ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ


“ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂಶಯವಾಗಿ ಕಳೆದ ಐದು ಆರು ವರ್ಷಗಳಲ್ಲಿ ನಾನೋದಿದ ಅತ್ಯುತ್ತಮ ಐದು ಕೃತಿಗಳಲ್ಲಿ ಇದೂ ಒಂದು,” ಎನ್ನುತ್ತಾರೆ ಪ್ರಶಾಂತ ಭಟ್‌ ಅವರು ದೀಪಾ ಜೋಶಿ ಅವರ “ತತ್ರಾಣಿ” ಕೃತಿ ಕುರಿತು ಬರೆದ ವಿಮರ್ಶೆ.

ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ. ದೀಪಾ ಜೋಶಿಯವರ ಈ ಕೃತಿ ಉತ್ತರ ಕರ್ನಾಟಕದ ರಾಣೆಬೆನ್ನೂರಿನ ಕಡೆಯದ್ದು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಶುರುವಾಗಿ ಸುಮಾರು ಐವತ್ತು ವರ್ಷಗಳ ಕಾಲ ಒಂದು ಬಡ ಮಾಧ್ವ ಬ್ರಾಹ್ಮಣ ಕುಟುಂಬದ ಜೀವನವನ್ನು ಚಿತ್ರಿಸುವ ಕೃತಿ. ದೈನಂದಿನ ಜೀವನ ನಿರ್ವಹಣೆಯೇ ಕೃತಿಯ ಮೂಲ ದ್ರವ್ಯ. ಒಂದು ಸಾವಿನೊಂದಿಗೆ ಆರಂಭವಾಗುವ ಕೃತಿ ಇಡಿಯ ಬದುಕನ್ನು ನಿರ್ಭಾವುಕವಾಗಿ ಗಟ್ಟಿತನದಿಂದ ತೆರೆದಿಡುತ್ತದೆ.

ಹುಚ್ಚಾಚಾರ್ರ ಸಾವು ಕುಟುಂಬವನ್ನು ಅಲ್ಲಾಡಿಸಿದ ಬಗೆ, ಅವರ ಮಗ ಭುಜಂಗಾಚಾರ್ರು ಸಂಸಾರದ ನೊಗ ಹೊತ್ತು ನಡೆಸಲು ಪಟ್ಟ ಪಾಡು ,ಕುಟುಂಬದ ಸ್ತ್ರೀಯರ ಚಿತ್ರಣ, ಹೆಂಗಸರ ಗಟ್ಟಿ ವ್ಯಕ್ತಿತ್ವ ದರ್ಶನ ,ಕಾದಂಬರಿಯಲ್ಲಿ ದೀರ್ಘವಾಗಿ ಬರುವ ಬದರಿಯಾತ್ರೆಯ ವಿವರಣೆ, ಆಗಿನ ಕಾಲದ ರೀತಿ ರಿವಾಜು, ಆಚಾರಗಳು ,ಸಂಭಾಷಣೆ ಓಹ್! ಏನೆಂದು ಹೇಳಲಿ?

ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂಶಯವಾಗಿ ಕಳೆದ ಐದು ಆರು ವರ್ಷಗಳಲ್ಲಿ ನಾನೋದಿದ ಅತ್ಯುತ್ತಮ ಐದು ಕೃತಿಗಳಲ್ಲಿ ಇದೂ ಒಂದು. ಇಡಿಯ ಕಾದಂಬರಿಯನ್ನು ಎರಡು ಬಾರಿ ಓದಿದೆ. ಒಂದೇ ಒಂದು ಸಾಲು ಅನಗತ್ಯ ಅನಿಸದ ಹಾಗೆ ಇದೆ. ಕತೆಯನ್ನು ,ಕತೆಯ ಪಾತ್ರಗಳ ಭಾವವನ್ನು ಇನ್ನಷ್ಟು ಹಿಗ್ಗಿಸಿ ಬರೆಯಬಹುದೇ ಹೊರತು ಇದನ್ನು ಹೃಸ್ವ ಮಾಡುವುದು ಸಾಧ್ಯವಿಲ್ಲ.

ಉತ್ತರ ಕರ್ನಾಟಕದ ಭಾಷೆಯನ್ನು ಲೇಖಕಿ ಬಳಸಿಕೊಂಡ ಬಗೆ, ಆ ಕಾಲದ ಮಡಿ ಮೈಲಿಗೆ ರೀತಿ ರಿವಾಜುಗಳ ವರ್ಣನೆ, ಎಲ್ಲದಕ್ಕಿಂತ‌ ಕಳಶಪ್ರಾಯವಾಗಿ ಬದರಿ ಯಾತ್ರೆಯ ಭಾಗ ಇದೆಯಲ್ಲ ಅದಂತೂ ಕಣ್ಣಿಗೆ ಕಟ್ಟಿದ ಹಾಗೆ ಬಂದಿದೆ.

ಆ ಕಾಲದ ಹೆಣ್ಮಕ್ಕಳ ಬವಣೆ , ಸಂಸಾರದಲ್ಲಿ ಬೆಂದು ಗಟ್ಟಿಯಾದ ಅನುಭವದ ಮಾತುಗಳು, ಗಂಡಸರ ಗಡಸುತನ ,ಕೋಪ‌, ಹುಡುಗರ ಹುಡುಗುಬುದ್ಧಿ ಯಾವ ವಿಷಯದಲ್ಲೂ ಒಂಚೂರು ಆಚೀಚೆ ಆಗದ ಹಾಗೆ ಕಟ್ಟಿಕೊಟ್ಟ ರೀತಿ.

ಇದು ಇವರ ಮೊದಲ ಕಾದಂಬರಿ ಎಂದರೆ ನಂಬುವುದು ಕಷ್ಟ. ಇದನ್ನು ನಾನು ಓದಿ ಪಟ್ಟ ಖುಷಿಯನ್ನು ನೀವೂ ಅನುಭವಿಸಬೇಕು ಅನ್ನುವುದಷ್ಟೆ ನನ್ನ ಬಯಕೆ. ಶ್ರೀನಿವಾಸ ವೈದ್ಯರ ' ಹಳ್ಳ ಬಂತು ಹಳ್ಳ' ಓದಿ ಯಾವ ಖುಷಿ ಅನುಭವಿಸಿದ್ದೆನೋ ಅದೇ ಸಂತೋಷ ಈ ಕೃತಿ ನೀಡಿತು‌ ಹೆಚ್ಚಿಗೆ ಹೇಳಲಿಕ್ಕಿಲ್ಲ. ಇದನ್ನು ದಯವಿಟ್ಟು ಓದಿರಿ.

MORE FEATURES

ಜಾತಿಯನ್ನು ಮೀರಿದ ಮಾನವೀಯತೆ

13-04-2025 ಬೆಂಗಳೂರು

"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂ...

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು

13-04-2025 ಬೆಂಗಳೂರು

"ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆ...

ಓದುತ್ತ ಹೋದಂತೆ ನಾನು ನೆನಪಿನ ದೋಣಿಯಲ್ಲಿ ಹಿಂದಿರುಗಿ ನೋಡುವಂತೆ ಮಾಡಿವೆ

13-04-2025 ಬೆಂಗಳೂರು

"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸ...