"ಪ್ರಾಚೀನ ಜ್ಯೋತಿಷ ಗ್ರಂಥಗಳ ಭಂಡಾರ ಹೊಂದಿರುವ ಪುಣೆಯ ಭಂಡಾರ್ಕರ್ ಓರಿಯಂಟಲ್ ಇನ್ಸಟ್ಯೂಟ್ ನಲ್ಲಾಗಲಿ, ಮೈಸೂರಿನ ಓರಿಯಂಟಲ್ ಇನ್ಸಟ್ಯೂಟ್ ನಲ್ಲಾಗಲಿ ಈ ಕೃತಿಯ ಉಲ್ಲೇಖವಿಲ್ಲ. ಶೃಂಗೇರಿಯ ‘ಅದ್ವೈತ ಕೋಶ’ದ ಪುಟ 286ರ ಸಂಖ್ಯೆ 4573ರಲ್ಲಿ ಇದರ ಉಲ್ಲೇಖವಿದೆ. ಆದರೆ ಅಲ್ಲಿ ಈ ಕೃತಿಯ ಪ್ರತಿ ಇಲ್ಲ. ಆಲ್ಲಿ ಈ ಕೃತಿಯನ್ನು ರಚಿಸಿದವರು ವಿದ್ದಣಾಚಾರ್ಯ ಎಂದು ಹೇಳಲಾಗಿದೆ," ಎನ್ನುತ್ತಾರೆ ಎನ್.ಎಸ್.ಶ್ರೀಧರ ಮೂರ್ತಿ. ಅವರು ರಾಮಕೃಷ್ಣ ಪೆಜತಾಯ ಹಾಗೂ ಸೀತಾರಾಮ ಜವಗಲ್ ಅವರ ‘ಗ್ರಹಣಮುಕುರ’ ಕೃತಿ ಕುರಿತು ಬರೆದ ವಿಮರ್ಶೆ.
ಹಲವು ವರ್ಷಗಳಿಂದ ಭಾರತೀಯ ಪಂಚಾಗ ಗಣಿತದ ವೈಜ್ಞಾನಿಕ ನೆಲೆಗಳನ್ನು ನನಗೆ ಕಲಿಸಿ ಕೊಡುತ್ತಿರುವ ಹಿರಿಯ ಖಗೋಳ ವಿಜ್ಞಾನಿ ಮತ್ತು ಜವಹರಲಾಲ್ ನೆಹರು ತಾರಾಲಯದ ನಿವೃತ್ತ ನಿರ್ದೇಶಕರೂ ಆದ ಡಾ.ಬಿ.ಎಸ್.ಶೈಲಜ ಅವರು ನಿನ್ನೆ ನವಕರ್ನಾಟಕ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ‘ಗ್ರಹಣ ಮುಕರ’ ಎನ್ನುವ ಕೃತಿಯನ್ನು ಕಳುಹಿಸ ಕೊಟ್ಟಿದ್ದಾರೆ.
ವೈಯಕ್ತಿಕವಾಗಿ ನನಗೆ ಹೆಮ್ಮೆಯ ವಿಷಯ ಎಂದರೆ ಈ ಕೃತಿಯ ರಚನೆಕಾರರು ಶೃಂಗೇರಿಯವರು ಎನ್ನುವುದು. ನಂದಿನಾಗರಿ ಲಿಪಿಯಲ್ಲಿ ಸಂಸ್ಕೃತ ಶ್ಲೋಕ ಮತ್ತು ಕನ್ನಡ ಅರ್ಥ ಇರುವ ಈ ದ್ವಿಭಾಷಾ ಕೃತಿಯನ್ನು ಹದಿನಾರನೆಯ ಶತಮಾನದಲ್ಲಿ ದೇಮನ ಜೋಯಿಸರು ಮತ್ತು ಶಂಕರ ನಾರಾಯಣ ಜೋಯಿಸರು ಎನ್ನುವ ತಂದೆ-ಮಕ್ಕಳು ಬರೆದಿದ್ದಾರೆ. ಸುಮಾರು ಐದು ನೂರು ವರ್ಷಗಳಿಂದ ಇವರ ಕುಟುಂಬ ಶೃಂಗೇರಿಯಲ್ಲಿ ನೆಲೆಸಿದ್ದು ತಿಳಿದು ಬರುತ್ತದೆ. ಕವಿ ಶೃಂಗೇರಿಯ ಮಹಾಗುರು ವಿದ್ಯಾರಣ್ಯರನ್ನು ಮತ್ತು ಜಗದ್ಗುರು ನೃಸಿಂಹ ಭಾರತಿಗಳಿಗೂ ಪ್ರಣಾಮವನ್ನು ಸಲ್ಲಿಸಿದ್ದಾರೆ. ಕೃತಿಯ ರಚನೆ ಶಾಲಿವಾಹನ ಶಕ 1529ರ ಪ್ಲವಂಗ ಸಂವತ್ಸರದ ಮಾಘ ಶುದ್ಧ ಪಾಡ್ಯದ ಶುಕ್ರವಾರ, ಇದು ಕ್ರಿ.ಶ 1608 ಎಂದರೆ ಶೃಂಗೇರಿಯ 24ನೆಯ ಜಗದ್ಗುರುಗಳಾದ ಅಭಿನವ ನೃಸಿಂಹ ಭಾರತಿಗಳ ಕಾಲ (1599-1623) ಎಂದು ಊಹಿಸ ಬಹುದು.
ಪ್ರಾಚೀನ ಜ್ಯೋತಿಷ ಗ್ರಂಥಗಳ ಭಂಡಾರ ಹೊಂದಿರುವ ಪುಣೆಯ ಭಂಡಾರ್ಕರ್ ಓರಿಯಂಟಲ್ ಇನ್ಸಟ್ಯೂಟ್ ನಲ್ಲಾಗಲಿ, ಮೈಸೂರಿನ ಓರಿಯಂಟಲ್ ಇನ್ಸಟ್ಯೂಟ್ ನಲ್ಲಾಗಲಿ ಈ ಕೃತಿಯ ಉಲ್ಲೇಖವಿಲ್ಲ. ಶೃಂಗೇರಿಯ ‘ಅದ್ವೈತ ಕೋಶ’ದ ಪುಟ 286ರ ಸಂಖ್ಯೆ 4573ರಲ್ಲಿ ಇದರ ಉಲ್ಲೇಖವಿದೆ. ಆದರೆ ಅಲ್ಲಿ ಈ ಕೃತಿಯ ಪ್ರತಿ ಇಲ್ಲ. ಆಲ್ಲಿ ಈ ಕೃತಿಯನ್ನು ರಚಿಸಿದವರು ವಿದ್ದಣಾಚಾರ್ಯ ಎಂದು ಹೇಳಲಾಗಿದೆ. ಒಂದೇ ಹೆಸರಿನ ಎರಡು ಕೃತಿಗಳು ಇರ ಬಹುದು ಎಂದು ಊಹಿಸಲು ಇದು ಅವಕಾಶ ಕೊಡುತ್ತದೆ. ಈ ಗ್ರಂಥವು ಶೃಂಗೇರಿಯಂದ ಹೊರ ಹೋಗದೆ ಇರುವ ಸಾಧ್ಯತೆ ಕೂಡ ಇದೆ. ಶ್ರೀ ಅಭಿನವ ನೃಸಿಂಹ ಭಾರತಿಗಳು ಅಗ್ರಹಾರವನ್ನು ಮಾಡಿ ಭೂದಾನ ಮಾಡಿದ ಶಾಸನ ಕ್ರಿ.ಶ 1603ರ ಸೆಪ್ಟಂಬರ್ 4ಕ್ಕೆ ಅನ್ವಯವಾಗುವಂತೆ ಸಿಕ್ಕುತ್ತದೆ. ತಂದೆ-ಮಕ್ಕಳು ಇದೇ ಕಾಲದವರು ಎಂದು ಊಹಿಸಲು ಇದು ನೆರವಾಗುತ್ತದೆ.
ಈ ವಂಶದ ಕುಲಪತಿ ಶಂಕರ ಜೋಯಿಸರ (1903-98) ಸಂರಕ್ಷಣೆಯಲ್ಲಿದ್ದ ಈ ತಾಳೆಗರಿಗಳನ್ನು ಅವರ ಮೊಮ್ಮಗ ಸೀತಾರಾಮ ಜಾವಗಲ್ ಪತ್ತೆ ಹಚ್ಚಿ ಇದನ್ನು ಅರಿಯಲು ತಮ್ಮ 63ನೆಯ ವಯಸ್ಸಿನಲ್ಲಿ ಸಂಸ್ಕೃತದಲ್ಲಿ ಸ್ನಾತಕೊತ್ತರ ಪದವಿಯನ್ನು ಮೊದಲ ಶ್ರೇಣಿಯಲ್ಲಿ ಪಡೆದು ನಂದಿನಾಗರಿ ಲಿಪಿ ಕಲಿತು ಬೆಳಕಿಗೆ ತಂದು ಇದನ್ನು ಅರಿಯಲು ದೇಶಾದ್ಯಂತ ಸಂಚರಿಸಿ ಹಲವರು ಪ್ರಾಜ್ಞರನ್ನು ಸಂಪರ್ಕಿಸಿದ್ದರು. ಈಗ ಡಾ.ಬಿ.ಎಸ್.ಶೈಲಜ ಮತ್ತು ರಾಮಕೃಷ್ಣ ಪೆಜತ್ತಾಯ ಅವರ ಸಂಪಾದನೆಯ ಕೃತಿಯನ್ನು ವ್ಯಾಖ್ಯಾನ ಮತ್ತು ಟಿಪ್ಪಣಿಗಳ ಜೊತೆಗೆ ಸಂಪಾದಿಸಿ ಕೊಟ್ಟಿದ್ದಾರೆ. ಈ ಕೃತಿ ಹೊರ ಬರುತ್ತಿರುವ ಹೊತ್ತಿನಲ್ಲಿ ಇದಕ್ಕಾಗಿ ಕನಸು ಕಂಡಿದ್ದ ಸೀತಾರಾಮ ಜಾವಗಲ್ ಅವರು ಇಲ್ಲ ಎನ್ನುವುದೊಂದು ನೋವಿನ ಸಂಗತಿ.
ಗ್ರಹಣಗಳನ್ನೇ ಕುರಿತ ಕೃತಿಗಳ ಉಗಮವನ್ನು 13ನೆಯ ಶತಮಾನದ ಪರಮೇಶ್ವರ ದೈವಜ್ಞರಿಂದ ಗುರುತಿಸ ಬಹುದು. ಗ್ರಹಣ ಮಂಡನ ಮತ್ತು ಗ್ರಹಣ ವಾಕ್ಯ ದೀಪಿಕಾ ಇವು 15ನೆಯ ಶತಮಾನದ ಕೃತಿಗಳು. ನೀಲಕಂಠ ಸೋಮಯಾಜಿಗಳ ಗ್ರಹಣ ನಿರ್ಣಯ ಮತ್ತು ಅಚ್ಯುತ ಪಿಶಾರಟಿಯವರ ಉಪರಾಗ ಕ್ರಿಯಾಕ್ರಮ: 1593ರ ಗ್ರಂಥಗಳು. ಇವೆರಡು ತಾರ್ಕಿಕ ನೆಲೆಯ ಕೃತಿಗಳು. 17ನೆಯ ಶತಮಾನದಲ್ಲಿ ಹೇಮಾಂಗ ಠಾಕೂರ ಮುಂದಿನ ಎರಡು ಸಾವಿರ ವರ್ಷಗಳ ಗ್ರಹಣಗಳ ವಿವರ ನೀಡುವ ಕೃತಿಯನ್ನು ರಚಿಸಿದ್ದಾನೆ. ಇದನ್ನು ಅವನು ಅಕ್ಬರ್ನ ಸೆರೆಮನೆಯಲ್ಲಿ ರಚಿಸಿದ ಎಂದು ಇತಿಹಾಸ ಹೇಳುತ್ತದೆ.
ಪ್ರಸ್ತುತ ಕೃತಿ ‘ಗ್ರಹಣ ಮುಕುರ’ದ ಮಹತ್ವವೆಂದರೆ ವಿಷವತ್ ಚಲನೆಯನ್ನು ಆಧರಿಸಿದ ಸಿದ್ದಾಂತ ರೂಪಿಸಿರುವುದು. ಇಲ್ಲಿ ಗ್ರಹಣ ಮೋಕ್ಷ ಮತ್ತು ಸ್ಪರ್ಶ ಎರಡರ ಕಾಲಗಣನೆಗೆ ಮಹತ್ವ ನೀಡಲಾಗಿದೆ. ಅಹರ್ಗಣಗಳ ಲೆಕ್ಕಾಚಾರ, ಅಯನಾಂಶ ಮತ್ತು ತಿಥಿಯನ್ನು ಲೆಕ್ಕ ಹಾಕುವುದು ಹೀಗೆ ಪ್ರಾಥಮಿಕ ವಿವರಗಳಿಂದ ಕೃತಿ ಆರಂಭವಾಗಿ ಛಾಯಾಧಿಕಾರ ಫಲಭಾವ, ಚರಾಸುಗಳ ಅವಧಿಯನ್ನು ಗುರುತಿಸುವ ಕ್ರಮವನ್ನು ಹೇಳಲಾಗಿದೆ. ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳನ್ನು ಕಂಡು ಹಿಡಿಯುವ ವಿವರಗಳ ಸೂತ್ರದಲ್ಲಿ ಸ್ಪರ್ಶ, ಮೋಕ್ಷ, ಉನ್ಮೀಲನ, ನಿಮೀಲನಗಳ ವಿವರಣೆ ಇದೆ. ಹೋರಾದ ಕುರಿತ ಚಿಂತನೆ ಮಹತ್ವದ್ದಾಗಿದೆ. ದಿಕ್ಪರಿಜ್ಞಾನ ಮತ್ತು ಪರಿಲೇಖನ ಈ ಕೃತಿಯ ಮಹತ್ವದ ಅಧ್ಯಾಯಗಳು. ಇವು ಜ್ಯೋತಿಷಕ್ಕಿಂತಲೂ ವೈಜ್ಞಾನಿಕ ನೆಲೆಯ ಚಿಂತನೆಗಳನ್ನು ಹೊಂದಿವೆ. ಇದು ದ್ವಿಭಾಷಾ ಕೃತಿಯಾದರೂ ಅನುವಾದವಲ್ಲ. ಸಂಸ್ಕೃತದಲ್ಲಿ ಸೂತ್ರಗಳಿದ್ದರೆ ಕನ್ನಡದಲ್ಲಿ ಇನ್ನೂ ಹೆಚ್ಚಿನ ವಿವರಣೆ ಇದೆ. ಶ್ಲೋಕಗಳನ್ನು ರಚಿಸುವಾಗ ಶುದ್ಧ ವಿರಾಟ್, ಮೇಘ ಸ್ಪೂರ್ಜಿತಂ, ಮತ್ತೇಭವಿಕ್ರೀಡಿತ, ಮಹಾಸ್ರಗ್ದರಾದಂತಹ ವೃತ್ತಗಳನ್ನು ಬಳಸಲಾಗಿದೆ. ಇದು ಹಲವು ನೆಲೆಯಲ್ಲಿ ಖಗೋಳ ಮತ್ತು ಜ್ಯೋತಿಷ ಗಣಿತದ ಅಧ್ಯಯನಕ್ಕೆ ಮಹಾ ತಿರುವು ನೀಡಬಲ್ಲ ಕೃತಿ.
ಈ ಕೃತಿಯ ಓದಿನ ಆನಂದವನ್ನು ನಾನು ಅನುಭವಿಸುತ್ತಿದ್ದೇನೆ.
"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂ...
"ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆ...
"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸ...
©2025 Book Brahma Private Limited.