ನಮ್ಮ ಪೀಳಿಗೆಯ ಹಲವರಿಗೆ ‘ನಿನ್ನ ಪ್ರೀತಿಯ, ನಾನು!’ ನಾಟಕ ರಿಲೇಟ್‌ ಆಗಬಹುದು


"ಬಾಲ್ಯದಿಂದ ಶುರುವಾದ ಪತ್ರ - ಪ್ರೇಮ - ಮಾತುಕತೆಯೊಂದು ದಶಕಗಳ ಕಾಲವೂ, ಬದುಕಿನ ಎಲ್ಲ ಘಟ್ಟದಲ್ಲಿಯೂ ಜೊತೆಯಾಗುವ ಚಂದದೊಂದು ದೃಶ್ಯ ಕಾವ್ಯದಂತಹಾ ನಾಟಕ ನಿನ್ನ ಪ್ರೀತಿಯ, ನಾನು!," ಎನ್ನುತ್ತಾರೆ ಸಮುದ್ಯತಾ ಕಂಜರ್ಪಣೆ. ಅವರು ಎ.ಆರ್.ಗರ್ನಿ ಅವರ ಮೂಲ ವೆಂಕಟೇಶ್‌ ಪ್ರಸಾದ್ ಅವರ ರೂಪಾಂತರ & ನಿರ್ದೇಶನದ ‘ನಿನ್ನ ಪ್ರೀತಿಯ, ನಾನು!’ ನಾಟಕದ ಬಗ್ಗೆ ಬರೆದ ಲೇಖನ.

ಸಣ್ಣವಳಿದ್ದಾಗ ಒಮ್ಮೆ ಓದಿ, ಮತ್ತೆ ಯಾವತ್ತೂ ಓದಲು ಧೈರ್ಯ ಬರದ ಹಾಗೆ ಮಾಡಿದ ಕಾದಂಬರಿ ವೈಕ್ಕಂ ಮಹಮ್ಮದ್‌ ಬಷೀರ್‌ ಅವರ ʼಬಾಲ್ಯಕಾಲ ಸಖಿ.ʼ ಬಾಲ್ಯದ ಪ್ರೇಮ, ನಂತರದ ಬದುಕುಗಳು ಎಲ್ಲವೂ “ಯಾಕೆ” ಎಂದು ಪ್ರಶ್ನಿಸುತ್ತಾ ಗೊಂದಲಕ್ಕೆ ದೂಡುವುದು ಸಂಕಟ ತರುವಂಥದ್ದು. ನಂತರದಲ್ಲಿ ಖಲೀಲ್‌ ಗಿಬ್ರಾನನ ʼಪ್ರೇಮಪತ್ರಗಳುʼ ಓದಿದಾಗ, ನಮ್ಮ ಬದುಕು, ಭಾವನೆ ಎಲ್ಲವನ್ನು ತೆರೆದಿಡಲು ಪತ್ರವೊಂದು ಸಶಕ್ತ ಮಾಧ್ಯಮ ಎಂದು ಅನಿಸಿತ್ತು.

ಇಂದಿಗೂ ನನಗೆ, ನಾನು ಮಾತನಾಡುವುದಕ್ಕಿಂತ ಅಚ್ಚುಕಟ್ಟಾಗಿ ಬರಹದ ಮೂಲಕ ನನ್ನ ಯೋಚನೆಗಳನ್ನು ವ್ಯಕ್ತಪಡಿಸಬಲ್ಲೆ ಎನಿಸಿದಾಗೆಲ್ಲ ಪತ್ರ ವ್ಯವಹಾರಗಳೆಷ್ಟು ಚಂದ ಅನಿಸುತ್ತಲೇ ಇರುತ್ತದೆ.

ಬಾಲ್ಯದಿಂದ ಶುರುವಾದ ಪತ್ರ - ಪ್ರೇಮ - ಮಾತುಕತೆಯೊಂದು ದಶಕಗಳ ಕಾಲವೂ, ಬದುಕಿನ ಎಲ್ಲ ಘಟ್ಟದಲ್ಲಿಯೂ ಜೊತೆಯಾಗುವ ಚಂದದೊಂದು ದೃಶ್ಯ ಕಾವ್ಯದಂತಹಾ ನಾಟಕ ನಿನ್ನ ಪ್ರೀತಿಯ, ನಾನು!ʼ.

ಪತ್ರಗಳ ಮೂಲಕ, ಎರಡು ಬದುಕುಗಳ ವೈರುಧ್ಯವನ್ನು ತೆರೆದಿಡುತ್ತಾ ಹೋಗುತ್ತದೆ ಈ ನಾಟಕ. ಬಾಲ್ಯ, ಬಾಲ್ಯದಲ್ಲಿನ ಪೋಷಕರ ನಿರೀಕ್ಷೆಗಳು, ಮಕ್ಕಳಿಗಾಗುವ ಒತ್ತಡಗಳು ಮುಂತಾದುವನ್ನು ಸಹಜವೆಂಬಂತೆ, ಉಭಯ ಕುಶಲೋಪರಿಯ ರೀತಿಯೇ ಬರೆಯುತ್ತಾ, ಬೆಳೆಯುತ್ತಾ ಬದುಕಿಗೆ ಸುತ್ತಿಕೊಳ್ಳುವ ಪ್ರೀತಿ, ಪೊಸೆಸಿವ್‌ ನೆಸ್‌, ಕರಿಯರ್‌, ಅಪ್ಪ ಅಮ್ಮನ ನಿರ್ಧಾರಗಳು, ನಮ್ಮ ವೈಯಕ್ತಿಕ ನಿರ್ಧಾರಗಳು ಎಲ್ಲವನ್ನೂ ಹೆಣೆಯುತ್ತಾ, ಬದುಕು ಹಂತಹಂತವಾಗಿ ಹೇಗೆ ಬದಲಾಗಬಹುದು, ಕೊನೆಗೆ ಯಾವುದು ಮುಖ್ಯವಾಗುತ್ತದೆ, ಯಾವುದು ಮರೆತೇ ಹೋಗುತ್ತದೆ ಎನ್ನುವ ಎಲ್ಲ ಎಳೆಗಳು ಭಾವನಾತ್ಮಕವಾಗಿ ಮೂಡಿಬರುತ್ತವೆ.

ನಮ್ಮ ಪೀಳಿಗೆಯ ಹಲವರಿಗೆ ಈ ಇಡೀ ನಾಟಕ ರಿಲೇಟ್‌ ಆಗಬಹುದು ಮತ್ತು ತುಂಬಾ ಭಾವನಾತ್ಮವಾಗಿ ಕನೆಕ್ಟ್‌ ಆಗಬಹುದು ಅನಿಸಿದೆ ನನಗೆ. ಅಪ್ಪ ಅಮ್ಮಂದಿರ active participation, attention ಸಿಗದೇ ಇದ್ದಾಗ ಮಕ್ಕಳ ಗೊಂದಲ, ಅಪ್ಪ ಅಮ್ಮಂದಿರ ಹೇರಿಕೆಯ ನಿರ್ಧಾರಗಳಿಗೆ ಮಕ್ಕಳ ಜೀವನ So called settled ಆದರೂ, ಎಲ್ಲೋ ಉಳಿದುಬಿಡುವ ಹೃದಯದ ಕರೆ, ಎಲ್ಲವೂ ನಾವೆಲ್ಲರೂ ಅನುಭವಿಸಿರುವಂಥದ್ದು. ನಮಗೆ ಬೇಕಾದ ಏನನ್ನೋ ಹುಡುಕಿ ಹೋಗಿರ್ತೀವಿ. ಆದರೆ ಅದಕ್ಕಿಂತ ತುಂಬಾ ಬೇಕಾದದ್ದೇನೋ ಹಿಂದೆಯೇ ಉಳಿದುಬಿಡುತ್ತದೆ.

ಬದುಕನ್ನು ಸಮಾಜದ ದೃಷ್ಟಿಕೋನದಲ್ಲಿ ಕಟ್ಟಿಕೊಳ್ಳೋಕೆ ಹೋದಾಗ ಕೊನೆಗೆ ನಾನು ಸಾಧಿಸಿದ್ದು ಇದನ್ನೇನಾ, ಇದೇನಾ ನನಗೆ ಬೇಕಾಗಿದ್ದು? ಕಣ್ಮುಂದೆಯೇ ಇದ್ದದ್ದನ್ನು ಗುರುತಿಸುವಲ್ಲಿ, ತಮ್ಮದಾಗಿಸಿಕೊಳ್ಳುವಲ್ಲಿ ಇಷ್ಟು ನಿರ್ಲಕ್ಷ್ಯ ತೋರಿಸಿದೆವಾ, ಎಲ್ಲ ಸಿಕ್ಕ ನಾವು ಬದುಕಿಡೀ ಬೇಕಾದ ಪ್ರೇಮವೊಂದನ್ನು ದಕ್ಕಿಸಿಕೊಂಡೆವಾ, ಅದೇ ಮುಖ್ಯವಾಗಿತ್ತಾ ಎನ್ನುವ ಗೊಂದಲದ ಹಂತಕ್ಕೆ ತಲುಪಿಬಿಡುತ್ತೇವೆ.

ಬಾಲ್ಯದ ತುಂಟತನಗಳು, ಮುನಿಸು, ಒಲವು, ಜವಾಬ್ದಾರಿ, ಡಿಪ್ಲೊಮಸಿ ಎಲ್ಲದರ ವ್ಯಕ್ತಪಡಿಸುವಿಕೆಯಲ್ಲಿ ಕಿಶೋರ್‌ ಇಷ್ಟವಾದರು. ನಾನು ಒಂದು ಹೆಜ್ಜೆ ಮುಂದಿಟ್ಟರೆ ಬದುಕು ನಾಲ್ಕು ಹೆಜ್ಜೆ ಹಿಂದೆಳೆಯುತ್ತದೆ ಎನ್ನುತ್ತಲೇ ತುಂಟ ಹುಡುಗಿಯಾಗಿ, ಮಹತ್ವಾಕಾಂಕ್ಷಿಯಾಗಿ, ಪ್ರೇಮಕ್ಕೆ ಹಂಬಲಿಸುತ್ತಾ, ಪ್ರೌಢವಾಗುತ್ತಾ, ಬದುಕು ಕಟ್ಟಿಕೊಳ್ಳಲು ಹೆಣಗುತ್ತಾ, ಸೋಲೊಪ್ಪಿಕೊಳ್ಳದ ನಮ್ಮೆಲ್ಲರ ಇನ್ನೊಂದು ಮುಖವಾಗಿ ತುಸು ಕಾಡುತ್ತಾರೆ ಸಿರಿ ರವಿಕುಮಾರ್.‌

ಎ.ಆರ್‌ ಗರ್ನಿಯವರ Love Letters ಅನ್ನು ಸೊಗಸಾಗಿ ರೂಪಾಂತರಿಸಿದ್ದಾರೆ ವೆಂಕಟೇಶ್‌ ಪ್ರಸಾದ್.‌

ಕಾದಂಬರಿಯೊಂದನ್ನು ಓದಿದ ಹಾಗೆ ನಿಧಾನವಾಗಿ ಒಳಗಿಳಿವ, ನಿಧಾನವಾಗಿ ಬದುಕಿನ ಎಷ್ಟೋ ಕ್ಷಣಗಳನ್ನು ನೆನಪಿಸುವ, ಅಷ್ಟೇ ಆಳವಾಗಿ, ನಿಧಾನವಾಗಿ ಕಾಡುವ ಸೊಗಸಾದ ನಾಟಕ ನಿನ್ನ ಪ್ರೀತಿಯ, ನಾನು!

-

MORE FEATURES

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...

ಕೃಷ್ಣನ ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ

22-04-2025 ಬೆಂಗಳೂರು

“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...

ವಿಮರ್ಶೆಯ ಸಮೀಕ್ಷೆ ಹಾಗೂ ಕೃತಿ ವಿಮರ್ಶೆಯ ಮೂಲಕ ವಿಮರ್ಶೆಯನ್ನು ಬೆಳೆಸುವ ಬಗೆಯ ಬಗ್ಗೆ ಒಂದು ಚರ್ಚೆ

21-04-2025 ಬೆಂಗಳೂರು

ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...