ನಿರಂತರವಾಗಿ ಹರಿಯಲಿ ಹೊಸನೀರು: ಅಮರೇಶ ನುಗಡೋಣಿ


'ಯುವತಿ-ಯುವಕರು ತಾವು ಪಡೆದ ತಾಂತ್ರಿಕ ಶಿಕ್ಷಣ, ಕಾರ್ಪೊರೇಟ್ ಕಂಪನಿಗಳಲ್ಲಿ ವೃತ್ತಿ ಆರಂಭಿಸಿರುವವರು ಅಲ್ಲಿನ ತಾಂತ್ರಿಕತೆಯಿಂದ ತಾತ್ಕಾಲಿಕ ಮುಕ್ತಿ ಪಡೆಯಲು ಸಾಹಿತ್ಯ ವಲಯದಲ್ಲಿ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ' ಎನ್ನುತ್ತಾರೆ ಹಿರಿಯ ಕಥೆಗಾರ ಡಾ. ಅಮರೇಶ ನುಗಡೋಣಿ ಅವರು ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಅವರ ಕೊನೆಯ ಎರಡು ಎಸೆತಗಳು ಕಥಾಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ದೇವು ಪತ್ತಾರ ಅವರು 'ಒಂದು ಸಂಕಲನಕ್ಕೆ ಮುನ್ನುಡಿ ಬರೆಯಿರಿ' ಎಂದು - ನಿಮ್ಮ 'ಕೊನೆಯ ಎರಡು ಎಸೆತಗಳು' ಕತೆಗಳ ಡಿಟಿಪಿ ಪ್ರತಿಯನ್ನು ಕಳಿಸಿದರು. ನಿಮ್ಮ ಹೆಸರನ್ನು ನೆನಪಿಸಿಕೊಂಡೆ, ನೆನಪಾಗಲಿಲ್ಲ. ಇದು ಬೇರೆ ಎರಡನೇ ಸಂಕಲನ ನಿಮ್ಮದು. ಈಗೀಗ ಯುವತಿ-ಯುವಕರು ಹೆಚ್ಚಾಗಿ ಸಾಹಿತ್ಯ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತಾಂತ್ರಿಕ ಶಿಕ್ಷಣ ಪಡೆದು ಖಾಸಗಿ ಕಂಪೆನಿಗಳಲ್ಲಿ ವೃತ್ತಿನಿರತರಾಗಿರುವವರು ಕತೆ, ಕವಿತೆ, ಲಲಿತ ಪ್ರಬಂಧ, ಅನುಭವ ಕಥನ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಬರವಣಿಗೆ ಶುರು ಮಾಡಿದ್ದಾರೆ. ಸಾಹಿತ್ಯ ವಲಯಕ್ಕೆ ಹೊಸ ಅನುಭವಗಳು ಸೇರಿಕೊಳ್ಳುತ್ತಿರುವುದು ನನಗಂತೂ ಖುಷಿಯ ಸಂಗತಿಯಾಗಿದೆ.

ಯುವತಿ-ಯುವಕರು ತಾವು ಪಡೆದ ತಾಂತ್ರಿಕ ಶಿಕ್ಷಣ, ಕಾರ್ಪೊರೇಟ್ ಕಂಪನಿಗಳಲ್ಲಿ ವೃತ್ತಿ ಆರಂಭಿಸಿರುವವರು ಅಲ್ಲಿನ ತಾಂತ್ರಿಕತೆಯಿಂದ ತಾತ್ಕಾಲಿಕ ಮುಕ್ತಿ ಪಡೆಯಲು ಸಾಹಿತ್ಯ ವಲಯದಲ್ಲಿ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲ ಮೂಲತಃ ಗ್ರಾಮೀಣ ನೆಲೆಯವರೇ ಆಗಿರುವವರು. ಗ್ರಾಮೀಣ, ಅರೆ ಗ್ರಾಮೀಣ ನೆಲೆಯಲ್ಲಿ ತೋಟ, ಗದ್ದೆ, ದನಕರುಗಳ ನಡುವೆ ಹುಟ್ಟಿ ಬೆಳೆದವರೇ ಆಗಿದ್ದಾರೆ. ಅನ್ನದ ನುಡಿಯಾಗಿ ನಿಂತ ಇಂಗ್ಲಿಷ್ ಮೂಲಕ ಶಿಕ್ಷಣ ಪಡೆದು, ಶಬ್ದದ ಅರಾಜಕತೆಯ ನಗರ ಸೇರಿ ವೃತ್ತಿ ಆರಂಭಿಸಿದವರು. ಇವರೆಲ್ಲ ಪ್ರಾಥಮಿಕ, ಕೆಲವರು ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡ ಓದಿದವರು. ಒಂದು ಭಾಷಾ ಪದ್ಯವಾಗಿ 12ನೇ ತರಗತಿವರೆಗೆ ಕನ್ನಡ ಪದ್ಯ ಓದಿದವರು. ಈ ಕನ್ನಡ ನುಡಿ-ಸಾಹಿತ್ಯವನ್ನು ಉಳಿಸಿಕೊಂಡು ಓದಿನ ಹವ್ಯಾಸದಿಂದ ಬೆಳೆಸಿಕೊಂಡ ಇಂದಿನ ಈ ಯುವತಿ- ಯುವಕರ ಪಡೆ ಕನ್ನಡ ಇಂಗ್ಲಿಷ್ ನುಡಿ-ಸಾಹಿತ್ಯ ಬಲ್ಲವರಾಗಿ ಬರವಣಿಗೆಗೆ ತೊಡಗಿಕೊಂಡು 21ನೇ ಶತಮಾನದಲ್ಲಿ ಹೊಸ ಸಾಹಿತ್ಯವನ್ನು ಬಲಪಡಿಸುತ್ತಿರುವವರು. ಇದು ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿದೆ.

ಇನ್ನು ಕನ್ನಡ ಮಾಧ್ಯಮಗಳಲ್ಲಿ ಶಿಕ್ಷಣ ಪಡೆದ ಗ್ರಾಮೀಣ ಯುವ ಪಡೆ ಸರ್ಕಾರದ ಸೌಲಭ್ಯ ಪಡೆದು, ಫೇಲೋಶಿಫ್ ಪಡೆದು ವಿಶ್ವವಿದ್ಯಾಲಯಗಳನ್ನು ತಲುಪಿದ ಗುಂಪು ದೊಡ್ಡದಿದೆ. ಎಂ.ಎ, ಎಂ.ಫಿಲ್, ಪಿ.ಎಚ್.ಡಿ. ಪದವಿ ಪಡೆದ ಕನ್ನಡ ಸಾಹಿತ್ಯ ಮತ್ತು ಮಾನವಿಕ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕ ಯುವತಿಯರು ಸಾಹಿತ್ಯ ರಚನೆಯಲ್ಲಿ ತೊಡಗಿರುವವರ ಪ್ರಮಾಣ ಕಮ್ಮಿಯಾಗಿದೆ. ಅನುಭವದಿಂದ ಹೇಳುವುದಾದರೆ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆಯಲ್ಲಿದ್ದವನು. ವರ್ಷಕ್ಕೆ ನೂರಿನ್ನೂರು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯುತ್ತಾರೆ. ಅವರಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟು ಇರಬಹುದು. ನನ್ನ ಮಾರ್ಗದರ್ಶನದಲ್ಲಿ ಇಪ್ಪತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪದವಿ ಪಡೆದಿದ್ದಾರೆ. ಒಬ್ಬರನ್ನು ಹೊರತು ಪಡಿಸಿ ಯಾರೂ ಸಾಹಿತ್ಯ ವಲಯಕ್ಕೆ ತಮ್ಮ ಬರೆಹಗಳಿಂದ ಪರಿಚಿತರಾಗಿ ಬೆಳೆಯಲಿಲ್ಲ. ಎಲ್ಲ ಮಾರ್ಗದರ್ಶಕರ ಸ್ಥಿತಿ ಇದಕ್ಕಿಂತ ಬೇರೆಯಿಲ್ಲ. ಇದಕ್ಕೆ ಕಾರಣಗಳಿರಬಹುದು. ಉದ್ಯೋಗದ ಕೊರತೆ, ಬಡತನ. ಹಾಗೆ ನೋಡಿದರೆ ಇವು ಬಲವಾದ ಕಾರಣಗಳಲ್ಲ ಅನ್ನಿಸುತ್ತಿದೆ, ಇರಲಿ.

ನೀವು ಸಾಹಿತ್ಯದ ವಿದ್ಯಾರ್ಥಿಯಲ್ಲ. ಕಾರ್ಪೋರೇಟ್ ವಲಯದಲ್ಲಿ ವೃತ್ತಿ ನಿರತರು. ಹಾಗಾಗಿ ಮೇಲಿನ ವಿಷಯ ಬರೆಯಬೇಕಾಯಿತು. ನೋಡಿ ನೀವು ಕುಂದಾಪುರದವರು. ನದಿ ಸಮುದ್ರ ಕಾಡು ಪರಿಸರದ ಮೂಲದಿಂದ ಬಂದವರಲ್ಲಿ ಸಾಹಿತ್ಯ ರಚನೆಯಾಗುತ್ತಿರುವುದು ಒಡೆದು ಕಾಣುತ್ತಿದೆ. ಬಿಸಿಲ ನಾಡು, ಬಯಲುಸೀಮೆ ಪ್ರದೇಶಗಳಲ್ಲಿರುವ ಯುವತಿ-ಯುವಕರು ಸಾಹಿತ್ಯ ರಚನೆಯಲ್ಲಿ ಇಲ್ಲವೆಂದಲ್ಲ. ಪ್ರಮಾಣ ಕಮ್ಮಿಯಾಗುತ್ತಿದೆ. ಆಧುನಿಕ ಪೂರ್ವ ಕಾಲದಲ್ಲಿ ಜೈನರು, ವಚನಕಾರರು, ಷಟ್ಟದಿಕಾರರು, ಸಂಕಲನಕಾರರು, ದಾಸರು, ತತ್ವಪದಕಾರರು, ಜನಪದ ರಚನಕಾರರು ಇದೇ ಪ್ರಾಂತ್ಯಗಳಲಿದ್ದವರು ಸ್ವಾತಂತ್ರ್ಯ ಚಳವಳಿಯ ಹಿಂದೆ-ಮುಂದೆ ನಡೆದ ಬೆಳವಣಿಗೆಗಳಿಂದ ಈ ಪ್ರಾಂತ್ಯ ಸಾಂಸ್ಕೃತಿಕವಾಗಿ ಬಡವಾಯಿತು. ಸಂತರ ಸಂಸ್ಕೃತಿ ಬೆಳೆದು ಶ್ರೀಮಂತವಾಯಿತು. ಬ್ರಿಟಿಷರ ಆಗಮನ, ಆಧುನಿಕತೆ, ಹೊಸ ಶಿಕ್ಷಣದ ಆರಂಭ, ಇಂಗ್ಲಿಷ್ ಇವು ಸಮುದ್ರ-ಕಾಡು ಇರುವ ನಿಮ್ಮ ಪ್ರಾಂತ್ಯದಲ್ಲಿ ಶುರುವಾಗಿ ಅಕ್ಷರಸ್ಥರಾದರು; ವಿದ್ಯಾವಂತರಾದರು. ಸಾಹಿತ್ಯ-ಸಂಸ್ಕೃತಿ ಬೆಳೆಯಿತು. ಆಧುನಿಕ ಸಾಹಿತ್ಯ ನಿಮ್ಮ ಪ್ರಾಂತ್ಯದಲ್ಲಿ ಶ್ರೀಮಂತವಾಗಿ ಬೆಳೆಯಿತು. ಈ ಚರಿತ್ರೆ ದೊಡ್ಡದಿದೆ. ಇಲ್ಲಿ ಸಾಕು.

ನಿಮ್ಮ ಕಥೆಗಳನ್ನೇ ಕೇಂದ್ರಿಕರಿಸಿ ಹೇಳುವುದಾದರೆ, ನಿಮ್ಮ ಕುಂದಾಪುರ ಪರಿಸರ ಪ್ರಪಂಚ, ಭಾಷೆ ಸಂಸ್ಕೃತಿಯ ಅನುಭವವು ದೊಡ್ಡದೇನಿಲ್ಲ. ಇರುವಷ್ಟು ಅನುಭವಗಳನ್ನು ಕೆಲವು ಕಥೆಗಳಲ್ಲಿ ಕಾಣಿಸಿದ್ದೀರಿ. ಬೆಂಗಳೂರು ನಗರ- ಕಾರ್ಪೋರೇಟ್ ಕಂಪೆನಿಗಳಲ್ಲಿ ಉದ್ಯೋಗ ನಿಮಿತ್ತ ನೀವು ಪಡೆದ ಅನುಭವಗಳ ಚಿತ್ರಣವಿದೆ. ಬಾಲ್ಯ ಮತ್ತು ವೃತ್ತಿ ಸಂಬಂಧಿ ಅನುಭವಗಳಲ್ಲಿ ಸಮತೂಕವಿದೆ ಎಂದೇ ಹೇಳಬೇಕು. ಗ್ರಾಮೀಣ ನೆಲೆಯ ಕಥೆಗಳಲ್ಲಿ ನಿಸರ್ಗದ ವರ್ಣನೆಗಳು 'ಸಂದ ಭಾನುಸಾರ' ಕಾವ್ಯ ನುಡಿಯಲ್ಲಿ ವ್ಯಕ್ತಗೊಂಡಿದೆ. ನಗರ ನೆಲೆಯ ಕಥೆಗಳಲ್ಲಿ ವರ್ಣನೆಗಳ ಪ್ರಮಾಣ ಕಮ್ಮಿ. ನಿಯಾನ್ ದ್ವೀಪಗಳ ಕಣ್ಣು ಕೊರೈಸುವ ಚಿತ್ರಣವಿದೆ. ನಿಮ್ಮ ಕಥೆಗಳಲ್ಲಿ, ವಿಭಕ್ತ ಕುಟುಂಬಗಳ ಬಾಳ್ವೆಯ ಸಂಕಷ್ಟಗಳಿವೆ. ಸದಾಶಿವ ವಿಷ ಕುಡಿದು ಸಾಯುವಷ್ಟು ಒತ್ತಡಗಳು ಆತನಿಗಿರಲಿಲ್ಲ. ತಂದೆ ತಾಯಿ ತಂಗಿ ತಮ್ಮ ಅಂಥ ಒತ್ತಡಗಳು ಇಲ್ಲದೆ ಬದುಕುವವರು. ತಂಗಿಯ ಮದುವೆ ಮಾಡುವುದು ಅಣ್ಣನ ಜವಾಬ್ದಾರಿ ನಿಜ. ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಈ ಹೊರೆ ಇರುತ್ತದೆ. ಇದನ್ನು ಹೊರಗಿನವರು ಹೇರುವುದೇ ಹೆಚ್ಚು. ಒಂದು ಕುಟುಂಬ ಒಟ್ಟುಗೂಡಿ ತಮ್ಮ ಮನೆಯಲ್ಲಿ ಬಗೆಹರಿಸಿಕೊಳ್ಳುವ ಪರಿಸ್ಥಿತಿಯನ್ನು ನಿಬಾಯಿಸಿಕೊಳ್ಳುವ ವ್ಯವದಾನವಿರುವುದಿಲ್ಲ. ಸದಾಶಿವನು ಪ್ರೀತಿಸಿದ್ದ ಜ್ಯೋತಿಯನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಅದಕ್ಕೆ ಕಾರಣ ತಂಗಿಯ ಮದುವೆ ಆಗದಿರುವುದು. ತಂಗಿಯ ಮದುವೆ ತಡವಾಗಿಯಾದರೂ ನಡೆಯುತ್ತದೆ. ಅದೇ ಬೇಸತ್ತು ಆತ್ಮಹತ್ಯೆಗೆ ನಿರ್ಧರಿಸಿ ಸಾಯುವುದು ಕಥೆಯ ಚೌಕಟ್ಟಿನಲ್ಲಿ ಭಾರವಾಗುತ್ತದೆ. ಜ್ಯೋತಿ ಸದಾಶಿವನನ್ನು 'ಅನಿವಾರ್ಯ' ಕಾರಣದಿಂದ ಕೈಬಿಟ್ಟು ಆಕೆಯ ಮನೆಯವರು ಗೊತ್ತು ಮಾಡಿದ ಹುಡುಗನೊಂದಿಗೆ ಮದುವೆಯಾಗಲು ನಿರ್ಧರಿಸಿ ಹೊಸದಾರಿ ಹಿಡಿಯುತ್ತಾಳೆ. ಸದಾಶಿವನಿಗೆ ಇದು ಯಾಕೆ ಸಾಧ್ಯವಾಗುವುದಿಲ್ಲ. ಕಥೆಗಾರ ಮೊದಲೇ ನಿರ್ಧರಿಸಿದಂತೆ ಸದಾಶಿವನಿಗೆ ಸಾವೇ ಗತಿಯಾಗುತ್ತದೆ. ಕಥೆಯಲ್ಲಿ ಸದಾಶಿವ ಹಿಡಿದ ದಾರಿಗೆ ಬೇಕಾದ ಒತ್ತಡಗಳನ್ನು ತಂದಿಲ್ಲ.

'ಮುಕ್ತಿ' ಕಥೆಯಲ್ಲಿ ಜಗಳ ಹುಟ್ಟುವುದೇ ಆಸ್ತಿಯ ಸಂಬಂಧ. ಒಂದು ದಾಯಾದಿಗಳಿಗೆ ಬಂಧಿಸಿರುತ್ತದೆ. ಇಲ್ಲಿ ಶ್ರೀಮಂತ-ಬಡವರ ನಡುವೆ ಏರ್ಪಡುತ್ತದೆ. ವೆಂಕಟೇಶ ನಾಯಕ ಸ್ಥಿತಿವಂತ, ರಾಮ ಬಡವ, ದುಡಿತವೇ ಆಸ್ತಿ, ಒಂದು ಕುಮ್ಮಿ ಭೂಮಿ ರಾಮನ ಕೈಯಲ್ಲಿರುತ್ತದೆ. ಅದನ್ನು ನಾಯಕ ಕಸಿದು ತನ್ನದಾಗಿ ಮಾಡಿಕೊಂಡು ಬಿಡುತ್ತಾರೆ. ರಾಮ ಅಸಹಜ ಸಾವಿಗೀಡಾಗಿದ್ದನ್ನು ಮಗ ಪ್ರತಾಪ ನೋಡಬೇಕಾಗುತ್ತದೆ. ಪ್ರತಾಪ ಶಾಲೆ ಕಲಿಯುತ್ತಲೇ ಉದ್ದ ತೆಂಗಿನ ಮರಗಳನ್ನು ಏರಿ ಕಾಯಿ ಇಳಿಸುವ ಕೆಲಸ ಕಲಿತು ಕೂಲಿ ಸಂಪಾದಿಸುತ್ತಾನೆ. ಮುಖ್ಯವಾಗಿ ರಾಜರಾಮ ಭಟ್ರ ಗಮನಸೆಳೆದ ಪ್ರತಾಪ ಅವರ ಕರುಣೆಗೆ ಪಾತ್ರನಾಗುತ್ತಾನೆ. ಪ್ರತಾಪ ವೆಂಕಟೇಶ ನಾಯಕನ ವಿರುದ್ಧ ತನ್ನ ತಂದೆಯ ಆಸ್ತಿಯನ್ನು ಮರಳಿ ಪಡೆಯಲು ಕೋರ್ಟಿನಲ್ಲಿ ನ್ಯಾಯ ಕೇಳಲು ಕೇಸ್ ಹಾಕಿರುತ್ತಾನೆ. ನಾಕಾರು ವರ್ಷಗಳಾದರೂ ನ್ಯಾಯ ಇತ್ಯರ್ಥವಾಗಿರಲಿಲ್ಲ. ರಾಜರಾಮ ಭಟ್ರು ಪ್ರತಾಪನ ಒಳ್ಳೆಯ ತನಕ್ಕೆ ಕರಗಿ, ರಾಮನ ಸರ್ಕಾರಿ ಕುಮ್ಮಿ ಭೂಮಿಯನ್ನು ವೆಂಕಟೇಶ ನಾಯಕನಿಂದ ಪಡೆದು ಪ್ರತಾಪನಿಗೆ ನೀಡುತ್ತಾನೆ. ರಾಜರಾಮ ಭಟ್ರು ಊರ ಪ್ರಮುಖರು, ಮೇಲಾಗಿ ಒಂದು ದಿನ ರಾಮ-ನಾಯಕ ನಡುವೆ ಜಗಳ ನಡೆದು, ರಾಮನನ್ನು ಹೊಡೆದು ನಾಯಕನೇ ಸಾಯಿಸಿರುವುದನ್ನು ರಾಜರಾಮ ಭಟ್ರು ನೋಡಿರುತ್ತಾರೆ. ನಾಯಕನು ಊರಿಗೆ ತಿಳಿಸಬೇಡಿ ಎಂದು ಬೇಡಿಕೊಂಡು ಪಾರಾಗಿರುತ್ತಾನೆ. ಭಟ್ರು ಸುಮ್ಮನಾಗಿರುತ್ತಾರೆ. ಕಾಲ ಸರಿದಂತೆ ಪ್ರತಾಪನೇ ತನ್ನ ಪ್ರಾಮಾಣಿಕ ವ್ಯಕ್ತಿತ್ವದಿಂದ ಭಟ್ರ ಮನೆ-ಹೊಲ ಕೆಲಸ ಮಾಡಿ ಒಡೆಯನ ಮನಸ್ಸು ಗೆದ್ದಿರುತ್ತಾನೆ. ಇದರ ಪರಿಣಾಮವೇ ರಾಜರಾಮ ಭಟ್ರು ವೆಂಕಟೇಶ ನಾಯಕರಲ್ಲಿ ಚರ್ಚಿಸಿ ಕೈತಪ್ಪಿದ ಸರ್ಕಾರಿ ಕುಮ್ಮಿ ಭೂಮಿ ಪ್ರತಾಪನಿಗೆ ಸಿಗುತ್ತದೆ. ಇದು ಸಹಜವಾಗಿ ಮೂಡಿಬಂದ ಕಥೆಯಾಗಿದೆ. ಊರ ಹಿರಿಯರ ಮಾತುಗಳಿಗೆ ಮಾನ್ಯತೆ ಸಿಗುತ್ತಿತ್ತು.

'ಅಜ್ಜಯ್ಯನ ಕನಸು' ಕಥಾವಸ್ತು ವರ್ತಮಾನದ್ದು ಮಾತ್ರವಲ್ಲ, ಭೂತ ವರ್ತಮಾನ ಮುಂದೆಯೂ ಲೋಕದಲ್ಲಿ ನೆಲೆ ನಿಂತಿದೆ. ತಂದೆಯಂತೆ ಮಕ್ಕಳು-ಮೊಮ್ಮಕ್ಕಳು ಇರುವುದಿಲ್ಲ. ಹಾಗೆ ನೋಡಿದರೆ ಇರಬಾರದು. ಖಲೀಲ್ ಗಿಬ್ರಾನ್ ನ ಮಾತು ಪ್ರಸಿದ್ಧವಾಗಿದೆ. ಆದರೆ ಮಕ್ಕಳು ತಂದೆತನ ಮೀರಿ ಬೆಳೆಯಬೇಕೆ ಹೊರತು ಕೇಡಿಗರಾಗಬಾರದು. ಈ ಕಥೆಯ ವಸ್ತು ವರ್ತಮಾನದಲ್ಲಿ ನಡೆಯುತ್ತಿದೆ. ಹಿಂದೂ- ಮುಸ್ಲಿಮ್ ಜನಾಂಗಗಳ ನಡುವಿನ ಧರ್ಮ-ರಾಜಕೀಯ ಸಂಘರ್ಷ ಸಹಜವಾದುದ್ದಲ್ಲ. ಸಾಮಾನ್ಯರಿಗೆ ಇದು ಬೇಕಿಲ್ಲ. ಪಕ್ಷ, ಸಂಘ, ಗುಂಪು, ಅಧಿಕಾರಸ್ಥರಿಗೆ, ಬೇಕಾದದ್ದು ಭಾರತದಂಥ ದೇಶದಲ್ಲಿ ಮುಸ್ಲಿಮರನ್ನು ಮೂಲೆಗುಂಪು ಮಾಡಿ ದೇಶಕಟ್ಟುತ್ತೇನೆ ಎನ್ನುವುದು ಅಸಾಧ್ಯ. ಆದರೂ ಸಂಘ ಸಂಸ್ಥೆಗಳು ಹಿಂದೂ ಹೆಸರಲ್ಲಿ ಪ್ರಯತ್ನಿಸುತ್ತವೆ. ರಕ್ತಪಾತವನ್ನು ಹೆಚ್ಚಿಸುತ್ತವೆ. ಮುಸ್ಲಿಮರೆಲ್ಲರೂ ಒಂದು ವಾರದ ರಜೆ ಪಡೆದರೆ ದೇಶವು ಉಸಿರುಗಟ್ಟುತ್ತದೆ. ಈ ಸತ್ಯ ಬಲಾಡ್ಯರು. ಅರಿಯಬೇಕಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ 13ನೇ ಶತಮಾನದಿಂದ ಮುಸ್ಲಿಮರ ಆಳ್ವಿಕೆಯಿದೆ. ನಿಜಾಮನ ಆಳ್ವಿಕೆ ಮುಗಿದದ್ದು 1948 ಸಪ್ಟೆಂಬರ್ 17ರಂದು. ಆರೇಳು ಶತಮಾನ ಕಾಲ ಮುಸ್ಲಿಮರ ಆಳ್ವಿಕೆ ಇದ್ದಾಗಲು ಹಿಂದೂ ಮುಸ್ಲಿಮ್ ಸಂಘರ್ಷಗಳಿಲ್ಲ. ಕೊಡು ಕೊಳ್ಳುವಿಕೆಯಿಂದ ಸಂತರ ಬಾಳ್ವೆ ಯಶಸ್ವಿಯಾಗೇ ಉಳಿದು ಬಂದಿದೆ. ಕರಾವಳಿಯಲ್ಲಿ ಮಾತ್ರ ಯಾಕೆ ಹಿಂದೂ- ಮುಸ್ಲಿಮ್ ಸಂಘರ್ಷ ಏರ್ಪಡುತ್ತಿದೆ? ಬಲವಂತದಿಂದ ಹುಟ್ಟು ಹಾಕಲಾಗುತ್ತಿದೆ ಅಲ್ಲವೆ? ಇರಲಿ ಈ ಕಥೆಯಲ್ಲಿಯೂ ತಲೆತಲಾಂತರದಿಂದ ಹಳ್ಳಿಗಳಲ್ಲಿ ಊರೊಟ್ಟಿಗಿನ ಸಾಂಸ್ಕೃತಿಕ ಹಬ್ಬಗಳು ಸರ್ವಜನಾಂಗದವರು ಸೇರಿಯೇ ಮಾಡುತ್ತ, ಆಚರಿಸುತ್ತ ಬರಲಾಗಿದೆ. ಇದನ್ನು ಒಡೆಯಲು ಒಂದು ಕೋಮಿನವರನ್ನು ಹೊರಗಿಡಲು ಸಂಘಟಿತ ಸಂಘಗಳು ಪ್ರಯತ್ನಿಸುತ್ತಿವೆಯೇ ಹೊರತು ಜನಸಾಮಾನ್ಯರಲ್ಲ. ಮಹಾಬಲ ಶೆಟ್ರ ಮೊಮ್ಮಗ ರತ್ನಾಕರನ ಮಗ ಅರ್ಜುನ ಮತ್ತು ಇಸ್ಮಾಯಿಲ್ ಸಾಹೇಬ್ರ ಮಗ ಲತೀಫ್ ಇಬ್ಬರು ಹೊಸ ತಲೆಮಾರಿನವರು. ಮಹಾಬಲ ಶೆಟ್ರು- ಇಸ್ಮಾಯಿಲ್ ಸಾಹೇಬ್ರು ಹಳೆ ತಲೆಮಾರಿನವರು. ಇವರಲ್ಲಿರುವ ತಾಳ್ಮೆ, ಕರುಣೆ, ಸಮಾನತೆ ಒಡಲ ಕುಡಿಗಳಾದ ಅರ್ಜುನ, ಲತೀಫ್ ಇಬ್ಬರಲ್ಲಿ ಮಾಸಿ ಹೋಗಿವೆ. ಬದಲಾಗಿ ವೈರುಧ್ಯಗಳು ಮನೆಮಾಡಿವೆ. ಕೇಡುಗಳನ್ನು ಹುಡುಕಿ ಮಾಡುವ ಗುಣ ಹೊಂದಿದ್ದಾರೆ. ಒಳಿತನ್ನೇ ಬಯಸುವವರ ಒಡಲಲ್ಲಿ ಕೇಡು ಮಾಡುವವರ ಜನನವಾಗಿದೆ. ಈ ಗುಣ ಸಹಜವಾದದ್ದೋ? ಅಧಿಕಾರಸ್ಥರು ಹುಟ್ಟುಹಾಕುವ ಪರಿಸರದಿಂದ ಪಡೆದದ್ದೋ? ಈ ಪ್ರಶ್ನೆ ಕಥೆ ಎತ್ತುತ್ತದೆ. ಕಥೆಯ ಕೊನೆಯಲ್ಲಿ ಮಗ ಅರ್ಜುನ ಸಂಘರ್ಷಕ್ಕೆ ಸಿದ್ಧನಾಗಿ ತಾಯಿಯನ್ನು ಮನೆಗೆ ತಲುಪಿಸದೇ ಹೇಳುವ ನೆಪದಲ್ಲಿ ವ್ಯಂಗ್ಯವಿದೆ, ಸಂಘರ್ಷವಿದೆ. ಲತೀಫ್ ಆಗಲೇ ಸಂಘರ್ಷ ಮಾಡಿಬಿಟ್ಟಿರುತ್ತಾನೆ. ಮರದಲ್ಲಿನ ಹಣ್ಣುಗಳು ಒಂದೇ ರುಚಿಯನ್ನು ಹೊಂದಿರುತ್ತವೆ. ಮನುಷ್ಯನ ವಿಷಯದಲ್ಲಿ ಇದು ನಿಜವಲ್ಲ ಯಾಕೆ? ಅಜ್ಜಯ್ಯನ ಕನಸು, ಅರ್ಚಕನ ತಂತ್ರಗಾರಿಕೆಗಳಿಗೆ ಸೋಲಾಗುತ್ತದೆ. ಆದರೆ ಈ ಸೋಲು ತಾತ್ಕಾಲಿಕ ಎಂಬುದು ಅಷ್ಟೇ ನಿಜ.

'ನಕ್ಷತ್ರ ಜಾರಿದಾಗ' ಇದೊಂದು ಪ್ರೇಮಕಥೆ, ವಿಫಲ ಪ್ರೇಮದ ಕಥೆ. ನೀವು ಈ ಕಥೆಯಲ್ಲಿ ಕ್ಷಿತಿಜನಿಗೆ ತಾನು ಪ್ರೀತಿಸಿದ ಪ್ರತೀಕ್ಷಾ ಕೈತಪ್ಪಿದ್ದೂ ಅಲ್ಲದೆ ಅವಳಿಗೊಬ್ಬರು ಸಂಗಾತಿಯನ್ನೂ ಕುದಿರಿಸುವ ಕೆಲವನ್ನೂ ಮಾಡಬೇಕಾಗುತ್ತದೆ. ಅದೂ ಪ್ರತೀಕ್ಷಾ ಹೇಳಿದ್ದರಿಂದ ವ್ಯಂಗ್ಯ ಎಲ್ಲಿದೆಯೆಂದರೆ, ಕ್ಷಿತಿಜ ನಾನು ಪ್ರೀತಿಸಿದ ಪ್ರತೀಕ್ಷಾ ಒಂದೇ ಜಾತಿಯವರಲ್ಲ. ಪ್ರತೀಕ್ಷಾ ಸಂಪ್ರದಾಯಸ್ಥ ಪುರೋಹಿತನ ಮಗಳು. ಅವಳನ್ನು ಓದಲು ಉದ್ಯೋಗ ನಿಮಿತ್ತ ನಗರಕ್ಕೆ ಕಳಿಸಿದ್ದೇ ಹಲವು ಬಂಧನಗಳೊಂದಿಗೆ ಮೊದಲು ಕ್ಷಿತಿಜ ಪ್ರತೀಕ್ಷಾಳನ್ನು ಪ್ರೀತಿಸುತ್ತೇನೆಂದು ನಿವೇದಿಸಿಕೊಂಡಾಗ ಅವಳೇ ಇದು ಅಸಾಧ್ಯವೆಂದು ಹೇಳಿ, ತಂದೆಯ ಮನಸ್ಥಿತಿ ಮನೆಯ ಸಂಪ್ರದಾಯ ಮುಂದಿಟ್ಟು ಹಗುರವಾಗಿಯೇ ಜಾರಿದಳು. ಮುಂದೆ ಅದೇ ಪ್ರತೀಕ್ಷಾ ತಾನು ಪ್ರೀತಿಸಿದ ಅಭಿಶೇಕ್ ಗಂಗೂಲಿಯನ್ನು ಮದುವೆಯಾಗುತ್ತೇನೆ. ತಂದೆಯ ಜತೆ ಮಾತಾಡಲು ಕ್ಷಿತಿಜನನ್ನು ವಿನಂತಿಸುವುದು ವ್ಯಂಗ್ಯವೇ?. ಕ್ಷಿತಿಜನನ್ನು ಮದುವೆಯಾಗಲು ತಂದೆ, ಸಂಪ್ರದಾಯ ಅಡ್ಡ ಇಟ್ಟಿದ್ದಳು. ಅಭಿಷೇಕ್ ಗಂಗೂಲಿಯನ್ನು ಮದುವೆಯಾಗಲು ಅಡ್ಡಿಯಾಗಲಿಲ್ಲ. ಕ್ಷಿತಿಜ ಬಲಿಪಶು. ಕ್ಷಿತಿಜನ ವ್ಯಕ್ತಿತ್ವದಲ್ಲಿಯೇ ಸ್ಥಿರತೆಯಿಲ್ಲ ಎಂಬುದು ಆರಂಭದಲ್ಲಿ ಅವನ ಮಾತಿನಲ್ಲಿ ತಿಳಿಯುತ್ತದೆ. ಪ್ರತೀಕ್ಷಾಳ ತಂದೆ ಪುರಂದರ ಉಡುಪರಿಗೆ ಹೇಳುತ್ತಾನೆ... 'ನಮ್ಮು ನೋಡಿ, ಒಂದು ಕಡೆ ನಿಲ್ಲಲ್ಲಿಕ್ಕೆ ಆಗದ ಧಾವಂತ. ಜಾಸ್ತಿ ಸಮಯ ಒಂದೇ ಕಡೆ ನಿಂತ್ರೆ ಇವ ಪ್ರಯೋಜನಕ್ಕೆ ಇಲ್ಲ ಅಂತ ಡಿಸೈಡ್ ಮಾಡುತ್ತೆ ನಮ್ ಕಾರ್ಪೋರೇಟ್ ಜಗತ್ತು. ಇಲ್ಲಿ ನೀವು ಬೆಳೆಯಬೇಕಾದ್ರೆ ನಿಯತ್ತು ಕೆಲ್ಲಕ್ಕೆ ಬರೋಲ್ಲ. ಒಂದು ಕಡೆ ನಿಂತ್ರೆ ನಿಮ್ ಕಥೆ ಮುಗೀತು. ಓಡ್ತಾನೇ ಇರಬೇಕು. ಆವಾಗಾವಾಗ ಹಾವು ಪೊರೆ ಕಳಚಿದ ಹಾಗೆ ನಾವು ಜಾಬ್ ಚೇಂಜ್ ಮಾಡ್ತಾ ಇರಬೇಕು. ಒಳ್ಳೆ ಸಂಬಳ ಮತ್ತು ಹುದ್ದೆಗಾಗಿ. ಇದೇ ನನ್ನ ಶಾಶ್ವತ ನೆಲೆ ಅನ್ನೋ ತರಹ ನೆಮ್ಮದಿ ಇಲ್ಲ. ಕಟ್ಟಿಕೊಂಡ ಮನೆಗೆ, ತಗೊಂಡ ಕಾರಿಗೆ, ವೀಕ್ ಎಂಡ್ ಖರ್ಚಿಗೆ ಅಂತ ದುಡಿದ್ದುದ್ದರಲ್ಲಿ ಮುಕ್ಕಾಲು ಪಾಲು ಎತ್ತಿಡಬೇಕು ಕ್ಷಿತಿಜನ ಈ ಮಾತುಗಳು ಬದುಕಿನ ಅಸ್ಥಿರತೆಯನ್ನೂ, ವ್ಯಕ್ತಿತ್ವದ ಅಸ್ಥಿರತೆಯನ್ನು ಸರಿಯಾಗಿ ಬಿಂಬಿಸುತ್ತದೆ. ಕಾರ್ಪೋರೇಟ್ ಲೋಕಕ್ಕೆ ಸಂಬಂಧಿಸಿದ ನಿಮ್ಮ ಕೆಲವು ಕಥೆಗಳಿಗೆ ಈ ಮಾತು ಮುನ್ನುಡಿಯಂತಿದೆ. ವ್ಯಕ್ತಿಗಳು, ಅವರ ವೈವಾಹಿಕ ಸಂಬಂಧಗಳು, ಬದುಕು ನೆಲೆಯಿಲ್ಲದ ಮನೆಯಂತಿದೆ. 90ರ ದಶಕದಿಂದ ಆರಂಭವಾದ ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳಿಂದ ಉಂಟಾಗಿದೆ. ಹೊಸ ತಲೆಮಾರು ಈ ಅಸ್ಥಿರ ನೌಕೆಯಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ವಿಶ್ವಕ್ಕೆ ತಗುಲಿಕೊಂಡಿದೆ.

'ತಲ್ಲಣಿಸದಿರು ಜೀವವೇ' ಈ ಕಥೆಗೆ ಈ ಶೀರ್ಷಿಕೆ ಹೊಂದುತ್ತದೆಯೇ? 'ತಲ್ಲಣಿಸು ಜೀವವೇ' ಎಂದಿದ್ದರೆ ಸರಿ ಹೋಗುತ್ತಿತ್ತು. ಕಾರ್ಪೋರೇಟ್ ಲೋಕದ ವ್ಯಕ್ತಿಗಳು ತಮಗೆ ತಾವು 'ತಲ್ಲಣಿಸದಿರು' ಎಂದು ಹೇಳಿಕೊಳ್ಳುವ ತಾಳ್ಮೆಯಿರುವುದಿಲ್ಲ. ನಿಮ್ಮ ಕಥೆಗಳನ್ನೇ ಆಧರಿಸಿ ಹೇಳುವುದಾದರೆ, ತಲ್ಲಣಿಸುತ್ತಲೇ ಇರು ಮನವೆ' ಎಂದುಕೊಳ್ಳುವಂತೆ ಕಾಣುತ್ತವೆ. ಪ್ರತಿಮಾ-ರಘುನಂದನ ದಂಪತಿಗಳು, ನಚಿಕೇತ ಮಗ, ಕಂಪನಿಯಲ್ಲಿ ಉದ್ಯೋಗಿಗಳು. ನೆಮ್ಮದಿಗೆ ಇನ್ನೇನು ಬೇಕು. ಮನದ ಮುಂದಣ ಸೌಜನ್ಯ ಹೆಗ್ಡೆ ರಘುನಂದನಿಗೆ ಕಾಣುತ್ತಾಳೆ. ಕವಲು ದಾರಿ ಹಿಡಿಯುತ್ತಾರೆ. ಆದರೆ ಪ್ರತಿಮಾ ಏಕಾಂಗಿಯಾದಾಗ ಅನಿರುದ್ಧ ಪ್ರವೇಶಿಸುತ್ತಾನೆ. ಆದರೆ ಅನಿರುದ್ಧನಿಗೆ ಬೆನ್ನ ಹಿಂದೆ ಹಳ್ಳಿಯಲ್ಲಿ ಹೆತ್ತವರಿರುತ್ತಾರೆ. ಕನೈ ನೋಡುತ್ತಿರುತ್ತಾರೆ. ಮದುವೆಗೆ ಒತ್ತಡವಿರುತ್ತದೆ. ಅನಿರುದ್ಧ ಪ್ರತಿಮಾಳನ್ನು ಅಧಿಕೃತವಾಗಿ ಮದುವೆಯಾಗುವ ಬದಲು 'ಲೀವಿಂಗ್ ಟುಗೆದರ್' ಅನ್ನುವ ಯೋಚನೆಯಲ್ಲಿರುತ್ತಾನೆ. ಇದನ್ನು ಪ್ರತಿಮಾ ನಿರಾಕರಿಸುತ್ತಾಳೆ. ಆಗ ಮದುವೆಗೆ ಒಪ್ಪುತ್ತಾನೆ. ಅತ್ತ ಮನೆಯವರು ನೋಡಿದ್ದ ಕನೈಯನ್ನು ನಿರಾಕರಿಸುವಂತಿಲ್ಲ. ಅಡಕತ್ತರಿಯಲ್ಲಿ ಅಡಿಗೆ ಸಿಕ್ಕ ಮೇಲೆ ತುಂಡಾಗಲೇ ಬೇಕು. ಆಯಿತು. ಪ್ರತಿಮಾ ಏಕಾಂಗಿಯಾದಳು. ಈ ಕತೆಯಲ್ಲಿ ಇರುವ ಪಾರ್ಕ್ ನಲ್ಲಿ ನಡೆವ ಚಿತ್ರಣ ಧ್ವನಿಪೂರ್ಣವಾಗಿದೆ. ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಏಕಾಂತದ ಶಕ್ತಿಯನ್ನು ಕುರಿತು ಮಾತಾಡುತ್ತಿರುತ್ತಾನೆ. ಏಕಾಂಗಿಯಾಗಿರುವ ಪ್ರತಿಮಾಗೆ ಆ ಮಾತುಗಳು ಕಿವಿಗೆ ಬೀಳುತ್ತವೆ. 'ಪಕ್ಕದ ಮನೆ ಖಾಲಿಯಿದ್ದರೆ ಕರ ಕಟ್ಟಲು ಅನುಕೂಲವಾಯ್ತು' ಅನ್ನುವಂತೆ ಪಾರ್ಕಿನಲ್ಲಿದ್ದ ಆ ವ್ಯಕ್ತಿ ಪ್ರತಿಮಾಳ ಫೋಟೋ ತೆಗೆದು ಖುಷಿ ಪಡುತ್ತಿರುತ್ತಾನೆ. ಕಾರ್ಪೋರೇಟ್ ಲೋಕದಲ್ಲಿ ಹೆಣ್ಣು ಗಂಡುಗಳಿಗೆ ನೈತಿಕತೆ ಕಾಪಾಡಿಕೊಳ್ಳುವುದೇ ಕಷ್ಟ. ಅಸ್ಥಿರತೆಯೇ ಜೀವನ ತತ್ವವಾಗಿದೆ.

'ಕ್ಷಮಿಸಿ ಸಂಪಾದಕರೆ.. ಕಥೆ ಕಳಿಸಲಾಗುತ್ತಿಲ್ಲ' ಕಥೆಯಲ್ಲಿ, ಮಹಿಳಾ ಶೋಷಣೆ ಢಾಳಾಗಿ ಕಾಣಿಸುತ್ತದೆ. ಕಾರ್ಪೋರೇಟ್ ವಲಯದ ವ್ಯವಹಾರಗಳು ಲಾಭಕ್ಕಾಗಿ ನಡೆಯುತ್ತವೆ. ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗಳ ವ್ಯವಹಾರದಲ್ಲಿ ನಡೆಯುವ ಸಂಘರ್ಷಗಳು ಒಂದು ಕಡೆಯಿದ್ದರೆ, ಒಂದು ಕಂಪೆನಿಯ ಒಳಗಿನ ಸಂಘರ್ಷಗಳು ದೊಡ್ಡ ಮಟ್ಟದಲ್ಲಿರುತ್ತವೆ. ತನು ಕರಗದವರೇ ಎಲ್ಲರು ಕೂಡಿ ಒಬ್ಬರ ಮೇಲೆ ಒಬ್ಬರು ಸವಾರಿ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಮಹಿಳೆಯಿದ್ದರಂತೂ ಪುರುಷರ ಸವಾರಿಗಳು ಹೆಚ್ಚಾಗಿರುತ್ತವೆ. ಸಾಮಾನ್ಯ ನೌಕರ ಅರವಿಂದ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಮೇಲಧಿಕಾರಿಯ ದಾಳವಾಗಲೇ ಬೇಕು. ದಾಳವಾಗಿಯೂ ಬಲಿಯಾಗುವ ಹಂತವನ್ನೂ ತಲುಪಬಹುದು. ಮನಮೋಹನ ಮತ್ತು ವಂದನಾ ಜೋಶಿ ನಡುವಿನ ಸೆಳೆತ, ವಿರಸ, ಪೈಪೋಟಿಗಳ ಆಟ ಈ ಕಥೆಯಲ್ಲಿ ದಟ್ಟವಾಗಿಯೇ ಇದೆ. ವಂದನಾ ಜೋಶಿ ಗೆದ್ದರು ಅದು ತಾತ್ಕಾಲಿಕವೇ ಆಗಿರುತ್ತದೆ. ಮನಮೋಹನಿಗೆ ಹಿನ್ನೆಡೆಯಾದರೂ ಬಲಿತುಕೊಳ್ಳುವ ಶಕ್ತಿಯಿರುವವನು. ವಂದನಾ ಜೋಶಿ ಬಲಿಪಶು ಆಗುವವಳೇ. ಮಹಿಳೆಗೆ ನೂರಾರು ಕಾನೂನುಗಳ ಬಲವಿದ್ದರೂ ಶೋಷಣೆ ತಪ್ಪುವುದಿಲ್ಲ.

'ಮುಳ್ಳಿಗಂಟಿದ ಸೀರೆ' ಧ್ವನಿಪೂರ್ಣ ಶೀರ್ಷಿಕೆ, ಸೀರೆ ಸ್ತ್ರೀ ಸಂಕೇತ. ಈ ಕಥೆಯಲ್ಲೂ ಸ್ತ್ರೀ ಮೇಲಿನ ದಮನವಿದೆ. ರಘುನಂದನ ತನ್ನ ಹೆಂಡತಿ ಪ್ರತಿಮಾಳ ಜತೆಗಿನ ಸಂಬಂಧಕ್ಕೆ ಹುಳಿ ಹಿಂಡಿದವನು ಶರಣ್, ಪ್ರತಿಮಾಗೆ ಅಧಿಕಾರಿ. ಅಧಿಕಾರಸ್ಥ ಬಲದಿಂದ ಆಕೆಯ ಮೊಬೈಲ್ ಗೆ ಲೈಂಗಿಕ ಸೆಳೆತವಿರುವಂತಹ ಮೆಸೇಜ್ ಕಳಿಸುತ್ತಲೇ ಇರುತ್ತಾನೆ. ಪ್ರತಿಮಾಗೆ ಶರಣ್ ಮೇಲೆ ಸೆಳೆತ ಇರುವುದಿಲ್ಲ. ಮೇಲಧಿಕಾರಿ ಎಂಬ ಭಯದಿಂದ ತಾಳ್ಮೆ ಹೊಂದಿರುತ್ತಾಳೆ. ಈ ಮೆಸೇಜ್ ಗಳನ್ನು ಗಂಡ ರಘುನಂದನ ನೋಡಿ ಚಿಂತಾಕ್ರಾಂತನಾಗುತ್ತಾನೆ. ಉದ್ಯೋಗಸ್ಥ ದಂಪತಿಗಳಲ್ಲಿ ಅರಿವಿಗೆ ಬರದ ಒಂದು ಹಿಂಜರಿಕೆ ಇರುತ್ತದೆ. ಹಾಗೆ ನೋಡಿದರೆ ಪ್ರತಿಮಾಗೆ ಶರಣ್ ಯಾವ ಕಾರಣಕ್ಕೂ ಇಷ್ಟವಾಗುತ್ತಿರಲಿಲ್ಲ. ಇಂದು ತಾಂತ್ರಿಕತೆ ಹೇಗೆ ಬೆಳೆದಿದೆ ಎಂದರೆ ಗೌಪ್ಯತೆಯನ್ನು ಯಾರು ಕಾಪಾಡಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಶರಣ್ ನ ಮೆಸೇಜ್ ಏಕಕಾಲಕ್ಕೆ ಪ್ರತಿಮಾಗೂ ರಘನಂದನನ ಮೊಬೈಲಿಗೆ ಬರುವಂತೆ ಮಾಧವ ಮಾಡಿಕೊಟ್ಟು ಹತ್ತು ಸಾವಿರ ಪಡೆಯುತ್ತಾನೆ. ಆದರೆ ಪ್ರತಿಮಾ ಶರಣ್ ಗೆ ಅಹಿತಕರ ಮೆಸೇಜ್ ಮಾಡುತ್ತಿರಲಿಲ್ಲ. ಕಾರ್ಪೋರೇಟ್ ವಲಯದಲ್ಲಿ ಮೇಲಧಿಕಾರಿಗಳು ಹೇಳಿದಂತೆ ಕೇಳದಿದ್ದರೆ ಅದರಲ್ಲೂ ಸ್ತ್ರೀಯರು ಕೇಳದಿದ್ದರೆ ದಮನ ಕಾರ್ಯ ಆರಂಭಿಸುತ್ತಾರೆ. ರಘುನಂದನ ಹೆಂಡತಿಯನ್ನು ರಕ್ಷಿಸಲು ಅಸಹಾಯಕ. ಒಂದು ಕೆಲಸ ಬಿಡಿಸಬೇಕು. ಪ್ರತಿಭಟಿಸಲು ಅಸಾಧ್ಯ. ರಘುನಂದನನ ಗೆಳತಿ ಸಹನಾ ಹೆಗ್ಡೆಯಿಂದ ತಾಳ್ಮೆ ಕಂಡುಕೊಂಡು, ಆಕೆಯ ಸಹಾಯ ಪಡೆದು ಹೆಂಡತಿಗೆ ರಕ್ಷಣೆ ಸಿಗುವಂತೆ ಮಾಡುತ್ತಾನೆ. ದುರಂತವೆಂದರೆ ಪ್ರತಿಮಾ ಇದ್ದರೂ ರಘುನಂದನ ಸಹನಾ ಹೆಗ್ಡೆಯ ಮೇಲೆ 'ಅಸಹಜ ಆಸೆಯನ್ನು' ಮಾಡುವುದು. ಪುರುಷರು ನೈತಿಕತೆಗೆ ಹೊಂದಿಕೊಳ್ಳುವವರಲ್ಲ. ಅದೇನಿದ್ದರೂ ಸ್ತ್ರೀಯರಿಗೆ ಎಂಬ ಧೋರಣೆ ಎಂದು ಬದಲಾಗುತ್ತದೇ? ಸದಾ ಮುಳ್ಳಿಗಂಟಿಸಿದ ಸೀರೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಕರ್ಮ ಸ್ತ್ರೀಯರಿಗೆ ತಪ್ಪಿದ್ದಲ್ಲ ಎಂಬುದು ಈ ಕಥೆಯ ಧ್ವನಿ.

'ದೀಪವಾರಿದ ಬೀದಿಯಲ್ಲಿ' ಇದು ಕೂಡ ಧ್ವನಿ ಪೂರ್ಣ ಶೀರ್ಷಿಕೆ. 'ನಕ್ಷತ್ರ ಜಾರಿದಾಗ' ಕತೆಯಲ್ಲಿ ಬರುವ ಕ್ಷಿತಿಜ ಪುರಂದರ ಉಡುಪರಿಗೆ ಹೇಳಿದ ಮಾತು (ಅದನ್ನು ಉಲ್ಲೇಖಿಸಿದ್ದೇನೆ) ಚಿಂತನನಿಗೆ ಪರಿಪೂರ್ಣವಾಗಿ ಅನ್ವಯವಾಗುತ್ತವೆ. ಈ ಕಥೆ ಕೊರೋನಾ ಕಾಲದ ಪರಿಸ್ಥಿತಿಯನ್ನು ಸರಿಯಾಗಿ ಧ್ವನಿಸುತ್ತದೆ. ಲಾಕ್ ಡೌನ್ ಕಾಲದಲ್ಲಿ ಶ್ರೀಮಂತರು, ವ್ಯಾಪಾರಸ್ಥರು ಹೇಗೋ ಸುರಕ್ಷಿತವಾಗಿದ್ದರು. ದಿನದ ಕೂಲಿಯೇ ತಮ್ಮ ಆಸ್ತಿ ಎಂದು ನಂಬಿಕೊಂಡಿದ್ದ ನಗರಕ್ಕೆ ವಲಸೆ ಹೋದ ಕಾರ್ಮಿಕರು, ಅನ್ನ ನೀರಿಗೆ ಗತಿಯಿಲ್ಲದಾದಾಗ ತಮ್ಮ ಹಳ್ಳಿಗೆ ಮರಳುವಾಗ ಪಟ್ಟ ಪಾಡು ಎಂಥದ್ದು ಎಂಬುದನ್ನು ದೇಶ ಕಂಡಿದೆ. ಸರ್ಕಾರಿ ನೌಕರರು ಹೇಗೋ ಜೀವ ಹಿಡಿದಿದ್ದರು. ಬಹುರಾಷ್ಟ್ರೀಯ ಕಂಪೆನಿಗಳು ಕುಸಿದು ಹೋದವು. ಅಲ್ಲಿನ ಉದ್ಯೋಗಿಗಳ ಪಾಡು ಹೇಳತೀರದು. ಈ ಲಾಕ್ ಡೌನ್ ಹೊಡೆತದಿಂದ ಸತ್ತವರೆಷ್ಟೋ ಲೆಕ್ಕವಿಲ್ಲ. ಇನ್ನೂ ಕೊರೋನಾಗೆ ಬಲಿಯಾದವರ ಸಂಖ್ಯೆ ಅಪಾರ. ಈ ಕಥೆ ಕಾರ್ಪೋರೇಟ್ ಉದ್ಯೋಗಿಯೊಬ್ಬನ ಸಂಕಷ್ಟಗಳನ್ನು ನಿರೂಪಿಸಿದೆ. ಚಿಂತನ ಉದ್ಯೋಗಸ್ಥನಾಗಿ 'ಮನದ ಮುಂದಣದ ಆಸೆಯೇ ಮಾಯೆ'- ಎನ್ನುವ ಮಾತು ಈ ಚಿಂತನನಿಗೆ ಸಂಪೂರ್ಣ ಅನ್ವಯಿಸುತ್ತದೆ. ಲಾಕ್ ಡೌನ್ ಗ್ರಹಿಕೆಯೇ ಇಲ್ಲದ ಕಾಲದಲ್ಲಿ ಚಿಂತನ ತನ್ನ ಹಾಸಿಗೆ ಎಷ್ಟು ಉದ್ದವಿದೆ ಎಂಬ ಅರಿವಿಲ್ಲದೇ ಸಾಲ ಮಾಡಿ ಮಾಡಿ ಐಶಾರಾಮಿ ಜೀವನಕ್ಕೆ ತೊಡಗಿದ್ದ. ವಿವೇಕದ ಹೆಂಡತಿಯ ಮಾತುಗಳನ್ನೂ ಕೇಳಲಿಲ್ಲ. ಲಾಕ್ ಡೌನ್ ಗೆ ದೇಶ ತಟಸ್ಥವಾದಾಗ ಕಾರ್ಪೋರೇಟ್ ಉದ್ಯೋಗಿ ಚಿಂತನನ ವೈಭವಕ್ಕೆ ಸರಿಯಾಗಿ ಪೆಟ್ಟು ಬಿತ್ತು. ಎಲ್ಲವನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಸಿರಿತನದಲ್ಲಿ ಬಡತನದ ಅರಿವಿರಬೇಕು ಎಂಬ ಸಾತ್ವಿಕರ ಮಾತು ಚಿಂತನನಿಗೆ ತಿಳಿದಿರಬೇಕಾಗಿತ್ತು. ಕೊನೆಗೆ ಗೆಳೆಯ ಸುಬ್ರಹ್ಮಣ್ಯ ತೋರಿಸಿದ ವಿವೇಕದ ದಾರಿ ಹಿಡಿದು ಚೇತರಿಸಿಕೊಳ್ಳುತ್ತಾನೆ. ಲಾಕ್ ಡೌನ್ ಸಂದರ್ಭದಲ್ಲಿ ಕಂಪನಿಯ ಉದ್ಯೋಗಸ್ಥರ ಪಾಡನ್ನು ಮನಸ್ಸಿಗೆ ತಟ್ಟುವಂತೆ ಚಿತ್ರಿಸಲಾಗಿದೆ ಈ ಕಥೆಯಲ್ಲಿ.

'ಕೊನೆಯ ಎರಡು ಎಸೆತಗಳು' ಕತೆಯ ಹೆಸರನ್ನು ಕಥಾಸಂಕಲನಕ್ಕೆ ಇಡಲಾಗಿದೆ. ಎರಡು ಊರುಗಳ ನಡುವೆ ಗಡಿರೇಖೆಯ ಮಧ್ಯೆ ದೇವಸ್ಥಾನವೊಂದು ನೂರಾರು ವರ್ಷಗಳಿಂದ ಇತ್ತು. ಯಾವ ಬೇಧವಿಲ್ಲದೆ ಎರಡೂ ಊರಿನವರೂ ಪೂಜಿಸುತ್ತಾ ಬಂದಿದ್ದರು. ಅದರ ಜೀರ್ಣೋದ್ದಾರ ಮಾಡಿದ ಸಂದರ್ಭದಲ್ಲಿ ಗುಡಿಯ ಮೇಲಿನ ಫಲಕದಲ್ಲಿ ಗಿಳಿಪುರ ಮತ್ತು ಜೇನುಭಾವಿ ಎರಡರಲ್ಲಿ ಯಾವ ಊರಿನ ಹೆಸರನ್ನು ದಾಖಲಿಸಬೇಕು ಎಂಬ ಹೊಸ ವಿವಾದ ಸೃಷ್ಟಿಯಾಯಿತು. ಎರಡೂ ಊರುಗಳ ಮುಖಂಡರು ಒಂದು ತೀರ್ಮಾನಕ್ಕೆ ಬರಲಿಲ್ಲ ಅದರ ಪರಿಣಾಮವೇ ಕ್ರಿಕೇಟ್ ಪಂದ್ಯದ ಏರ್ಪಾಡು. ಗೆದ್ದವರ ಊರಿನ ಹೆಸರು ಫಲಕದಲ್ಲಿ ದಾಖಲಾಗುತ್ತಿತ್ತು. ಪಂದ್ಯವೇನೋ ರೋಚಕವಾಗಿ ನಡೆದು ಕೊನೆಯ ಎರಡು ಎಸೆತಗಳಲ್ಲಿ 6 ರನ್ ಬೇಕಾಗಿದ್ದವು. ಕೊನೆಗೆ ಒಂದು ಎಸೆತಕ್ಕೆ 4 ರನ್ ಬೇಕಾಗಿತ್ತು. ಅದೇ ಕೊನೆಯ ಬಾಲ್, ಕೊನೆಯ ಹೊಡೆತ. ಹೊಡೆತಕ್ಕೆ ಬಾಲ್ ಆಕಾಶಕ್ಕೆ ಚಿಮ್ಮಿತು. ಅದನ್ನು ನೋಡುವ ಸಾವಿರಾರು ವೀಕ್ಷಕ ಕಣ್ಣುಗಳಿಗೆ ಸೂರ್ಯನ ಕಿರಣಗಳು ಕುಕ್ಕಿದವು. 'ಚೆಂಡನ್ನೇ ದೃಷ್ಟಿಸುತ್ತಿದ್ದ ಋತುರಾಜನಿಗೆ ಎದೆಯ ಮೇಲೆ ಅದೇನೋ ಭಾರವಾದದ್ದೇನೋ ಬಂದು ಕುಳಿತಂತಾಗಿ, ಕಣ್ಣು ಕತ್ತಲೆ ಬಂದು ನಿಂತಿದ್ದವ ಹಾಗೆ ಕುಸಿಯತೊಡಗಿದ. ಕಣ್ಣನ್ನು ಎಷ್ಟೇ ತೆರೆಯಲು ಪ್ರಯತ್ನಿಸಿದರೂ ಕಣ್ಣ ರೆಪ್ಪೆಗಳು. ಅದಾಗಲೇ ಕಣ್ಣನ್ನು ಮುಚ್ಚಿಕೊಂಡು ಕತ್ತಲೆಯನ್ನು ಪಸರಿಸಿದ್ದವು. ಆದರೂ ಆ ಕತ್ತಲೆಯ ಮೂಲೆಯಿಂದ ಶಿವನ ಪ್ರತಿಯೊಂದು ಬೆಂಕಿ ಕಾರುತ್ತಾ, ಕಣ್ಣುಗಳಿಂದ ತ್ರಿಶೂಲವನ್ನು ತನ್ನ ಎದೆಗೆ ಗುರಿಯಾಗಿಸಿಕೊಂಡು ತನ್ನತ್ತ ಅಪ್ಪಳಿಸುತ್ತಿರುವುದು ಋತುರಾಜನಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು'. ಇದು ಕಥೆಯ ಕೊನೆ ಚಿತ್ರಣ. ಅಮೂರ್ತವಾಗಿ ಮುಕ್ತಾಯ ಮಾಡಿರುವುದು ಒಂದು ದೃಷ್ಟಿಕೋನ, ತಂತ್ರಗಾರಿಕೆ. ಈ ಬಗೆಯ ಮುಕ್ತ ಮುಕ್ತಾಯ ಇನ್ನೊಂದು ಕಥೆ 'ತಲ್ಲಣಿಸದಿರು ಜೀವವೇ' ಸತೀಶ್, ಹಳ್ಳಿ ಮತ್ತು ನಗರ ಬದುಕುಗಳನ್ನು ಒಂದರೊಳಗೊಂದು ಕಾಣಿಸುವ ಮತ್ತು ಸಂಬಂಧಗಳನ್ನು ಬೆಸೆಯುವ ಕಥನ ಶೈಲಿ ನಿಮ್ಮದು. ಯಶವಂತ ಚಿತ್ತಾಲರು ದೊಡ್ಡ ಮಟ್ಟದಲ್ಲಿ ಇದನ್ನು ತಂದು ಯಶಸ್ವಿಯಾಗಿದ್ದಾರೆ. ನಿಮ್ಮ ಕಥೆಗಳಲ್ಲಿ ಹುಟ್ಟಿ ಬೆಳೆದ ಕುಂದಾಪುರದ ಪರಿಸರವನ್ನು, ಅಲ್ಲಿನ ಬದುಕುಗಳನ್ನು ತಕ್ಕಮಟ್ಟಿಗೆ ತಾಳ್ಮೆಯಿಂದ ಚಿತ್ರಿಸಿದ್ದೀರಿ. ಕಾರ್ಪೋರೇಟ್ ಲೋಕವನ್ನ, ಅಲ್ಲಿನ ಅಧಿಕಾರಸ್ಥರ ದಾಹ, ಪೈಪೋಟಿ, ಸ್ತಿ ವ್ಯಾಮೋಹ, ಅಸ್ಥಿರದಲ್ಲಿ ಸ್ಥಿರತೆಯನ್ನು ಕಾಣುವ ಕುಟುಂಬಗಳ ಚಿತ್ರಣಗಳು ಕಥಾಲೋಕಕ್ಕೆ ಹೊಸವು. ಈಚೆಗೆ ಹಲವು ಹೊಸ ತಲೆಮಾರಿನವರು ಈ ಹೊಸ ಜಗತ್ತನ್ನು ಕಥೆಯಲ್ಲಿ ಚಿತ್ರಿಸುತ್ತಿದ್ದಾರೆ. ನಿಮ್ಮ ಈ ಹೊಸ ಲೋಕಗಳನ್ನು ಇನ್ನೂ ತಾಳ್ಮೆಯಿಂದ ಚಿತ್ರಿಸುವ ಅಗತ್ಯ ಬೇಕಾಗಿದೆ. ಕಥನ ಹಿಂದಾಗಿ ವಿವರಗಳಲ್ಲಿ ಕಥೆಯನ್ನು ಮುನ್ನೆಡೆಸುವ ಶ್ರಮದಿಂದ ಕಥೆ ನೆನಪಿನಲ್ಲಿ ಬಹಳಕಾಲ ಉಳಿಯಲಾರವು. ಕಥನ ಕ್ರಮ ಸುಧಾರಿಸಿಕೊಳ್ಳಬೇಕೆಂದು ಕಾಣುತ್ತದೆ. ಕಥೆಗಾರನಿಗೆ ತನ್ನದೊಂದು ಕಥೆಗಾರಿಕೆ ಮೈಗೂಡಿಸಿಕೊಳ್ಳಬೇಕು. ನಾನು ಈಚೆಗೆ ಎಂ.ಆರ್.ದತ್ತಾತ್ರಿ ಅವರ ಕಾದಂಬರಿ 'ಒಂದೊಂದು ತಲೆಗೆ ಒಂದೊಂದು ಬೆಲೆ' ಓದಿದೆ. ಅಲ್ಲಿನ ಕಥನ ಕ್ರಮ ಉತ್ತಮವಾಗಿದೆ.

ನಿಮ್ಮ ಕಥೆಗಳನ್ನು ಓದುತ್ತಾ ಸ್ವಲ್ಪ ದೀರ್ಘವಾಗಿಯೇ ಬರೆದಿರುವೆ ಅನಗತ್ಯವೂ ಅನ್ನಿಸುತ್ತಿದೆ. ಕಥೆಗಳನ್ನು ಕುರಿತು ಬರೆಯಲು ತೊಡಗಿಸಿದ್ದಕ್ಕೆ ಧನ್ಯವಾದಗಳು.

ನಿಮಗೆ ಒಳಿತಾಗಲಿ.

-ಡಾ. ಅಮರೇಶ ನುಗಡೋಣಿ, ಹೊಸಪೇಟೆ

MORE FEATURES

ಗಂಗಪಾಣಿ ಕಾದಂಬರಿ: ಗತದ ಮೌಲ್ಯ ಮತ್ತು ಸದ್ಯದ ಅಪಮೌಲ್ಯಗಳ ಮುಖಾಮುಖಿ

01-07-2024 ಬೆಂಗಳೂರು

‘ಗಂಗಪಾಣಿ’ ಎನ್ನುವುದು ತುಮಕೂರು ಭಾಗದ ಒಂದು ವಿಶಿಷ್ಟ ತೆಂಗಿನ ತಳಿ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ...

ಅಂದಿನ ಕಾಲದ ಮನೆ ಮನೆಯ ಅಜ್ಜಿಯರ ಪ್ರತಿರೂಪ ಈ ‘ಮಲೆನಾಡ ಅಜ್ಜಿ’

01-07-2024 ಬೆಂಗಳೂರು

"ಅಜ್ಜಿ ಮೊಮ್ಮಗಳ ಆ ಪುಟ್ಟ ಪ್ರಪಂಚದಲ್ಲಿ ಏನಿದೆ, ಏನಿಲ್ಲ? ಅಜ್ಜಿ ತನ್ನ ಕೈಂಕರ್ಯಗಳನ್ನು ತಣ್ಣಗೆ ಮಾಡುತ್ತಾ ಮೊಮ್...

ಮೌರ್ಯ ಸಾಮ್ರಾಜ್ಯ ಮರುನಿರ್ಮಾಣದ ಕತೆ

01-07-2024 ಬೆಂಗಳೂರು

ಇತಿಹಾಸಕ್ಕೆ ಕಾದಂಬರಿಯ ಕವಚ ತೊಡಿಸಿರುವ ಹೀಲ್ಡಾ ಸೆಲಿಗ್ಮೆನ್ ಅವರ ಈ ಕೃತಿಯ ವೈಶಿಷ್ಟ್ಯ ನಿಸರ್ಗ ವರ್ಣನೆಯ ಕುರಿತಾಗಿ ಅವ...