ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ ಅವರ ಕುರಿತ ಒಂದು ನೀಳ ನೋಟ..

ಶ್ರೀರಂಗರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಗಣಿತ. 40 ದೊಡ್ಡ ನಾಟಕ, 67 ಏಕಾಂಕಗಳು, 12 ಕಾದಂಬರಿಗಳು, 120 ರಷ್ಟು ಹಾಸ್ಯಪ್ರಬಂಧ ಹೀಗೆ ವಿಮರ್ಶೆ, ಕಲೆ, ಶಾಸ್ತ್ರಗಳ ಕುರಿತಾದ ಗ್ರಂಥಗಳು ಸೇರಿದಂತೆ ನೂರಕ್ಕೂ ಅಧಿಕ ಕೃತಿಗಳನ್ನ ರಚಿಸಿದ್ದಾರೆ. ಇವರು ಕನ್ನಡ ರಂಗಭೂಮಿಯಲ್ಲಿ ಹೊಸ ಅಲೆಯನ್ನೆಬ್ಬಿಸಿದ ಪ್ರಸಿದ್ದ ನಾಟಕಕಾರರು ಹೌದು.

ಇವರ ಜನನ 1904 ಸೆಪ್ಟೆಂಬರ್ 26 ರಂದು ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ. ಇವರನ್ನ ತಮ್ಮ ಊರಿನಲ್ಲಿ ಆರ್. ವಿ. ಜಾಗೀರದಾರ ಎಂದೇ ಕರೆಯುತ್ತಿದ್ದರು.

ತಮ್ಮ ಬಿ.ಎ ವಿದ್ಯಾಭ್ಯಾಸವನ್ನ ಪುಣೆಯಲ್ಲಿ ಪಡೆದುಕೊಂಡ ಶ್ರೀರಂಗರು, ಉನ್ನತ ವಿದ್ಯಾಭ್ಯಾಸಕ್ಕಾಗಿ ಲಿಂಕನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ನಂತರದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

1933ರಲ್ಲಿ ಸ್ವತಃ ಕಲಾವಿಲಾಸಿ ನಾಟ್ಯ ಸಂಘ ಸ್ಥಾಪಿಸಿ, ತಾವೇ ನಾಟಕಗಳನ್ನು ಬರೆದು ಪ್ರದರ್ಶಿಸುತ್ತಿದ್ದರು. ವಿಶೇಷವಾಗಿ, ಇಂಗ್ಲಿಷ್ ನಾಟಕಗಳ ಪ್ರಭಾವವಿದ್ದ ಅವರ ನಾಟಕಗಳಲ್ಲಿ ಹೊಸ ತಂತ್ರ- ಪ್ರಯೋಗಗಳು ಕಂಡುಬಂದವು. ಕೇಳು ಜನಮೇಜಯ, ಸ್ವರ್ಗಕ್ಕೆ ಮೂರೇ ಬಾಗಿಲು, ನರಕದ ನರಸಿಂಹ, ಶೋಕಚಕ್ರ, ಕತ್ತಲೆ ಬೆಳಕು, ರಂಗ ಭಾರತ ಹೀಗೆ ಅವರ ಹಲವಾರು ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದವು.

ಇನ್ನು ಖ್ಯಾತ ನಿರ್ದೇಶಕ ಬಿ. ವಿ. ಕಾರಂತರು, ಶ್ರೀರಂಗರ "ದಾರಿ ಯಾವುದಯ್ಯಾ ವೈಕುಂಠಕ್ಕೆ" ನಾಟಕವನ್ನ ನಿರ್ದೇಶನ ಮಾಡಿ ಆಡಿದ್ದರು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 1944ರಲ್ಲಿ ಕೆಲವು ಗೆಳೆಯರ ಜೊತೆಗೆ ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ನಂತರ ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು.

ಶ್ರೀರಂಗರು ಪ್ರಧಾನಮಂತ್ರಿ ಜವಾಹರಲಾಲ ನೆಹರೂರನ್ನು ಭೇಟಿಯಾಗಿ, ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗೂ ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವನ್ನು ಸೇರ್ಪಡಿಸುವ ನಿರ್ಣಯದಲ್ಲಿ ಮಹತ್ವದ ಪಾತ್ರವನ್ನ ನಿರ್ವಹಿಸಿದರು. ಅವರು ಬರೆದಿರುವ ‘ಭರತನ ನಾಟ್ಯಶಾಸ್ತ್ರ’ ಸಾಹಿತ್ಯ ಕ್ಷೇತ್ರದಲ್ಲಿಯೇ ಬಹಳಷ್ಟು ಪ್ರಸಿದ್ದಿಯನ್ನು ಪಡೆದ ಕೃತಿಯಾಗಿದೆ. ಇವರ "ಕಾಲಿದಾಸ" ಕೃತಿಗೆ 1971ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಗೆಯೇ ಭಾರತ ಸರಕಾರದ “ಪದ್ಮಭೂಷಣ" ಗೌರವಗಳು ಲಭಿಸಿದೆ.

ಹೀಗೆ ಸಾಹಿತ್ಯ ಲೋಕದಲ್ಲಿ ಮಿಂಚಿದ, ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ಶ್ರೀರಂಗರು ಬೆಂಗಳೂರಿನಲ್ಲಿ 1984ರ ಅಕ್ಟೋಬ‌ರ್ 17ರಂದು ಇಹಲೋಕ ತ್ಯಜಿಸಿದರು.

MORE FEATURES

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...

ನೆಲದಿಂದ ಮುಗಿಲಿಗೇರಿದ ಒಂದು ವೃತ್ತಿ ಪಯಣ, ಪತ್ರಿಕೆಯ ಪಯಣ..

29-09-2024 ಬೆಂಗಳೂರು

"ನಾವೆಲ್ಲ ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಒಂದು ಅಭಿಪ್ರಾಯಕ್ಕೆ ಲೇಖಕರು ಇಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ...