“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

Date: 10-11-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಜರ್ಮನಿಯ ಕ್ಯಾಪಿಟಲಿಸ್ಟ್ ರಿಯಲಿಸಂ ಚಳವಳಿಯ ಪ್ರವರ್ತಕ, ಕಲಾವಿದ ಸಿಗ್ಮಾರ್ ಪೋಲ್ಕ್ ಅವರ ಕಲೆಯ ಕುರಿತು ಬರೆದಿದ್ದಾರೆ.

ಕಲಾವಿದ: ಸಿಗ್ಮಾರ್ ಪೋಲ್ಕ್ (Sigmar Polke)
ಜನನ: 13 ಫೆಬ್ರವರಿ, 1941
ಮರಣ: 10 ಜೂನ್, 2010 (69 ವರ್ಷ ಪ್ರಾಯದಲ್ಲಿ)
ಶಿಕ್ಷಣ: ಕುಂಸ್ಟ್ ಅಕಾಡಮೀ, ಡುಸಲ್ಡಾರ್ಫ್, ಜರ್ಮನಿ
ವಾಸ: ಕೊಲೊನ್, ಜರ್ಮನಿ
ಕವಲು: ಕ್ಯಾಪಿಟಲಿಸ್ಟ್ ರಿಯಲಿಸಂ ಚಳವಳಿಯ ಪ್ರವರ್ತಕ
ವ್ಯವಸಾಯ: ಪೇಂಟಿಂಗ್, ಫೊಟೋಗ್ರಫಿ, ಪ್ರಿಂಟ್, ಫಿಲ್ಮ್, ಇನ್ಸ್ಟಾಲೇಷನ್

ಸಿಗ್ಮಾರ್ ಪೋಲ್ಕ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸಿಗ್ಮಾರ್ ಪೋಲ್ಕ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆಯನ್ನು ಕಮಾಡಿಟಿ ಮಾಡಿಟ್ಟ ಅಮೆರಿಕ-ಬ್ರಿಟನ್ನಿನ “ಪಾಪ್ ಆರ್ಟ್” ಚಳವಳಿಯನ್ನೂ ಅತಿಯಾದ ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿದ್ದ ಸೋವಿಯತ್ ರಶ್ಯಾದ “ಸೋಷಿಯಲ್ ರಿಯಲಿಸಂ”ನ್ನೂ ಏಕಕಾಲಕ್ಕೆ ನಿರಾಕರಿಸಿ “ಕ್ಯಾಪಿಟಲಿಸ್ಟ್ ರಿಯಲಿಸಂ” ಕಲಾಚಳವಳಿಯನ್ನು ಪ್ರವರ್ತಿಸಿದ ಸಿಗ್ಮಾರ್ ಪೋಲ್ಕ್ ತನ್ನ ತಾಯ್ನಾಡು ಜರ್ಮನಿಯಲ್ಲಿ ನಾಜಿ ನರಮೇಧದ ಬಗ್ಗೆ ಇದ್ದ ಮೌನವನ್ನು ಪ್ರಶ್ನಿಸಿದ್ದರು. ತಾನಿದ್ದ ಡುಸಲ್ಡಾರ್ಫ್ ಗ್ಯಾಲರಿಯಲ್ಲಿ ನಾಜಿ ನರಮೇಧದ ಕಾರಣಕರ್ತರ ವಿರುದ್ಧ ಸ್ಲೈಡ್ ಶೋ ನಡೆಸಿ ಅದಕ್ಕೆ 'Art Will Make You Free' ಶೀರ್ಷಿಕೆ ನೀಡಿದ್ದರಂತೆ. ಅದಕ್ಕೆ ಹಿನ್ನೆಲೆ, ಪೋಲಂಡಿನ ಔಷ್‌ವಿಚ್ ಯಾತನಾಶಿಬಿರದಲ್ಲಿ ನಾಜಿಗಳು ಹಾಕಿದ್ದ”Work Will Make You Free.” ಬೋರ್ಡು!

ಸಾಂಪ್ರದಾಯಿಕವಲ್ಲದ ಮೀಡಿಯಂ ಮತ್ತು ತಂತ್ರಗಳನ್ನು ಬಳಸುವ, ಒಪ್ಪಿತವಾದ ಕಲಾತ್ಮಕತೆಯನ್ನು, ರಾಜಕೀಯ-ಸಾಮಾಜಿಕ ಸಂಪ್ರದಾಯಗಳನ್ನು ಪ್ರಶ್ನಿಸುವ ಮೂಲಕ ಒಂದು ದಿಕ್ಕಿನಿಂದ ಕಲೆಯ ಸ್ಥಾಪಿತ ಲಕ್ಷಣಗಳನ್ನು ವಿಮರ್ಶೆಗೆ ಗುರಿಪಡಿಸುತ್ತಲೇ ಇನ್ನೊಂದೆಡೆ ವೀಕ್ಷಕರಿಗೆ ಕಲಾಕೃತಿಯನ್ನು ವೀಕ್ಷಿಸುವ ಜೊತೆ ಅದು ರೂಪುಗೊಂಡ ಬಗೆಯನ್ನೂ ಅರ್ಥೈಸಿಕೊಳ್ಳುವ – ಹಲವರ್ಥಗಳನ್ನು ಹೊಳೆಸುವ “ಕಲಾವಿದ-ವೀಕ್ಷಕ ಸಂವಾದ”ದ ಹಾದಿಯನ್ನು ತೆರೆದಿಟ್ಟವರಲ್ಲಿ ಪೋಲ್ಕ್ ಪ್ರಮುಖರು. ಹಣ್ಣು-ತರಕಾರಿ ರಸ ಬಳಸಿದ ಚಿತ್ರ, ಪೇಂಟಿಂಗ್ ಗಳ ಮೇಲೆ ಸಿಲ್ವರ್ ಆಕ್ಸೈಡ್, ಆರ್ಸೆನಿಕ್, ಯುರೇನಿಯಂ, ಉಲ್ಕೆಯ ಮಣ್ಣು… ಹೀಗೆ ಬಗೆಬಗೆಯ ಅಸಾಂಪ್ರದಾಯಿಕ ವಸ್ತುಗಳನ್ನು ಬಳಸುವ ಪ್ರಯೋಗಗಳನ್ನು ನಡೆಸಿದರು. ಅವರ ಕೆಲವು ಕಲಾಕೃತಿಗಳು ಸಮಯ ಕಳೆದಂತೆ ಬಣ್ಣ ಬದಲಾಯಿಸಿದರೆ, ಇನ್ನು ಕೆಲವು ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಿದ್ದವು. ಬಬಲ್ ರಾಪ್, ಬಟಾಟೆ ಬಳಸಿಯೂ ಕಲಾಕೃತಿಗಳನ್ನು ರಚಿಸಿದರು. ಹಾಗಾಗಿಯೇ ಅವರು ಕಲಾಜಗತ್ತಿನ ಮಟ್ಟಿಗೆ ಆಲ್ಕೆಮಿಸ್ಟ್ – ರಸಶಾಸ್ತ್ರಿ!

ಎರಡನೇ ಮಹಾಯುದ್ಧದ ಬಿಸಿಯ ನಡುವೆಯೇ ಬಾಲ್ಯ ಕಳೆದ ಸಿಗ್ಮಾರ್ ಪೋಲ್ಕ್ ಜನಿಸಿದ್ದು ಪೋಲಂಡ್ ನ ಪುಟ್ಟ ಊರು ಓಲೆಷ್ನಿಸಾ ಎಂಬಲ್ಲಿ. 1945ರಲ್ಲಿ ಯುದ್ಧದ ತರುವಾಯ ಪೋಲಂಡ್ ವಿವಾದಾತ್ಮಕ ಗಡಿಭಾಗಗಳಲ್ಲಿದ್ದ ಜರ್ಮನರನ್ನು ದೇಶದಿಂದ ಹೊರಹಾಕಿದಾಗ ಕಮ್ಯುನಿಸ್ಟ್ ಪೂರ್ವ ಜರ್ಮನಿಗೆ ವಲಸೆ ಬಂದ ಸಿಗ್ಮಾರ್ ಪೋಲ್ಕ್ ಕುಟುಂಬ, 1953ರಲ್ಲಿ ಪಶ್ಚಿಮ ಜರ್ಮನಿಗೆ ಪಲಾಯನ ಮಾಡಿದ್ದರು. ತಂದೆ ನಾಜಿಗಳಲ್ಲಿ ಆರ್ಕಿಟೆಕ್ಟ್ ಆಗಿದ್ದರು. ಪೋಲ್ಕ್ ಗೆ ಎಂಟು ಮಂದಿ ಒಡಹುಟ್ಟು. ಬಾಲ್ಯದಲ್ಲೇ ಡುಸಲ್ಡಾರ್ಫ್ ನಲ್ಲಿ ಗಾಜಿಗೆ ಬಣ್ಣ ಹಾಕುವ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಆರಂಭಿಸಿದ ಪೋಲ್ಕ್, 1961-67 ಡುಸಲ್ಡಾರ್ಫ್ ಕಲಾಶಾಲೆಯಲ್ಲಿ ಕಲಿತರು. ತನ್ನ ಗುರು ಜೋಸೆಫ್ ಬಾಯ್ಸ್ ಅವರಿಂದ ಪ್ರಭಾವಿತರಾಗಿದ್ದ ಪೋಲ್ಕ್ ಕಲಾಶಾಲೆಯಲ್ಲಿ ಕಲಿಯುತ್ತಿರುವಾಗಲೇ 1963ರ ಹೊತ್ತಿಗೆ ಕ್ಯಾಪಿಟಲಿಸಂ -ಕಮ್ಯೂನಿಸಂ ಎರಡರ ಅತಿರೇಕಗಳನ್ನೂ ಗೇಲಿಮಾಡುತ್ತಲೇ ಜೆರಾಲ್ಡ್ ರಿಕ್ಟರ್ ಮತ್ತು ಕೊನ್ರಾಡ್ ಲುಗ್ ಅವರೊಂದಿಗೆ ಸೇರಿ “ಕ್ಯಾಪಿಟಲಿಸ್ಟ್ ರಿಯಲಿಸಂ” ಎಂಬ ಕಲಾಚಳುವಳಿಯನ್ನು ಪ್ರವರ್ತಿಸಿದರು.

1966ರಲ್ಲಿ ಬರ್ಲಿನ್ ನಲ್ಲಿ ರೆನೆಬ್ಲಾಕ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನದ ಮೂಲಕ ಗಮನ ಸೆಳೆದ ಪೋಲ್ಕ್, ವೈಯಕ್ತಿಕ ಬದುಕಿನ ಸಮಸ್ಯೆಗಳು, ವಿಫಲ ಮದುವೆಯ ಕಾರಣದಿಂದಾಗಿ ಒಂದೆಡೆ ನೆಲಕಚ್ಚಿ ನಿಲ್ಲುವುದು ಸಾಧ್ಯ ಆಗಲಿಲ್ಲ. 70ರ ದಶಕವಿಡೀ ಪ್ಯಾರಿಸ್, ಪಾಕಿಸ್ತಾನ, ಅಫ್ಘಾನಿಸ್ತಾನ, ಬ್ರೆಜಿಲ್, ಅಮೆರಿಕ ಎಂದೆಲ್ಲ ಅಲೆದಾಡಿ ಫೊಟೋಗ್ರಫಿ ಪ್ರಯೋಗಗಳನ್ನು ಮಾಡಿದ್ದಲ್ಲದೆ ಮಾದಕ ದ್ರವ್ಯಗಳನ್ನು ಸೇವಿಸಿ ಕಲಾಕೃತಿಗಳನ್ನು ರಚಿಸುವ ವಿಲಕ್ಷಣ ಪ್ರಯೋಗವನ್ನೂ ಮಾಡಿದ್ದರು. ಮುಂದೆ 1977-91ರ ತನಕ ಜರ್ಮನಿಯ ಹ್ಯಾಂಬರ್ಗ್ ಕಲಾಶಾಲೆಯಲ್ಲಿ ಉಪನ್ಯಾಸಕರಾಗಿ ದುಡಿದ ಪೋಲ್ಕ್ ಕಲಾವಿದನಾಗಿ ಗಂಭೀರ ತಿರುವು ಪಡೆದದ್ದು 1980ರ ನಂತರ, ಕೊಲೊನ್ ನಲ್ಲಿ ವಾಸ ಆರಂಭಿಸಿದ ಬಳಿಕವೇ. 80ರ ದಶಕದಲ್ಲಿ ಪೇಂಟಿಂಗ್ ಗಳು ಸಮಕಾಲೀನ ಕಲೆಯಾಗಿ ಮರುಹುಟ್ಟು ಪಡೆದಾಗ, ಪೋಲ್ಕ್ ಆ ಪುನರಾಗಮನದ ಮುಂಚೂಣಿಯ ಕಲಾವಿದರಲ್ಲಿ ಒಬ್ಬರಾಗಿದ್ದರು. 2002ರಲ್ಲಿ ಸಂಪೂರ್ಣವಾಗಿ ಯಾಂತ್ರಿಕವಾಗಿ ಪೇಂಟಿಂಗ್ ಗಳನ್ನು ರಚಿಸುವ “ಮಷೀನ್ ಪೇಂಟಿಂಗ್” ತಂತ್ರವನ್ನೂ ಅವರು ಅಭಿವೃದ್ಧಿಪಡಿಸಿದ್ದರು. ಬದುಕಿನ ಕೊನೆಯ ದಿನಗಳಲ್ಲಿ ಬೌದ್ಧಧರ್ಮದಲ್ಲಿ ಆಸಕ್ತಿ ತಳೆದಿದ್ದ ಪೋಲ್ಕ್ 2010ರಲ್ಲಿ ಕ್ಯಾನ್ಸರ್ ಗೆ ಬಲಿಯಾದರು.

Chocolate painting(1964), Bunnies (1966), Potato House (1967), The large cloth of abuse (1968), Watchtower (1984) ಅವರ ಹಲವು ಮಹತ್ವದ ಕಲಾಕೃತಿಗಳಲ್ಲಿ ಕೆಲವು. ಮಾರುಕಟ್ಟೆಯಲ್ಲೂ ಯಶಸ್ವೀ ಕಲಾವಿದರಾಗಿರುವ ಪೋಲ್ಕ್ ಮುಂದಿನ ತಲೆಮಾರಿನ ಹಲವು ಮಂದಿ ಕಲಾವಿದರನ್ನು ಪ್ರಭಾವಿಸಿರುವುದೂ ಸುಳ್ಳಲ್ಲ.

ಸಿಗ್ಮಾರ್ ಪೋಲ್ಕ್ ಮತ್ತು ಅವರ ಸಹಚರರ ಕ್ಯಾಪಿಟಲಿಸ್ಟ್ ರಿಯಲಿಸಂನ ಪ್ರೇರಣೆಗಳ ಕುರಿತು ಒಂದು ಚರ್ಚೆ :

ಸಿಗ್ಮಾರ್ ಪೋಲ್ಕ್ ಅವರ ಇತ್ತೀಚೆಗಿನ (2016) ಕಲಾಪ್ರದರ್ಶನವೊಂದರಲ್ಲಿ ತಿರುಗಾಟ.

ಚಿತ್ರಗಳು:

ಸಿಗ್ಮಾರ್ ಪೋಲ್ಕ್ ಅವರ Bunnies (1966) ಕ್ಯಾನ್ವಾಸ್ ಮೇಲೆ ಆಯಿಲ್ ಬಣ್ಣಗಳ ಬಿಂದು ಚಿತ್ರ.

ಸಿಗ್ಮಾರ್ ಪೋಲ್ಕ್ ಅವರ Circus Figures (2005) ಬಟ್ಟೆಯ ಮೇಲೆ ಮಿಶ್ರ ಮಾಧ್ಯಮ.

ಸಿಗ್ಮಾರ್ ಪೋಲ್ಕ್ ಅವರ Dr Berlin (1969-1974) Dispersion paint, gouache, and spray paint on canvas

ಸಿಗ್ಮಾರ್ ಪೋಲ್ಕ್ ಅವರ Long cloth of abuse (1968)

ಸಿಗ್ಮಾರ್ ಪೋಲ್ಕ್ ಅವರ ‘Object Potato House’Copyright The Estate of Sigmar Polke, Cologne/ARS, New York/V G Bild-Kunst, Bonn. Image Courtesy of Michael Warner Gallery, New York and London.

ಸಿಗ್ಮಾರ್ ಪೋಲ್ಕ್ ಅವರ Alice in Wonderland (1971) Mixed Media on fabric strips, Private Collection, Cologne.

ಸಿಗ್ಮಾರ್ ಪೋಲ್ಕ್ ಅವರ Chocolate Painting (1964) Copyright: The Estate of Sigmar Polke/DACS, London/V G Bild-Kunst, Bonn. Photo: Alex Jamison.

ಸಿಗ್ಮಾರ್ ಪೋಲ್ಕ್ ಅವರ Watchtower (1984), IVAM, Institut Valencia d’Art Modern, Valencia, Spain. Copyright: The Estate of Sigmar Polke/DACS, London/V G Bild-Kunst, Bonn.

ಈ ಅಂಕಣದ ಹಿಂದಿನ ಬರಹಗಳು:

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...