"ವಿಶ್ವವಿದ್ಯಾಲಯಗಳು ಪಿಎಚ್.ಡಿ ಅಧ್ಯಯನಗಳಿಗೆ ಜಾನಪದ ವಿಷಯಗಳನ್ನು ಮಾನ್ಯ ಮಾಡುತ್ತಿದ್ದ ಪರಿಣಾಮ ಈ ಇಬ್ಬರು ಅಧ್ಯಯನಕಾರರು ಮ್ಯಾಸಬೇಡರನ್ನು ಕುರಿತು ಪಿಎಚ್.ಡಿ ಪದವಿಗಾಗಿ ಸಂಶೋಧನೆ ಕೈಗೊಳ್ಳುತ್ತಾರೆ. ಇಲ್ಲಿಂದ ಮ್ಯಾಸಬೇಡರ ಸಂಸ್ಕೃತಿ ಸಂಗತಿಗಳು ಅಧ್ಯಯನಕಾರರ ಪ್ರಪಂಚಕ್ಕೆ ಪ್ರವೇಶ ಪಡೆಯುತ್ತವೆ. ಇಲ್ಲಿಂದ ಮುಂದಕ್ಕೆ ಬುಡಕಟ್ಟು ಅಧ್ಯಯನಗಳಲ್ಲಿ ಮ್ಯಾಸಬೇಡರಿಗೆ ಒಂದು ಶಾಶ್ವತ ಸ್ಥಾನ ದೊರಕಿದಂತಾಗುತ್ತದೆ," ಎನ್ನುತ್ತಾರೆ ಡಾ.ಎಸ್.ಎಂ.ಮುತ್ತಯ್ಯ. ಅವರು ಡಾ. ಪ್ರಹ್ಲಾದ ಎಂ ಅವರ ‘ಮ್ಯಾಸರಬೇಡ ಚಾರಿತ್ರಿಕ ಕಥನ’ ಕೃತಿಗೆ ಬರೆದ ಲೇಖನ.
ಕರ್ನಾಟಕದ ಆದಿಮಾ ಬುಡಕಟ್ಟುಗಳಲ್ಲಿ ಒಂದಾಗಿರುವ ಮ್ಯಾಸಬೇಡರ ಸಮುದಾಯ ಆಧುನಿಕ ಕಾಲದ ಒತ್ತಡಗಳನ್ನೂ ಮೀರಿ ತನ್ನ ಪರಂಪರೆಯ ಚಹರೆಗಳನ್ನು ಉಳಿಸಿಕೊಂಡಿದೆ. ಈ ಸಮುದಾಯವನ್ನು ಕುರಿತು 1900 ರಿಂದಲೇ ಅಧ್ಯಯನಗಳು ಆರಂಭವಾಗಿ ಈಗಲೂ ನಡೆಯುತ್ತಿವೆ. ಮ್ಯಾಸಬೇಡರನ್ನು ಕುರಿತು ಅಧ್ಯಯನ ಮಾಡಿದವರಲ್ಲಿ ಎಡ್ಗರ್ ಥರ್‌ಸ್ಟನ್ ಮತ್ತು ಕೆ.ರಂಗಾಚಾರಿ ಮೊದಲಿಗರು. ವಸಾಹತು ಕಾಲದ ಉತ್ತುಂಗದ ಸಂದರ್ಭದಲ್ಲಿ ಅಧ್ಯಯನ ಆರಂಭಮಾಡಿದ ಇವರು ಮೊದಲಬಾರಿಗೆ ಮ್ಯಾಸಬೇಡ ಸಮುದಾಯದ ಸಂಸ್ಕೃತಿಯನ್ನು ದೂರದಿಂದಲೇ ಗಮನಿಸಿ ತಮಗೆ ಅರ್ಥವಾದಷ್ಟನ್ನು ದಾಖಲಿಸುತ್ತಾರೆ. ಆನಂತರ ಇವರ ಮಾರ್ಗದಲ್ಲಿ ಹೆಚ್.ವಿ.ನಂಜುಂಡಯ್ಯ, ಎಲ್.ಕೆ.ಅನಂತಕೃಷ್ಣ ಅಯ್ಯರ್, ಎಂ.ಜಿ ಈಶ್ವರಪ್ಪ ಇಂಥ ಅನೇಕ ವಿದ್ವಾಂಸರು ಮ್ಯಾಸಬೇಡ ಸಮುದಾಯದ ಬಗ್ಗೆ ಪರಿಚಯಾತ್ಮಕ ಬರೆಹಗಳನ್ನು ಬರೆದಿದ್ದಾರೆ. ಇಲ್ಲಿಂದ ಬಹಳಷ್ಟು ವರ್ಷಗಳ ಕಾಲ ಗೆಜಿಟಿಯಾರ್, ಮಾಹಿತಿಕೋಶಗಳಲ್ಲಿ ಪರಿಚಯಾತ್ಮಕ ಬರೆಹಗಳಿಗೆ ಸೀಮಿತವಾಗಿದ್ದ ಮ್ಯಾಸಬೇಡರ ಅಧ್ಯಯನವನ್ನು ವಿಸ್ತಾರವಾದ ನೆಲೆಗೆ ಕೊಂಡೊಯ್ದ ಕೀರ್ತಿ ಕೃಷ್ಣಮೂರ್ತಿ ಹನೂರು, ಕರಿಶೆಟ್ಟಿರುದ್ರಪ್ಪ ಅವರಿಗೆ ಸಲ್ಲುತ್ತದೆ. ವಿಶ್ವವಿದ್ಯಾಲಯಗಳು ಪಿಎಚ್.ಡಿ ಅಧ್ಯಯನಗಳಿಗೆ ಜಾನಪದ ವಿಷಯಗಳನ್ನು ಮಾನ್ಯ ಮಾಡುತ್ತಿದ್ದ ಪರಿಣಾಮ ಈ ಇಬ್ಬರು ಅಧ್ಯಯನಕಾರರು ಮ್ಯಾಸಬೇಡರನ್ನು ಕುರಿತು ಪಿಎಚ್.ಡಿ ಪದವಿಗಾಗಿ ಸಂಶೋಧನೆ ಕೈಗೊಳ್ಳುತ್ತಾರೆ. ಇಲ್ಲಿಂದ ಮ್ಯಾಸಬೇಡರ ಸಂಸ್ಕೃತಿ ಸಂಗತಿಗಳು ಅಧ್ಯಯನಕಾರರ ಪ್ರಪಂಚಕ್ಕೆ ಪ್ರವೇಶ ಪಡೆಯುತ್ತವೆ. ಇಲ್ಲಿಂದ ಮುಂದಕ್ಕೆ ಬುಡಕಟ್ಟು ಅಧ್ಯಯನಗಳಲ್ಲಿ ಮ್ಯಾಸಬೇಡರಿಗೆ ಒಂದು ಶಾಶ್ವತ ಸ್ಥಾನ ದೊರಕಿದಂತಾಗುತ್ತದೆ.
ಹೀಗೆ ಆರಂಭಗೊಂಡು ಮುಂದುವರಿದ ಮ್ಯಾಸಬೇಡರ ಅಧ್ಯಯನದಲ್ಲಿ ಬಹಳಷ್ಟು ಕಾಲ ಸಮುದಾಯದ ಸಂಸ್ಕೃತಿಯಿಂದ ಮತ್ತು ಪ್ರದೇಶವಲಯದಿಂದಲೂ ದೂರವಿದ್ದ ಅಧ್ಯಯನಕಾರರೇ ಹೆಚ್ಚಾಗಿದ್ದರು. 20ನೇ ಶತಮಾನದ ಕೊನೆಯ ದಶಕಗಳಲ್ಲಿ ಸಮುದಾಯದ ಸಮೀಪ ಸಂಪರ್ಕವಿರುವ, ಸಮುದಾಯದ ಒಳಗಿನವರೇ ಆಗಿರುವ ವಿದ್ಯಾವಂತ ಯುವಕರು ಮ್ಯಾಸಬೇಡರ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದು ಒಂದು ಕ್ರಾಂತಿಕಾರಕ ಬೆಳವಣಿಗೆ ಎನ್ನಬಹುದು. ಅಂತಹ ಅಧ್ಯಯನಕಾರರಲ್ಲಿ ಮೀರಾಸಾಬಿಹಳ್ಳಿ ಶಿವಣ್ಣ, ವಿರೂಪಾಕ್ಷಿ ಪೂಜಾರಹಳ್ಳಿ, ಎಸ್.ಕೆ.ಸಣ್ಣೋಬಯ್ಯ, ಸಿ.ಬಿ.ಅನ್ನಪೂರ್ಣ, ಬಿ.ಪಾಪಣ್ಣ, ಎಸ್.ಎಂ.ಮುತ್ತಯ್ಯ, ಟಿ.ನರಸಿಂಹರಾಜು, ಎಚ್.ಆರ್.ತಿಪ್ಪೇಸ್ವಾಮಿ ಮೊದಲಾದವರು ಮುಖ್ಯರಾಗುತ್ತಾರೆ. ಇವರೆಲ್ಲ ಸಮುದಾಯದ ಒಳಗಿನ ಈವರೆಗೂ ಯಾರಿಗೂ ದಕ್ಕದ ಅನೇಕ ಮಾಹಿತಿಗಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಿದರು. ಇದರ ಮುಂದುವರೆದ ಭಾಗವಾಗಿ ಎರಡನೇ ತಲೆಮಾರಿನ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಅಧ್ಯಯನಗಳನ್ನು ನಡೆಸಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಬಂದ ನೂರಾರು ಅಧ್ಯಯನಗಳು ಮ್ಯಾಸಬೇಡರ ಬಗ್ಗೆ ಇನ್ನೂ ಅಧ್ಯಯನ ಮಾಡಲು ಏನೂ ಉಳಿದಿಲ್ಲ ಎಂಬ ಭಾವನೆ ಮೂಡಿಸಿವೆ. ಆದರೆ ಸರಿಯಾಗಿ ಯೋಚಿಸಿ ನೋಡಿದರೆ ಮ್ಯಾಸಬೇಡರ ಬಗ್ಗೆ ಅಧ್ಯಯನಗಳು ಈಗಷ್ಟೇ ಆರಂಭವಾಗಿವೆ. ಈ ಮಾತು ವಿಚಿತ್ರ ಎನಿಸಿದರೂ ಸತ್ಯ. ಏಕೆಂದರೆ ಈವರೆಗೂ ಬಂದ ಅಧ್ಯಯನಗಳು ಕೇವಲ ಮಾಹಿತಿ ಸಂಗ್ರಹಣೆಗಳು ಮಾತ್ರ. ಕ್ಷೇತ್ರದಲ್ಲಿ ವಕ್ತೃಗಳು ಹೇಳಿದ ಮಾಹಿತಿಯನ್ನು ಬರೆಹ ರೂಪದಲ್ಲಿ ದಾಖಲಿಸಿದ್ದು ಮಾತ್ರ ಇಲ್ಲಿಯವರೆಗಿನ ಸಾಧನೆ. ಇದರಿಂದ ಸಮುದಾಯದ ಪರಿಚಯ ಸಾಧ್ಯವಾಯಿತಾದರೂ ಆ ವಿವರಗಳನ್ನು ಆದರಿಸಿ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಇನ್ನೂ ನಡೆಯಬೇಕಿದೆ. ಅಷ್ಟೇ ಅಲ್ಲದೆ ಈವರೆಗೂ ದಾಖಲಾದ ಮಾಹಿತಿಗಳಲ್ಲಿ ಅನೇಕ ತಪ್ಪು ತಿಳುವಳಿಕೆ, ತಪ್ಪು ಮಾಹಿತಿಗಳು ನುಸುಳಿಕೊಂಡಿವೆ. ಈ ಅರ್ಥದಲ್ಲಿ ಮ್ಯಾಸಬೇಡರ ನಿಜವಾದ ಅಧ್ಯಯನ ಇನ್ನೂ ಆರಂಭವಾಗಬೇಕಿದೆ.
ಈ ಕ್ಷೇತ್ರದ ಬಗ್ಗೆ ದಾಖಲಾಗಿರುವ ಮಾಹಿತಿಗಳನ್ನು ಆಳವಾದ ಕ್ಷೇತ್ರಕಾರ್ಯದ ಮೂಲಕ ಸರಿಪಡಿಸಬೇಕಿದೆ. ಹಾಗೆಯೇ ಸಿಕ್ಕಿರುವ ಮಾಹಿತಿಗಳ ಮೂಲಕ ಸಮುದಾಯದ ಚಾರಿತ್ರಿಕ ಪಯಣ, ಸಮುದಾಯದ ಲೋಕದೃಷ್ಟಿ, ಪಾರಂಪರಿಕ ಜ್ಞಾನ ಪದ್ಧತಿಗಳನ್ನು ಶೋಧಿಸಬೇಕಿದೆ. ಆದರೆ ದುರಂತವೆಂದರೆ ನಮ್ಮ ಬಹಳಷ್ಟು ಅಧ್ಯಯನಗಳು ಇನ್ನೂ ಸಂಗ್ರಹ ಸಂಪಾದನೆಯ ಹಂತದಲ್ಲೇ ನಿಂತುಬಿಟ್ಟಿವೆ. ಇಲ್ಲಿ ಆಗುತ್ತಿರುವ ಇನ್ನೊಂದು ದೊಡ್ಡ ಲೋಪವೆಂದರೆ ವಿಷಯಗಳ ಪುನರಾವರ್ತನೆ. ಆರಂಭದಲ್ಲಿ ಅಧ್ಯಯನಕಾರರು ದಾಖಲಿಸಿದ ಮಾಹಿತಿಗಳನ್ನೇ ಇಂದಿನ ಅಧ್ಯಯನಕಾರರು ಯಾವು ಕ್ಷೇತ್ರಕಾರ್ಯವಿಲ್ಲದೆ ಯತಾವತ್ತಾಗಿ ಬಳಸಿಕೊಂಡು ಅದನ್ನೇ ಪ್ರಕಟಿಸುತ್ತಿದ್ದಾರೆ. ಹಿಂದಿನವರು ದಾಖಲಿಸಿದ ಅದೆಷ್ಟೋ ವಿಷಯಗಳು ಇಂದು ಸಾಕಷ್ಟು ರೂಪಾಂತರಗೊಂಡಿವೆ. ಇದರ ಪರಿವೇ ಇಲ್ಲದೆ ಹಳೆಯ ಮಾಹಿತಿಗಳನ್ನೇ ಹೊಸದೆಂಂತೆ ಭ್ರಮಿಸಿ ಹೇಳುತ್ತಿರುವ ಪರಿಪಾಟ ಇಂದಿನ ಅಧ್ಯಯನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಮ್ಯಾಸಬೇಡರ ಕುರಿತ ಅಧ್ಯಯನಗಳು ಮಹತ್ವದ್ದಾದ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ ಎನ್ನಬಹುದು. ಇನ್ನೂ ಮುಂದಿನ ದಿನಗಳಲ್ಲಾದರೂ ಅಧ್ಯಯನಕಾರರು ಹಿಂದಿನ ಅಧ್ಯಯನಗಳ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುತ್ತಾ ಹೊಸ ಅಧ್ಯಯನ ವಿಧಾನಗಳೊಂದಿಗೆ ಮ್ಯಾಸಬೇಡರ ಸಮುದಾಯದ ಸಂಸ್ಕೃತಿ ಪರಂಪರೆಯನ್ನು ಎದುರುಗೊಳ್ಳಬೇಕಿದೆ. ಇದಕ್ಕೆ ಬೇಕಾದ ಆಳವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯ ನಡೆಸಿ ಪೂರಕ ಜ್ಞಾನ ಸಂಶೋಧಕರು ಪಡೆಯುವುದು ಅನಿವಾರ್ಯವಾಗಿದೆ. ಇಂಥ ಪ್ರಯತ್ನಗಳನ್ನು ಅಲಲ್ಲಿ ಕೆಲವು ಯುವಕರು ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇಂಥ ಪ್ರಯತ್ನ ಮಾಡುತ್ತಿರುವ ಯುವಕರಲ್ಲಿ ಡಿ.ಎಂ.ಪ್ರಹ್ಲಾದ್ ಒಬ್ಬರು. ತಮ್ಮ ಮಿತಿಯೊಳಗೆ ಇವರು ಹೊಸ ದಾರಿ ತುಳಿಯುವ ಸೂಚನೆಯನ್ನು ನೀಡುತ್ತಿದ್ದಾರೆ. ಹಾಗೆಂದು ಈ ಕೃತಿ ಅಂಥ ಸಂಪೂರ್ಣ ಹೊಸ ಬಗೆಯ ಅಧ್ಯಯನ ಎಂದು ಹೇಳಲಾಗದು. ಆದರೆ ಆ ರೀತಿಯ ಬೆಳವಣಿಗೆಯ ಸೂಚನೆಗಳನ್ನು ನೀಡುತ್ತಿದೆ. ಈ ಕೃತಿಯ ನಾಲ್ಕು ವಿಭಾಗಗಳಲ್ಲಿ ಹರಡಿಕೊಂಡಿರುವ ವಿಚಾರಗಳಲ್ಲಿ ಈವರೆಗೂ ಹೆಚ್ಚು ಗಮನಕ್ಕೆ ಬರದ ಹಲವಾರು ಸಂಗತಿಗಳು ದಾಖಲಾಗಿವೆ. ಮುಖ್ಯವಾಗಿ ಸಮುದಾಯದಲ್ಲಿ ತಮ್ಮ ಅಸ್ತಿತ್ವದ ಪ್ರತಿಪಾದನೆಯ ಭಾಗವಾಗಿ ತಮ್ಮ ಕುಲಚರಿತೆಗಳನ್ನು ತಾವೇ ಬರೆಸಿಟ್ಟುಕೊಳ್ಳುವ ಪರಿಪಾಟ ಇತ್ತೀಚೆಗೆ ಸಾಮಾನ್ಯವಾಗಿದೆ. ಇದರ ಫಲವಾಗಿ ರಚನೆಗೊಂಡ ಕುಲಚರಿತೆಯ ಒಂದು ಮಾದರಿಯನ್ನು ಇಲ್ಲಿ ನೀಡಿರುವುದು; ದೇವರ ಪದಗಳೆಂದು ಹಾಡುವ ಪದ್ಯಗಳಿಗೆ ತಮ್ಮ ಮಿತಿಯೊಳಗೆ ಅರ್ಥಕೊಡುವ ಪ್ರಯತ್ನ; ಸಮುದಾಯದ ಅನೇಕ ಸಂಪ್ರದಾಯ ಆಚರಣೆಗಳನ್ನು ಸಚಿತ್ರವಾಗಿ ಪರಿಚಯಿಸಿರುವುದು ಪ್ರಹ್ಲಾದ್ ಅವರು ಇನ್ನಷ್ಟು ಪ್ರಯತ್ನಿಸಿದರೆ ಹೊಸ ಅಧ್ಯಯನದ ದಾರಿಗೆ ಹೋಗಬಲ್ಲರು ಎಂಬುದನ್ನು ತೋರಿಸುತ್ತದೆ. ಈ ಕೃತಿಯನ್ನು ಇಡಿಯಾಗಿ ನೋಡಿದರೆ ಬಹಳಷ್ಟು ಸಂಗತಿಗಳು ಹಳೆಯ ಮಾದರಿಯ ಅಧ್ಯಯನ ಎಂಬ ಭಾವನೆ ಮೂಡಿಸಿದರೂ ಅಲಲ್ಲಿ ಮಿಂಚು ಹುಳಗಳಂತೆ ಕಾಣುವ ಸಣ್ಣ ಹೊಸ ಪ್ರಯತ್ನಗಳು ಪ್ರಹ್ಲಾದ್ ಅವರ ಬಗ್ಗೆ ನಿರೀಕ್ಷೆಗಳನ್ನು ಹುಟ್ಟಿಸುತ್ತವೆ. ಆ ದಿಕ್ಕಿನಲ್ಲಿ ಇನ್ನಷ್ಟು ಶ್ರಮವಹಿಸಿ ಹುಡುಕುವ, ವಿಶ್ಲೇಷಿಸುವ ಮತ್ತು ಬರೆಯುವ ಕೆಲಸ ಅವರಿಂದಾಗಲಿ ಎಂದು ಆಶಿಸುತ್ತೇನೆ.
“ಇಡೀ ಬಾಳೆ ಅದೃಷ್ಟ ರೇಖೆಯ ಕೈಗೊಂಬೆ ಎಂದು ಸ್ಪಷ್ಟಪಡಿಸುವುದು ಲೇಖಕರ ಇರಾದೆ ಇದ್ದಂತಿದೆ. ಇದು ಕೊನೆಯ ಕಥೆಯಲ್ಲಿಯ...
“ಈ ಕಾದಂಬರಿಯನ್ನು ಬರೆಯಲು ಕನಿಷ್ಠವೆಂದರೂ ಒಂದೂವರೆ ವರ್ಷ ತೆಗೆದುಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ಅಧ್ಯಯನ ಮಾ...
“ಕೊಡಗಿನ ಪ್ರಕೃತಿ ಹಾಗೂ ಸಂಸ್ಕೃತಿಗಳನ್ನು ಬಣ್ಣಿಸಿದ ಈ ಕಥೆ ಎಲ್ಲರ ಮನದಲ್ಲಿ ಕೊಡಗಿನ ಬಗೆಗಿನ ಅಭಿಮಾನವನ್ನು ಇಮ್...
©2025 Book Brahma Private Limited.