ಪೋರ್ಚುಗೀಸರನ್ನು ಭಾರತದಿಂದಲೇ ಕಾಲು ಕೀಳುವ ಹಾಗೆ ಮಾಡಿದವಳು ರಾಣಿ ಅಬ್ಬಕ್ಕ


“ಉಳ್ಳಾಲದಂತಹ ಒಂದು ಸಣ್ಣ ಪ್ರಾಂತ್ಯದ ರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನಳಾಗಿ ಅವರನ್ನು ಕರಾವಳಿಯಿಂದ ಅಥವಾ ಭಾರತದಿಂದಲೇ ಕಾಲು ಕೀಳುವ ಹಾಗೆ ಮಾಡಿದವಳು ರಾಣಿ ಅಬ್ಬಕ್ಕ,” ಎನ್ನುತ್ತಾರೆ ಡಾ. ತುಕಾರಾಮ್ ಪೂಜಾರಿ ಅವರು ಕೆ. ವಿ. ಲಕ್ಷ್ಮಣ ಮೂರ್ತಿ ಅವರ “ರಾಣಿ ಅಬ್ಬಕ್ಕ ದೇವಿ ಜತೆ ಪಯಣ” ಕೃತಿ ಕುರಿತು ಬರೆದ ನಲ್ನುಡಿ.

ಅವನೊಬ್ಬ ಪ್ರವಾಸಿ, ದೂರದ ಊರಿಗೆ ಹೋಗಬೇಕು ಅಲ್ಲಿಯ ಸಾಧಕರನ್ನು ಅವರ ಸಾಧನೆಯನ್ನು ಕಾಣಬೇಕೆಂಬ ಕುತೂಹಲ. ಎಲ್ಲಿಗೆ ಹೋಗೋಣವೆಂದು ಯೋಚಿಸಿದರೆ, ಪರ್ಷಿಯಾದ ಷಾ ಅಬ್ಬಾಸ್ ಆ ಕಾಲಕ್ಕೆ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆದವನು. ಅವನನ್ನು ನೋಡಬೇಕೆಂಬ ಆಸೆ ಬಹುಕಾಲದಿಂದ ಮನಸ್ಸಿನಲ್ಲಿ ಇತ್ತು. ಈ ಬಾರಿ ಪ್ರವಾಸಿ ಅವನನ್ನು ನೋಡಲೇಬೇಕೆಂಬ ತೀರ್ಮಾನಕ್ಕೆ ಬರುತ್ತಾನೆ. ಇದು ಸರಿ ಸುಮಾರು ಇಂದಿಗೆ 400 ವರ್ಷಗಳ ಹಿಂದಿನ ಕಥೆ. ಆಗ ಈಗಿನಂತೆ ಪ್ರಯಾಣದ ಅನುಕೂಲತೆ ಇಲ್ಲದ ಕಾಲ. ಆದರೇನು ಮನುಷ್ಯನ ಛಲ, ಹಠದ ಎದುರು ಇವು ಯಾವುವೂ ಅಡ್ಡಿಯಾಗಲಾರವು. ಪರ್ಷಿಯಕ್ಕೆ ತಲುಪಿದ್ದಾನೆ, ಷಾ ಅಬ್ಬಾಸನ ಭೇಟಿಯೂ ಆಗಿದೆ. 'ನಿನ್ನನ್ನು ಕಾಣಬೇಕು, ಮಾತನಾಡಿಸಬೇಕು ಎಂಬ ನನ್ನ ಬಹುಕಾಲದ ಹಂಬಲ ಇಂದು ಈಡೇರಿತು' ಎಂದು ಪ್ರವಾಸಿ ಹೇಳುತ್ತಾನೆ. ಆಗ ಷಾ ಅಬ್ಬಾಸ್ 'ನೀನು ನೋಡಲೇಬೇಕಾದ ಇನ್ನೊಬ್ಬ ಹೆಸರಾಂತ ರಾಣಿ ಇದ್ದಾಳೆ. ಅವಳನ್ನು ನೀನು ನೋಡಲೇಬೇಕು. ಅವಳು ಭಾರತದ ಉಳ್ಳಾಲ ಎಂಬ ಪ್ರದೇಶದ ರಾಣಿ ಅಬ್ಬಕ್ಕ ಎಂದು ವಿವರಿಸುತ್ತಾನೆ. ರಾಣಿ ಅಬ್ಬಕ್ಕನ ಹೆಸರು ಕೇಳಿದೊಡನೆ ಎಲ್ಲೋ ಆ ಹೆಸರನ್ನು ಕೇಳಿದ್ದೇನಲ್ಲಾ...! ಎಂದು ಅನ್ನಿಸಿತು ಪ್ರವಾಸಿಗನಿಗೆ. ಅವಳನ್ನು ನೋಡಲೇಬೇಕೆಂಬ ಹಂಬಲದಿಂದ ಭಾರತಕ್ಕೆ ಬಂದು ಉಳ್ಳಾಲಕ್ಕೆ ಪ್ರಯಾಣ ಬೆಳೆಸುತ್ತಾನೆ. ಆ ಪ್ರವಾಸಿಯೇ ಇಟೆಲಿಯ ಜಿನೋವಾದ ಪಿಯೆತ್ತೊ ದೆಲ್ಲಾ ವಲ್ಲೆ.

ಯಾಕೆ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ ಎಂದರೆ ಯಾವುದೋ ಒಂದು ವಿಚಾರ ಗೋಷ್ಠಿಯ ಸಂದರ್ಭದಲ್ಲಿ ರಾಣಿ ಅಬ್ಬಕ್ಕನ ಸಾಹಸ ಗಾಥೆಯನ್ನು ಮಿತ್ರ ಲಕ್ಷ್ಮಣ ಮೂರ್ತಿಯವರು ಕೇಳುತ್ತಾರೆ. ಈ ಸಾಹಸಿಯ ಕುರಿತಾಗಿ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿ ಆಗ ಅವರ ಮನಸ್ಸಿನಲ್ಲಿ ಮೂಡುತ್ತದೆ. ಈ ರೀತಿಯ ಸಾಧನೆ ಮಾಡಿದ ರಾಣಿಯ ಚರಿತ್ರೆ ಯುವಪೀಳಿಗೆಗೆ ತಲುಪಬೇಕು ಎಂದು ಮನಸ್ಸಿನಲ್ಲೇ ನಿರ್ಧರಿಸುತ್ತಾರೆ. ಇದು ರಾಣಿ ಅಬ್ಬಕ್ಕನ ಕುರಿತ ಹೆಚ್ಚಿನ ಸಂಶೋಧನೆಗೆ ಅವರನ್ನು ಪ್ರೇರೇಪಿಸುತ್ತದೆ. 2019ರ ಆಗಸ್ಟ್ ತಿಂಗಳ ಪ್ರಥಮ ವಾರದಲ್ಲಿ ತನ್ನ ಹುಟ್ಟೂರಾದ ಬೆಂಗಳೂರಿನಿಂದ ಹೊರಟುಬಿಡುತ್ತಾರೆ ಅಬ್ಬಕ್ಕನ ನಾಡಿಗೆ. ಅಬ್ಬಕ್ಕ ಮೆಟ್ಟಿದ ನೆಲವನ್ನು ಮುಟ್ಟಿ ನಮಸ್ಕರಿಸಿ ತನ್ನ ಕ್ಷೇತ್ರ ಕಾರ್ಯಕ್ಕೆ ತೊಡಗುತ್ತಾರೆ. ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕ ಮಹನೀಯರನ್ನು ಭೇಟಿಯಾಗುತ್ತಾರೆ. ಸಂದರ್ಶನ ನಡೆಸುತ್ತಾರೆ, ಮಾಹಿತಿ ಕಲೆ ಹಾಕುತ್ತಾರೆ. ಈ ಪ್ರವಾಸದ ಸಂದರ್ಭದಲ್ಲಿ ಆದ ತಮ್ಮ ಅನುಭವವನ್ನು ಈಗ ಒಂದು ಪ್ರವಾಸಿ ಕಥನ ರೂಪದಲ್ಲಿ ಪ್ರಕಟಿಸುವ ಸಿದ್ಧತೆ ನಡೆಸಿದ್ದಾರೆ. ಇದು ನಿಜವಾದ ಸ್ತುತ್ಯಾರ್ಹದ ಕೆಲಸ.

ಅರಣ್ಯ ಇಲಾಖಾ ಅಧಿಕಾರಿಯಾಗಿದ್ದ ಮೂರ್ತಿಯವರು ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ಸೇವೆಯನ್ನು ಉತ್ತರ ಭಾರತದಲ್ಲಿಯೇ ಸಲ್ಲಿಸಿದವರು. ಹಾಗಾಗಿ ಅವರಿಗೆ ಪ್ರವಾಸವೆಂದರೆ ಪ್ರಯಾಸವಿಲ್ಲದ ಹವ್ಯಾಸವಾಗಿದೆ. ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆದಿರುವ ರಾಣಿ ಅಬ್ಬಕ್ಕಳ ಬಗ್ಗೆ ಸಹಜವಾಗಿಯೇ ಅವರಿಗೆ ವಿಶೇಷವಾದ ಕುತೂಹಲ. ಕುತೂಹಲವೆನ್ನುವುದಕ್ಕಿಂತಲೂ ಗೌರವ ಹಾಗೂ ಅಭಿಮಾನ. ಇದು ಸಹಜವೇ ಸರಿ. ಉಳ್ಳಾಲದಂತಹ ಒಂದು ಸಣ್ಣ ಪ್ರಾಂತ್ಯದ ರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನಳಾಗಿ ಅವರನ್ನು ಕರಾವಳಿಯಿಂದ ಅಥವಾ ಭಾರತದಿಂದಲೇ ಕಾಲು ಕೀಳುವ ಹಾಗೆ ಮಾಡಿದವಳು ರಾಣಿ ಅಬ್ಬಕ್ಕ. ಅವಳ ಕುರಿತಂತೆ ಕೃತಿಯೊಂದನ್ನು ರಚಿಸಬೇಕೆಂಬ ಅವರ ಮನದಾಸೆ ನಿಜವಾಗಿಯೂ ಪ್ರಶಂಸನೀಯ. ಅವರ ಈ ಅಭಿಲಾಷೆ ಕೈಗೂಡಿದರೆ ಇತಿಹಾಸ ಪ್ರೇಮಿಗಳಿಗೆ ಅದೊಂದು ದೊಡ್ಡ ಕೊಡುಗೆಯಾಗುತ್ತದೆ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಪ್ರೇಮಿಯಾದ ಮಿತ್ರ ಲಕ್ಷ್ಮಣ ಮೂರ್ತಿಯವರ ಯೋಜನೆ ಮತ್ತು ಯೋಚನೆ ಫಲಪ್ರದವಾಗಲಿ ಎಂದು ಆ ಸೋಮೇಶ್ವರದ ಸೋಮನಾಥನಲ್ಲಿ ಈ ಮೂಲಕ ಪ್ರಾರ್ಥಿಸುತ್ತೇನೆ.

- ಡಾ. ತುಕಾರಾಮ್ ಪೂಜಾರಿ

MORE FEATURES

ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು

26-12-2024 ಬೆಂಗಳೂರು

“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...

ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ

26-12-2024 ಬೆಂಗಳೂರು

“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ...

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..

26-12-2024 ಬೆಂಗಳೂರು

“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...