್ದು.
ನಮಸ್ಕಾರ.
ಮೋಹನ್ ಕುಮಾರ್ ಡಿ.ಎನ್
ಜಿ.ಎನ್. ರಂಗನಾಥರಾವ್ ಅವರ ಲೇಖಕ ಪರಿಚಯ್ಕಾಗಿ ಇಲ್ಲಿ ಕ್ಲಿಕಿಸಿ...
ದೇಶಪ್ರೇಮಿಗಳು ಮತ್ತು ಪಕ್ಷಪಾತಕರು ಕೃತಿ ಪರಿಚಯ ಇಲ್ಲಿದೆ..
“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...
“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....
"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...
©2024 Book Brahma Private Limited.