ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮಮಯಿಯಾಗಿಸಿದ ಬೇಲೂರು ರಘುನಂದನ್


"ಪ್ರಾರಂಭದಿಂದ ಕೊನೆಯವರೆಗೂ ಪ್ರೇಕ್ಷಕರು ತುಟಿಕ್ ಪಿಟಿಕ್ ಎನ್ನದೆ ಒಂದೂ ಕಾಲು ತಾಸು ಹಿಡಿಂಬಿಯ ಹಾದಿಯ ಜಾಡನ್ನೇ ಮಂತ್ರ ಮುಗ್ಧರಂತೆ ಅನುಸರಿಸಿದ್ದು ಉತ್ಪ್ರೇಕ್ಷೆಯಲ್ಲ. ಒಬ್ಬರನ್ನೂ ಬಿಡದೆ, ಭಾಗವಹಿಸಿದ ಎಲ್ಲರನ್ನೂ ವೇದಿಕೆಗೆ ಕರೆದು ಭಾಗಿಯಾಗುವಂತೆ ಮಾಡಿ, ಗೌರವಿಸಿದ ಮಾಲೂರು ವಿಜಿ ಅವರ ಆಯೋಜನೆಯ ಅಚ್ಚುಕಟ್ಟತನ ಮತ್ತು ನಾಟಕರಂಗದ ಬದ್ಧತೆಯನ್ನು ನಿರಂತರ ಬೆರಗುಗೊಳಿಸಿತ್ತು," ಎನ್ನುತ್ತಾರೆ ಜಯರಾಮ್. ಅವರು ಬೇಲೂರು ರಘುನಂದನ್ ನಿರ್ದೇಶಿಸಿರುವ, ಗೀತಾ ರಾಘವೇಂದ್ರ ನಟನೆಯ ‘ಪ್ರೇಮ ಮಯಿ ಹಿಡಿಂಬೆ’ ನಾಟಕ ಪ್ರದರ್ಶನದ ಕುರಿತು ಬರೆದಿರುವ ಲೇಖನ.

ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ. "ಪ್ರೇಮ ಮಯಿ ಹಿಡಿಂಬೆ" ನಾಟಕದಲ್ಲಿ ರಂಗವಿಜಯ ತಂಡದ ಶ್ರೀಮತಿ ಗೀತಾ ರಾಘವೇಂದ್ರ ಅವರ ಏಕವ್ಯಕ್ತಿ ಅಭಿನಯ ರಾಕ್ಷಸರಲ್ಲೂ ಮನುಷ್ಯರಿಗಿಂತ ಮಿಗಿಲಾದ ಸದ್ಗುಣಗಳು, ಪ್ರೀತಿ, ಪ್ರೇಮ, ತ್ಯಾಗ, ವಿರಕ್ತಿ ಇದ್ದವು ಎಂಬುದನ್ನು ಹಿಡಿಂಬೆ ಪಾತ್ರ ದಲ್ಲಿ ಅದ್ಭುತ ವಾಗಿ ನಿರೂಪಿಸಿದರು. ಬೇಲೂರು ರಘುನಂದನ್ ಅವರು ಬರೆದು ನಿರ್ದೇಶಿಸಿದ ಅಪರೂಪದ ಏಕ ವ್ಯಕ್ತಿ ಪ್ರಯೋಗ, ಮೊದಲ ಪ್ರಯೋಗ ದಲ್ಲಿ, ತಮ್ಮ ಮನದಾಳದ ಅನುಕಂಪ, ಸಂಭಾಷಣೆಗಳಲ್ಲಿ ವ್ಯಕ್ತವಾಯಿತು. ಸುಶ್ರಾವ್ಯ ಹಿನ್ನೆಲೆ ಸಂಗೀತದ ನಡುವೆ, ಅರಣ್ಯದ ಗಿಡಮರಬಳ್ಳಿಗಳ ನಾಟಕದ ವೇದಿಕೆ, ಬಿಳಿ ಸೀರೆ ಅಥವಾ ಬಟ್ಟೆಯನ್ನು ಉಪಯೋಗಿಸಿ, ನದಿಯ ಹರಿವು ಮತ್ತು ಜಲಪಾತ ತೋರಿಸಿದ್ದು, ಅದೇ ಬಟ್ಟೆಯನ್ನು ಸುತ್ತಿ ಪಾಂಡವರು ಮತ್ತು ಭೀಮನ ಮುಖದಂತೆ ಬಳಸಿ, ಅವರನ್ನು ಮಾತಾಡಿಸಿದ್ದು, ಕಾವಿ ಬಟ್ಟೆಯನ್ನು ಸುತ್ತಿ, ಕುಂತಿಯ ಮುಖದಂತೆ ಮಾಡಿ, ಮಾತಾಡಿಸಿ, ಮದುವೆಗೆ ಒಪ್ಪಿಸಿದ್ದು, ಕೊಂಬಿನ ಕಿರೀಟ ತೊಟ್ಟು ಹಿಡಿoಬನಂತೆ, ಅದನ್ನು ತೆಗೆದು ಹಿಡಿoಬಿಯಂತೆ ಮಾತಾಡಿದ್ದು, ಎರಡು ಹೂವಿನ ಹಾರಗಳಲ್ಲಿ ಭೀಮ ಮತ್ತು ಹಿಡಿಂಬೆಯ ಮದುವೆ ಮಾಡಿಸಿದ್ದು, ಅದೇ ಹಾರವನ್ನು ಮುದುಡಿ, ಗರ್ಭಧರಿಸಿದ್ದನ್ನು ಬಿಂಬಿಸುವ, ಮಡಕೆಯಲ್ಲಿ ಘಟೋದ್ಗಜನ ತಲೆ ತೋರಿಸಿ, ಅದಮಡಕೆ ಒಡೆದು ಮಹಾಭಾರತ ಯುದ್ಧದಲ್ಲಿ ಅವನ ಸಾವನ್ನು ನಿರೂಪಿಸಿದ್ದು, ಮಾರ್ಮಿಕವಾಗಿ ಮೂಡಿತು.

ಅಷ್ಟೇ ಚೆನ್ನಾಗಿ ಮಾಡಿದ್ದ ವಸ್ತ್ರ ವಿನ್ಯಾಸ, (ಮುಖ ನೋಡಿದರೆ ಸಾಕು! ಅಳೆದು ಹೊಲಿಯುವ ದರ್ಜಿಯ ಶ್ರೇಷ್ಟ ದರ್ಜೆ ಗಣೇಶ್ ಮಾಲೂರು) ನಿರ್ದೇಶಕರ ಮತ್ತು ವಸ್ತ್ರವಿನ್ಯಾಸಕರ ಕೈ ಚಳಕವನ್ನು ತೋರಿಸಿತ್ತು. ಭಾವಕ್ಕೆ ತಕ್ಕ ಬಣ್ಣಗಳ ದೀಪ, ಪ್ರಕಾಶ, ಸ್ಪಷ್ಟ ಶಬ್ದ, ಧ್ವನಿಯ ಉಪಕರಣಗಳು, ಚಿಕ್ಕದಾದರೂ, ಚೊಕ್ಕವಾದ "ಕೇಶವ ಕಲ್ಪ" ಸಭಾಂಗಣದ ಶ್ರೇಷ್ಟತೆಯನ್ನು ಮೆರೆಸಿತ್ತು.

ಪ್ರಾರಂಭದಿಂದ ಕೊನೆಯವರೆಗೂ ಪ್ರೇಕ್ಷಕರು ತುಟಿಕ್ ಪಿಟಿಕ್ ಎನ್ನದೆ ಒಂದೂ ಕಾಲು ತಾಸು ಹಿಡಿಂಬಿಯ ಹಾದಿಯ ಜಾಡನ್ನೇ ಮಂತ್ರ ಮುಗ್ಧರಂತೆ ಅನುಸರಿಸಿದ್ದು ಉತ್ಪ್ರೇಕ್ಷೆಯಲ್ಲ. ಒಬ್ಬರನ್ನೂ ಬಿಡದೆ, ಭಾಗವಹಿಸಿದ ಎಲ್ಲರನ್ನೂ ವೇದಿಕೆಗೆ ಕರೆದು ಭಾಗಿಯಾಗುವಂತೆ ಮಾಡಿ, ಗೌರವಿಸಿದ ಮಾಲೂರು ವಿಜಿ ಅವರ ಆಯೋಜನೆಯ ಅಚ್ಚುಕಟ್ಟತನ ಮತ್ತು ನಾಟಕರಂಗದ ಬದ್ಧತೆಯನ್ನು ನಿರಂತರ ಬೆರಗುಗೊಳಿಸಿತ್ತು.

ನಿಜವೇನೆಂದರೆ, ಹಿಡಿಂಬಿ ದ್ರೌಪದಿಗಿಂತ ಮೊದಲೇ ಪಾಂಡವರ ಕುಟುಂಬದಲ್ಲಿ ಮೊದಲು ಭೀಮನ ಪತ್ನಿಯಾಗಿ ಬಂದ ಹಿರಿಯ ಸೊಸೆ. ಬಲಶಾಲಿ ಯಾದ ತನ್ನ ಅಣ್ಣ ಹಿಡಿoಬ ನನ್ನು ಯಾರು ಸೋಲಿಸುವರೋ ಅಂಥ ಪರಾಕ್ರಮಿಯನ್ನು ವರಿಸುವ ಬಯಕೆ ಅವಳಲ್ಲಿ. ಭೀಮನ ತಿನ್ನಲು ಬಂದ ಅವಳಲ್ಲಿ ಅವನ ಅಂಗ ಸೌಷ್ಟವ ನೋಡಿ ಪ್ರೇಮ ಉಕ್ಕುವುದು. ತನ್ನ ಅಣ್ಣ ಭೀಮನೊಡನೆ ಕಾದ ಮುಷ್ಟಿಕಾಳಗದಲ್ಲಿ ಭೀಮನಿಗೆ ಪಟ್ಟುಗಳನ್ನು ಹೇಳಿಕೊಟ್ಟು ಸಹಾಯ ಮಾಡುತ್ತಾಳೆ. ಅವನ ನಂಬಿಕೆ, ಮನ ಗೆಲ್ಲುತ್ತಾಳೆ. ಅಂತೇ ಕುಂತಿಯ ಮನವನ್ನು ಬುದ್ದಿವಂತಿಕೆಯಿಂದ ಗೆದ್ದು, ನಂತರ ಭೀಮನು ಒಡ್ಡಿದ "ಮದುವೆಯಾಗುವುದಾದರೆ ಒಂದು ವರ್ಷಕ್ಕೆ ಬಿಟ್ಟು ಹೋಗುವ" ಷರತ್ತಿಗೂ ಒಪ್ಪಿ ಮದುವೆಯಾದ ತ್ಯಾಗಿ. ಅವರಿಬ್ಬರ ಪ್ರೇಮದಿಂದ ಹುಟ್ಟುವ ಮಡಕೆಯಂತಹ ಬುರುಡೆಯುಳ್ಳ(bald headed)ಘಟೋದ್ಗಜ, ರಾಕ್ಷಸರಂತೆ ಬೆಳೆದ (16 ವರ್ಷದ ) ಮಗುವಾಗಿ ಜನ್ಮತಾಳುತ್ತಾನೆ. ಅರ್ಥಾತ್ ರಾಕ್ಷಸಗರ್ಭದಲ್ಲಿ ಹುಟ್ಟಿದವನು. ಕೌರವರು ಮಹಾ ಭಾರತ ಯುದ್ಧದಲ್ಲಿ ಅಧರ್ಮದಿಂದ ರಾತ್ರಿ ಯುದ್ಧವನ್ನು, ಭಂಡತನದಿಂದ ಪ್ರಾರಂಭಿಸಿದಾಗ, ಕೃಷ್ಣ, ನಿಶಾಚರರಾದ ರಾಕ್ಷಸರು ರಾತ್ರಿ ಯುದ್ಧದಲ್ಲಿ ನಿಪುಣರು ಎಂದು, ಘಟೋದ್ಗಜನನ್ನು ಮಾಯ ಯುದ್ಧ ಮಾಡಲು, ಭೀಮನ ಮೂಲಕ ಕರೆಸಿ, ಆ ರಾತ್ರಿ ಯುದ್ಧದಿಂದ ಪಾಂಡವರನ್ನು ಪಾರುಮಾಡುತ್ತಾನೆ. ಅದರಲ್ಲಿ ಪಾಪ ಘಟೋದ್ಗಜ ವೀರಾ ವೇಶದಿಂದ ಹೋರಾಡಿ ಹತನಾಗುತ್ತಾನೆ. ಮೊದಲ ಸೊಸೆಯಾದರೂ ಹಿಡಿಂಬೆ ಗಂಡ ನಿಂದ ರಾಜ್ಯವನ್ನೂ ಗಳಿಸಲಿಲ್ಲ. ರಾಣಿಯೂ ಆಗಲಿಲ್ಲ. ಗಂಡನೂ ಒಬ್ಬಳನ್ನೇ ಬಿಟ್ಟು ಹೋದ. ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಒಂಟಿಯಾಗಿ, ಎಲ್ಲ ಸಂಪತ್ತನ್ನು ಕಳೆದುಕೊಂಡು, ಸಂಸಾರ ಸುಖವನ್ನೂ ಅನುಭವಿಸಲಿಲ್ಲ. ಕಡೆಗೆ ತಾನು ಹುಟ್ಟಿದ ವನಸಿರಿಯನ್ನೇ ತನ್ನ ಮಕ್ಕಳು, ಅರಣ್ಯವೇ ತನ್ನ ಮನೆ, ಅದೇ ಸರ್ವಸ್ವ ಎಂದುಕೊಂಡು ಕಾಡಿನಲ್ಲಿ ಪ್ರಕೃತಿ ಮಾತೆಯಾಗಿ ಲೀನವಾಗುತ್ತಾಳೆ. ಇದು ನಾಟಕ ಮಂಗಳಕರ ಮುಕ್ತಾಯ.

ಮಹಾಭಾರತದಲ್ಲೇ ತಿಳಿಸಿರುವಂತೆ, ಪಾಂಡವರು ವನವಾಸ ಮುಗಿಸಿ ಹಸ್ತಿನಾ ಪುರಕ್ಕೆ ಮರಳಿದರೂ, ಹಿಡಿಂಬಿ ಮಾತ್ರ ಅವರ ಹಿಂದೆ ಹೋಗದೆ, ರಾಜ್ಯಭೋಗವನ್ನು ತೊರೆದು ದೈವತ್ವ ಪಡೆಯಲು ಕಾಡಿನಲ್ಲಿ ಉಳಿದು ತಪಸ್ಸು ಮಾಡಿ ದೇವಿಯಾಗುತ್ತಾಳೆ. ಹಿಮಾಚಲಪ್ರದೇಶ ರಾಜ್ಯದಲ್ಲಿರುವ, ಹಿಡಿಂಬವಧೆ ನಡೆದ "ಹೆಟೌಡಾ ಅರಣ್ಯ ಪ್ರದೇಶ "ಹಿಡಿಂಬೆ" ಹೆಸರಿನ ಅಪಭ್ರಂಶ. ಇಲ್ಲಿನ ಡುಂಗ್ರಿ ವನಪ್ರದೇಶದಲ್ಲಿರುವ ಬೃಹತ್ ದೇವದಾರು ಮರಗಳ ಕಾಡಿನ ಮಧ್ಯದಲ್ಲಿ, ಪಗೋಡಾ ಆಕಾರದ 24 ಅಡಿ ಎತ್ತರದ ಮಂದಿರ, ಇಳಿಜಾರು ಬಿಟ್ಟ ಚೌ ಕಾಕಾರದ ಮರದ ಚಾವಣಿಗಳನ್ನು ನಾಲ್ಕು ದಿಕ್ಕುಗಳಲ್ಲಿ ಕೂಡಿಸಿ, ಮೂರು ಅಂತಸ್ತುಗಳಲ್ಲಿ, ಶಿಖರ ದಲ್ಲಿ ಹಿತ್ತಾಳೆ ಗೋಪುರವನ್ನು ನಿರ್ಮಿಸಿರುವ ದೇವಾಲಯವನ್ನು ಕ್ರಿ. ಶ 1553ರಲ್ಲಿ ಮಹಾರಾಜ ಬಹಾದ್ದೂರ್ ಸಿಂಗ್ ಕಟ್ಟಿಸಿದರು. ಸುಮಾರು 475 ವರ್ಷಗಳಷ್ಟು ಹಳೆಯ ಗುಡಿ. ಹಿಮಾಲಯದ ಅಡಿ ಬಂಡೆಯ ಮೇಲೆ, 12 ಅಡಿ ಎತ್ತರದ ಪೀಠಪ್ರದೇಶ ದಮೇಲೆ, ಸಂಕೀರ್ಣವಾಗಿ ಕೆತ್ತಿದ ಮರದ ಬಾಗಿಲು ಮತ್ತು ಶಿಖರಗಳನ್ನು ಒಳಗೊಂಡ ಈ ದೇವಾಲಯವನ್ನು ಕೆತ್ತಿದ ಕಲಾವಿದ, "ಇನ್ನೆಲ್ಲೂ ಅಂತಹ ಸುಂದರವಾದ ಕೃತಿಯನ್ನು ಬೇರೆಲ್ಲಿಯೂ ಕೆತ್ತುವುದಿಲ್ಲ!" ವೆಂದು ಪ್ರತಿಜ್ಞೆ ಮಾಡಿ
ತನ್ನ ಕೈಗಳನ್ನು ಕತ್ತರಿಸಿಕೊಂಡನಂತೆ.

ಹಿಡಿಂಬೆಯನ್ನೇ "ಭುಟನ್ದೇವಿ" ಎಂದೂ ಕರೆಯುವ, ಕೇವಲ 3 ಇಂಚಿನ ವಿಗ್ರಹವನ್ನಿಟ್ಟು ಇಲ್ಲಿ ಪೂಜಿಸಲಾಗುತ್ತದೆ. ದೇವಾಲಯದ ಒಂದು ಬದಿಯ ಬಂಡೆ ಹತ್ತಿರ, ನೇತು ಬಿಟ್ಟ ದೊಡ್ಡ ಹಗ್ಗದಲ್ಲಿ ತಪ್ಪಿತಸ್ಥರಿಗೆ ಕೈ ಕಾಲು ಕಟ್ಟಿ ಜೋರಾಗಿ ತೂಗಿ ಎದುರಿನ ಬಂಡೆಗೆ ತಾಗಿ ಬುರುಡೆ ಕೈ ಕಾಲು ಜಜ್ಜಿ ಒಡೆಯುವ ಶಿಕ್ಷೆ ವಿಧಿಸುತ್ತಿದ್ದರಂತೆ. ಅಮ್ಮನ ಎದುರಿಗೆ ಕೋಣನ ವಿಗ್ರಹ ಶಿವನ ಮುಂದೆ ನಂದಿಯ ಹಾಗೆ ಕೂತಿದೆ. ಗುಡಿಯಿಂದ 70 ಮೀಟರ್ ದೂರದಲ್ಲಿ ಘಟೋದ್ಗಜನ ಗುಡಿಯಿದೆ. ನಮ್ಮ ದೇವಸ್ಥಾನಗಳಲ್ಲಿ ಗೋವು- ನಂದಿಗಳನ್ನು ಸಾಕಿದಂತೆ ಹಿಮಾಲಯದ "ಯಾಕ್" ಪ್ರಾಣಿಯನ್ನು ಸಾಕುತ್ತಾರೆ ಇಲ್ಲಿ.

ಕುಲು ಮನಾಲಿ ಪಟ್ಟಣದಲ್ಲಿ ಪ್ರತಿ ವರ್ಷ ದಸರಾ ಉತ್ಸವದಲ್ಲಿ "ಹಿಡಿಂಬೆಯ ರಥೋತ್ಸವ" ನಡೆಯುತ್ತದೆ. ಏಳು ದಿನಗಳ ಉತ್ಸವದ ಕೊನೆಯಲ್ಲಿ, "ಲಂಕಾ ದಹನ್" ದಿನದಂದು, ಹಿಡಿಂಬೆ ಮಾಡಿದ ಸರ್ವ ಪರಿತ್ಯಾಗವನ್ನು ಸ್ಮರಿಸಲಾಗುತ್ತದೆ. ಪಕ್ಕದ "ಸಿರಾಜ್" ಜಿಲ್ಲೆಯಲ್ಲೂ, ಅಲ್ಲಿನ "ಬಂಜಾರ" ಗ್ರಾಮದಲ್ಲಿ "ಘಟೋದ್ಗಜ" ನನ್ನು ಜನಪ್ರಿಯ ದೇವರಂತೆ ಇಂದಿಗೂ ಪೂಜಿಸುವುದು ಸೋಜಿಗವೇ ಸರಿ. ನಾಟಕದ ವಸ್ತು ಮತ್ತು ಸಂದೇಶ ಈ ಆಚರಣೆಯ ಸಂವೇದನೆಗೆ ಪೂರಕ ಮತ್ತು ಸಾಕ್ಷಿ. ಅಲ್ಲದೆ ಈ ಘಟನೆ ಮಾನವರು ಅರ್ಥಾತ್ ಪಾಂಡವರು ಅದರಲ್ಲೂ ಕೃಷ್ಣನಷ್ಟೇ ದೂರದರ್ಶಿಯಾಗಿದ್ದ ಕುಂತಿ ಮತ್ತು ಷರತ್ತುಗಳ ಬಿಡದ ಭೀಮ ಹೇಗೆ ತಮ್ಮ ಸ್ವಾರ್ಥಕ್ಕೆ ರಾಕ್ಷಸ ರನ್ನು ಬಳಸಿಕೊಂಡರು? ಎಂಬುದಕ್ಕೂ, ಅದೇ ರೀತಿ ಕೃಷ್ಣ ಅರ್ಥಾತ್ ವಿಷ್ಣು, ಅಲ್ಲದೆ ದೇವತೆಗಳೂ ಸಹ ತಮ್ಮ ಬದ್ಧ ವೈರಿಗಳಾದ ರಾಕ್ಷಸರಿಗೆ ಮೋಸ ಮಾಡುವುದನ್ನು ಬಿಡಲಿಲ್ಲ. ಎಂಬುದಕ್ಕೂ ಸಾಕ್ಷಿ.

ದೇವತೆಗಳೂ, ಮಾನವರೂ, ರಾಕ್ಷಸರನ್ನು ಕೆಟ್ಟವರು" ಎಂಬ ಪಟ್ಟ ಕಟ್ಟದೆ, ಆವರನ್ನು BRAND ಮಾಡದೆ ಘಟೋದ್ಗಜನ ಒಳ್ಳೆಯ ಗುಣಗಳನ್ನೂ ಹಿಡಂಬಿಯ ತ್ಯಾಗವನ್ನೂ ಗೌರವಿಸಬೇಕಲ್ಲವೇ? ಎಲ್ಲ ರಾಕ್ಷಸರೂ ಕೆಟ್ಟವರೋ? ಮೋಸ ಮಾಡಿದವರಲ್ಲಿ ದೇವತೆಗಳೂ, ಮಾನವರೂ ಇಲ್ಲವೇ? ಕೇವಲ ರಾಕ್ಷಸರನ್ನೇ ದೂರುವುದು ಎಷ್ಟು ನ್ಯಾಯ? ಯೋಚಿಸಬೇಕಾದದ್ದೇ. ವಿಚಾರ ಮಾಡಬೇಕಾದದ್ದೇ.

ಒಟ್ಟಾರೆ ರಕ್ಕಸಿಯನ್ನು ಮಾನವೀಯ ಪ್ರೇಮಿಯಾಗುವಂತೆ ಮಾಡಿ ವನದೇವತೆಯಂತೆ ಚಿತ್ರಿಸುವಲ್ಲಿ ಸಂಭಾಷಣೆ ವಿನ್ಯಾಸ ನಿರ್ದೇಶನದಲ್ಲಿ ಬೇಲೂರು ರಘುನಂದನ್ ಮತ್ತೆ ಗೆದ್ದಿದ್ದಾರೆ. ರಕ್ಕಸಿಯಾಗಿ, ಮಾನವೀಯ ಮೌಲ್ಯದ ಹೆಣ್ಣಾಗಿ, ಗಂಡನಿಗೆ ಹೆಂಡತಿಯಾಗಿ, ಅತ್ತೆಗೆ ಸೊಸೆಯಾಗಿ, ತಾಯಿಯಾಗಿ, ಎಲ್ಲಾ ಮಜುಲುಗಳನ್ನು ಲೀಲಾಜಾಲವಾಗಿ ಅಭಿನಯಿಸಿದ ಗೀತಾ ರಾಘವೇಂದ್ರ ಅವರ ಪರಿಶ್ರಮ ನಿಜಕ್ಕೂ ಅದ್ಭುತ... ಹಾಗೂ ಶ್ಲಾಘನೀಯ.

ಶುಶ್ರಾವ್ಯ ಸಂಗೀತ, ಮಧುರವಾದ ಗಾಯನ-ಸಂಗೀತ ಸಂಯೋಜನೆಯಲ್ಲಿ ಗೆದ್ದ ವೈಷ್ಣವ್ ರಾವ್, ಅತ್ಯದ್ಭುತ ಬೆಳಕು ವಿನ್ಯಾಸದಲ್ಲಿ ಜನಮನ ಗೆದ್ದ ರವಿಶಂಕರ್, ಬೆಳಕು ಹಿನ್ನೆಲೆ ವಿನ್ಯಾಸ ಹಗ್ಗಗಳನ್ನು ಅದ್ಭುತವಾಗಿ ಬಳಸುವಂತೆ ಮಾಡಿದ ರಂಗ ವಿನ್ಯಾಸಕ ಶ್ರೀ ನಿವಾಸ್ ಸಂಪತ್ ಲಕ್ಷ್ಮಿ, ಇವರುಗಳ ಪ್ರತಿಭೆ ಮೆಚ್ಚು ತಕ್ಕದ್ದು. ಒಟ್ಟಾರೆ ಒಂದು ಕಾಲು ಗಂಟೆ ಅದ್ಬುತ ಪ್ರಯೋಗ ನೀಡಿದ ರಂಗ ವಿಜಯಕ್ಕೆ ಮತ್ತೊಂದು ವಿಜಯದ ಗರಿ ಈ ಪ್ರಯೋಗ ಎನ್ನಬಹುದು.

ಜಯರಾಮ್
ಸಖರಾಯಪಟ್ಟಣ

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...