ನಾಗಾಲ್ಯಾಂಡ್ ಸಮಸ್ಯೆಯೂ ಕಾಶ್ಮೀರಕ್ಕಿಂತ ತೀರಾ ಭಿನ್ನವೇನಲ್ಲ


“ 'ನಾಗಾ' ಸಮುದಾಯದ ವಾಸಸ್ಥಾನವಾಗಿದ್ದ, ಮೊದಲು ಅಸ್ಸಾಂನ ಭಾಗವಾಗಿದ್ದ ಆ ಪ್ರದೇಶ ಈಗ 'ನಾಗಾಲ್ಯಾಂಡ್' ಆಗಿ ಪ್ರತ್ಯೇಕಗೊಂಡ ಕತೆಯ ಹಿನ್ನಲೆಯ ಕುರಿತು ಈ ಕಾದಂಬರಿ ಮಾತಾಡುತ್ತದೆ,” ಎನ್ನುತ್ತಾರೆ ನಾಗೇಂದ್ರ ಎ. ಆರ್. ಅವರು ಶಿವಶಂಕರ್‌ ಅವರ ಅನುವಾದಿತ ಕಾದಂಬರಿ “ವನವಾಸಿ” ಕುರಿತು ಬರೆದ ವಿಮರ್ಶೆ.

ನನಗೆ ಇಲ್ಲಿಯವರೆಗೂ ಅರಿವಿರದ ವಾಸ್ತವಿಕ ವಿಷಯವೊಂದರ ಕುರಿತ ಕಾದಂಬರಿಯಾದ 'ವನವಾಸಿ'ಯನ್ನು ಓದಿದೆ. ಇದೊಂದು ಗಹನವಾದ ವಸ್ತುವನ್ನು ಹೊಂದಿದ ಅನುವಾದಿತ ಕಾದಂಬರಿ. 'ನಾಗಾ' ಸಮುದಾಯದ ವಾಸಸ್ಥಾನವಾಗಿದ್ದ, ಮೊದಲು ಅಸ್ಸಾಂನ ಭಾಗವಾಗಿದ್ದ ಆ ಪ್ರದೇಶ ಈಗ 'ನಾಗಾಲ್ಯಾಂಡ್' ಆಗಿ ಪ್ರತ್ಯೇಕಗೊಂಡ ಕತೆಯ ಹಿನ್ನಲೆಯ ಕುರಿತು ಈ ಕಾದಂಬರಿ ಮಾತಾಡುತ್ತದೆ.

ಪುಸ್ತಕವನ್ನು ಓದಿದ ಬಳಿಕ ಅಂತರ್ಜಾಲದಲ್ಲೂ ಈ ಕುರಿತು ಒಂದಿಷ್ಟು ಓದಿದೆ. ದೊರೆತ ಮಾಹಿತಿಗಳು ಬೆಚ್ಚಿಬೀಳಿಸುವಂತಿದ್ದವು. ಇಲ್ಲಿಯತನಕ ಕಾಶ್ಮೀರದ ಸಮಸ್ಯೆ ಹೇಗೆ ನಮ್ಮನ್ನು ಕಾಡುತ್ತಿತ್ತೋ, ಅಂತೆಯೇ ಈ ನಾಗಾಲ್ಯಾಂಡ್ ಸಮಸ್ಯೆಯೂ ಕಾಶ್ಮೀರಕ್ಕಿಂತ ತೀರಾ ಭಿನ್ನವೇನಲ್ಲ. 'ನಾಗಾ' ಸಮುದಾಯದವರ ವಾಸಸ್ಥಾನವಾದ ಈ ಜಾಗ ನಾಗಾಸ್ಥಾನ್ ಅಥವಾ ನಾಗಾಪ್ರದೇಶ್ ಎಂದು ಕರೆಯಲ್ಪಡದೆ, ನಾಗಾಲ್ಯಾಂಡ್ ಎಂದು ಹೆಸರಿಸಲ್ಪಟ್ಟಿದೆ. ಈ ರಾಜ್ಯದ ಆಡಳಿತ ಭಾಷೆಯೇ ಇಂಗ್ಲಿಷ್! ಯುರೋಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ ಇದ್ದಂತೆ ನಮ್ಮಲ್ಲಿ ಆಂಗ್ಲ ಹೆಸರಿನ ನಾಗಾಲ್ಯಾಂಡ್ ಇದೆ. ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿದ್ದರೂ, ಅವರು ಬಿತ್ತಿ ಹೋದ ಬೀಜ ಈಗ ನಾಗಾಲ್ಯಾಂಡ್ ರೂಪದಲ್ಲಿ ಹೆಮ್ಮರವಾಗಿ ಬೆಳೆದು ದೇಶಕ್ಕೆ ತಲೆನೋವಾಗಿದೆ. ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN IM) ಎಂಬ ಗುಂಪೊಂದು ಈ ರಾಜ್ಯದಲ್ಲಿ ನಿರಂತರವಾಗಿ ಸಕ್ರಿಯವಾಗಿದ್ದು, ಇವರ ಧ್ಯೇಯ ಮತ್ತು ಚಟುವಟಿಕೆಗಳು, ಶ್ರೀಲಂಕಾದ LTTE ಮಾದರಿಯಲ್ಲೇ ತೋರುತ್ತವೆ. ಇವರ ವಾದದ ಪ್ರಕಾರ ನಾಗಾಲ್ಯಾಂಡ್ ಎಂಬುದು ಹಿಂದೆಂದೂ ಭಾರತಕ್ಕೆ ಸೇರಿರಲೇ ಇಲ್ಲ. ಇವರು ಭಾರತದೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದೂ ಇಲ್ಲ. ಕಳೆದ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಮಾನ್ಯ ಪ್ರಧಾನಿಯವರು 'ಹರ್ ಘರ್ ತಿರಂಗಾ' ಎಂದು ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದ್ದರೆ, ನಾಗಾಲ್ಯಾಂಡಿನಲ್ಲಿ ಮಾತ್ರ NSCN ಕಾರ್ಯಕರ್ತರು 'ನಾಗಾ ರಾಷ್ಟ್ರಧ್ವಜ' ಎಂಬ ಬೇರೆಯದೇ ಧ್ವಜವನ್ನು ಹಾರಿಸಿದ್ದರು.

ಹಾಗಿದ್ದರೆ ಈ ಸಮಸ್ಯೆಗೆ ಮೂಲ ಕಾರಣ ಏನು? ಈ ಉತ್ತರದ ಅನ್ವೇಷಣೆಯ ಪಥವನ್ನು ಕಾದಂಬರಿ ಮನೋಜ್ಞವಾಗಿ ಓದುಗನೆದುರು ತೆರೆದಿಟ್ಟಿದೆ. ಸ್ವಾತಂತ್ರ್ಯಪೂರ್ವಕ್ಕೂ ಮೊದಲು ಅಲ್ಲಿ ನಾಗಾ ಜನರ ಬದುಕು ಹೇಗಿತ್ತು? ಅವರ ಆಚರಣೆಗಳು, ನಂಬಿಕೆಗಳು, ದೈನಂದಿನ ಜೀವನ ಹೇಗಿತ್ತು? ಕ್ರಮೇಣವಾಗಿ, ಅವರ ಬದುಕು ಅಲ್ಲಿ ನೆಲೆಗೊಳ್ಳತೊಡಗಿದ ಆಂಗ್ಲರಿಂದಾಗಿ ಹೇಗೆ ಪ್ರಭಾವಿಸಲ್ಪಟ್ಟಿತು? ಈ ಸಂಗತಿಗಳನ್ನು ತಿಳಿದುಕೊಳ್ಳಲು ನಾವು ಕಾದಂಬರಿಯನ್ನೇ ಓದಬೇಕು. ಮುಗ್ಧ ನಾಗಾ ಜನರು ಕ್ರೈಸ್ತ ಪಾದ್ರಿಗಳ ಬಲೆಗೆ ಬಿದ್ದು ಮತಾಂತರ ಹೊಂದಿ, ನಂತರ ತಮ್ಮ ಬದುಕನ್ನು ಮುಂದೆ ಸಾಗಿಸಲೂ ಆಗದೆ ಅಥವಾ ತಮ್ಮ ಹಳೆಯ ಬದುಕಿಗೆ ಹಿಂದಿರುಗಲೂ ಆಗದೆ ತ್ರಿಶಂಕು ಸ್ಥಿತಿಯನ್ನನುಭವಿಸಿ ಒದ್ದಾಡಿದ ಬಗೆಯನ್ನು ಈ ಕೃತಿ ತೆರೆದಿಡುತ್ತದೆ. ನೈಜ ಇತಿಹಾಸವನ್ನೇ ಕಾಲ್ಪನಿಕ ಪಾತ್ರಗಳ ಮೂಲಕ ಹೇಳಿರುವುದರಿಂದ, ಇದೊಂದು ಐತಿಹಾಸಿಕ ಕಿರುಕಾದಂಬರಿ ಎನ್ನಲು ಅಡ್ಡಿಯಿಲ್ಲ. ಬಹಳ ವೇಗವಾಗಿ ಕತೆ ಸಾಗುವುದರಿಂದ, ಪುಸ್ತಕವನ್ನೋದಿ ಮುಗಿದಿದ್ದೇ ತಿಳಿಯಲಿಲ್ಲ. 1968ರಲ್ಲಿ ಮೊದಲು ಪ್ರಕಟಗೊಂಡಿತಾದರೂ, ಇಂದಿನ ವರ್ತಮಾನಕ್ಕೂ ಬಹಳ ಪ್ರಸ್ತುತವಾದ ಪುಸ್ತಕವಿದು. ಅದರಲ್ಲೂ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯವಾದ ಜಾಗೃತಿಯನ್ನು ಮೂಡಿಸುವ ಕೃತಿ. ದೊರೆತಾಗ ತಪ್ಪದೇ ಓದಿ.

MORE FEATURES

ಜಾತಿಯನ್ನು ಮೀರಿದ ಮಾನವೀಯತೆ

13-04-2025 ಬೆಂಗಳೂರು

"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂ...

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು

13-04-2025 ಬೆಂಗಳೂರು

"ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆ...

ಓದುತ್ತ ಹೋದಂತೆ ನಾನು ನೆನಪಿನ ದೋಣಿಯಲ್ಲಿ ಹಿಂದಿರುಗಿ ನೋಡುವಂತೆ ಮಾಡಿವೆ

13-04-2025 ಬೆಂಗಳೂರು

"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸ...