ಮುಗುಳ್ನಗೆ ಮರೆಯಲ್ಲಿ ನೋವು... ಈ ಕಾವ್ಯದ ಚೆಲುವು….!


ತಮ್ಮ ನೋವು ಇತರರಿಗೆ ತಿಳಿಯಬಾರದು ಎಂದು ಸೂಕ್ಷ್ಮ ಮನಸ್ಸಿನ, ವಿಶಾಲ ಹೃದಯದ ವ್ಯಕ್ತಿಗಳು ಮುಗುಳ್ನಗುತ್ತಲೇ ಇರುತ್ತಾರೆ. ನೋವು ಅರಿಯದ ವ್ಯಕ್ತಿಗಳು ಈ ಮುಗುಳ್ನಗೆಯೇ ಅವರ ಮನಸ್ಸಿನ ಕನ್ನಡಿ ಎಂದು ತಿಳಿಯುತ್ತಾರೆ. ಆದರೆ, ಅನ್ಯೋನ್ಯ ಮನಸ್ಸುಗಳು ಮಾತ್ರ ಮುಗುಳ್ನಗೆಯ ಮರೆಯಲ್ಲಿಯ ನೋವು ಅರ್ಥ ಮಾಡಿಕೊಳ್ಳುತ್ತವೆ. ಅದನ್ನು ತಿಳಿದು ನೋವಿಗೆ ಮದ್ದಾಗಲು ಚಡಪಡಿಸುತ್ತವೆ. ಇಂತಹ ಮನೋ ಚಿತ್ರಣದ ದಟ್ಟ ಅನುಭವ ನೀಡುವ ಅಂಬಿಕಾತನಯದತ್ತರ ‘ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ…’ ಕವಿತೆಯನ್ನು ‘ಸ್ಮೈಲ್ ಡಿಪ್ರೇಶನ್’ ಪರಿಕಲ್ಪನೆಯಲ್ಲಿ ವೆಂಕಟೇಶ ಮಾನು ವಿಶ್ಲೇಷಿಸಿದ್ದಾರೆ.

 

ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ…? ಎಂದು ಪತ್ನಿಯನ್ನು ಪ್ರಶ್ನಿಸುವ, ಕಾರಣ ತಿಳಿಯಲು ಬಯಸಿ, ದಯನೀಯವಾಗಿ ಬೇಡುವ ಕವಿ ಅಂಬಿಕಾತನಯರ (ದ.ರಾ.ಬೇಂದ್ರೆ) ‘ಹುದುಗಲಾರದ ದುಃಖ’ ಕವನದ ಈ ಸಾಲು, ದುಃಖದ ಮಡುವಿನಲ್ಲಿರುವ ಮನಸ್ಸಿಗೆ ಸುಖದ ಮುಖವಾಡ ತೊಡಿಸಿ, ಮುಗುಳ್ನಗೆ ಸೂಸುವ ಬಲವಂತದ ವರ್ತನೆಯನ್ನುತೆರೆದಿಡುತ್ತದೆ. ಮುಗುಳ್ನಗೆಯ ಮರೆಯಲ್ಲಿ ರಹಸ್ಯವಾಗಿ ನೋವನ್ನು ಅಡಗಿಸಿಡುವ ವರ್ತನೆಯ ಪರಿಗೆ  ಮನೋವೈಜ್ಞಾನಿಕವಾಗಿ ‘ಸ್ಮೈಲ್ ಡಿಪ್ರೆಶನ್’ (ಮುಗುಳ್ನಗೆ ಮರೆಯಲ್ಲಿ ಖಿನ್ನತೆ) ಎಂದು ಗುರುತಿಸಲಾಗುತ್ತದೆ. 

ಯಾವುದೇ ಕಾರಣಕ್ಕೂ ತನ್ನ ನೋವು ಪತಿಗೆ ತಿಳಿಯಬಾರದು ಎಂದು ಪತ್ನಿ, ಹೇಗಾದರೂ ಸರಿ; ಕಾರಣ ತಿಳಿಯಬೇಕು ಎಂದು ನೋವು ಅನುಭವಿಸುವ ಪತಿ (ಕವಿ)-ಹೀಗೆ ಇಬ್ಬರೂ ತಮ್ಮ ತಮ್ಮ ಮನೋ ನೆಲೆಯಲ್ಲಿ ನಿಂತು ವ್ಯಕ್ತ ಪಡಿಸುವ ಭಾವದ ಆವೇಶಗಳು ಮನೋವಿಶ್ಲೇಷಣೆಗೆ ಸಾಕಷ್ಟು ಸಾಮಗ್ರಿ ಒದಗಿಸುತ್ತವೆ. ಗಮನಿಸಬೇಕಾದ ಆಸಕ್ತಿಕರ ಸಂಗತಿ ಎಂದರೆ-ಇಲ್ಲಿಯ ತಂತ್ರ; ಪತ್ನಿಯ ವರ್ತನೆ. ಹೊರಗಡೆ ಕಾಣುವುದು ಆಕೆಯ ಮುಗುಳ್ನಗೆ ಮಾತ್ರ. ಆಂತರ್ಯದಲ್ಲಿ ದುಃಖ. ಉಳಿದಿದ್ದೆಲ್ಲವೂ ಪತಿಯ (ಕವಿ) ಪ್ರೀತಿಪೂರ್ವಕ ಆಗ್ರಹ, ‘ಹೆಣ್ಣನ್ನು ಬರೀ ಭೋಗದ ವಸ್ತುವನ್ನಾಗಿಸಿ ನೋಡುವ ತಾನು ಅತಿ ಕಾಮುಕನಲ್ಲ’ ಎಂಬ ದೈನ್ಯ ನಿವೇದನೆ. ಆ ಮೂಲಕ ಪತ್ನಿಯ (ಸ್ಮೈಲ್ ಡಿಪ್ರೆಶನ್) ನೋವಿಗೆ ಕಾರಣ ತಿಳಿದು ಪರಿಹಾರ ಸೂಚಿಸಲು ಹಾತೊರೆಯುವ ಮನಸ್ಸಿನ ಉದ್ವಿಗ್ನತೆ, ಕಾವ್ಯದುದ್ದಕ್ಕೂ ಕಾಣಬಹುದು.

ಸ್ಮೈಲ್ ಡಿಪ್ರೆಶನ್ ಎಂದರೇನು?

ನೋವು, ಬೇಸರ.. ಇಂತಹ ನೈಜ ಕಾರಣವನ್ನು ಹುದುಗಿಸಿಡಲು ನಗುವಿಗೆ ಸಾಕಷ್ಟು ಸಾಮರ್ಥ್ಯವಿರುತ್ತದೆ. ಸುಮ್ಮಸುಮ್ಮನೆ ನಕ್ಕರೆ ಅದು ಅಪಾರ್ಥ-ಅಸಭ್ಯ  ಎನಿಸಿಕೊಳ್ಳುತ್ತದೆ. ಹೀಗಾಗಿ, ನಗುವನ್ನು ಸುಲಭವಾಗಿ ನಂಬಲಾಗದು. ಆದರೆ, ಅಪರಿಚಿತರನ್ನೂ ಆತ್ಮೀಯವಾಗಿ ಸೆಳೆಯುವ ಶಕ್ತಿ ಮುಗುಳ್ನಗೆಗೆ ಇದೆ. ಎಂದೆಂದೂ ಸಂಶಯಕ್ಕೀಡಾಗದ ಮುಗುಳ್ನಗೆಯ ಮರೆಯಲ್ಲಿ ನೋವನ್ನು ಮುಚ್ಚಿಟ್ಟರೆ, ಅದನ್ನು ಸುಲಭವಾಗಿ ಪತ್ತೆ ಹಚ್ಚಲಾಗದು. ಅನ್ಯೋನ್ಯ ಮನಸ್ಸು ಮಾತ್ರ ಈ ಮುಗುಳ್ನಗೆಯ ಹಿಂದೆ ರಹಸ್ಯವಾಗಿ ಅಡಗಿರುವ ದುಃಖದ ಹುದುಲು-ಹೊಂಡವನ್ನು ಖಚಿತವಾಗಿ, ನಿರ್ದಿಷ್ಟವಾಗಿ  ಗುರುತಿಸುತ್ತದೆ. ಇದರಿಂದ, ಪತ್ನಿಯ ನೋವಿಗೆ ಪತಿಯ ಮನಸ್ಸು ತಲ್ಲಣಿಸುತ್ತದೆ. ಭೀತಿಯಿಂದ ಕಂಪಿಸುತ್ತದೆ. ಏನೂ ತೋಚದಂತಾಗಿ ಕಂಗೆಡುತ್ತದೆ; 

ಕೌಟುಂಬಿಕವಾಗಿ ಹತ್ತು ಹಲವು  ಒತ್ತಡಗಳಲ್ಲಿ ನಲುಗಿರುವ ಪತ್ನಿಯು, ತಾನು  ಖಿನ್ನತೆಯ ಆಳಕ್ಕೆ ಇಳಿದಿರುವುದನ್ನು ತೋರುವುದಿಲ್ಲ. ಅದರ ಬದಲಾಗಿ, ತನ್ನ ಮನದ ನೋವು-ಹತಾಶೆ-ನಿರಾಶೆಯ ಖಿನ್ನತೆಯ ಈ ಸ್ಥಿತಿಗೆ ಮುಗುಳ್ನಗೆಯ ಮುಖವಾಡ ತೊಡಿಸಿ, ತಾನು ಸಂತಸದಿಂದ ಇರುವಂತೆ ನಟಿಸುತ್ತಾಳೆ. ಈ ವರ್ತನೆಯನ್ನೇ ‘ಸ್ಮೈಲ್ ಡಿಪ್ರೇಶನ್’ ಎನ್ನುತ್ತಾರೆ.

ಸ್ಮೈಲ್ ಡಿಪ್ರೇಶನ್ ಕಾರಣ-ಲಕ್ಷಣಗಳೇನು?

ಖಾಸಗಿ ಬದುಕಿನ ಕೌಟುಂಬಿಕ-ಕೆಲವೊಮ್ಮೆ ಅನಾರೋಗ್ಯ-ವ್ಯಕ್ತಿಗತ ಘನತೆ-ಗೌರವಕ್ಕೆ ಆದ ಹಾನಿ ಇತ್ಯಾದಿ ಸಂಗತಿಗಳು ಇತರರ ಬದುಕಿಗೂ ತಿಳಿದು ಅವರ ನೋವಿಗೆ ಕಾರಣವಾಗಬಾರದು ಎಂಬ ಹೃದಯ ವೈಶಾಲ್ಯತೆ. ಆಂತರ್ಯದಲ್ಲಿ ಕಾಡುವ, ಕಿತ್ತು ತಿನ್ನುವ ಅನಾರೋಗ್ಯಕರ ಮನಸ್ಥಿತಿ ಇದ್ದರೂ ತೋರಗೊಡದೇ ಮುಗುಳ್ನಗೆ ಸೂಸುತ್ತಾರೆ. ದುಃಖ, ನಾಚಿಕೆ, ಭೀತಿ, ಆತಂಕ, ಅಸಮಾಧಾನ ಅಥವಾ ಇಂತಹ ಸನ್ನಿವೇಶಗಳಲ್ಲಿ ನಲುಗುವ ಮನಸ್ಸುಗಳಿಗೆ ಮನೋರಕ್ಷಣೆಯಾಗಿ ಮುಗುಳ್ನಗೆ ಸೂಸುವುದು ಉತ್ತಮ ತಂತ್ರವೂ ಆಗಿದೆ.  ಭೀತಿ ಹುದುಗಿಸಿಡುವ ಮುಗುಳ್ನಗೆ, ಇಕ್ಕಟ್ಟಿಗೆ ಸಿಲುಕಿದ್ದನ್ನು ತೋರದ ಮುಗುಳ್ನಗೆ, ಕೋಪ-ಹರ್ಷ ಮಿಶ್ರಣದ ಮುಗುಳ್ನಗೆ, ಸುಳ್ಳು ಮುಗುಳ್ನಗೆ, ಸಹಕಾರದ ಮುಗುಳ್ನಗೆ, ಲೈಂಗಿಕ ಬಯಕೆಯ ಮುಗುಳ್ನಗೆ ಇತ್ಯಾದಿ ಹಲವು ಪ್ರಕಾರಗಳೂ ಉಂಟು.  

ಹುದುಗಲಾರದ ದುಃಖ….!

ಬೆಟ್ಟದಷ್ಟು ದುಃಖದ ಭಾರ ಹೊತ್ತಿದ್ದರೂ ಸ್ವಲ್ಪವೂ ತೋರುಗೊಡದೇ ನಸುನಗುತ ಬರುವ ಪತ್ನಿಯನ್ನು ಕಂಡು ಅತೀವ ದುಃಖಿತನಾದ ಪತಿ (ಕವಿ) ‘ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ ಇದು ಯಾವ ಊರ ಚದುರು?’ ಎಂದು ಪ್ರಶ್ನೆ ಮಾಡುತ್ತಿದ್ದಂತೆ, ತನ್ನ ಮುಗುಳ್ನಗೆಯ ಮರೆಯಲ್ಲಿ ಹುದುಗಿಸಿಟ್ಟ ನೋವಿನ ಮೂಲ ಬಹಿರಂಗವಾಯಿತು ಎಂದು ಹೆದರಿದ ಪತ್ನಿ, ಪತಿಯ ‘ ಕೈ ಮುಟ್ಟಿ ಮೈ ಮುಟ್ಟಿ ಮನ ಸಂತೈಸಲೆಂದು’ ಬಗೆಯುತ್ತಾಳೆ. ಆದರೆ, ಆಕೆಯ ಮನದಲ್ಲಿ ನಡೆಯುವ ಮನಸ್ಸಿನ ಸೂಕ್ಷ್ಮತೆಗಳನ್ನು ಅರಿತ ಪತಿಯು ‘ಕೈ ಮುಟ್ಟಿ ಮುಟ್ಟಿದ ಮಾತ್ರಕ್ಕೆ ತಾನು ಕಾಮುಕನಂತೆ ಮನಸೋಲಲಾರೆ. ನಿನ್ನ ಮನ ತಿಳಿಯದಷ್ಟು ಕಟುಕನಲ್ಲ’ ಎಂದು ಪ್ರತಿಕ್ರಿಯಿಸಿ, ಆಕೆಯ ‘ಸ್ಮೈಲ್ ಡಿಪ್ರೆಶನ್’ಗೆ ಕಾರಣ ತಿಳಿಯ ಬಯಸುತ್ತಾನೆ. ಪತಿಯ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪತ್ನಿಯು ‘ಮುಗುಳುನಗೆಯರಳಿಸುತ, ಕರಿಯಾಲಿ ಹೊರಳಿಸುತ’ ನಿಲ್ಲುತ್ತಾಳೆ. ಆದರೆ, ಪತಿಯು ಈ ವರ್ತನೆಗೆ ‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ? ಎಂದು ಮತ್ತೊಮ್ಮೆ ನೋವುಭರಿತ ಮನಸ್ಸಿನೊಂದಿಗೆ ಪ್ರಶ್ನಿಸುತ್ತಾನೆ. 

ಹೀಗೆ...ಪತ್ನಿಯ ‘ಸ್ಮೈಲ್ ಡಿಪ್ರೇಶನ್’ ವರ್ತನೆಗಳು ಬಯಲುಗೊಳ್ಳುತ್ತಿದ್ದಂತೆ, ಅದರಿಂದ ತನ್ನ ದುಃಖವನ್ನು ಮರೆ ಮಾಚುವ ವರ್ತನೆಗಳೂ ಹೆಚ್ಚುತ್ತವೆ. ತಾನೇನೂ ಮುಚ್ಚಿಡುತ್ತಿಲ್ಲ. ಆರೋಗ್ಯವಾಗೇ ಇದ್ದೇನೆ’ ಎಂದು ಹೂ-ಬಿಸಿಲಿನ ಮುಗುಳ್ನಗೆ, ಹೊಂಬಿಸಿಲಿನ ನಗು ಸೂಸುತ್ತಾಳೆ. ಆದರೆ, ಇದು ಯಾವುದೂ ಪತಿಯನ್ನು ಸಮಾಧಾನಗೊಳಿಸದು. ಪತ್ನಿಯ ಇಂತಹ ನಡೆ  ಕಂಡ ಪತಿ ‘ಎಲೆಲೆ ಜೀವದ ಗೆಳತಿ! ನನ್ನೆದೆಯ ಗುಡಿಯಲ್ಲಿ ನೀನು ಅಟಮಟಿಸುತಿರಲು, ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ? ಅಂತಿಂತು ನಟಿಸುತಿರಲು’ ಎನ್ನುತ್ತಾನೆ.  ಪತ್ನಿಯ ಸ್ಮೈಲ್ ಡಿಪ್ರೆಶನ್ ನ ಮುಖವಾಡ ಕಳಚಲು ಯತ್ನಿಸುವ ಚಿತ್ರಣವು ಈ ಕಾವ್ಯದ ಸೌಂದರ್ಯವಾಗಿದೆ. 

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...