ಯಾವ ಈಸಂ ಅಥವಾ ಯುಫೆಮಿಸಂಗಳ ಹಂಗಿಲ್ಲದೆ ತೃತೀಯ ವ್ಯಕ್ತಿ ನಿರೂಪಣೆಯಲ್ಲಿ ಸಾಗುವ ಕಾದಂಬರಿ ಚರಿತ್ರೆಯ ಪುಟಗಳು ಹೇಳುವುದು ರಕ್ತದ ಕಥೆಯನ್ನೇ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತದೆ ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ಕವಿ, ಲೇಖಕ ಸರಜೂ ಕಾಟ್ಕರ್ ಅವರ ದಂಗೆ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..
ಕೃತಿ: ದಂಗೆ
ಲೇಖಕರು: ಡಾ. ಸರಜೂ ಕಾಟ್ಕರ್
ಬೆಲೆ: 180
ಪ್ರಕಾಶಕರು: ಯಾಜಿ ಪ್ರಕಾಶನ, ಹೊಸಪೇಟೆ
“ನಾನೊಂದು ವಾಡೆ, ಕೆಲವರು ನನ್ನನ್ನು ರಾಜವಾಡೆಯೆಂದು ಕರೆಯುತ್ತಾರೆ. ಹಲವರು ಮಹಲ್, ರಾಜಮಹಲ್ ಅರಮನೆಯೆಂದೂ ಕರೆಯುತ್ತಾರೆ. ನೂರಾರು ವರ್ಷಗಳಿಂದ ಇಲ್ಲಿ ನಡೆದ, ನಡೆಯುತ್ತಿರುವ ನಡೆಯಬಹುದಾದ ಎಲ್ಲ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಇಡಿಯ ಗೌರೀಪುರ ಸಂಸ್ಥಾನದಲ್ಲಿ ನನ್ನಷ್ಟು ದೊಡ್ಡದಾದ, ಭವ್ಯವಾದ ವಾಸ್ತು ಇನ್ನೊಂದಿರಲಿಕ್ಕಿಲ್ಲ. ಹಾಗೆ ನೋಡಿದರೆ ನಾನು ಈ ಸಂಸ್ಥಾನದ ಸಾಕ್ಷಿಪ್ರಜ್ಷೆ” ಎನ್ನುತ್ತಾ ಇಡೀ ಕಾದಂಬರಿಯನ್ನು ನಿರ್ಜೀವ ಬಂಗಲೆಯೊಂದು ನಿರೂಪಿಸುತ್ತಾ ಹೋಗುವುದು ಒಂದು ವೈಶಿಷ್ಟ್ಯ. ವಾಡೆಯೊಂದು ತನ್ನ ಕಥೆಯನ್ನು ಹೇಳಿಕೊಳ್ಳುತ್ತಾ ಒಂದು ರಾಜಕುಟುಂಬ, ದುಷ್ಟ ರಾಜ, ಆತನನ್ನು ಸಂತುಷ್ಟ ಪಡಿಸುವ ಭ್ರಷ್ಟ ಅನುಯಾಯಿಗಳು, ವಾಡೆಯಲ್ಲೇ ಇರುವ ಇನ್ನಿತರ ಸಂಭಾವಿತರು, ಅನ್ಯಾಯಕ್ಕೆ ಅತ್ಯಾಚಾರಕ್ಕೆ ಒಳಗಾಗುವ ಸಾಮಾನ್ಯ ಜನರ ದೈನ್ಯತೆ, ಕೊಲೆ, ಸಾವು, ನೋವು, ರಾಜಕೀಯದ ಪಿತೂರಿಗಳು ಇವೆಲ್ಲ ಚಿತ್ರಣಗಳು ಒಂದೇ ಚೌಕಟ್ಟಿನಲ್ಲಿ ಹೆಣೆಯುತ್ತಾ ಹೋಗುತ್ತದೆ. ಕಾದಂಬರಿ ಒಂದೇ ಹದದಲ್ಲಿ ಓದುಗನನ್ನು ಆಕರ್ಷಿಸುವುದು ಈ ನಿರೂಪಣೆಯ ಇನ್ನೊಂದು ವೈಶಿಷ್ಟ್ಯ.
ಇದು ಸರಜೂ ಕಾಟ್ಕರರವರ ಕಾದಂಬರಿ. ಸ್ವಾತಂತ್ಯ ಪೂರ್ವದ ಬೆಳಗಾವಿ ಜಿಲ್ಲೆಯ ಸಂಸ್ಥಾನದಲ್ಲಿ ನಡೆದ ಸತ್ಯಕತೆಯೊಂದನ್ನು ಆಧರಿಸಿ ಬರೆದ ಕಾದಂಬರಿ. ಸಾಹಿತಿ ರಾವ್ ಬಹಾದ್ದೂರ್ ಅವರಿಂದ ಕೇಳಿದ ಕಥೆಯೊಂದನ್ನು ಹರಳುಗಟ್ಟಿಸಿ ಅಕ್ಷರರೂಪ ಕೊಟ್ಟಿದ್ದಾರೆ. ದಂಗೆ ಒಮ್ಮೆ ಓದಿಗೆ ನಿಂತರೆ ಒಂದೇ ಗುಕ್ಕಿಗೆ ಓದಿಸಿಕೊಳ್ಳುವುದರ ಜೊತೆ, ನೇರ ನಿರೂಪಣಾ ಶೈಲಿಯಲ್ಲಿ ಇರುವುದರಿಂದ ಒಂದೇ ಓದಿಗೆ ಕಾದಂಬರಿ ಅರ್ಥವಾಗುತ್ತದೆ. ಕಾರಣ ತಂತ್ರಗಳನ್ನು ಇಲ್ಲಿ ವ್ಯರ್ಜಿಸಲಾಗಿದೆಯಾದರೂ ಕಥೆ ವಸ್ತು ಸಾಂದ್ರತೆಯಿಂದ ಗಟ್ಟಿಯಾಗಿದೆ.
“ದಂಗೆ” ಕಾದಂಬರಿ ಸ್ವಾತಂತ್ಯ್ರ ಪೂರ್ವ ಕಾಲದ ಗೌರಿಪುರ ಎಂಬ ಮರಾಠಾ ಸಂಸ್ಥಾನದ ಕಥೆ. ಇಂತಹ ಹಲವು ಕಥಾನಕಗಳನ್ನು ಕೇಳಿರುವುದಾದರೂ ಮುನ್ನುಡಿಯಲ್ಲಿ ಕುಂವೀ ಅವರು ಉಲ್ಲೇಖಿಸಿದಂತೆ ಇದಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಬ್ರಿಟಿಷರ ಆಡಳಿತವನ್ನು ಒಪ್ಪಿಕೊಂಡ ಅನೇಕ ಚಿಕ್ಕಪುಟ್ಟ ಸಂಸ್ಥಾನಗಳು ಬ್ರಿಟಷ್‌ರ ಹಿಂಬಾಲಕರಾಗಿ ಬಾಲ ಬಡಿಯುತ್ತಾ, ತಮ್ಮನ್ನು ನಂಬಿದ ಪ್ರಜೆಗಳ ಹಿಂಸ್ರ ಪಶುಗಳಂತೆ ಪೀಡಿಸುತ್ತಾ ಇದ್ದ ಹಲವು ರಾಜರುಗಳು, ಅವರ ದೂರ್ತತನ, ಪ್ರಜಾಪೀಡನೆ, ಅರಾಜಕತೆಗೆ ನಲುಗಿದ ಜೀವಗಳು ಪಟ್ಟ ಪಾಡನ್ನು ದಂಗೆ ನೆನಪಿಸುತ್ತದೆ.
ಗೌರಿಪುರ ಸಂಸ್ಥಾನದ ಸಂಸ್ಥಾನಿಕ ಅಮರ ಸಿಂಹ ಮತ್ತು ಪ್ರಭಾವತಿ ದೇವಿಗೆ ಸಂತಾನವಿಲ್ಲದ ಕಾರಣ ದತ್ತು ಪಡೆದ ಸಂಗ್ರಾಮಸಿಂಹ ದುಷ್ಟನಷ್ಟೇ ಅಲ್ಲ ಸ್ತ್ರೀ ವ್ಯಾಮೋಹಿ. ಪ್ರಜೆಗಳ ಪಾಲಿಸದೆ ತನ್ನ ಲೋಲುಪತೆಯಲ್ಲಿ ಮೈಮರೆತ ಸಂಗ್ರಾಮ ಸಿಂಗನ ಎಲ್ಲ ದೌರ್ಜನ್ಯಗಳಿಗೆ ಸಾಥ್ ನೀಡುವಾತ ಹಂಬೀರ ಎಂಬ ಪೋಲಿಸ ಅಧಿಕಾರಿ. ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳನ್ನು ಪ್ರಾಣಿಯಂತೆ ಅನುಭವಿಸಿ ಜೀವವನ್ನು ಬಿಡದೇ ನಿರ್ದಯವಾಗಿ ಕೊಲ್ಲುವ ಈ ಇವರಿಬ್ಬರಿಂದ ಊರಿನಲ್ಲಿ ನಡೆಯುವ ಹಲವು ಕೊಲೆ, ಅತ್ಯಾಚಾರ ಪ್ರಕರಣಗಳು ಹಾಗೇ ಹಾಗೇ ಮುಚ್ಚಿಹೋಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರ ದುಷ್ಟ ದಮನಕ್ಕೆ ದಾರಿ ಕಾಣದೇ ವಾಡೆಯ ದಿವಾನ ಸಜ್ಜನನಾದ ಶಂಕರರಾವ್ ತಲ್ಲಣಿಸುತ್ತಾನೆ. ಪ್ರಯತ್ನ ಪಟ್ಟು ತನ್ನ ತನ್ನ ಸ್ನೇಹಿತನ ಮಗ ವಸಂತನನ್ನು ಊರಿನ ವೈದ್ಯಾಧಿಕಾರಿಯನ್ನಾಗಿ ಕರೆದುತರುತ್ತಾನೆ.
ಬ್ರಿಟಿಷರ ಒಡೆದು ಆಳುವ ನೀತಿಯಲ್ಲಿ ಅಧಿಕಾರಲಾಲಸೆಗೆ ತಮ್ಮತನ ಮಾರಿಕೊಂಡ ಸಂಗ್ರಾಮ ಸಿಂಗನಂತವರು, ದೇಸಿ ಚಳುವಳಿಗಾರರನ್ನು ಮಟ್ಟ ಹಾಕುತ್ತಾ, ತಾವು ಕೂಡಾ ದುಷೃತ್ಯಗಳಲ್ಲಿ ತೊಡಗಿಸಿಕೊಂಡು ಮುಗ್ಧ ಪ್ರಜೆಗಳ ಪ್ರಾಣ ಹಿಂಡುತ್ತಾ ಸಾಗುತ್ತಾರೆ. ತಮ್ಮ ಅಡ್ಡಹಾದಿಗೆ ಎದುರಾಗುವ ಎಲ್ಲರನ್ನೂ ನಿವಾರಿಸಿಕೊಳ್ಳಲು ಕೊಲೆ ಮಾಡಲೂ ಹೇಸದ ಇವರನ್ನು ಬಗ್ಗು ಬಡಿಯಲು ವಸಂತನಿಗೆ ಗಾಂಧಿ ತತ್ವಗಳನ್ನು ಆದರ್ಶವಾಗಿ ಇಟ್ಟುಕೊಂಡ ಖಂಡೋಬಾ ಜೊತೆಯಾಗುತ್ತಾನೆ. ಈ ಯುವ ಮನಸ್ಸುಗಳನ್ನು ನಿಯಂತ್ರಸಲು, ನಾಶಪಡಿಸಲು ಮಾಡಿದ ಸಂಗ್ರಾಮ ಸಿಂಗನ ಪ್ರಯತ್ನಗಳು ವಿಫಲವಾಗುತ್ತದೆ. ಆದರೆ ವಸಂತನ ವಧುವಾಗಬೇಕಿದ್ದ ಸ್ವತಃ ದಿವಾನ ಶಂಕರರಾಯರ ಮಗಳೂ ಆದ ಗಾಯತ್ರಿಯನ್ನೂ ಬಿಡದೇ ಸಂಗ್ರಾಮ ಸಿಂಗ ಅತ್ಯಾಚಾರಗೈದು ಕೊಲೆ ಮಾಡುತ್ತಾನೆ. ಇಲ್ಲಿಂದ ಚಳುವಳಿ ಉಗ್ರ ಸ್ವರೂಪ ಪಡೆಯುತ್ತದೆ. ಮತ್ತು ತಾವೇ ತೋಡಿದ ಕಂದಕದಲ್ಲಿ ಈ ದುರುಳರಿಬ್ಬರೂ ಬಲಿಯಾಗುತ್ತಾರೆ. ಒಂದು ದಿನ ರಾತ್ರಿ ಸಂಗ್ರಾಮ ಸಿಂಗನ ಪತ್ನಿ ಅಮರಜಾದೇವಿ ಹಂಬೀರನ ತೆಕ್ಕೆಯಲ್ಲಿರುವುದನ್ನು ಕಂಡ ಸಂಗ್ರಾಮ ಸಿಂಗ ಇಬ್ಬರನ್ನೂ ಗುಂಡಿಟ್ಟು ಕೊಲ್ಲುತ್ತಾನೆ. ಈ ಗದ್ದಲ ಕೇಳಿ ಹೊರಬಂದ ತಾಯಿ ಪ್ರಭಾವತಿ ದೇವಿಗೂ ಗುಂಡಿಕ್ಕುತ್ತಾನೆ. ಈ ಸುದ್ದಿ ಊರಲ್ಲಿ ಹರಡುತ್ತಲೇ ಜನ ರೊಚ್ಚಿಗೇಳುತ್ತಾರೆ. ವಾಡೆಗೆ ಬೆಂಕಿ ಹಚ್ಚುತ್ತಾರೆ. ವಾಡೆಯ ಜೊತೆಗೆ ಸಂಗ್ರಾಮ ಸಿಂಗನೂ ಬೆಂಕಿಗಾಹುತಿಯಾಗುತ್ತಾನೆ.
ಯಾವ ಈಸಂ ಅಥವಾ ಯುಫೆಮಿಸಂಗಳ ಹಂಗಿಲ್ಲದೆ ತೃತೀಯ ವ್ಯಕ್ತಿ ನಿರೂಪಣೆಯಲ್ಲಿ ಸಾಗುವ ಕಾದಂಬರಿ ಚರಿತ್ರೆಯ ಪುಟಗಳು ಹೇಳುವುದು ರಕ್ತದ ಕಥೆಯನ್ನೇ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತದೆ. ಕಾಲಗರ್ಭದಲ್ಲಿ ಹೂತ ಹಿಂಸೆ, ಅನ್ಯಾಯ, ಅಧರ್ಮದ ನೆಲೆಗಟ್ಟು ಚಿಮ್ಮಿಸಿದ ನೋವಿನ ನಿಟ್ಟುಸಿರಿನ ಸಂಗತಿಯನ್ನು ಹೊರತೆಗೆದು ಕಥನವಾಗಿಸುವುದು ಹೊರ ನೋಟಕ್ಕೆ ಸುಲಭವೆನಿಸಿದರೂ, ಅದು ಕಾಲ್ಪನಿಕದಷ್ಟು ಸರಳಿಕೃತ ವಿಷಯವಲ್ಲ. ಹಾಗಾಗಿ ಕಾದಂಬರಿಕಾರರಿಗೆ ಕಥಾ ಚರಿತ್ರೆ ಕುರಿತ ಆಳವಾದ ಮಾಹಿತಿ ಕೂಡ ಅಷ್ಟೇ ಅಗತ್ಯ.
“ದಂಗೆ” ಎರಡು ನೆಲೆಗಳಲ್ಲಿ ದೌರ್ಜಿನ್ಯದ ವಿರುದ್ಧದ ಹೋರಾಟವನ್ನು ಪ್ರತಿನಿಧಿಸುತ್ತದೆ. ವಿದೇಶಿ ಆಡಳಿತದ ವಿರುದ್ಧ, ಸ್ಥಾಪಿತ ಹೋರಾಟದ ಸ್ಥಾಯಿ ಬಿಂಬವಾಗಿ ನಿಲ್ಲುವ ಕೃತಿ, ಆಂತರಿಕ ನೆಲೆಯಲ್ಲಿ ದುಷ್ಟ ರಾಜರೂ ಸಾಮಂತರಾಜರ ದೌರ್ಜನ್ಯಗಳ ವಿರುದ್ಧದ ಹೋರಾಟವಾಗಿ ಗಮನಸೆಳೆಯುತ್ತದೆ. ಆದರೆ ಇಲ್ಲಿಯ ಸ್ತ್ರೀ ಪಾತ್ರಗಳು ಮಾತ್ರ ಪುರುಷ ಪಾತ್ರಗಳಿಗೆ ಪೂರಕ ಪಾತ್ರಗಳಾಗಿ, ವಸ್ತುವಿನಂತೆ ಕೇವಲ ಐಹಿಕ ಆಕಾಂಕ್ಷೆಗಳ ಈಡೇರಿಕೆಯ ಸಾಧನಗಳಾಗಿ, ದುರ್ಬಲ ಪಾತ್ರಗಳಾಗಿ ಚಿತ್ರಿಸಲ್ಪಟ್ಟಿವೆ.
ಬದುಕಿನ ಮುನ್ನೋಟಕ್ಕೆ, ಹಿಂದಣ ಹಾದಿಯ ಅವಲೋಕನವಿಲ್ಲದಿದ್ದಲ್ಲಿ ಬದುಕಿನ ಸಫಲತೆಗೆ, ಸಾರ್ಥಕತೆಗೆ ಮಹತ್ವ ಇರಲಾರದು. ಚರಿತ್ರೆಯ ಪುಟದಲ್ಲಿಯ ಅದೆಷ್ಟೋ ಗತ ವೈಭವದ ಚಿತ್ರಣಗಳನ್ನು ಪಾತ್ರಗಳನ್ನೂ ಇಂದಿಗೂ ಸಾಹಿತ್ಯ ತನ್ನ ವಸ್ತುವಿನ ಹೂರಣವಾಗಿ ಬಳಸಿಕೊಳ್ಳುವುದು ಅದೇ ಕಾರಣಕ್ಕೆ. ಹಳೆಯ ಪಾತ್ರಗಳು, ಸಂದರ್ಭಗಳು ಕಾಲಧರ್ಮಕ್ಕೆ ತಕ್ಕಂತೆ ಮರುನಿರೂಪಿತವಾಗುವ ಸಂವೇದನೆಗಳ ಮೂಲಕ ಹೊಸತಾಗಿ ಗ್ರಹಿಸುವಂತಾಗುವುದು. ಕಥೆ ಅಥವಾ ಕಾದಂಬರಿಯೊಂದರ ಬರವಣಿಗೆಯಲ್ಲಿನ ಪ್ರಸಿದ್ದ ತಂತ್ರ ವಿಧಾನಗಳಾದ ಅಮೂರ್ತ, ಅಸಂಗತತೆ ಇಂತಹ ಪರಿಕಲ್ಪನೆಗಳನ್ನಾಗಲೀ, ಅವ್ಯಕ್ತವಾಗಿಯೂ ಅರ್ಥವಾಗುವ, ಬಹು ಆಯಾಮದಲ್ಲಿ ಕಥಾ ಕ್ಲೆöÊಮಾಕ್ಸಗಳನ್ನು ಓದುಗನ ಕಲ್ಪನೆಗೆ ಬಿಡುವ ಯಾವ ವಿಧಾನಕ್ಕೂ ಈ ಕಾದಂಬರಿ ತನ್ನ ಒಡ್ಡಿಕೊಂಡಿಲ್ಲ. ದುಷ್ಟ ದಮನಕ್ಕೆ ಶಿಷ್ಟ ಪರಂಪರೆ ಅಸಫಲಗೊಂಡರೂ, ಪರಿಸ್ಥಿತಿಯೇ ಆ ದುಷ್ಟರ ನಿರ್ನಾಮ ಮಾಡುತ್ತದೆ ಎಂಬ ಬಹುದೊಡ್ಡ ತಾತ್ವಿಕ ಚಿಂತನೆಯನ್ನೂ ಇಲ್ಲಿ ಕಾಣಬಹುದು.
ಹದವಾಗಿ ಬೇಯಿಸಿದ ಅನ್ನ ಮಾಡಲು ಹದ ತಪ್ಪದ ಪ್ರಮಾಣದಲ್ಲಿ ಅಕ್ಕಿಗೆ ನೀರು ಮತ್ತು ಉರಿ ಎಷ್ಟು ಪ್ರಮುಖವೋ ಅದೇ ಹದವನ್ನು ಕಥನ ನಿರೂಪಣೆಯಲ್ಲಿ ಕಾಯ್ದುಕೊಂಡಿದ್ದಾರೆ ಕಾದಂಬರಿಕಾರರು. ಹಾಗೇ ಕೃತಿಯೊಂದನ್ನು ಓದಿದಾಗ ನಿರಾಶೆಯೋ, ನೋವೋ, ತಿರಸ್ಕಾರವೋ, ದುಃಖವೋ ಇವು ತಟ್ಟನೇ ಮೂಡಬೇಕು. ಅದು ಕೃತಿಕಾರನ ಭಾಷಾ ಸಾಮರ್ಥ್ಯ. ಭಾಷಾ ಸಂರಚನೆಯಲ್ಲಿ ಒಂದೇ ಓಘವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ. ಕನ್ನಡದ ಪ್ರಮುಖ ಕಥೆಗಾರರಾದ ಸರಜೂ ಕಾಟ್ಕರ್ ವಿಭಿನ್ನ ರೀತಿಯಲ್ಲಿ ಕಥನಶೈಲಿಯನ್ನು ಬಳಿಸಿಕೊಂಡಿರುವAತೆ ಕಾಣುತ್ತದೆ. ಇದೇ ಲೇಖಕರ ಸಾವಿತ್ರಿ ಬಾಯಿ ಪುಲೆ, ಅಥವಾ ಗೌರಿಪುರ ಕಾದಂಬರಿಯ ನಿರೂಪಣೆಗೂ, ಇಲ್ಲಿಯ ನಿರೂಪಣೆಗೂ ವ್ಯತ್ಯಾಸಗಳನ್ನು ಗುರುತಿಸುತ್ತಲೇ, ಈ ಕಾದಂಬರಿ ಒಂದು ತಾಜಾ ತನದ ನಿರೂಪಣೆಯನ್ನು ಮೈಗೂಡಿಸಿಕೊಂಡಿದೆ ಎನ್ನಬಹುದು.
- ನಾಗರೇಖಾ ಗಾಂವಕರ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...
©2024 Book Brahma Private Limited.