ಸಾಹಿತ್ಯವು ನಿಂತ ನೀರಲ್ಲ, ಸದಾ ಹರಿಯುವ ನದಿ


'ಈ ಗ್ರಂಥ ಕರ್ನಾಟಕವಲ್ಲದೆ ಭಾರತೀಯ ಸಾಹಿತ್ಯಕ್ಕೂ ಒಂದು ಮಾದರಿಯಾಗಿ ಬೆಳೆಯುತ್ತಿದೆ. ಇದೊಂದು ನಮ್ಮ ನಾಡಿನ ಸಾಹಿತ್ಯ ಕ್ಷೇತ್ರದ ನವೀನ ಯಶಸ್ವಿ ಪ್ರಯೋಗ’ ಎನ್ನುತ್ತಾರೆ ಈಶ್ವರಯ್ಯ ಕೊಡಂಬಲ್. ಅವರು ಸುರೇಶ ಚನ್ನಶೆಟ್ಟಿ ಅವರ ‘ಕೌಶಲ್ಯ ಸಿರಿ’ ಗ್ರಂಥ ಕುರಿತು ಬರೆದ ಸಂಪಾದಕೀಯ.

ಸಾಹಿತ್ಯವು ನಿಂತ ನೀರಲ್ಲ. ಸದಾ ಹರಿಯುವ ನದಿ. ಪ್ರತಿಯೊಂದು ಭಾಷೆಯ ಉದಯದೊಂದಿಗೆ ತನ್ನದೇ ಆದ ಸಾಹಿತ್ಯ ಉದಯವಾಗುತ್ತದೆ. ಭಾಷೆ ಪರಿಷ್ಕರಣಗೊಂಡು ಸರಳತೆಯೆಡೆಗೆ ಸಾಗುತ್ತಿರುತ್ತದೆ. ಅದರಂತೆ ಸಾಹಿತ್ಯವು ಕೂಡ ಸರಳತೆಯ ಕಡೆಗೆ ಒಲವು ತೋರುತ್ತ ಕಾಲಕಾಲಕ್ಕೆ ತನ್ನ ವಿಸ್ತಾರದ ಹರುವು ಹೆಚ್ಚಿಸಿಕೊಳ್ಳುತ್ತ, ವಿವಿಧ ಹೊಸ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿಕೊಳ್ಳುತ್ತದೆ. ವೈವಿಧ್ಯಮಯವಾಗುತ್ತದೆ. ಕನ್ನಡ ಭಾಷೆಯಲ್ಲೂ ಇಂತಹ ಕಾರ್ಯಗಳು ನಿರಂತರವಾಗಿ ನಡೆದಿರುವುದನ್ನು ಕಾಣುತ್ತೇವೆ. ಮೊದ ಮೊದಲು ರಾಜಾಶ್ರಯದಲ್ಲಿ ಬೆಳೆದು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿ ಗದ್ಯ ಪದ್ಯ ಮಿಶ್ರಿತವಾದ, ಸಂಸ್ಕೃತ ಭೂಯಿಷ್ಠವಾದ ಚಂಪೂ ಎಂಬ ಸಾಹಿತ್ಯ ಪ್ರಕಾರದಲ್ಲಿ ಸಾಹಿತ್ಯ ರಚನೆಯಾದರೆ, ಹನ್ನೆರಡನೇ ಶತಮಾನದಲ್ಲಿ ರಾಜಾಶ್ರಯ ತೊರೆದು ಬಡವರ ಬೀಡಿಗೆ ಬಂದು ಜನಾಶ್ರಯ ಪಡೆದು ಆಡುನುಡಿಯಲ್ಲಿ ರಚಿತವಾದ ವಚನಕಾರರ ವಚನ ಸಾಹಿತ್ಯ ನೋಡಬಹುದು. ನಂತರದಲ್ಲಿ ರಗಳೆ, ಷಟ್ಟದಿ ಕೀರ್ತನೆ, ತ್ರಿಪದಿ ಇತ್ಯಾದಿಗಳಲ್ಲದೆ ಹೊಸಗನ್ನಡ ಕಾಲಘಟ್ಟದಲ್ಲಿ ಕವನ, ಸಣ್ಣಕತೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಪ್ರವಾಸ ಕಥನ, ಅನುವಾದ ಸಾಹಿತ್ಯ ಮೊದಲಾದವುಗಳು ಹೊಸ ಹೊಸ ಸಾಹಿತ್ಯಪ್ರಕಾರಗಳು ಕಾಲಕಾಲಕ್ಕೆ ಸೃಷ್ಟಿಯಾದವು.

ಹೀಗೆ ಸೃಷ್ಟಿಯಾದ ಹೊಸ ಸಾಹಿತ್ಯ ಪ್ರಕಾರಗಳೊಂದಿಗೆ ಅಭಿನಂದನ ಸಾಹಿತ್ಯ ಗ್ರಂಥಗಳೂ ಬಂದವು. ಇದು ಇತ್ತೀಚೆಗೆ ಗಣನೀಯವಾಗಿ ಬೆಳೆದು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಅನೇಕ ಆಧುನಿಕ ಬರಹಗಾರರು ಅದನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಇಂಥ ಬಗೆಯ ಗ್ರಂಥಗಳ ಸಂಖ್ಯೆ ಈಗ ಅನೇಕ. ಇದು ಕರ್ನಾಟಕವಲ್ಲದೆ ಭಾರತೀಯ ಸಾಹಿತ್ಯಕ್ಕೂ ಒಂದು ಮಾದರಿಯಾಗಿ ಬೆಳೆಯುತ್ತಿದೆ. ಇದೊಂದು ನಮ್ಮ ನಾಡಿನ ಸಾಹಿತ್ಯ ಕ್ಷೇತ್ರದ ನವೀನ ಯಶಸ್ವಿ ಪ್ರಯೋಗ.

ಅಭಿನಂದನ ಪುಸ್ತಕವೆಂದರೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನಿಯರ ಜೀವನ ಸಾಧನೆಯನ್ನು ಗುರುತಿಸಿ ಅಂಥವರ "ಜೀವನ ಮತ್ತು ಸಾಧನೆ"ಗಳನ್ನು ವಿವಿಧ ವ್ಯಕ್ತಿಗಳು ವ್ಯಕ್ತಪಡಿಸುವ ಮನದಾಳದ ವಿಚಾರಗಳು, ಅಭಿಪ್ರಾಯಗಳು, ಅಭಿನಂದನ ನುಡಿಗಳಿಂದ ರಚಿತಗೊಂಡ ಗ್ರಂಥವಾಗಿರುತ್ತದೆ. ಇದು ಸಂದೇಶ, ವ್ಯಕ್ತಿಚಿತ್ರ, ಕವಿತೆಗಳು, ಲೇಖನಗಳು, ಅಭಿನಂದನಾ ನುಡಿಗಳು ಇತ್ಯಾದಿ ಬರಹಗಳನ್ನು ಒಳಗೊಂಡಿರುತ್ತದೆ. ಸಿದ್ಧಪಡಿಸಿದ ಗ್ರಂಥವನ್ನು ಸಾಧಕ ಚೇತನಗಳಿಗೆ ಸಮರ್ಪಿಸಲಾಗುತ್ತದೆ. ಇಂತಹ ಪುಸ್ತಕಗಳನ್ನು ಸಂಭಾವನ ಗ್ರಂಥ, ಗೌರವ ಗ್ರಂಥ, ಅಭಿನಂದನ ಗ್ರಂಥ ಎಂದೂ ಕರೆಯಲಾಗುತ್ತದೆ.

ಬೀದರ ಜಿಲ್ಲೆಯಲ್ಲಿ ಅತ್ಯಂತ ವಿಶಿಷ್ಟವಾದ ಅಭಿನಂದನ ಗ್ರಂಥಗಳು ಪ್ರಕಟಗೊಂಡಿವೆ. ವೈಶಿಷ್ಟ್ಯಪೂರ್ಣ ವಸ್ತು ಮತ್ತು ವಿಭಿನ್ನ ವಿಚಾರಧಾರೆಗಳಿಂದ ಕೂಡಿದ ಈ ಅಭಿನಂದನ ಗ್ರಂಥಗಳು ವಿಭಿನ್ನ ಪ್ರತಿಭೆಗಳನ್ನು ಅಜರಾಮರಗೊಳಿಸಿವೆ.

ಅಭಿನಂದನ ಗ್ರಂಥಗಳ ರಚನೆ ಒಬ್ಬ ವ್ಯಕ್ತಿಯ ಕೆಲಸವಲ್ಲ! ಇದು ಅನೇಕ ಹಿರಿಯ ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು, ಬಂಧುಗಳು, ಅಭಿಮಾನಿಗಳು, ಮತ್ತು ಶಿಷ್ಯರು ಕೂಡಿ ಮಾಡುವ ಕೆಲಸವಾಗಿದೆ. ಒಟ್ಟಿನಲ್ಲಿ ಈ ಗ್ರಂಥವು ಅಭಿಮಾನಿ ಬಳಗದ ಪರಿಶ್ರಮದಿಂದ ಸಿದ್ದಗೊಳ್ಳುತ್ತದೆ.

ಪ್ರಸ್ತುತ "ಕೌಶಲ್ಯ ಸಿರಿ" (ಶ್ರೀ ಶಿವಶಂಕರ ಟೋಕರೆ ಅವರ ಅಭಿನಂದನ ಗ್ರಂಥ) ಎಂಬ ಗ್ರಂಥವು ಕನ್ನಡ ಅಭಿನಂದನ ಲೋಕಕ್ಕೆ ಮತ್ತೊಂದು ಕೊಡುಗೆಯಾಗುತ್ತಿರುವುದು ಸಂತಸದ ಸಂದರ್ಭ. ಈವರೆಗೆ ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯಿಂದ ಕಾಯಕ ಪರಿಣಾಮಿ, ಬಯಲ ಕಾರಣಿಕ, ನಮ್ಮ ಅನುವಾದಕ, ಕಲ್ಯಾಣ ಕಲಾಶ್ರೀ, ಚೇತನಶಿಲ್ಪಿ, ಬಸವಯೋಗಿ, ಕನ್ನಡದ ದೀಪ, ಲಲಿತಾರವಿಂದ, ಸ್ನೇಹಜೀವಿ, ಈಶ್ವರ, ಸೌಮ್ಯಸಿರಿ, ಸಿದ್ದಲೋಕ, ಮುಂತಾದ ಗ್ರಂಥಗಳು ಹೊರಬಂದಿವೆ. ನಮ್ಮ ಜಿಲ್ಲೆಯ ಮತ್ತೊಂದು ಹೆಮ್ಮೆಯ ಕೊಡುಗೆಯಾಗಿ "ಕೌಶಲ್ಯ ಸಿರಿ" ಗ್ರಂಥವು ಒಂದು ಎಂದು ನನ್ನ ಅಭಿಪ್ರಾಯ.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಜನಪ್ರಿಯ ಪ್ರಾಚಾರ್ಯರು, ಕನ್ನಡತ್ವ ಮತ್ತು ಬಸವ ತತ್ವಾನಿಷ್ಠರು ಆಗಿರುವ ಶ್ರೀ ಶಿವಶಂಕರ ಟೋಕರೆ ಅವರ ಜೀವನ ಸಾಧನೆಗಳನ್ನು ಆತ್ಮೀಯವಾಗಿ ಪರಾಮರ್ಶಿಸುವ ಒಂದು ವಿಭಿನ್ನ ಅಭಿನಂದನಾ ಗ್ರಂಥ. ಅವರ ಗುರುಗಳು, ಶಿಷ್ಯಂದಿರು, ಕನ್ನಡ ಸಾಹಿತ್ಯ ಪರಿಷತ್ತಿನ ಬಳಗದವರು, ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ಕಿರಿಯ ಅಧಿಕಾರಿಗಳು, ಬಸವಕೇಂದ್ರ, ಬೀದರ ಜಿಲ್ಲಾ ತಾಂತ್ರಿಕ ನೌಕರರ ಸಂಘದವರು, ರಾಜ್ಯ ಸರ್ಕಾರಿ ನೌಕರರ ಸಂಘದವರು, ಹಾಗೂ ಅಭಿಮಾನಿಗಳು ಬರೆದ ಲೇಖನಗಳು ಈ ಗ್ರಂಥದಲ್ಲಿವೆ.

ಶಿವಶಂಕರ ಟೋಕರೆ: ಮೂಲತಃ ಭಾಲ್ಕಿ ತಾಲೂಕಿನ ಗೋರಚಿಂಚೋಳಿಯ ರೈತ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿಯೇ ಬಡತನದ ಕಷ್ಟಗಳನ್ನು ಅನುಭವಿಸಿದವರು. ಅದಕ್ಕಾಗಿ ಚೆನ್ನಾಗಿ ಓದಿ ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಹೊತ್ತು. ಯಾವ ಕೊರತೆಗಳ ಕಡೆ ಲಕ್ಷ ಕೊಡದೆ ಅವರು ಬಡತನವನ್ನೆ ಸವಾಲಾಗಿ ಸ್ವೀಕರಿಸಿ ಓದಿ ಮುಂದೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಉದ್ಯೋಗ ಗಿಟ್ಟಿಸಿಕೊಂಡರು. ಬಾಲ್ಯದಲ್ಲಿ ಅನುಭವಿಸಿದ ಕಷ್ಟಕ್ಕೆ ಫಲ ಸಿಕ್ಕಿತು ಎಂಬಂತೆ ಮುಂದೆ ಬೀದರ ಹಾಗೂ ಔರಾದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾರೆ. ಬಸವಾದಿ ಶರಣರು ಸಾರಿದ ಕಾಯಕವೇ ಕೈಲಾಸವೆಂಬ ಮಾತಿನ ಮೇಲೆ ಅಪಾರ ನಂಬಿಕೆಯುಳ್ಳ ಟೋಕರೆಯವರು ಕಾಟಾಚಾರದ ಸೇವೆ ಮಾಡಿದವರಲ್ಲ. ತುಂಬಾ ಮನಪೂರ್ವಕವಾಗಿ ಅವರು ಎಲ್ಲೇ ಕೆಲಸ ಮಾಡಿದರು. ತಮ್ಮದೇ ಆದ ಛಾಪು ಮೂಡಿಸಿದವರು, ಐಟಿಐ ಸಂಸ್ಥೆಗಳ ಸಮಗ್ರ ಅಭಿವೃದ್ಧಿ ಹಾಗೂ ಅಲ್ಲಿ ಶಾಶ್ವತ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಬಹಳಷ್ಟು ಶ್ರಮಿಸಿದ್ದಾರೆ. ಹಾಗಾಗಿಯೇ ಇಡೀ ಬೀದರ ಜಿಲ್ಲೆಯಲ್ಲಿ ಐಟಿಐ ಅಂದರೆ ಶಿವಶಂಕರ ಟೋಕರೆ ಎನ್ನುವಷ್ಟು ಜನಪ್ರಿಯತೆ ಪಡೆದು ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಓರ್ವ ಪ್ರಾಚಾರ್ಯರಾಗಿ ಮಾಡಿದ ಅವರ ಸಾಧನೆ ಶ್ಲಾಘನೀಯ.

ಶ್ರೀಯುತರು ಜಿಲ್ಲೆಯ 16662 ಐಟಿಐ ಕುಶಲ ಕರ್ಮಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ಕಲ್ಪಿಸಿ ಅಂತಹ ಕುಟುಂಬಗಳ ಬದುಕಿಗೆ ನೆರವಾದದ್ದು ಐತಿಹಾಸಿಕ ದಾಖಲೆಯೆಂದೇ ಹೇಳಬಹುದು. ಕೌಶಲ್ಯಾಭಿವೃದ್ಧಿ ರಾಷ್ಟ್ರೀಯ ಪ್ರತಿನಿಧಿಯಾಗಿ ಜಪಾನ್ ದೇಶಕ್ಕೆ ತೆರಳಿ ಜ್ಞಾನ ಸಂಪಾದನೆ ಮಾಡಿ ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಐಟಿಐಗಳ ಸಂಪೂರ್ಣ ಅಭಿವೃದ್ಧಿಗೆ ಹತ್ತಾರು ಗುಣಮಟ್ಟದ ತರಬೇತಿ ಕಾರ್ಯಗಾರ ಏರ್ಪಡಿಸಿ ಔರಾದ ಹಾಗೂ ಬೀದರನಲ್ಲಿ ಏಕಕಾಲಕ್ಕೆ ಟಾಟಾದ ಬೃಹತ್ ಉದ್ಯೋಗ ಯೋಜನೆ ಜಾರಿಯಲ್ಲಿ ಬರುವಂತೆ ಮಾಡಿದ ಟೋಕರೆಯವರ ಸೇವೆ ಅನುಪಮವಾದುದು. ನೂರಾರು ತರಬೇತಿದಾರರು ರೋಬೋಟಿಕ್ಸ್, ಎಲೆಕ್ಟಿಕಲ್ ವೆಹಿಕಲ್ ತಂತ್ರಜ್ಞಾನ ಹಾಗೂ ಅಲ್ಪಾವಧಿ ಕೌಶಲ್ಯ ಕಲಿಯಲು ಅನುವು ಮಾಡಿಕೊಟ್ಟದ್ದು ಅವರ ಅವಿಸ್ಮರಣೀಯ ಸೇವೆಗಳಾಗಿವೆ.

ಪ್ರವೃತ್ತಿಯಿಂದ ಸಾಹಿತಿಗಳಾಗಿ 'ಕೌಶಲ್ಯರಶ್ಮಿ' ಎಂಬ ಕವನ ಸಂಕಲನವನ್ನೂ, 'ಪದಪುಂಜ' ಎಂಬ ವ್ಯಾಕರಣ ಕೃತಿಗಳನ್ನು ಸಾಹಿತ್ಯ ಕೃತಿಗಳಾಗಿ ಪ್ರಕಟಿಸಿದವರು. ಅಕ್ಷರ ಪ್ರೀತಿ ಮೆರೆದ ಅವರು ತಮ್ಮ ಮಗನ ಮದುವೆಯಲ್ಲಿ ಜಿಲ್ಲೆಯ 101 ಕವಿಗಳ ಪ್ರಾತಿನಿಧಿಕ ಕವನ ಸಂಕಲನ 'ಅಕ್ಷರ ಕಾರಂಜಿ' ಪುಸ್ತಕ ಪ್ರಕಟಣೆಗೆ ಪ್ರಾಯೋಜಿಸಿದವರು. ಕನ್ನಡತ್ವ ಹಾಗೂ ಬಸವತತ್ವವನ್ನು ಮೈಗೂಡಿಸಿಕೊಂಡ ಶಿವಶಂಕರ ಟೋಕರೆಯವರು, ಜಿಲ್ಲಾ ಕಸಾಪ ಕೋಶಾಧ್ಯಕ್ಷರಾಗಿ, ಬಸವಕೇಂದ್ರ ಪ್ರಧಾನ ಕಾರ್ಯದರ್ಶಿಗಳಾಗಿ, ಬೀದರ ಜಿಲ್ಲಾ ತಾಂತ್ರಿಕ ನೌಕರರ ಗೌರವಾಧ್ಯಕ್ಷರಾಗಿ, ಜಿಲ್ಲೆಯಲ್ಲಿ 50 ನೈಟಿಂಗಲ್ ಕನ್ನಡ ಶಾಲೆಗಳ ನಿರ್ದೇಶಕರಾಗಿ ಹಾಗೂ ಈ ಹಿಂದೆ 21 ವರ್ಷಗಳ ಕಾಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಯಾ ಹುದ್ದೆಗಳಿಗೆ ಗೌರವ ತಂದುಕೊಟ್ಟ ಇವರು ಸಮಾಜೋ-ಧಾರ್ಮಿಕ ಸೇವೆಗಳ ಮೂಲಕ ಜನಮನ ಗೆದ್ದವರು. ಹೀಗೆ ತಮ್ಮ ವೃತ್ತಿಯನ್ನೂ ಆದ್ಯ ಕರ್ತವ್ಯವೆಂದು ಭಾವಿಸಿ ಮನಃಪೂರ್ವಕವಾಗಿ ಮಾಡಿದ ರೀತಿ ಮತ್ತು ಸಹೃದಯತೆಯಿಂದಾಗಿ ಆತ್ಮೀಯ ಶಿಷ್ಯಬಳಗ ಹಾಗೂ ಸ್ನೇಹ ಬಳಗವನ್ನು ಅಪಾರ ಸಂಖ್ಯೆಯಲ್ಲಿ ಹೊಂದಿದ್ದಾರೆ. ಹೀಗಾಗಿ ಅವರು ಬದುಕಿನುದ್ದಕ್ಕೂ ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಏಳಿಗೆಗೆ ದುಡಿದ ಕಾರಣ ಟೋಕರೆಯವರನ್ನು ಗೌರವಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯವೆಂದು ಭಾವಿಸಿ, ಮತ್ತು ಇಂಥವರ ಬದುಕಿನ ಸಾಧನೆಗಳು ಮುಂದಿನ ಯುವ ಜನಾಂಗಕ್ಕೆ ಮಾದರಿಯಾಗಬೇಕಾದರೆ ಅವರ ವಯೋನಿವೃತ್ತಿಯ ಸೂಕ್ತ ಸಂದರ್ಭವನ್ನರಿತ ಇವರ ಅಭಿಮಾನಿಗಳು, ಸಾಹಿತಿಗಳು, ಕೂಡಿಕೊಂಡು ಶ್ರೀಯುತ ಟೋಕರೆಯವರ "ಬದುಕು- ಬರಹ" ಕುರಿತಾದ 'ಕೌಶಲ್ಯ ಸಿರಿ' ಎಂಬ ಅಭಿನಂದನ ಗ್ರಂಥ ಹೊರತರುವ ಯೋಜನೆ ರೂಪಿಸಲಾಯಿತು. ಆ ನಿಟ್ಟಿನಲ್ಲಿ ರಚನೆಗೊಂಡ ಅಭಿನಂದನ ಸಮಿತಿಯ ಬಳಗದವರು ಒಮ್ಮನಸ್ಸಿನಿಂದ ಕಾರ್ಯತತ್ಪರರಾದಾಗ, ಸಾಹಿತಿಗಳು, ಲೇಖಕರು, ಅಭಿಮಾನಿಗಳಿಂದ ಬರಹಗಳ ಮಹಾಪೂರವೇ ಹರಿದು ಬರತೊಡಗಿತು. ಆ ಬರಹಗಳ ಸಂಗಮವೇ ಈ ಗ್ರಂಥ.

ಈ ಗ್ರಂಥವು ಆರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗ 'ಭಾವ ಸಿರಿ'. ಇದು ಅಭಿಮಾನಿಗಳ ದೃಷ್ಟಿಯಲ್ಲಿ ಶ್ರೀಯುತ ಟೋಕರೆಯವರು ಎಂಬ ವಿಷಯದ ಬರೆದ ಲೇಖನಗಳನ್ನು ಒಳಗೊಂಡಿದೆ. ಎರಡನೇ ಭಾಗ 'ಕಾವ್ಯ ಸಿರಿ'. ಇದರಲ್ಲಿ ಟೋಕರೆಯವರ ಕುರಿತು ಕವಿಗಳು ಬರೆದ ಕವನಗಳಿವೆ. ಮೂರನೇ ಭಾಗವಾದ 'ಅಕ್ಷರ ಸಿರಿ'ಯಲ್ಲಿ ಶ್ರೀ ಶಿವಶಂಕರ ಟೋಕರೆಯವರ ಹೆಸರಿನ ಮೊದಲಕ್ಷರಗಳನ್ನು ಇಟ್ಟುಕೊಂಡು ರಚಿಸಿದ ಕವಿತೆಗಳಿವೆ. ನಾಲ್ಕನೆಯ ಭಾಗ 'ಪುಸ್ತಕ ಸಿರಿ'ಯಲ್ಲಿ ಟೋಕರೆಯವರು ಬರೆದ ಕೃತಿಗಳ ವಿಮರ್ಶಾ ಲೇಖನಗಳಿವೆ. ಐದನೆಯ ಭಾಗ 'ಪತ್ರಿಕಾ ಸಿರಿ'. ಟೋಕರೆ ಅವರು ಕೈಗಾರಿಕಾ ತರಬೇತಿ ಸಂಸ್ಥೆಗೆ ನೀಡಿದ ಕೊಡುಗೆ ಮತ್ತು ಬೀದರ ಜಿಲ್ಲೆಯಲ್ಲಿ ಸರಕಾರಿ ಕೈಗಾರಿಕಾ ತರಬೇತಿ ನಡೆದು ಬಂದ ದಾರಿ ಕುರಿತು ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಈ ಭಾಗದಲ್ಲಿ ಸಂಗ್ರಹಿಸಲಾಗಿದೆ. ಆರನೆಯ ಭಾಗ 'ಗೌರವ ಸಿರಿ'. ಇದು ಗಣ್ಯರ ದೃಷ್ಟಿಯಲ್ಲಿ ಟೋಕರೆಯವರು ಹಾಗೂ ಟೋಕರೆಯವರಿಗೆ ಸಂದ ಗೌರವ ಪ್ರಶಸ್ತಿಗಳ ವಿವರವನ್ನೊಳಗೊಂಡಿದೆ. ವಯೋನಿವೃತ್ತಿ ಹೊಂದುತ್ತಿರುವ ಅರವತ್ತರ ಶಿವಶಂಕರ ಟೋಕರೆಯವರ ಈ ಗ್ರಂಥದಲ್ಲಿ ಎಪ್ಪತ್ತು ಲೇಖನಗಳು, ಎಪ್ಪತ್ತು ಕವನಗಳು ಹನ್ನೊಂದು ಸಂದೇಶಗಳಿದ್ದು ಓದುಗರಿಗೆ, ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾದಲ್ಲಿ ನಮ್ಮ ಶ್ರಮ ಸಾರ್ಥಕವಾದಂತೆ.

ಇಂಥದೊಂದು ಬ್ರಹತ್ ಗ್ರಂಥದ ಸಂಪಾದನೆ ಹೊಣೆಯನ್ನು ಸಹೃದಯಿಗಳಾದ ಡಾ. ಬಸವರಾಜ ಬಲ್ಲೂರ ಅವರ ಸಮರ್ಥ ನಿರ್ದೇಶನದ ಮೆರೆಗೆ ಸಂಪಾದಕ ಮಂಡಳಿ ಸದಸ್ಯರು ಹಾಗೂ ಅಭಿನಂದನ ಸಮಿತಿಯವರು ಪ್ರೀತಿಯಿಂದ ನನ್ನ ಮೇಲೆ ಭಾರ ಹಾಕಿದಾಗ ಕ್ಷಣಕಾಲ ಮೌನ ತಾಳಿದೆ. ಇಷ್ಟು ದೊಡ್ಡ ಕೆಲಸ ನಿಭಾಯಿಸಲು ನನಗೆ ಸಾಧ್ಯವಾಗದೆಂದು ನಾನು ಹಿಂದೆ ಸರಿದೆ. ಆಗ ಸಮಿತಿಯವರು ನಾವು ನಿಮ್ಮ ಜೊತೆ ಇರುತ್ತೇವೆ. ಎಲ್ಲರೂ ಕೂಡಿ ಮಾಡೋಣ ಎಂದಾಗ ಇಂತಹ ಸಮಾಜ ಸೇವಕರು, ಕನ್ನಡ ಸೇವಕರು, ಶರಣ ಜೀವಿಗಳಾದ ಶ್ರೀ ಶಿವಶಂಕರ ಟೋಕರೆಯವರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ತಕ್ಷಣವೇ ಆ ನಿಟ್ಟಿನಲ್ಲಿ ಕಾರ್ಯತತ್ಪರನಾದೆ. ಈ ಗ್ರಂಥ ಸಂಪಾದನೆಯಲ್ಲಿ ಬಹುಪಾಲು ಕೆಲಸ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ್ ಬಲ್ಲೂರ್ ಅವರೇ ಮಾಡಿದ್ದಾರೆ. ಅವರಿಗೆ ಮೊದಲ ಪ್ರಣಾಮಗಳು ಸಲ್ಲಿಸುತ್ತೇನೆ. ಅಲ್ಲದೆ ಪ್ರಸ್ತುತ ಗ್ರಂಥದ ಸಂಪಾದಕ ಕಾರ್ಯದಲ್ಲಿ ನನ್ನ ಜೊತೆ ಕಾರ್ಯನಿರ್ವಹಿಸಿದ ಡಾ. ರಘುಶಂಖ ಭಾತಂಬ್ರಾ, ಅವರಿಗೂ ಪ್ರಣಾಮಗಳು. ಎಲ್ಲಕ್ಕೂ ಮಿಗಿಲಾಗಿ ಈ ಗ್ರಂಥದ ಬರಹ ತಿದ್ದಲು ಸಹಾಯ ಮಾಡಿದ ಶ್ರೀ ಶಿವರಾಜ ಶಾಮರಾವ ಕೊರಡಂಪಳ್ಳಿ ಹಾಗೂ ಜಗನ್ನಾಥ ಕಮಲಾಪೂರೆ ಅವರಿಗೂ ನೆನೆಯದೆ ಇರಲಾರೆ.

ಈ ಅಭಿನಂದನಾ ಗ್ರಂಥಕ್ಕೆ ಶುಭಸಂದೇಶಗಳನ್ನು ಕಳಿಸಿ ಆಶೀರ್ವದಿಸಿದ ಎಲ್ಲ ಪೂಜ್ಯರಿಗೂ ಹಾಗೂ ಗೌರವಾನ್ವಿತ ಗಣ್ಯರಿಗೂ ಅನಂತ ಪ್ರಣಾಮಗಳು, ಸಕಾಲಕ್ಕೆ ತಮ್ಮ ತಮ್ಮ ಮಹತ್ವದ ಬರಹಗಳು ಒದಗಿಸಿ ಗ್ರಂಥದ ಸೌಂದರ್ಯವನ್ನು ಹೆಚ್ಚಿಸಿ ಪ್ರೀತಿಯಿಂದ ಸಹಕರಿಸಿದ ಸಾಹಿತಿಗಳು, ಕವಿಗಳೆಲ್ಲರಿಗೂ ಅನಂತ ವಂದನೆಗಳು. ಕೊನೆಯದಾಗಿ ಈ ಪುಸ್ತಕವನ್ನು ಅತ್ಯಂತ ಸಹನೆಯಿಂದ ಅಂದವಾಗಿ ಮುದ್ರಿಸಿಕೊಟ್ಟ ವಿಶ್ವಾಸ ಪ್ರಿಂಟರ್ಸ್ ಬೆಂಗಳೂರು ಅವರಿಗೂ ಹಾಗು ಅಂದವಾಗಿ ಅಕ್ಷರ ಸಂಯೋಜನೆ (ಡಿಟಿಪಿ) ಮಾಡಿದ ಶ್ರೀಮತಿ ಶ್ರೀದೇವಿ ತೋರಣ ಅವರಿಗೂ, ಗುರುಗಳ ಕೆಲಸವೆಂದು ಅತೀ ಉತ್ಸಾಹದಿಂದ ಸಮಯಕ್ಕೆ ಸರಿಯಾಗಿ ಲೇಖನ ಕವನಗಳನ್ನು ಬರುವಂತೆ ಸಹಾಯ ಸಹಕಾರ ನೀಡಿದ ಸರಕಾರಿ ಐಟಿಐ ಬೀದರ ಹಾಗೂ ಔರಾದನ ಸಿಬ್ಬಂದಿಗಳಿಗೂ ಕೃತಜ್ಞತೆಗಳು. ಹಾಗೂ ಗ್ರಂಥದ ಕೇಂದ್ರ ಬಿಂದುವಾದ 'ಶ್ರೀಯುತ ಶಿವಶಂಕರ ಟೋಕರೆ' ಅವರು ಸಮಾಜದ ಜನತೆಯ ಸೇವೆಯನ್ನು ಇನ್ನೂ ಸಲ್ಲಿಸುವಂತಾಗಲು ದೇವರು ಹೆಚ್ಚಿನ ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆ. ಟೋಕರೆಯವರಿಗೆ ಈ ಗ್ರಂಥವನ್ನು ಸಮರ್ಪಿಸಲು ಸಮಯ ಕಾದು ನೋಡುತಿದ್ದ ಅಭಿನಂದನ ಸಮಿತಿಯ ಸರ್ವ ಸದಸ್ಯ ಗಣ್ಯಮಾನ್ಯರಿಗೂ, ಸಂಪಾದಕ ಮಂಡಳಿಯ ಎಲ್ಲ ಕಾರ್ಯಕರ್ತರಿಗೂ ವಂದಿಸುತ್ತಾ ಈ 'ಕೌಶಲ್ಯ ಸಿರಿ' ಗ್ರಂಥವು ಎಲ್ಲ ಅಭಿಮಾನಿ ಬಾಂಧವರ ಕೈಗಿಡಲು ಅತ್ಯಂತ ಹರ್ಷವೆನಿಸುತ್ತದೆ.

-ಡಾ. ಈಶ್ವರಯ್ಯ ಕೊಡಂಬಲ್

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...