ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ


"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನುನೀಡಲಾರೆ ಎಂದವ ಇಬ್ಬರೂ ಮನುಷ್ಯರು ಅಲ್ಲವೇ?," ಎನ್ನುತ್ತಾರೆ ಗೀತಾ ಬಾಲು. ಅವರು ಭಾರತಿ ಬಿ.ವಿ ಅವರ ‘ಇಷ್ಟಕ್ಕೂ ಎಲ್ಲರೂ ಮನುಷ್ಯರೇ’ ಕೃತಿ ಕುರಿತು ಬರೆದ ವಿಮರ್ಶೆ.

ಇಷ್ಟಕ್ಕೂ ಎಲ್ಲರೂ ಮನುಷ್ಯರೇ, ಶ್ರೀಮತಿ ಭಾರತಿ ಅವರ ಇತ್ತೀಚೆಗೆ ಬಿಡುಗಡೆಯಾದ ಕೃತಿ. ಇದು ೯ ಕಥೆಗಳ ಸಂಕಲನ. ತನ್ನ ವಿಶಿಷ್ಟ ಶೀರ್ಷಿಕೆಯಿಂದ ನನ್ನನ್ನು ಆಕರ್ಷಿಸಿದ ಕೃತಿ.

ಇಷ್ಟಕ್ಕೂ ಎಲ್ಲರೂ ಮನುಷ್ಯರೇ ಅನ್ನುವಾಗ ನಮ್ಮ ಬಯಕೆಗಳು ಇರಬಹುದು, ಕೋಪ - ಅವಮಾನಗಳು ಇರಬಹುದು, ಯಾವುದೇ ನಡತೆ ಇರಬಹುದು. ಇತರರ ಕಣ್ಣಿಗೆ ತಪ್ಪಾಗಿಯೇ ಕಾಣಬಹುದು. ಆದರೆ ಆದಕ್ಕೆ ಸಂಬಂಧಿಸಿದ ವ್ಯಕ್ತಿಗೆ ತನ್ನ ನಡವಳಿಕೆ ಸರಿ ಎಂದೇ ತೋರೀತು. ಹಾಗೆನಿಸಿದರೆ ಅದು ಖಂಡಿತಾ ತಪ್ಪು ಕೂಡ ಅಲ್ಲ. ಕಾರಣ ಇಷ್ಟಕ್ಕೂ ಎಲ್ಲರೂ ಮನುಷ್ಯರೇ ತಾನೇ!

ಹೀಗೆ ಮನುಷ್ಯ ಸ್ವಭಾವದ ಪ್ರತಿಪಾದನೆಯ ಕಥೆಗಳನ್ನು ಒಳಗೊಂಡ ಕಥಾ ಸಂಕಲನವಿದು. ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನುನೀಡಲಾರೆ ಎಂದವ ಇಬ್ಬರೂ ಮನುಷ್ಯರು ಅಲ್ಲವೇ?

ಗಾಂಧಿಯ ಸಾಮ್ಯತೆ ನರಸಜ್ಜನ ಸ್ವಾತಂತ್ರ್ಯ ಕಿತ್ತುಕೊಂಡರೆ, ಆ ಸಾಮ್ಯತೆ ಕರಗಿದ ಮೇಲೆ ಅವನಿಗೆ ಸ್ವಾತಂತ್ರ್ಯ ಮರಳಿಸಿತ್ತು . ಇದರ ಮಧ್ಯೆ ಉಪಯೋಗ ಪಡೆದದ್ದು ಅವನ ಮಗ. ಸಾಮ್ಯತೆಯ ಉಪಯೋಗ ಪಡೆದವ, ಅದನ್ನು ಕಳೆದುಕೊಂಡ ನಂತರ ಸಂತಸ ಪಟ್ಟವ

ಇಬ್ಬರೂ ಮನುಷ್ಯರು ತಾನೇ!

ಕಳೆದ ಜನ್ಮದ ಪಾಪ ಪುಣ್ಯ ಈ ಜನ್ಮದಲ್ಲೂ ಅನುಭವಿಸಬೇಕು. ಅದು ಸದಾಶಿವನಿಗೆ ನಿಜ ಎನಿಸುತ್ತಿತ್ತು. ಅದು ವರವೇ ಆದಾಗ ಖುಷಿ ಕೂಡ ಆಯ್ತು. ಹೆಂಡತಿ ಬಾಯಿ ಮುಚ್ಚಿದಾಗ ಸದಾಶಿವ ಬಾಯಿ ತೆರೆದದ್ದು ಒಂದು ಬಗೆ ಪ್ರಾಣಿಕ್ ಹೀಲಿಂಗ್.ಹೆಂಡತಿಗೆ ಗಂಡ ಕೆಟ್ಟದ್ದು ಬಯಸಲಿಲ್ಲ. ಆದರೂ ಕೆಟ್ಟದಾದಾಗ ಖುಷಿಯೇನೋ ಪಟ್ಟ ಅವನೂ ಮನುಷ್ಯನು ತಾನೇ!

ಲಲಿತಾ ಟೀಚರ್ ತನ್ನ ತಾಯಿಯ ಕುತಂತ್ರದಿಂದ ಗಂಡನನ್ನು ತಂಗಿಯೊಡನೆ ಹಂಚಿಕೊಳ್ಳಬೇಕಾಗಿ ಬಂದಾಗ, ಗಂಡನಿಗೆ ಅವರಿಬ್ಬರೂ ಸುಖವಾಗಿ ಇರುವರೆಂದು ವಿಚ್ಛೇದನೆ ಕೊಡಲೇ ಇಲ್ಲ. ಕಾಲು ಸೊಟ್ಟಾಗಿದ್ದ ತಂಗಿಗೆ ಭಾವನನ್ನು ಬಿಟ್ಟರೆ ಬೇರೆಯವರಿಲ್ಲ. ಇಬ್ಬರಿಗೂ ಅವರ ಮೂಗಿನ ನೇರಕ್ಕೆ ಮನುಷ್ಯರೇ ತಾನೇ!

ಹೀಗೆ ಲೇಖಕಿ ತಮ್ಮ ಮೊದಲ ಆರು ಕಥೆಗಳಲ್ಲಿ ಮನುಷ್ಯನ ಸ್ವಭಾವವೇ ಹಾಗಲ್ವೆ? ಎಂದು ಕೇಳುವಂತಿದೆ. ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ. ಅವನು ಮೂಲತಃ ಮಾನವನಾಗಿರುವುದೇ ಇದಕ್ಕೆ ಕಾರಣ.

ಈ ಸಿದ್ಧಾಂತಕ್ಕೆ ( ಎಲ್ಲರೂ ಮನುಷ್ಯರೇ) ಸ್ವಲ್ಪ ಹೊರತಾಗಿ ಮುಂದಿನ ಮೂರು ಕಥೆಗಳ ರಚನೆ ಇದೆ. ಮನೆ, ನೀರು ಮತ್ತು ಕೇರ್ ಟೇಕರ್

ಮನೆ ನೆನಪನ್ನು ಮಾತ್ರ ಕಳೆದು ಕೊಂಡ ಅನು ಮನೆ ಹುಡುಕುತ್ತಾ ಅಲೆದಾಡುತ್ತಾ ತನ್ನ ಮನೆಯೆಂದು ತಿಳಿಯದೆಯೇ ಮುಂದೆಯೇ ಕುಳಿತದ್ದು , ಅವಳು ಅನುಮಾನಿಸುವಂತೆ ಓದುಗನಿಗೂ ಇದು ಡಿಮೆನ್ಶಿಯಾ ಇರಬಹುದಾ ಎಂಬ ಅನುಮಾನ ಸ್ಥಿರವಾಗುವುದು .

ಜೀವಮಾನ ಪೂರಾ ಕೈ ತೊಳೆಯುತ್ತಲೇ ಕಾಲ ಕಳೆದ ಸತೀಶನಿಗೆ ಅವನ ಕೊನೆಯ ಸ್ನಾನಕ್ಕೂ ನೀರು ಸಿಗದದ್ದು ಒಂದು ದುರಂತ. ಆ ಕೊನೆಯ ಸ್ನಾನಕ್ಕೆ ಕೂದಲಿಗೆ - ದೇಹಕ್ಕೆ ಎಣ್ಣೆ ಹಚ್ಚಿ ಸಿದ್ಧಮಾಡಿ , ಆ ಕೊಳಕಿನಲ್ಲೇ ಅಂತಿಮ ಯಾತ್ರೆ ಮಾಡಬೇಕಾಗಿ ಬಂದುದು ಒಂದು ವಿಪರ್ಯಾಸ.

ಅಂತೆಯೇ ಹೊಸ ಪ್ರಪಂಚವನ್ನು ತೆರೆದಿಟ್ಟ ಸುನೀಲ್ ಬೇರೆ ಕೆಲಸ ಅರಸುತ್ತಾ ಹೊರಟಾಗ ದುಃಖಿಸಿದ್ದು ಅಮ್ಮು. ಅವಳಿಗೆ ಕಾಣದಂತೆ ಕಣ್ಣೊರಸಿಕೊಳ್ಳುವ ಸುನೀಲ್ ವಾಸ್ತವ ಒಪ್ಪಿಕೊಂಡವ ಎಂಬುದಂತೂ ನಿಜ.

ಈ ಕೊನೆಯ ಮೂರು ಕಥೆಗಳಲ್ಲೂ ಲೇಖಕಿ

ತಮ್ಮ ಶೀರ್ಷಿಕೆಗಿಂತ ಭಿನ್ನ ಕಥೆ ಹೇಳಿದ್ದಾರೆ ಎನಿಸಿತು. ಉಳಿದ ಆರು ಕಥೆಗಳಲ್ಲಿ ಪಾತ್ರಗಳ ಸ್ವಯಂ ಅನಿಸಿಕೆಯ ಭಾವ ಇಲ್ಲಿ ಬರದೆ, ಓದುಗರಲ್ಲಿ ಭಾವ ಸ್ಫುರಿಸುವ ಪ್ರಯತ್ನವಿದು ಎನಿಸಿತು.

ಶ್ರೀಮತಿ ಭಾರತಿಯವರ ಕೆಲವು ಪುಸ್ತಕಗಳನ್ನು ಓದಿ ಮೆಚ್ಚಿರುವ ನನಗೆ ಈ ಕಥಾ ಸಂಕಲನದಲ್ಲಿ ಹೊಸ ಲೇಖಕಿ ಕಂಡರು. ಬರವಣಿಗೆ ಶೈಲಿ ಸ್ವಲ್ಪ ಭಿನ್ನ ಎನಿಸಿತು. ಅವರ ಕಥೆಗಳೆಲ್ಲ ನಮ್ಮ ಪಕ್ಕದಲ್ಲೇ ಕುಳಿತು ಹೇಳುವಂಥ ಅನುಭವ ನೀಡುತ್ತವೆ. ಲೇಖಕಿಯ ಅನುಭವವೇ ನಮ್ಮದೂ ಕೂಡ ಎಂಬ ಸಾಮ್ಯತೆಯ ಭಾವ ಗೋಚರಿಸುತ್ತದೆ. ಪದ ಬಳಕೆ ಕೂಡ ಎದುರು - ಬದುರು ಕುಳಿತು ಮಾತು - ಕಥೆ , ಸಂಭಾಷಣೆ ನಡೆಸಿದ ಅನುಭವ. ಪ್ರಸ್ತುತ ಕಥಾ ಸಂಕಲನ ಅದಕ್ಕಿಂತ ಭಿನ್ನ ಭಾವ ಮೂಡಿಸುತ್ತದೆ.

' ಬಾ, ಕಥೆಯೊಂದ ಹೇಳುವೆ. ನನ್ನ ಭಾವನೆಯೇ ನಿನ್ನದೂ ಹೌದಾ ?' ಎಂದು ಕೇಳುವಂತಿದೆ. ಒಂದೊಂದು ಕಥೆಗೂ ಒಂದೊಂದು ಭಿನ್ನ ಕಥಾವಸ್ತು, ಆದರೂ ಒಂದೇ ಸಂದೇಶ ಸಾರುವುದು ಈ ಸಂಕಲನದ ವಿಶೇಷ ಎನಿಸಿತು.

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ನೆಲದಿಂದ ಮುಗಿಲಿಗೇರಿದ ಒಂದು ವೃತ್ತಿ ಪಯಣ, ಪತ್ರಿಕೆಯ ಪಯಣ..

29-09-2024 ಬೆಂಗಳೂರು

"ನಾವೆಲ್ಲ ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಒಂದು ಅಭಿಪ್ರಾಯಕ್ಕೆ ಲೇಖಕರು ಇಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ...