"ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದೇನೆ. ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ" ಎಂದು ಸಾಹಿತಿ ಜೋಗಿ ಅವರು ರಾಜು ಹೆಗಡೆ ಅವರ ಕಣ್ಣಿನಲಿ ನಿಂತ ಗಾಳಿ ಕವಿತೆಗಳ ಕೃತಿಗೆ ಬರೆದ ಮುನ್ನಡಿ ನಿಮ್ಮ ಓದಿಗಾಗಿ.
ಕವಿತೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಏನೇ ಹೇಳಿದರೂ ಅದು ಉತ್ತರಿಸಿದವನ ಅಪೇಕ್ಷೆ ಮತ್ತು ಮಿತಿಯಷ್ಟೇ ಆಗಿರುತ್ತದೆ. ಆದರೆ ಕವಿತೆ ಹೇಗಿರಬೇಕು ಅನ್ನುವುದು ಅಪೇಕ್ಷೆಯೂ ಹೌದು. ಅದನ್ನು ನಿರ್ಧರಿಸುವುದು ಕೇವಲ ಅಪೇಕ್ಷೆಯಲ್ಲ, ಕವಿತೆಯ ನಿರಂತರ ಓದು.
ಪ್ರತಿಯೊಂದು ಹೊಸ ಕವಿತೆಯ ಓದಿನ ಮೇಲೂ ನಾವು ಈ ಹಿಂದೆ ಓದಿದ ಮೆಚ್ಚಿದ ಮತ್ತು ನಿರಾಕರಿಸಿದ ಕವಿತೆಯ ಪ್ರಭಾವ ಇದ್ದೇ ಇರುತ್ತದೆ. ನಾವು ಸಾಹಿತ್ಯದ ಯಾವ ಚಳವಳಿಯ ಕಾಲಾವಧಿಯಲ್ಲಿ ಕವಿತೆ ಓದಲು ಆರಂಭಿಸಿದೆವು ಅನ್ನುವುದನ್ನೂ ಅದು ಅವಲಂಬಿಸಿರುತ್ತದೆ. ನವೋದಯದ ಕವಿತೆಗಳಿಂದ ತಮ್ಮ ಕಾವ್ಯಲೋಕ ಕಟ್ಟಿಕೊಂಡವರಿಗೆ, ನವ್ಯೋತ್ತರದ ತನಕವೂ ಅದನ್ನು ಅಷ್ಟೇ ಅಕ್ಕರೆಯಿಂದ ವಿಸ್ತರಿಸಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹೊಸ ಕಾಲದ ಕವಿಗಳು ಕೇಳಿಕೊಳ್ಳಬೇಕಾಗುತ್ತದೆ.
ರಾಜು ಹೆಗಡೆ ಅವರ ಹೊಸ ಕವಿತಾ ಸಂಕಲನ ‘ಕಣ್ಣಿನಲಿ ನಿಂತ ಗಾಳಿ’ ಈ ಎಲ್ಲಾ ಪ್ರಶ್ನೆಗಳನ್ನು ತನ್ನ ಪ್ರಾಂಜಲ ಕಾವ್ಯಗುಣ, ಅಪೂರ್ವ ತಾಜಾತನ ಮತ್ತು ನಿರರ್ಗಳ ಅರ್ಥಪೂರ್ಣತೆಯ ಮೂಲಕ ಎದುರಿಸಿದೆ. ಕಣ್ಣಿನಲಿ ನಿಂತ ಗಾಳಿ ಎಂಬ ಶೀರ್ಷಿಕೆಯೇ ರಾಜು ಹೆಗಡೆಯವರ ಕವಿತೆಗೆ ರೂಪಕದಂತಿದೆ. ನಮ್ಮ ಸಿದ್ಧಮಾದರಿಯ ಕವಿತೆಗಳನ್ನೂ ಕವಿತೆಯ ಸಿದ್ಧಮಾದರಿಗಳನ್ನೂ ಪಕ್ಕಕ್ಕೆ ತಳ್ಳಿ, ಕವಿಮನಸ್ಸಿಗೆ ಕಂಡ ಚಿತ್ರಗಳನ್ನು ಮಾತ್ರ ಅವರು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಪದ್ಯ ಇರುತ್ತದೆ, ಹೇಳುವುದಿಲ್ಲ. ಇವು ಆಗಿಹೋದ ಪದ್ಯಗಳಲ್ಲ, ಆಗುತ್ತಲೇ ಇರುವ ಕವಿತೆಗಳು. ಒಂದೊಂದು ಸಲ ಓದಿದಾಗಲೂ ಒಂದೊಂದು ಸ್ಮೃತಿಯನ್ನೋ ಸಂಹಿತೆಯನ್ನೋ ನಮ್ಮಲ್ಲಿ ಮೂಡಿಸುವ ಈ ಸಂಕಲನದ ಯಾವ ಪದ್ಯವೂ ಸುದೀರ್ಘವಾಗಿಲ್ಲ. ಯಾವ ಕವಿತೆಯೂ ಕವಿ ನಿಲ್ಲಿಸಿದಲ್ಲಿಗೆ ಮುಗಿಯುವುದಿಲ್ಲ.
ಉದಾಹರಣೆಗೆ ಹಕ್ಕಿಯ ಕುರಿತು ಎಂಬ ಕವಿತೆ ಹಕ್ಕಿಯಂತೆ ಹುಟ್ಟಿ, ಹಕ್ಕಿಯಂತೆಯೇ ಹಾರಿಹೋಗುತ್ತದೆ.
ಹಕ್ಕಿಗಳು ವಾಕಿಂಗ್ ಮಾಡುವುದಿಲ್ಲ
ಆಹಾರಕ್ಕಾಗಿ ವಿಹರಿಸುತ್ತವೆ
ಯೋಗ ಗೀಗಕ್ಕೆ ಹೋಗುವುದಿಲ್ಲ
ಎಂದು ಶುರುವಾಗಿ, ಒಂದು ಮಾಯಕದಲ್ಲಿ ಕೊನೆಗೊಳ್ಳುತ್ತದೆ
ಆದರೆ ಹಕ್ಕಿಗಳು
ಇಲ್ಲವಾಗುವವರೆಗೆ
ಇರುತ್ತವೆ.
ಇದನ್ನೇ ಅವರು ಕವಿತೆಗೂ ಅನ್ವಯಿಸುತ್ತಾರೆ. ಕವಿತೆಯ ಕುರಿತು ಬರೆಯುತ್ತಾರೆಂದುಕೊಂಡರೆ ರಾಜು ಹೆಗಡೆ ಬದುಕಿನ ಕುರಿತು ಬರೆದಿರುತ್ತಾರೆ. ಇರುವುದು ಇಲ್ಲವಾಗುವುದು ಮತ್ತು ಇಲ್ಲವಾಗುವುದು ಇರುವುದರ ಕುರಿತು ಅವರ ಜಿಜ್ಞಾಸೆ ಎಲ್ಲ ಕವಿತೆಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಹೀಗಾಗಿಯೇ ಈ ಕವಿತೆಗಳಿಗೆ ವಿಶಿಷ್ಟವಾದ ಹೊಳಪೊಂದು ದಕ್ಕಿದೆ.
ಕೆವಿ ತಿರುಮಲೇಶರ ಕುರಿತ ಒಂದು ಪದ್ಯ ಈ ಸಂಕಲನದಲ್ಲಿದೆ. ಅದು ಕವಿಯ ಕುರಿತು ಹೇಳುತ್ತಲೇ ಅವರ ಪದ್ಯವೊಂದು ಸಾಲಾರ್ ಜಂಗ್ ಮ್ಯೂಸಿಯಮ್ಮಿನಲ್ಲಿ ಕಂಡಂತಾಗುವುದನ್ನೂ ಹೇಳುತ್ತದೆ. ಅಲ್ಲಿಂದಾಚೆ ಪದ್ಯ ಸದ್ಯದಲ್ಲಿ ಕುಣಿದವರು ಸದ್ದಿಲ್ಲದೇ ಎದ್ದು ಹೋದದ್ದನ್ನು ಸೂಚಿಸುತ್ತಾ ಅವಾಕ್ಕಾಗುತ್ತದೆ.
ಒಂದು ವಿಲಕ್ಷಣ ಆವರ್ತನದಲ್ಲಿ ಹುಟ್ಟುವ ಅರ್ಥಗಳನ್ನು ರಾಜು ಹೆಗಡೆ ಶೋಧಿಸುವ ಕ್ರಮ ಈ ಕವಿತೆಗಳ ವಿಶೇಷ. ಹೀಗಾಗಿ ಈ ಪದ್ಯಗಳನ್ನು ಒಮ್ಮೆ ಓದಿ ಪಕ್ಕಕ್ಕಿಡುವಂತಿಲ್ಲ. ಹೆಸರಿಲ್ಲದ ಪದ್ಯವೊಂದು
ಇದ್ರು ಸೈಬ್ರು ಸತ್ರು ಸೈಬ್ರು
ಇದ್ರು ಸೈಬ್ರು
ಸತ್ರು ಸೈಬ್ರು
ಎಂಬ ಬೀಯಿಂಗಿನಿಂದ
ಇದ್ರು ಸೈಬ್ರು ಕಾಣ್ತಿಲ್ಲ
ಸತ್ರು ಸೈಬ್ರು ಕಾಣ್ತಿಲ್ಲ
ಎಂಬ ನಾನ್ ಬೀಯಿಂಗಿಗೆ ಚಲಿಸುತ್ತಲೇ ಯಾವುದು ಬೀಯಿಂಗ್ ಯಾವುದು ನಾನ್ ಬೀಯಿಂಗ್ ಎಂಬ ಪ್ರಶ್ನೆಯನ್ನು ಥಟ್ಟನೆ ಹುಟ್ಟಿಸಿ ಮೌನವಾಗುತ್ತದೆ.
ನಾಲ್ಕು ಭಾಗಗಳಲ್ಲಿ ಇಲ್ಲಿಯ ಪದ್ಯಗಳನ್ನು ರಾಜು ಹೆಗಡೆ ವಿಭಾಗಿಸಿದ್ದಾರೆ. ಅವರು ಕವಿಯ ವಿಭಾಗೀಕರಣ ಮಾತ್ರ. ಓದುತ್ತಾ ಹೋದರೆ ನಾಲ್ಕೂ ಭಾಗಗಳೂ ಒಂದೇ ಅನ್ನಿಸುತ್ತಾ ಓದಿಸಿಕೊಳ್ಳುತ್ತವೆ. ಆದರೆ ಅವಕ್ಕಿರುವ ವ್ಯತ್ಯಾಸವೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹೊಳೆಯುತ್ತದೆ. ಉದಾಹರಣೆಗೆ ಮೊದಲ ಭಾಗದ
ಯಾವುದು ಕವಿತೆ
ಕವಿತೆಯೆಂದರೆ ಏನು
ಹೇಗಿರುತ್ತದೆ
ಯಾವುದೂ
ಕವಿತೆಗೆ ಗೊತ್ತಿಲ್ಲ
ಹಾಗೆ ನೋಡಿದರೆ
ಕವಿತೆಯಲ್ಲದಿದ್ದರೆ
ಕವಿತೆಯೇ
ಇರುವುದಿಲ್ಲ!
ಎರಡನೆಯ ಭಾಗದ-
ಕವಿತೆ
ಕೊಡೆಯ ಹಾಗೆ
ಆಗಾಗ,
ಕಡ್ಡಿ ಬದಲಾಯಿಬೇಕು
ಹಿಡಿ ಬೇರೆ ಹಾಕಬೇಕು
ಕಾವು ಬೇರೆಯಾಗಬೇಕು
ಅರಿವೆಯನ್ನೂ ಚೇಂಜ್
ಮಾಡಬೇಕು…..
ಇವೆರಡನ್ನೂ ನಾವು ಒಟ್ಟಿಗೆ ಓದುವುದಿಲ್ಲ. ಮೊದಲ ಕವಿತೆಯನ್ನು ಓದಿ ಮುಂದೆಲ್ಲೋ ಎರಡನೆಯ ಕವಿತೆಯನ್ನು ಪ್ರವೇಶಿಸುವ ಹೊತ್ತಿಗೆ ರಾಜು ಹೆಗಡೆ ಕವಿತೆಗಳ ಕುರಿತೂ ನಮ್ಮ ಅಪೇಕ್ಷೆ ಬದಲಾಗಿರುತ್ತವೆ. ಹಾಗೆ ಬದಲಾದ ಓದುಗನನ್ನು ರಾಜು ಹೆಗಡೆ ನಿರೀಕ್ಷಿಸಿರುತ್ತಾರೆ ಎನ್ನುವುದನ್ನು ಕೂಡ ಅವರು ಕವಿತೆಗಳನ್ನು ಅಳವಡಿಸಿಕೊಂಡ ಕ್ರಮವನ್ನು ಗಮನಿಸಿದರೆ ಹೇಳಬಹುದು.
ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ.
ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದೇನೆ. ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ.
ಕೆವಿ ತಿರುಮಲೇಶರ ಪದ್ಯಗಳ ನಿರಾವಲಂಬ, ಎಸ್ ಮಂಜುನಾಥ್ ಕವಿತೆಗಳ ನಿರ್ಭಾರ ಮತ್ತು ರಾಮು ಕವಿತೆಗಳ ನಿರುಮ್ಮಳ ಈ ಕವಿತೆಗಳಲ್ಲೂ ಬಹಳಷ್ಟು ಕಡೆ ನನಗೆ ಕಾಣಿಸಿದೆ. ಇವರನ್ನೆಲ್ಲ ಓದಿಕೊಂಡ ಕಾವ್ಯಾಸಕ್ತರಿಗೂ ಅದು ಕಂಡೀತು. ಅದು ರಾಜು ಹೆಗಡೆಯವರ ಕಾವ್ಯದ ಗೆಲುವೆಂದೇ ನಾನಂತೂ ಭಾವಿಸುತ್ತೇನೆ.
ಕಣ್ಣಿನಲಿ ನಿಂತ ಗಾಳಿ ಕವಿತೆಗಳ ಉಸಿರಾಡಲಿ.
ಜೋಗಿ ಅವರ ಪರಿಚಯಕ್ಕಾಗಿ
"ವಿಶ್ವವಿದ್ಯಾಲಯಗಳು ಪಿಎಚ್.ಡಿ ಅಧ್ಯಯನಗಳಿಗೆ ಜಾನಪದ ವಿಷಯಗಳನ್ನು ಮಾನ್ಯ ಮಾಡುತ್ತಿದ್ದ ಪರಿಣಾಮ ಈ ಇಬ್ಬರು ಅಧ್ಯಯ...
"ಕಲೆ ಮನುಷ್ಯನನ್ನು ವಿಕೃತಿಗಳಿಂದ ಪಾರುಮಡುತ್ತದೆ. ಶುದ್ಧಗಳಿಸುತ್ತದೆ. ನಿಜಾರ್ಥದಲ್ಲಿ "ಬೆಳಗುತ್ತದೆ"...
"ವೆಂಕಣ್ಣಯ್ಯನವರಿಗೆ ಪ್ರಥಮ ರಾಷ್ಟ್ರ ಕವಿ ಕುವೆಂಪುರವರು ತಮ್ಮ ರಾಮಾಯಣ ದರ್ಶನಂಅನ್ನು ಅರ್ಪಣೆ ಮಾಡಿದ್ದರೆ, ತ.ಸು....
©2025 Book Brahma Private Limited.