ಸೌಹಾರ್ದ ಪರಂಪರೆಯನ್ನು ಗಟ್ಟಿಗೊಳಿಸುವ ಯತ್ನ


"ಜಾಗತೀಕರಣದ ಭರಾಟೆ, ನವ ಮಾಧ್ಯಮಗಳ ಆಗಮನ, ಸ್ಥಳೀಯ ಸಾಂಸ್ಕೃತಿಕ ರಾಜಕಾರಣದಿಂದಾಗಿ ವರ್ತಮಾನದಲ್ಲಿ ನಮ್ಮ ಸಮಾಜ ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.ಇದರಾಚೆಗೂ ಜನಸಮುದಾಯಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಬ್ಬ ಆಚರಣೆಗಳನ್ನು ಸಹಜವಾಗಿ ಮುಖಾಮುಖಿಯಾಗಿಸಿಕೊಳ್ಳುತ್ತಲೇ ಸಾಮರಸ್ಯದ ಹಣತೆ ಆರದಂತೆ ಕಾಪಿಟ್ಟುಕೊಳ್ಳುತ್ತಿದ್ದಾರೆ," ಎನ್ನುತ್ತಾರೆ ಡಾ. ದಸ್ತಗೀರಸಾಬ್ ದಿನ್ನಿ. ಅವರು ಮಹಾದೇವಪ್ಪ ನಾಗರಾಳ ಅವರ `ಮುದಗಲ್ಲ ಮೊಹರಂ ಆಚರಣೆ ಮತ್ತು ಸಾಹಿತ್ಯ’ ಕೃತಿಗೆ ಬರೆದ ಮುನ್ನುಡಿ.

ಕರ್ನಾಟಕವು ಹಲವು ಜಾತಿ, ಧರ್ಮ, ಮತ, ಪಂಥಗಳಿಂದ ಕೂಡಿದ್ದು ಶಾಂತಿಯ ತೋಟದಂತಿದೆ. ಇಲ್ಲಿನ ಸಹಬಾಳ್ವೆ, ಸ್ನೇಹಪರತೆಯು ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿದೆ. ಶರಣರು, ದಾಸರು, ಸೂಫಿಗಳು, ತತ್ವಪದಕಾರರು ತಮ್ಮ ಸಾಹಿತ್ಯದ ಮೂಲಕ ಸಾಮರಸ್ಯ ಭಾವವನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಇಲ್ಲಿನ ಬೌದ್ಧ ,ಸನಾತನ, ಜೈನ, ಇಸ್ಲಾಂ, ಕ್ರೈಸ್ತ ಧರ್ಮಗಳು ವಿಶಿಷ್ಟ ಸಂಸ್ಕೃತಿಗೆ ನಾಂದಿ ಹಾಡಿವೆ. ಆಯಾ ಧರ್ಮಗಳು ಕಾಲಕಾಲಕ್ಕೆ ಜನ ಸಮುದಾಯಗಳಿಗೆ ಮೌಲ್ಯಗಳ ಪಾಠಗಳನ್ನು ಸಾರುತ್ತಲೇ ಹಲವು ಬಗೆಯ ಕಟ್ಟುಪಾಡುಗಳನ್ನು ವಿಧಿಸಿವೆ. ಆಯಾ ಧರ್ಮಗಳ ಆಚರಣೆ, ನಂಬಿಕೆ, ಸಂಪ್ರದಾಯಗಳು ವಿಭಿನ್ನವಾಗಿದ್ದರೂ ಜೀವತಂತುವಾಗಿ ಹರಿಯುವ ಕೂಡಿ ಬದುಕುವ ಧೋರಣೆ ಒಂದೇ ಆಗಿದೆ. ದೇವನೊಬ್ಬ ನಾಮ ಹಲವು. ನೀನೂ ಬದುಕು ಇತರರನ್ನೂ ಬದುಕಿಸು ಎನ್ನುವ ಪ್ರಧಾನ ಆಶಯ ಧರ್ಮಗಳ ಮೂಲ ಮಂತ್ರವಾಗಿದೆ.

ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಗಟ್ಟಿಗೊಳಿಸುವಲ್ಲಿ ಹಬ್ಬ ,ಜಾತ್ರೆ ,ಉರ್ಸು ಮತ್ತು ಮೊಹರಂ ಆಚರಣೆಗಳ ಪಾತ್ರ ಮಹತ್ವದ್ದು. ಇವೆಲ್ಲವುಗಳಲ್ಲಿ ಹಿಂದೂ ಮುಸ್ಲಿಂರ ಮಧುರ ಮೈತ್ರಿಯನ್ನು ಇಂದಿಗೂ ಕಾಣಬಹುದು. ಹಿಂದೂಗಳ ಯುಗಾದಿಯ ಬೇವು ಬೆಲ್ಲ, ಮುಸ್ಲಿಮರ ರಂಜಾನಿನ ದೂದ್ ಕೂರ್ಮದ ಕೊಡುಕೊಳುವಿಕೆಯ ಪ್ರಕ್ರಿಯೆ ನೆಲದ ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತದೆ. ಜಾಗತೀಕರಣದ ಭರಾಟೆ, ನವ ಮಾಧ್ಯಮಗಳ ಆಗಮನ, ಸ್ಥಳೀಯ ಸಾಂಸ್ಕೃತಿಕ ರಾಜಕಾರಣದಿಂದಾಗಿ ವರ್ತಮಾನದಲ್ಲಿ ನಮ್ಮ ಸಮಾಜ ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದರಾಚೆಗೂ ಜನಸಮುದಾಯಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಬ್ಬ ಆಚರಣೆಗಳನ್ನು ಸಹಜವಾಗಿ ಮುಖಾಮುಖಿಯಾಗಿಸಿಕೊಳ್ಳುತ್ತಲೇ ಸಾಮರಸ್ಯದ ಹಣತೆ ಆರದಂತೆ ಕಾಪಿಟ್ಟುಕೊಳ್ಳುತ್ತಿದ್ದಾರೆ. ಇದರ ಹಿಂದೆ ಸುಪ್ತವಾಗಿ ಅಡಗಿರುವ ಜಾನಪದ ಸಾಂಸ್ಕೃತಿಕ ಮನಸ್ಸಿನ ತುಡಿತ ದೊಡ್ಡದು.

ಮೇಲಿನ ಈ ಎಲ್ಲ ಮಾತುಗಳನ್ನು ಹೇಳಲು ಬಲವಾದ ಕಾರಣವಿದೆ. ಮಹದೇವಪ್ಪ ನಾಗರಾಳ ಅವರ ‘ಮುದಗಲ್ಲ ಮೊಹರಂ ಆಚರಣೆ ಮತ್ತು ಸಾಹಿತ್ಯ’ ಎನ್ನುವ ಈ ಕೃತಿಯನ್ನು ಓದುವಾಗ ಸಹಜವಾಗಿಯೇ ಇವು ನೆನಪಾದವು. ದಿನ ನಿತ್ಯ ಹಲವು ಬಗೆಯ ತಲ್ಲಣಗಳನ್ನು ಕಾಣುತ್ತಿದ್ದೇವೆ. ಎಲ್ಲೆಡೆ ಹಿಂಸೆ ರಾರಾಜಿಸುತ್ತಿದೆ. ನಮ್ಮ ಸಮಾಜದ ತುಂಬ ಗಾಯಗಳಾಗುತ್ತಿವೆ. ಅಧರ್ಮ ,ಅನೀತಿ, ಶೋಷಣೆ, ಅತ್ಯಾಚಾರ, ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ಕತ್ತಿ ಮಸೆಯುತಿದೆ. ಪ್ರಕ್ಷುಬ್ಧ ಸನ್ನಿವೇಶದ ವರ್ತಮಾನದ ಭಾರತಕ್ಕೆ ಈ ಪುಸ್ತಕ ಅತ್ಯಂತ ಪ್ರಸ್ತುತ ಎನಿಸುವಂತಿದೆ ಎನ್ನುವುದೇ ಇದರ ಹೆಚ್ಚುಗಾರಿಕೆ.

ಸಂಶೋಧನಾತ್ಮಕ ಚಹರೆಯ ಈ ಪುಸ್ತಕದಲ್ಲಿ ಮೊಹರಂ ಆಚರಣೆ ಹಿನ್ನೆಲೆ, ಮುದಗಲ್ ಮೊಹರಂ ಆಚರಣೆಗಳು, ಜನಪದ ಕಲೆಗಳ ಪ್ರದರ್ಶನ, ಮೊಹರಂ ಪದಗಳು ಮತ್ತು ಅವುಗಳ ಸ್ವರೂಪ ಎನ್ನುವ ನಾಲ್ಕು ಅಧ್ಯಾಯಗಳಲ್ಲಿ ಇಲ್ಲಿನ ಚರಿತ್ರೆ ಬಿಚ್ಚಿಕೊಂಡಿದೆ. ಮೊಹರಂ ಹಾಡುಗಳು ಪ್ರಧಾನವಾಗಿ ಧಾರ್ಮಿಕ, ಸಾಮಾಜಿಕ ಮತ್ತು ತಾತ್ವಿಕತೆಯನ್ನು ಕೇಂದ್ರವಾಗಿಟ್ಟುಕೊಂಡು ಹರಡಿರುವುದನ್ನು ಇಲ್ಲಿನ ಹಾಡು ಮೀಮಾಂಸೆ ಮನದಟ್ಟು ಮಾಡಿಕೊಡುತ್ತದೆ. ಮೊಹರಂ ಆಚರಣೆಯ ಬಗೆಗೆ ಬಂದ ಪುಸ್ತಕಗಳು, ಜಾನಪದ ಐತಿಹ್ಯಗಳು ಮತ್ತು ಜನ ಸಮುದಾಯದಲ್ಲಿ ಬೀಡು ಬಿಟ್ಟಿರುವ ಮೌಕಿಕ ಮಾಹಿತಿಯ ಮೂಲಕ ಕೃತಿಯನ್ನು ವಿಸ್ತ್ರತವಾಗಿ ಬೆಳೆಸಲಾಗಿದೆ. ರಾಯಚೂರು ಜಿಲ್ಲೆಯ ಮುದುಗಲ್ಲಿನಲ್ಲಿ ನಡೆಯುವ ಮೊಹರಂ ಆಚರಣೆಯ ಸಾಂಸ್ಕೃತಿಕ ನೆಲೆಗಳು ಕರ್ನಾಟಕದ ಉದ್ದಗಲಕ್ಕೂ ತನ್ನ ರೆಂಬೆ ಕೊಂಬೆಗಳನ್ನು ಚಾಚಿರುವ ಬಗೆಯನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

ಇಸ್ಲಾಂ ಧರ್ಮವನ್ನು ಮಹಮದ್ ಪೈಗಂಬರವರು ಏಳನೇ ಶತಮಾನದಲ್ಲಿ ಸ್ಥಾಪಿಸಿದರು. ಇಸ್ಲಾಂ ಧರ್ಮ ಗ್ರಂಥವಾದ ‘ಖುರಾನ್’ ನಲ್ಲಿ ಅವರು ಪ್ರತಿಪಾದಿಸಿದ ನಂಬಿಕೆ, ಪ್ರಾರ್ಥನೆ ,ಉಪವಾಸ, ದಾನ ಮತ್ತು ಮಕ್ಕಾಯಾತ್ರೆಯಂತಹ ಪಂಚತತ್ವಗಳು ಬೀಜ ಮಂತ್ರಗಳಂತಿವೆ. ಇವು ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುತ್ತಲೇ, ಕತ್ತಲಿನಿಂದ ಬೆಳಕಿಗೆ ,ಅಜ್ಞಾನದಿಂದ ಜ್ಞಾನದ ದಿಸೆಯಲ್ಲಿ ಕರೆದುಕೊಂಡು ಹೋಗಲು ನೆರವಾಗುವಂತಿವೆ. ಸರ್ವ ಸಮಾನತೆ,ಏಕ ದೇವೋಪಾಸನೆ, ನೈತಿಕ ವಿವೇಕವನ್ನು ಅರುಹಿ, ಸುಸಂಸ್ಕೃತರನ್ನಾಗಿಸಿ ಮನುಷ್ಯ ಧರ್ಮವನ್ನು ಎತ್ತಿ ಹಿಡಿಯುವಂತಿವೆ.

ಮಹ್ಮದ್ ಪೈಗಂಬರ್ ಅವರು ಕಾಲವಾದ ನಂತರ ಧರ್ಮ ಗುರುವಿನ ಬಗೆಗೆ ಚರ್ಚೆಯಾಯಿತು. ಚರ್ಚೆಯಲ್ಲಿ ಎರಡು ಗುಂಪುಗಳು ಕಾಣಿಸಿಕೊಂಡವು. ಪೈಗಂಬರರ ವಂಶಸ್ಥರಿಗೆ ಖಲೀಫರಾಗುವ ಅವಕಾಶ ತಪ್ಪಿ ಹೋಯಿತು.ಕೊಲೆ ಸುಲಿಗೆಗಳಾಗಿ ರಕ್ತದ ಕಾಲುವೆ ಹರಿಯಿತು.ಪೈಗಂಬರರ ಮೊಮ್ಮಗ ಹಸನ್ ಶಾಂತಿದೂತನಾಗಿದ್ದ.ಅಧಿಕಾರದ ಹಪಾಹಪಿಯಲ್ಲಿದ್ದ ಮುಆವಿಯಾರ ನಂತರ ಹಸನ್ ಕೂಡ ಕೊನೆಯುಸಿರೆಳೆದ. ಮುಆವಿಯಾನನ ಮಗ ಯಜೀದನು ಅಧಿಕಾರವನ್ನು ಕಸಿದುಕೊಂಡು ದರ್ಪವನ್ನು ಮೆರೆದ. ಆಗ ಉಂಟಾದ ಆತಂಕ, ಅರಾಜಕತೆಯಿಂದ ಇರಾಕಿನ ಜನ ಧೃತಿಗೆಟ್ಟರು. ಹೇಗಾದರೂ ಮಾಡಿ ಹಸನ್ ಅವರ ತಮ್ಮ ಹುಸೇನರನ್ನು ಖಲೀಫರನ್ನಾಗಿಸಲು ಹಂಬಲಿಸಿದರು. ನಿಮ್ಮನ್ನು ಖಲೀಫರನ್ನಾಗಿ ಮಾಡುತ್ತೇವೆ ಬರಬೇಕೆಂದು ಸಂದೇಶ ಕಳಿಸಿದರು.ಮೆಕ್ಕಾದಿಂದ ಕೂಫಾನಗರ ದಾಟಿ, ಕರ್ಬಲಾ ನಗರವನ್ನು ಮೊಹರಂನ ಮೊದಲ ದಿನ ತಲುಪಿದರು. ಅಲ್ಲಿ ಯಜೀದನ ಸೈನ್ಯ ಮುತ್ತಿಗೆ ಹಾಕಿತು. ಅಧರ್ಮ ಯುದ್ಧದಿಂದ ಹುಸೇನರ ಗುಂಪನ್ನು ಕೊಲೆ ಮಾಡಿದರು. ಈ ಯುದ್ದದ ದಾರುಣತೆ, ರಕ್ತಸಿಕ್ತವಾದ ದುರಂತ ಕಥನವೇ ಮೊಹರಂ ಆಚರಣೆಯಾಗಿ, ಕರುಣಾಜನಕ ಕಥೆಯಾಗಿ, ಭಾವುಕತನದಿಂದ ಭಾರತೀಯ ಮನಸುಗಳೊಂದಿಗೆ

ಹಾಸುಹೊಕ್ಕಾಗಿದೆ. ಧಾರ್ಮಿಕ ಚಹರೆಯನ್ನು ಹೊಂದಿರುವ ಐತಿಹಾಸಿಕ ಚರಿತ್ರೆಯ ಈ ಕಥನ ವಿಭಿನ್ನ ಸ್ವರೂಪವನ್ನು ಪಡೆದುಕೊಂಡು, ಸ್ಥಳೀಯ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ .ಕಾಲಾತೀತವಾಗಿ,ದೈವ ಸ್ವರೂಪವಾಗಿ ಜನ ಮಾನಸದಲ್ಲಿ ಬೇರೂರಿದೆ.

ಕರ್ನಾಟಕದಲ್ಲಿ 14 ನೇ ಶತಮಾನದಿಂದಲೇ ಮೊಹರಂ ಆಚರಣೆಗೆ ಬಂತು ಎಂದು ಲೇಖಕರು ಗುರುತಿಸಿದ್ದಾರೆ. ಕರ್ಬಲಾ ಯುದ್ಧದಲ್ಲಿ ಪೈಗಂಬರರ ಕುಟುಂಬದವರು ಹುತಾತ್ಮರಾದ ನೆನಪಿಗೆ ಆಚರಿಸುವ ಮೊಹರಂ ಒಂದು ರೀತಿಯಲ್ಲಿ ಯೋಧರಿಗೆ ಸಲ್ಲಿಸುವ ಶ್ರದ್ಧಾಂಜಲಿಯಂತೆ ಕಂಡು ಬರುತ್ತದೆ. ಹಿಂಸೆ, ನೆತ್ತರು,ಯುದ್ಧವನ್ನು ನಿರಾಕರಿಸುವ ಇಂತಹ ಆಚರಣೆಗಳ ಹಿಂದೆ ಜಗತ್ತಿನ ಶಾಂತಿಗಾಗಿ ತಪಿಸುವ,ಅಹಿಂಸೆ,ಸಹಬಾಳ್ವೆ, ಭ್ರಾತೃತ್ವಗಳನ್ನು ಮರು ರೂಪಿಸುವ ಒತ್ತಾಸೆಗಳಿವೆ. ದೇಶದಲ್ಲಿ ಆಗಾಗ ನಡೆಯುವ ಕೋಮುಗಲಭೆ, ಭಯೋತ್ಪಾದನೆ, ಮುಗ್ಧ ಜೀವಿಗಳ ಮೇಲಿನ ದಾಳಿಗಳು ಮನುಷ್ಯನ ಕ್ರೌರ್ಯಕ್ಕೆ, ಅಧರ್ಮಕ್ಕೆ, ಅಮಾನವೀಯತೆಗೆ ಕನ್ನಡಿ ಒಡ್ಡುತ್ತವೆ. ಇವೆಲ್ಲವೂ ಮೂಲೆಗುಂಪಾಗಿ ಶಾಂತಿ, ಸಹನೆ, ಕರುಣೆ,ಪ್ರೇಮ ಭಾವಗಳು ನೆಲೆ ನಿಲ್ಲಬೇಕಾದ ಅಗತ್ಯವಿದೆ. ಅಂತಹ ಬಹುದೊಡ್ಡ ಪಾಠವನ್ನು ಕಾಲ ಕಾಲಕ್ಕೆ ಮೊಹರಂ ಆಚರಣೆ ಬಹಳ ಸೂಕ್ಷ್ಮವಾಗಿ ಕಲಿಸಿಕೊಡುತ್ತದೆ ಎನ್ನುವುದೇ ಆಳದ ಆಶಯವಾಗಿದೆ.

ಮುದುಗಲ್ ಮೊಹರಂ ಆಚರಣೆಯು ಆದಿಲ್ ಶಾಹಿ ರಾಜವಂಶರ ಕಾಲದಲ್ಲಿ ಸಂಸ್ಕಾರ ಪಡೆದುಕೊಂಡಿತು. ಬಿಜಾಪುರ ಸುಲ್ತಾನರ ಆಡಳಿತ ಕಾಲದಲ್ಲಿ ಅಧಿಕೃತವಾಗಿ ಆರಂಭವಾಯಿತು. ಇಲ್ಲಿ ಕೂಡಿಸುವಂತಹ ದೇವರು(ಆಲಂ) ಗಳನ್ನು ಕರ್ಬಲಾದಿಂದ ತರಲಾಗಿದೆ ಎಂದು ಲೇಖಕರು ಸಂಶೋಧನಾ ಅಧ್ಯಯನದಿಂದ ಗುರುತಿಸಿದ್ದಾರೆ. ಕರ್ಬಲಾದಿಂದ ಮುದಗಲ್ಲಿಗೆ ಬಂದ ಹಸನ್ ಮತ್ತು ಹುಸೇನರು ಇಲ್ಲಿಯ ಸೌಂದರ್ಯವನ್ನು ನೋಡುತ್ತ ತಮ್ಮನ್ನು ತಾವೇ ಮರೆತರು. ಈ ಸಂದರ್ಭದಲ್ಲಿ ಒಬ್ಬರು ಊರಿನೊಳಗೆ, ಇನ್ನೊಬ್ಬರು ಊರ ಹೊರಗೆ ಉಳಿಯಬೇಕಾಯಿತು. ಅದಕ್ಕೆ ಬಲವಾದ ಕಾರಣ ಸಾಯಂಕಾಲದ ಹೊತ್ತಿನಲ್ಲಿ ಕೋಟೆಯ ಬಾಗಿಲು ಮುಚ್ಚಿದ್ದು. ಅದರ ನೆನಪಿಗಾಗಿ ಮೊಹರಂ ಆಚರಿಸಿ ಕೊನೆಯ ದಿನ ಅವರಿಬ್ಬರನ್ನು ಮುಖಬಿಲೆ ಮಾಡಲಾಗುವುದು ಎಂದು ಊರಿನ ಜನ ತಮಗೆ ಗೊತ್ತಿದ್ದ ಕಥನವನ್ನು ಬಿಚ್ಚಿಡುತ್ತಾರೆ. ಇದನ್ನು ಜನಸಮುದಾಯಗಳ ಕಥನವನ್ನಾಗಿ ಅಷ್ಟೇ ನೋಡದೆ ಗಾಢ ಶ್ರದ್ಧೆಯ ಮಿತ್ ಆಗಿ ಕೂಡ ನೋಡಬಹುದು. ಇವು ಸಹಜವಾಗಿಯೇ ಊರಿನ ಚರಿತ್ರೆಯ ಭಾಗವಾಗಿ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ.

ಮೊಹರಂ ಆಚರಣೆಯು ಪ್ರಾದೇಶಿಕ ವಿಶಿಷ್ಟತೆಯಿಂದ ಊರ ಹಬ್ಬವಾಗಿ ಬೆಳೆದು ನಿಂತಿದೆ. ವಿಭಿನ್ನ ಶ್ರಮಿಕ ಸಮುದಾಯಗಳ ಸ್ನೇಹ ಸಂಬಂಧದ ಬೆಸುಗೆಯಾಗಿದೆ. ಸಾಂಸ್ಕೃತಿಕ ಬದುಕಿನ ಕೊಂಡಿಯಾಗಿದೆ. ಹಿಂದೂ ಮುಸ್ಲಿಮರ ಸೌಹಾರ್ದತೆಯ ದ್ಯೋತಕವಾಗಿರುವ ಮೊಹರಂ ಆಚರಣೆ ಚರಿತ್ರೆಯನ್ನು ಮತ್ತೆ ಮತ್ತೆ ಸಮಕಾಲೀನಗೊಳಿಸುವಂತಿದೆ. ಹತ್ತು ದಿನಗಳವರೆಗೆ ನಡೆಯುವ ಈ ಆಚರಣೆಯು ದೈವಿಕ ಸ್ವರೂಪವನ್ನು ಪಡೆದು, ಸಂಪ್ರದಾಯವಾಗಿ, ಸ್ಥಳೀಕರಣಗೊಂಡು ಹೃದಯಸ್ಪರ್ಶಿಯಾಗುತ್ತ ಬೆಳೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಣ್ಣಪುಟ್ಟ ವೈರುಧ್ಯಗಳನ್ನು ಮೀರುವ, ಸಾಮರಸ್ಯವನ್ನು ಕಾಣಬಯಸುವ ಗ್ರಹಿಕೆ ಇದರ ಹಿಂದಿದೆ. ಇಂತಹ ಆಚರಣೆಗಳು ಧರ್ಮ ಸಮನ್ವಯತೆಗೆ ಅತ್ಯುತ್ತಮ ಮಾದರಿಗಳಾಗಿ ನಿಲ್ಲುತ್ತವೆ. ಸಮಾಜದ ಕೇಡಿಗೆ, ಗಾಯಗಳಿಗೆ ಮುಲಾಮಿನಂತೆ ಕೆಲಸ ಮಾಡುತ್ತವೆ.

ಮೊಹರಂ ಹಾಡುಗಳು ಮೌಖಿಕ ಪರಂಪರೆಗೆ ಸಂಬಂಧಿಸಿದವು. ಜನಪದ ಲೋಕದ ಈ ಹಾಡುಗಳ ಪ್ರಧಾನ ವಸ್ತುವೆಂದರೆ ಕರ್ಬಲಾ ಯುದ್ಧದ ಪ್ರಸಂಗ. ಪ್ರವಾದಿ ಮತ್ತು ನಾಯಕರ ಬಾಳಿನ ಪ್ರಸಂಗಗಳು. ಅವು ಒಳಗೊಂಡಿರುವ ಕಥನಗಳಲ್ಲಿ ಕರುಣೆ, ಪ್ರೀತಿ, ಶೋಕವಿದೆ. ಅವುಗಳ ಅಭಿವ್ಯಕ್ತಿಯ ಮೂಲಕ ಮುಂದಿನ ತಲೆಮಾರಿಗೆ ನೀತಿ,ತತ್ವ, ಮೌಲ್ಯಗಳನ್ನು ದಾಟಿಸುವ ಪರಿಪಾಠವಿದೆ. ಹಾಗೆಯೇ ಕೋಮು ಸೌಹಾರ್ದತೆಯನ್ನು ಕೂಡ. ವಿಶೇಷವೆಂದರೆ ಈ ಹಾಡುಗಳನ್ನು ಕೇಳಲು ಜನಸಾಗರವೇ ನೆರೆದಿರುತ್ತದೆ. ಧರ್ಮ ,ಜಾತಿಯನ್ನು ಮೀರಿ ಬೆಳೆದ ಈ ಆಚರಣೆಯ ಹಾಡುಗಳಿಗೆ ಒಂದು ಕಾವ್ಯ ತತ್ವವಿದೆ. ಅವುಗಳದೇ ಆದ ಪರಿಭಾಷೆ ಇದೆ ಎನ್ನುವುದು ಗಮನಾರ್ಹ. ಜನಪದರ ಚಾರಿತ್ರಿಕ ಪ್ರಜ್ಞೆಗೆ ಈ ಹಾಡುಗಳು ಅತ್ಯುತ್ತಮ ಉದಾಹರಣೆಯಂತಿವೆ.

ಬಹಳ ಮುಖ್ಯವಾಗಿ ಮೊಹರಂ ಆಚರಣೆಯಲ್ಲಿ ಮೇಲ್ವರ್ಗದವರು ಹೆಚ್ಚು ಭಾಗವಹಿಸುವುದಿಲ್ಲ. ಅಲಾವಿ ಕುಣಿತದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಹಾಡುಗಾರಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಪ್ರಮಾಣದಲ್ಲಿದೆ. ಪೀರಲು ದೇವರನ್ನು ಹೊತ್ತ ಮುಜಾವರನು ಹೇಳಿಕೆಗಳನ್ನು ನೀಡುತ್ತಾನೆ. ಇದನ್ನು ಜನ ಭಕ್ತಿಯಿಂದ ನಂಬುತ್ತಾರೆ.ಇವುಗಳ ಬಗೆಗೂ ಲೇಖಕರು ಚರ್ಚೆ ಮಾಡಬಹುದಿತ್ತು.

ಮನುಷ್ಯ ಸಂಬಂಧ, ಕೋಮು ಸಾಮರಸ್ಯ, ಸೌಹಾರ್ದತೆಗಳು ದೂರವಾಗುವಂತಹ ವರ್ತಮಾನದ ಸಂದರ್ಭದಲ್ಲಿ ಇಂತಹ ಕೃತಿಯ ಅವಶ್ಯಕತೆ ಇತ್ತು. ಈ ಕೃತಿಯ ಹಿಂದೆ ಲೇಖಕರ ಸಾಂಸ್ಕೃತಿಕ ಹುಡುಕಾಟ,ತಳ ಸ್ತರದ ಸಮುದಾಯಗಳ ಲೋಕದೃಷ್ಟಿ,ಆಕರಸಂಗ್ರಹ, ವ್ಯಾಪಕವಾದ ಓದು, ಸಂಶೋಧನಾ ದೃಷ್ಟಿಕೋನ, ಅಪಾರ ಪರಿಶ್ರಮವಿದೆ. ಬಹು ಸಾಂಸ್ಕೃತಿಕ ನೆಲೆಯಲ್ಲಿ ಅಧ್ಯಯನ ಮಾಡಲು ಯತ್ನಿಸಲಾಗಿದೆ. ಇಲ್ಲಿನ ಅಧ್ಯಯನ ಕ್ರಮದಲ್ಲಿ ಶಿಸ್ತಿದೆ. ಅಲ್ಲಲ್ಲಿ ಒಳನೋಟಗಳಿವೆ. ಸರಳವಾದ ಭಾಷೆ ಮತ್ತು ವಿಶ್ಲೇಷಣೆ ಆಪ್ಯಾಯಮಾನವಾಗಿದೆ. ಇಂತಹ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ನೀಡಿದ ಮಹಾದೇವಪ್ಪ ನಾಗರಾಳ ಅವರಿಗೆ ಅಭಿನಂದನೆಗಳು. ಓದುಗರು ಈ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡು ಆರೋಗ್ಯಕರ ಚರ್ಚೆ ನಡೆಸಲಿ. ಈ ಪುಸ್ತಕ ಲೇಖಕರಿಗೆ ಒಳ್ಳೆಯ ಹೆಸರನ್ನು ತಂದು ಕೊಡಲಿ ಎಂದು ಆಶಿಸುವೆ.

- ಡಾ. ದಸ್ತಗೀರಸಾಬ್ ದಿನ್ನಿ
ಮುಖ್ಯಸ್ಥರು, ಕನ್ನಡ ವಿಭಾಗ

 

MORE FEATURES

ಧರ್ಮ ಇರೋದು ನಾವು ಸುಖವಾಗಿ ಬಾಳೋದಕ್ಕಂತಲೇ ಹೊರತು…

24-11-2024 ಬೆಂಗಳೂರು

“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...

ಇಡೀ ಕಥಾನಕ ಬಿಚ್ಚಿಕೊಳ್ಳುವುದು ಅವಳ ಪ್ರಜ್ಞೆಯ ಮೂಲಕವೇ

24-11-2024 ಬೆಂಗಳೂರು

“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....

ಕವಿತೆಯ ಓದು ಒಂದು ವಿಶೇಷ ಅನುಭವವನ್ನು ಒದಗಿಸಬೇಕು

24-11-2024 ಬೆಂಗಳೂರು

"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...