ಎಚ್.ಎಸ್.ಮುಕ್ತಾಯಕ್ಕ ಅವರ ಹೊಸ ಸಂಕಲನ 'ನಿನಗಾಗಿ ಬರೆದ ಕವಿತೆಗಳು'. ಪ್ರೇಮ ಪದ್ಯಗಳ ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುವ, ಪ್ರತಿ ಪುಟದಲ್ಲಿಯೂ ಆವರಿಸಿರುವ ಪ್ರೇಮ ಪದ್ಯಗಳ ಸಂಕಲನದಲ್ಲಿ ಕವಿ ಬರೆದಿರುವ ಲೇಖಕರ ನುಡಿ ಹಾಗೂ ಆಯ್ದ ಕವನಗಳು ನಿಮ್ಮ ಓದಿಗಾಗಿ..
ಕಾವ್ಯಕ್ಕೆ ಮುನ್ನ....
"ಹಿಂತಿರುಗಿ ನೋಡಿದಾಗ ನೀನು ಕಂಡದ್ದೇನು 'ಮುಕ್ತಾ'
ಅಯ್ಯೋ ನೋವುಗಳೆಲ್ಲ ಕವಿತೆಗಳಾಗಿ ಅರಳಿದ್ದವಲ್ಲಾ"
ಈ ಕಾವ್ಯವನ್ನು ನೀವು ಓದುವ ಪೂರ್ವದಲ್ಲಿ ನನ್ನ ಕಾವ್ಯ ಯಾತ್ರೆಯ ಬಗ್ಗೆ ಬರೆಯಲು ಇಚ್ಛಿಸಿರುವೆ. ಈ ಕವಿತೆಯ ಜೊತೆಗಿನ ಅಷ್ಟೊಂದು ವರ್ಷಗಳ ಒಡನಾಟವನ್ನು ಕೆಲವೇ ಪುಟಗಳಲ್ಲಿ ಹಿಡಿದಿಡುವದಾಗುವದಿಲ್ಲ. ಒಂದು ಸಣ್ಣ ಪ್ರಯತ್ನವಿದು.....
"......ನನ್ನ ಕಾವ್ಯದ ನಂಬಿಕೆಗಳ ಬಗೆಗೆ ಬರೆದರೆ ಅದೇ ಒಂದು ದೊಡ್ಡ ಲೇಖನವಾಗುವುದು. ಸ್ವಲ್ಪದರಲ್ಲಿಯೇ ಹೇಳಿದ್ದೇನೆ.....
".....ಒಬ್ಬ ಕವಿ ಸ್ವತಂತ್ರನಿರುತ್ತಾನೆ ಅಥವಾ ಏನನ್ನಾದರೂ ಬರೆಯಲು ಅಥವಾ ಬಿಡಲು. ತನಗೆ ಖುಷಿ ಕಂಡಂತೆ ಹಾಡುತ್ತಾನೆ. ಒಬ್ಬ ಕವಿಯ ಹಾಡು ಹಕ್ಕಿಯ ಹಾಡುಗಿರಬೇಕು.
"....ಹೀಗೆ ಪ್ರತಿ ನಿಮಿಷ ನನ್ನೊಡನೆಯೇ ಕಾವ್ಯ ಸಾಗಿ ಬಂದಿತು ಅನೇಕಾನೇಕ ಪುಸ್ತಕ ಸ್ನೇಹಿತರು ಜತೆಗೆ ಬಂದರು ಇವೆರಡರ ಪಾತ್ರ ಬಹುದೊಡ್ಡದು.
"....ಹೀಗಾಗಿ ನನಗೆ ವಾಸ್ತವಕ್ಕಿಂತ ಫ್ಯಾಂಟಸಿ ಯ ಜಗತ್ತೇ ಇಷ್ಟ.ಈಗ ಈ ಕವನ ಸಂಕಲನ ನಿಮ್ಮ ಮುಂದಿದೆ.
ಇಷ್ಟಕ್ಕೆ ನಿಲ್ಲಿಸುತ್ತೇನೆ. ಆದ್ರೆ ಮುಂದಿನ ಸಾಹಿತ್ಯ ಯಾತ್ರೆ ಹೇಗೋ, ಏನೋ ನಾನರಿಯೆ!
- ಎಚ್.ಎಸ್. ಮುಕ್ತಾಯಕ್ಕ
****
ಕೃತಿಯ ಆಯ್ದ ಕವನಗಳು
1.
ನೀನು ದೂರವಿರುವಿ,
ಆದರೂ ದೂರವೇನಿಲ್ಲ,
ಮೈಲುಗಳಿಂದ ದೂರವಿರುವಿ,
ಮಾತು, ಕನಸು, ಕವಿತೆಗಳಿಂದ,
ಹೃದಯಕ್ಕೆ ಹತ್ತಿರವಿರುವಿ,
ಇದೆಂಥ ಅಪೂರ್ವ
ಬಂಧನ ನಮ್ಮದು !
ನಾವು ಜೊತೆಯೂ ಇಲ್ಲ
ಆದರೆ,
ಒಂಟಿಯಾಗಿಯೂ ಇಲ್ಲ !
2.
ಯಾವ ರಾತ್ರಿ ನಾವು,
ಹೃದಯದ ಮಾತಾಡುವೆವೊ,
ಕಂಗಳ ದಿಟ್ಟಿ ಒಂದಾಗಿ
ಇಡೀ ಸೌರಮಂಡಲ
ಮರೆಯಾಗುವುದೊ,
ಮೌನ ಹಾಡತೊಡಗುವುದೊ,
ಆ ರಾತ್ರಿ,
ಎಣೆಯಿರದಷ್ಟು ಸುಂದರ
ವಾಗಿರುವುದು;
ಏಸೋ ರಾತ್ರಿಗಳು ಹೀಗೆಯೆ
ಇದ್ದರೂ,
ಪ್ರೇಮನಿವೇದನೆಯ
ಈ,ಮೊದಲ ರಾತ್ರಿ
ಮತ್ತೆಂದೂ ಬಾರದು !
3.
ಒಂದು ಸಂಜೆ;
ಬಾಲ್ಕನಿಯಲ್ಲಿ ಕುಳಿತಿದ್ದೆವು,
ನಾನು ಮತ್ತು ನೀನು,
ಎಲ್ಲೆಡೆ ದಣಿದು ಮೈಚಾಚಿದ
ಬಿಸಿಲು.
ದೂರದಲಿ ಕಾಣುವ ಬೆಟ್ಟಗಳು
ಅಲ್ಲಲ್ಲೇ ಎಳೆಬಿಸಿಲು ಕಾಯಿಸುವ
ಗಿಡಮರ,
ನಾವು,
ಚಹ ಕುಡಿಯುತ್ತ,
ಎಲ್ಲೋ ದೂರದಲ್ಲಿ ದಿಟ್ಟಿ
ಹರಿಸಿದ್ದೆವು; ಸುಮ್ಮನೆ ಹಾಗೆ,
ನಾನು,
ನಿನ್ನತ್ತ ನೋಡುತ್ತ , ನಗುತ,
ಕೇಳಿದೆ;
"ನಿನ್ನ ಮೇಲೆ ಬರೆದ ಕವಿತೆ
ಓದಲೆ" ?
ಇದೊಂದು ಸುಖದ ಸಂಜೆ
ಯಾಗಿತ್ತು.
ದೂರದಲ್ಲಿ ಬೆಟ್ಟದ ಮೇಲೆ
ಇರುಳು, ಮೆಲ್ಲ ಮೆಲ್ಲನೆ ಇಳಿಯು
ವುದ ಕಂಡೆ:
ಈ ಸುಂದರ, ಸುಖದ ಸಂಜೆ;
ಅದೆಷ್ಟು ಕ್ಷಣಿಕ !
ಎಚ್.ಎಸ್. ಮುಕ್ತಾಯಕ್ಕ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...
“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
©2025 Book Brahma Private Limited.