“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

Date: 01-12-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿಯ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ಜೋಸೆಫ್ ಬಾಯ್ಸ್ ಅವರ ಕಲಾ ಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಜೋಸೆಫ್ ಬಾಯ್ಸ್ (Joseph Beuys)
ಜನನ: 12 ಮೇ, 1921
ನಿಧನ: 23 ಜನವರಿ, 1986
ಶಿಕ್ಷಣ: ಆರ್ಟ್ಸ್ ಅಕಾಡೆಮಿ ಆಫ್ ಡುಸೆಲ್ಡಾರ್ಫ್
ವಾಸ: ಕ್ರೀಫೆಲ್ಡ್ ಮತ್ತು ಡುಸೆಲ್ಡಾರ್ಫ್, ಜರ್ಮನಿ
ಕವಲು: ಕಾನ್ಸೆಪ್ಚುವಲ್ ಆರ್ಟ್, ಫ್ಲಕ್ಸಸ್ ಕಲಾಚಳುವಳಿಯ ಪ್ರಮುಖ ಭಾಗ
ವ್ಯವಸಾಯ: ಪೇಂಟಿಂಗ್, ಇನ್ಸ್ಟಾಲೇಷನ್, ಪರ್ಫಾರ್ಮೆನ್ಸ್, ಗ್ರಾಫಿಕ್ಸ್, ಕಲಾ ಸಿದ್ಧಾಂತಿ

ಜೋಸೆಫ್ ಬಾಯ್ಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆ ಹುಟ್ಟುವುದು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲೇ ಆದರೂ ಅದು ಸಮಾಜದ ಕಲಾತ್ಮಕ, ರಾಜಕೀಯ, ಸಾಮಾಜಿಕ ಸಂದರ್ಭಕ್ಕೆ ಪ್ರತಿಕ್ರಿಯೆಯೂ ಆಗಿರುತ್ತದೆ ಎಂದು ಬಲವಾಗಿ ನಂಬಿ, ಅದರಂತೆ ಬದುಕು ಕಟ್ಟಿಕೊಂಡ ಮಹತ್ವದ ಜರ್ಮನ್ ಕಲಾವಿದ ಜೋಸೆಫ್ ಬಾಯ್ಸ್ ತನ್ನ ಕಲಾಕೃತಿಗಳ ಮೂಲಕ ಸಾಮಾಜಿಕ ಕಮೆಂಟರಿ ಮತ್ತು ರಾಜಕೀಯ ಚಳುವಳಿಗಳಲ್ಲಿ ಕಲೆ ಪಾತ್ರವಹಿಸುವುದಕ್ಕೆ ಹಾದಿ ತೆರೆದರು ಮಾತ್ರವಲ್ಲದೆ ಕಲೆ ಮತ್ತು ಬದುಕಿನ; ವಾಸ್ತವ ಮತ್ತು ಕಥೆಗಳ ನಡುವಿನ ಅಡ್ಡಗೆರೆಯನ್ನು ಮಸುಕುಗೊಳಿಸಿದರು.

ಮಧ್ಯಮ ವರ್ಗದ ವ್ಯಾಪಾರಿಯೊಬ್ಬರ ಏಕೈಕ ಪುತ್ರ ಜೋಸೆಫ್ ಬಾಯ್ಸ್ ಹುಟ್ಟಿದ್ದು ಕ್ರೀಫೆಲ್ಡ್ ನಗರದಲ್ಲಿ. ಅವರ ಬಾಲ್ಯದಲ್ಲೇ ಕುಟುಂಬ ಕ್ಲೀವ್ ನಗರಕ್ಕೆ ಸ್ಥಳಾಂತರಗೊಂಡಿತು. ವೈದ್ಯಕೀಯದಲ್ಲಿ ಆಸಕ್ತಿ ಇದ್ದರೂ, ಎಳೆಯ ಬಾಯ್ಸ್, ಕಡ್ಡಾಯ ಸೇನೆ ಸೇರ್ಪಡೆಯಿಂದ ತಪ್ಪಿಸಿಕೊಳ್ಳಲು ತಾವಾಗಿ ಜರ್ಮನ್ ವಾಯುಪಡೆಗೆ ನೋಂದಾಯಿಸಿಕೊಂಡರು. 1944ರಲ್ಲಿ ಯುದ್ಧವಿಮಾನ ಹಾರಿಸುತ್ತಿದ್ದಾಗ ಅದು ಉಕ್ರೇನ್‌ನಲ್ಲಿ ಶತ್ರುದಾಳಿಗೆ ಪತನಗೊಂಡು ಗಾಯಾಳುವಾದ ಬಾಯ್ಸ್ ಅವರನ್ನು ಅಲ್ಲಿನ ಹಿಮಭರಿತ ನೆಲದ ಬುಡಕಟ್ಟು ಜನ ರಕ್ಷಿಸಿದರು. ಅಸಾಧ್ಯ ಚಳಿಯಿಂದ ಅವರನ್ನು ರಕ್ಷಿಸಲು ಪ್ರಾಣಿಗಳ ಕೊಬ್ಬನ್ನು ಅವರ ಮೈಗೆ ದಪ್ಪಗೆ ಸವರಿ ಅವರನ್ನು ಸುತ್ತಿಡಲಾಯಿತಂತೆ. ಈ ಘಟನೆ ಬಾಯ್ಸ್ ಅವರ ಮುಂದಿನ ಕಲಾಬದುಕಿನಲ್ಲಿ ಮಹತ್ವದ ಪ್ರಭಾವ ಬೀರಿದ್ದು, ಅವರು ಪ್ರಾಣಿಗಳ ಕೊಬ್ಬನ್ನು ಬಳಸಿಕೊಂಡು ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ.

1946ರಲ್ಲಿ ಸೇನೆ ತ್ಯಜಿಸಿದ ಬಳಿಕ ಡುಸೆಲ್ಡಾರ್ಫ್ ನ ಕಲಾ ಅಕಾಡೆಮಿಯಲ್ಲಿ ಕಲಾ ಪದವಿ ಪಡೆದ ಬಾಯ್ಸ್ ಅವರು ಆರಂಭದ ಒಂದು ದಶಕ ವೈಯಕ್ತಿಕ ಬದುಕಿನಲ್ಲಿ ಬಹಳ ಕಷ್ಟ ಪಡಬೇಕಾಯಿತು. ಆದರೆ, ಅವರು ಆ ಸಮಯವನ್ನು ಕಲೆಯ ಹೊಸ ಭಾಷೆಯನ್ನು ಕಲಿಯುವುದಕ್ಕಾಗಿ ಸದುಪಯೋಗ ಮಾಡಿಕೊಂಡರು. ಬಳಿಕ 1961ರಲ್ಲಿ ಅವರು ತಾನು ಕಲಿತ ಡುಸೆಲ್ಡಾರ್ಫ್ ನ ಕಲಾ ಅಕಾಡೆಮಿಯಲ್ಲೇ ಉಪನ್ಯಾಸಕರಾಗಿ ಸೇರಿಕೊಂಡರು.

ಅವರ ಮೊದಲ ಸೊಲೊ ಪರ್ಫಾರ್ಮಿಂಗ್ ಆರ್ಟ್ ಪ್ರದರ್ಶನ 1965ರಲ್ಲಿ ಡ್ರೆಸ್ಡೆನ್ ನಲ್ಲಿ ನಡೆದ How to Explain Pictures to a Dead Hare ಈವತ್ತಿಗೂ ಒಂದು ಗಮನಾರ್ಹ ಕಲಾಕೃತಿ ಅನ್ನಿಸಿದೆ. ಫೆಲ್ಟ್ ಕಂಬಳಿ ಹೊದ್ದು, ಕಾಲಿಗೆ ಕಬ್ಬಿಣ ತೊಡಿಸಿಕೊಂಡು ಸತ್ತ ಮೊಲವೊಂದನ್ನು ಕೈಯಲ್ಲಿ ಹಿಡಿದು, ಅದರೊಂದಿಗೆ ಚಿತ್ರವಿಚಿತ್ರ ಭಂಗಿಗಳಲ್ಲಿ ವರ್ತಿಸುವ ಪರ್ಫಾರ್ಮೆನ್ಸ್ ಅದು. ಬಾಯ್ಸ್ ತನ್ನ ಕಲಾಕೃತಿಗಳಲ್ಲಿ ದೈನಂದಿನ ಬಳಕೆಯ ಕೊಬ್ಬು, ಫೆಲ್ಟ್, ಇಂತಹ ಕಲೆಯಲ್ಲದ ದಿನಬಳಕೆಯ ವಸ್ತುಗಳನ್ನೇ ಬಳಸಿ ಶಿಲ್ಪಗಳನ್ನು ರಚಿಸಿದರು. The Pack (1969), and Felt Suit (1970) ಅಂತಹ ಕೆಲವು ಕಲಾಕೃತಿಗಳು. 1972ರ ಹೊತ್ತಿಗೆ ಎಲ್ಲರೂ ಕಲಾವಿದರೇ ಎಂಬ ಅವರ ಸಿದ್ಧಾಂತದಿಂದಾಗಿಯೇ ಅವರು ಕಲಾಶಿಕ್ಷಕ ಹುದ್ದೆಯಿಂದ ನಿರ್ಗಮಿಸಬೇಕಾಯಿತು. ಯಾಕೆಂದರೆ, ಅವರು ತನ್ನ ಕಲಾಶಾಲೆಯ ನಿಯಮಗಳನ್ನು ಬದಲಿಸಿ ಎಲ್ಲ ಆಸಕ್ತರಿಗೂ ಕಲಿಕೆಗಾಗಿ ಶಾಲೆಯನ್ನು ತೆರೆದಿಟ್ಟಿದ್ದರು.

70ರ ದಶಕದ ಹೊತ್ತಿಗೆ ತನ್ನದೇ ಕಾನ್ಸೆಪ್ಚುವಲ್ ಕಲಾಭಾಷೆಯೊಂದನ್ನು ಕಂಡುಕೊಂಡ ಬಾಯ್ಸ್ 1974ರಲ್ಲಿ ಅಮೆರಿಕದ ರೆನೆಬ್ಲಾಕ್ ಗ್ಯಾಲರಿಯೊಂದರಲ್ಲಿ ಕಂಬಳಿ ಹೊದ್ದು coyote ಎಂಬ ತೋಳದ ಜಾತಿಯ ಕಾಡುಪ್ರಾಣಿಯೊಂದಿಗೆ ಪಂಜರದಲ್ಲಿ ಮೂರು ದಿನ ಕಳೆಯುವ ಪರ್ಫಾರ್ಮೆನ್ಸ್ ನೀಡಿದರು. I Like America and America Likes Me ಹೆಸರಿನ ಈ ಪ್ರದರ್ಶನ ಜಗತ್ತಿನ ಗಮನ ಸೆಳೆದಿತ್ತು.

ಅವರ ಕೊನೆಯ ಮಹತ್ವದ ಕಲಾಕೃತಿ Ombelico di Venere – Cotyledon Umbilicus Veneris ಎಂಬ ಡ್ರಾಯಿಂಗ್ ಸರಣಿ. ಇಲ್ಲವರು ತಮ್ಮ ಆರಂಭಿಕ ವೈದ್ಯಕೀಯ- ಸಸ್ಯಶಾಸ್ತ್ರದ ಆಸಕ್ತಿಗಳನ್ನಾಧರಿಸಿ ಚಿತ್ರಗಳನ್ನು ರಚಿಸಿದ್ದಾರೆ.

ಶಿಕ್ಷಕ ವೃತ್ತಿ ಕಳೆದುಕೊಂಡ ಬಳಿಕ ರಾಜಕೀಯ ಸಂಘಟನೆಗಳಲ್ಲಿ ತೊಡಗಿಕೊಂಡ ಬಾಯ್ಸ್ ತನ್ನ ಚಟುವಟಿಕೆಗಳನ್ನು “ಸಾಮಾಜಿಕ ಶಿಲ್ಪ” ಎಂದು ಕರೆದುಕೊಂಡರು. ಅವರ 7000 Oaks (1982-87) ಇನ್ಸ್ಟಾಲೇಷನ್ ಈ ಸಿದ್ಧಾಂತದ ಮೂರ್ತರೂಪ. ದೀರ್ಘಕಾಲ ಅನಾರೋಗ್ಯದಿಂದ ಬಳಲಿದ ಅವರು 1986ರಲ್ಲಿ ಹೃದಯ ವೈಫಲ್ಯಕ್ಕೆ ತುತ್ತಾದರು.

ಕಲೆಯು ತನ್ನ ಸುತ್ತಲಿನ ಸಾಮಾಜಿಕ, ರಾಜಕೀಯ ಮತ್ತು ಇತರ ಪ್ರಸ್ತುತ ಸಂಗತಿಗಳಿಗೆ ಪ್ರತಿಸ್ಪಂದಿಸಬೇಕೆಂಬ ಅವರ ಸಿದ್ಧಾಂತ 1990ರ ಬಳಿಕ ಹೆಚ್ಚು ಚಾಲ್ತಿಗೆ ಬರತೊಡಗಿತು. ಅವರು ಪ್ರಮುಖ ಭಾಗವಾಗಿದ್ದ ಫ್ಲಕ್ಸ ಕಲಾಚಳುವಳಿ ಕಲೆಯ ಮೌಲ್ಯವನ್ನು ತೀರ್ಮಾನಿಸಬೇಖಾದುದು ಮ್ಯೂಸಿಯಂಗಳಲ್ಲ ಮತ್ತು ಕಲೆಯನ್ನು ಅನುಭವಿಸಲು ವಿಶೇಷ ಪರಿಣತಿ ಅಗತ್ಯ ಇಲ್ಲ. ಕಲೆ ಜನಸಮುದಾಯಕ್ಕೆ ಎಟುಕುವಂತಿರಬೇಕು ಎಂಬ ನಂಬಿಕೆ ಹೊಂದಿದ್ದರು.

ಜೋಸೆಫ್ ಬಾಯ್ಸ್ ಬಗ್ಗೆ ಒಂದು ಡಾಕ್ಯುಮೆಂಟರಿ:

ಜೋಸೆಫ್ ಬಾಯ್ಸ್ ಬಗ್ಗೆ ಅಮೆರಿಕನ್ ಕಲಾವಿದ ನೇಯ್ಲಾಂಡ್ ಬ್ಲೇಕ್ ಅವರ ಉಪನ್ಯಾಸ:

ಚಿತ್ರ ಶೀರ್ಷಿಕೆಗಳು

ಜೋಸೆಫ್ ಬಾಯ್ಸ್ ಅವರ 7000 oak trees (1982)

 

ಜೋಸೆಫ್ ಬಾಯ್ಸ್ ಅವರ End of the 20th century (1985)

ಜೋಸೆಫ್ ಬಾಯ್ಸ್ ಅವರ Explaining pictures to a dead hare (1965)

ಜೋಸೆಫ್ ಬಾಯ್ಸ್ ಅವರ fat chair (1963)

ಜೋಸೆಫ್ ಬಾಯ್ಸ್ ಅವರ Felt suit (1970)

ಜೋಸೆಫ್ ಬಾಯ್ಸ್ ಅವರ . Hearts of the Revolutionaries- Passage of the Planets of the Future (1955)

ಜೋಸೆಫ್ ಬಾಯ್ಸ್ ಅವರ I like America and America likes me (1974)

ಜೋಸೆಫ್ ಬಾಯ್ಸ್ ಅವರ Multiple Capri-batterie (1985)

ಜೋಸೆಫ್ ಬಾಯ್ಸ್ ಅವರ the pack (1969)

ಜೋಸೆಫ್ ಬಾಯ್ಸ್ ಅವರ Witches spitting fire (1959)

ಈ ಅಂಕಣದ ಹಿಂದಿನ ಬರಹಗಳು:

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...