ಶಿವಪ್ರಕಾಶ ಸರ್ ಅವರನ್ನು ನಾನು 2015ರ ಅಕ್ಟೋಬರ್ ನೀನಾಸಂ ನಲ್ಲಿ ಮೊದಲು ನೋಡಿದ್ದು. ಅವರ ಬಿಡಿ ಬರಹಗಳನ್ನು ಅಲ್ಲಲ್ಲಿ ನೋಡಿದ್ದೆ ಅಷ್ಟೇ. 2000 ರಲ್ಲಿ 'ಕನ್ನಡ ಪುಸ್ತಕ ಪ್ರಾಧಿಕಾರ'ದವರು ಅಚ್ಚು ಹಾಕಿಸಿದ್ದ 'ಶಿವಪ್ರಕಾಶ ಕವಿತೆಗಳು' ಪುಸ್ತಕ ಮತ್ತು 2011ರಲ್ಲಿ ಇದೆ ಪ್ರಾಧಿಕಾರದವರು ಅಚ್ಚು ಹಾಕಿರುವ ಈ ನಾಟಕದ ಪುಸ್ತಕದ ಮೂಲಕ ಅವರು ಯಾರು? ಅಂತ ತಿಳಿಯಲು ಸಹಾಯವಾಯಿತು ಎನ್ನುತ್ತಾರೆ ಲೇಖಕ ಮಹಾಂತೇಶ ಹೊದ್ಲೂರ. ಕವಿ, ಸಾಹಿತಿ, ಲೇಖಕ ಎಚ್.ಎಸ್. ಶಿವಪ್ರಕಾಶ್ ಅವರ 'ನಾಟಕಗಳು ಇಂದಿನವರೆಗೆ' ನಾಟಕ ಸಂಕಲನದ ಬಗ್ಗೆ ಅವರ ಬರಹ ನಿಮ್ಮ ಓದಿಗಾಗಿ..
ಕವಿತೆ ಅಂತರಂಗದ ನಾಟಕವಾದರೆ, ನಾಟಕ ರಂಗದ ಮೇಲಿನ ಕವಿತೆ...ಎಚ್.ಎಸ್. ಶಿವಪ್ರಕಾಶ್ ರವರ ಈ ಮಾತಿನಂತೆಯೇ, ಅವರ ನಾಟಕಗಳು ಸಹ ಅಷ್ಟೇ ಕಾವ್ಯಾತ್ಮಕವಾಗಿವೆ. 1985-2000ದ ವರೆಗಿನ ಅವರ ನಾಟಕಗಳ ಸಂಗ್ರಹವಾದ 'ನಾಟಕಗಳು ಇಂದಿನವರೆಗೆ' ಇದರಲ್ಲಿ ಸುಮಾರು ಹದಿನಾಲ್ಕು ನಾಟಕಗಳಿವೆ.
ನಾಟಕಗಳ ಓದುವ ಹುಚ್ಚನಾದ ನಾನು ಗಿರೀಶ್ ಕಾರ್ನಾಡ್, ಪಿ. ಲಂಕೇಶ್ ರವರ ನಾಟಕಗಳನ್ನು ಮುಗಿಸಿ ನಂತರ ಯಾರು? ಎನ್ನುವ ಗೊಂದಲದಲ್ಲಿ ಇದ್ದಾಗ, ಎಚ್ಎಸ್ಎಸ್ ಕಣ್ಣ ಮುಂದೆ ಬಂದರು. ಕಾರಣ ಇಷ್ಟೇ ಕಾರ್ನಾಡ್ ರ 'ತಲೆದಂಡ', ಲಂಕೇಶರ 'ಸಂಕ್ರಾಂತಿ' ಹಾಗೂ ಕಂಬಾರರ 'ಶಿವರಾತ್ರಿ' ಓದಿಯಾದ ಮೇಲೆ ಶಿವಪ್ರಕಾಶರ 'ಮಹಾಚೈತ್ರ' ಓದುವ ತವಕದೊಂದಿಗೆ, ಹುಡುಕಿದಾಗ ಸಿಕ್ಕಿದ್ದೆ ಈ 'ನಾಟಕಗಳು ಇಂದಿನವರೆಗೆ' ಎನ್ನುವ 716 ಪುಟಗಳ ಪುಸ್ತಕ.
'ಮಹಾಚೈತ್ರ' ಓದಲು ಶುರು ಮಾಡಿದ ನಾನು, ಇನ್ನುಳಿದ ಹದಿಮೂರು ನಾಟಕಗಳನ್ನು ಸುಮ್ಮನೆ ಓದುತ್ತಾ ಹೋದೆ. ಈ ನಾಟಕಗಳು ಎಷ್ಟು ತೃಪ್ತಿ ನೀಡಿದವೋ ಅಷ್ಟೇ ಈ ಪುಸ್ತಕದಲ್ಲಿನ ಅಭಿಪ್ರಾಯಗಳು ಸಹ ತೃಪ್ತಿ ನೀಡಿದವು. ನನಗೆ ಈ ಪುಸ್ತಕದ ಬಗ್ಗೆ ಇನ್ನೂ ಒಂದು ಇಷ್ಟವಾದ ಸಂಗತಿ ಎಂದರೆ ಅದು ಮುನ್ನುಡಿ. ಉತ್ತರ ಕೇರಳದ ಪೆರುವಳ್ಳಿ ಎಂಬ ಊರಿನ ಒಬ್ಬ ಗುಡಿಯ ಅರ್ಚಕರು ಹಾಗೂ ಸಾಮಾನ್ಯ ಓದುಗರು ಈ ಮುನ್ನುಡಿ ಬರೆದವರು.
'ಪೆರುವಳ್ಳಿ ಜಯಂತನ' ರವರು ಈ ಮುನ್ನುಡಿಯನ್ನೆ ಒಂದು ಸುಂದರವಾದ ಅಂಕಣವಾಗಿಸಿದ್ದಾರೆ. 'ಧ್ಯಾನ ಮತ್ತು ಸಂಭ್ರಮ' ಎನ್ನುವ ಎರಡು ಪರಿಕಲ್ಪನೆಯ ಮೇಲೆ ಈ ಅಂಕಣವನ್ನು ಬರೆದಿದ್ದಾರೆ. ಎಷ್ಟು ಅದ್ಭುತವಾಗಿದೆ ಎಂದರೆ, ಪುಸ್ತಕದ ನಾಟಕಗಳು ಒಂದು ತೂಕವಾದರೆ, ಈ ಮುನ್ನುಡಿಯ ಮಾತುಗಳು ಇನ್ನೊಂದು ತೂಕವಾಗಿವೆ.
ಸಾಮಾನ್ಯವಾಗಿ ಈ ಮುನ್ನುಡಿ-ಬೆನ್ನುಡಿಗಳನ್ನು ನಾನು ಬಹಳ ಇಷ್ಟ ಪಡುತ್ತೇನೆ. ಕಾರಣ ಇಡೀ ಪುಸ್ತಕದ ಜೊತೆಗೆ ಜಗತ್ತಿನ ಸಾಹಿತ್ಯ ಮತ್ತು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ಬದುಕಿನ ಹಲವು ಮಜಲುಗಳನ್ನು ಈ ಎರಡು ನುಡಿಗಳು ಸಂಕ್ಷಿಪ್ತವಾಗಿ ಕಿರುಹಾದಿಯಲ್ಲಿ ಸುತ್ತಿಸಿಕೊಂಡು ಬರುತ್ತವೆ. ಕೇವಲ ಒಂದು ಕೃತಿಯ ಮುನ್ನುಡಿಯಲ್ಲವೇ 'ನವ್ಯ ಸಾಹಿತ್ಯ'ಕ್ಕೆ ಅಡಿಪಾಯ ಹಾಕಿದ್ದು.
ಶಿವಪ್ರಕಾಶ ಸರ್ ಅವರನ್ನು ನಾನು 2015ರ ಅಕ್ಟೋಬರ್ ನೀನಾಸಂ ನಲ್ಲಿ ಮೊದಲು ನೋಡಿದ್ದು. ಅವರ ಬಿಡಿ ಬರಹಗಳನ್ನು ಅಲ್ಲಲ್ಲಿ ನೋಡಿದ್ದೆ ಅಷ್ಟೇ. 2000 ರಲ್ಲಿ 'ಕನ್ನಡ ಪುಸ್ತಕ ಪ್ರಾಧಿಕಾರ'ದವರು ಅಚ್ಚು ಹಾಕಿಸಿದ್ದ 'ಶಿವಪ್ರಕಾಶ ಕವಿತೆಗಳು' ಪುಸ್ತಕ ಮತ್ತು 2011 ರಲ್ಲಿ ಇದೆ ಪ್ರಾಧಿಕಾರದವರು ಅಚ್ಚು ಹಾಕಿರುವ ಈ ನಾಟಕದ ಪುಸ್ತಕದ ಮೂಲಕ ಅವರು ಯಾರು? ಅಂತ ತಿಳಿಯಲು ಸಹಾಯವಾಯಿತು. ಧನ್ಯವಾದಗಳು 'ಕನ್ನಡ ಪುಸ್ತಕ ಪ್ರಾಧಿಕಾರ.'
ಈ ಹದಿನಾಲ್ಕು ನಾಟಕಗಳ ಓದು ನಿಜಕ್ಕೂ ಒಂದು ವಿಭಿನ್ನ ಜಗತ್ತಿಗೆ ಕರೆದುಕೊಂಡು ಹೋದವು. ಒಂದೊಂದು ನಾಟಕಗಳು ನೂರಾರು ಕಥೆಗಳನ್ನು ಹೇಳುತ್ತವೆ.
ಶಿವಪ್ರಕಾಶ ರವರಿಗೆ 12 ನೆಯ ಶತಮಾನ ಬಹಳ ಪರಿಣಾಮ ಬೀರಿದೆ ಎಂದು ನಾನು ನನ್ನ 'ಓದು ಗೆಳೆಯರ ಬಳಗ'ದ ಗೆಳೆಯರ ಜೊತೆ ಆಗಾಗ ಚರ್ಚಿಸುತ್ತಿದ್ದೆ. ಕಾರಣ ಇಷ್ಟೇ ನಾನು ಅವರ ಹಲವು ಕವಿತೆಗಳನ್ನು ಹಾಗೂ ನಾಟಕಗಳನ್ನು ನೋಡಿದಾಗ ಅಲ್ಲಿ ಶರಣ ಮತ್ತು ಶರಣರ ಬದುಕು ಇಣುಕಲೇ ಬೇಕು. ಅವರು ಸಹ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಶರಣರ ಜೊತೆಗೆ ನೈಜೀರಿಯಾದ ನಾಟಕಕಾರರಾದ 'ವೋಲೆ ಸೋಯಿಂಕಾ'ರ ಬರಹಗಳು ಅಷ್ಟೇ ಪ್ರಭಾವ ಬೀರಿವೆ.
ಸೋಯಿಂಕಾ ರವರು ನಾಲ್ಕು ಘಟಕಗಳ ಆಧಾರದ ಮೇಲೆ ನಾಟಕಗಳನ್ನು ರಚಿಸುವುದಾಗಿ ಹೇಳಿಕೊಂಡಿದ್ದಾರೆ. 1) ಬದುಕಿದವರ ಘಟಕ 2) ಸತ್ತವರ ಘಟಕ 3) ಇನ್ನೂ ಹುಟ್ಟದವರ ಘಟಕ 4) ಸಂಕ್ರಮಣ ಘಟಕ
ಇದೇ ರೀತಿಯ ಘಟಕಗಳನ್ನು ನಾವು ಶಿವಪ್ರಕಾಶ ರವರ ನಾಟಕಗಳಲ್ಲಿ ಕಾಣಬಹುದಾಗಿದೆ. ಲೇಖಕರೆ ಒಂದು ಕಡೆ ಹೀಗೆ ಹೇಳಿಕೊಳ್ಳುತ್ತಾರೆ, 'ಕಲೆ ಬದುಕುತ್ತಿರುವವರ ಜೊತೆಗಿನ ಸಂವಾದ ಮಾತ್ರವಲ್ಲ, ಸತ್ತವರ ಹಾಗೂ ಇನ್ನೂ ಹುಟ್ಟಲಿರುವವರ ಜೊತೆಗಿನ ಸಂವಾದ ಕೂಡ ಆಗಿದೆ' ಎಂದು.
ಇನ್ನೂ ಒಂದು ವಿಶೇಷತೆ ಎಂದರೆ, ಸೋಯಿಂಕಾ ರವರು 'ಸಾವು ಮತ್ತು ರಾಜನ ಕುದುರೆ ಸವಾರ' ನಾಟಕ ಬರೆಯಲು ಸುಮಾರು 5 ರಿಂದ 10 ವರ್ಷ ತೆಗೆದುಕೊಂಡರಂತೆ ಹಾಗೆಯೇ ಶಿವಪ್ರಕಾಶ ರವರು ಸಹ 'ಮದುವೆ ಹೆಣ್ಣು' ನಾಟಕ ಬರೆಯಲು ಸುಮಾರು 11 ವರ್ಷ ತೆಗೆದುಕೊಂಡರಂತೆ. ಹಾಗೆ ನೋಡಿದರೆ ಎರಡು ನಾಟಕಗಳು ಬುಡಕಟ್ಟು ಜನಾಂಗದ ಕತೆಗಳನ್ನೆ ಹೇಳುತ್ತವೆ. ಇಷ್ಟು ಸಾಕಲ್ಲವೆ ಇಬ್ಬರ ನಡುವಿನ ಸಾಮ್ಯತೆ ನೋಡಲು.
ಇಲ್ಲಿನ ಬಹುತೇಕ ನಾಟಕಗಳು ಹಾಗೆ ಅಪ್ಪಿಕೊಂಡು ಬಿಡುತ್ತವೆ. 'ಮಹಾಚೈತ್ರ' ನಾಟಕದ ವಿಷಯವೇ 12 ನೆಯ ಶತಮಾನದ್ದು, ಈ 12 ನೆಯ ಶತಮಾನ ಎಂದರೆ ಅಲ್ಲಿ ಬಸವಣ್ಣ ಬರಲೇ ಬೇಕು. ಆದರೆ ಈ ನಾಟಕದಲ್ಲಿ ಬಸವಣ್ಣ ಎಲ್ಲಿಯೂ ಇಣುಕಿ ನೋಡುವುದಿಲ್ಲ. ಹಾಗಂತ ಬಸವಣ್ಣನ ಹೆಸರು ಪ್ರಸ್ತಾಪವಾಗುವುದಿಲ್ಲ ಎಂತಲೂ ಇಲ್ಲ ಪ್ರತಿಯೊಬ್ಬ ಶರಣರು ಅವರನ್ನು ನೆನೆಯುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ನನಗೆ ಈ ನಾಟಕ ಬಹಳ ವಿಶೇಷ ಎನಿಸಿದ್ದು.
ಮದುವೆ ಹೆಣ್ಣು. 'ಮದುವೆ ಹೆಣ್ಣು' ಎಂತಹ ಪರಿಣಾಮ ಬೀರಿತು ಎಂದರೆ ಆ ಗಂಡಿನ ಜೊತೆ, ಆ ರಾಕ್ಷಸ ಮಳೆಯಲ್ಲಿ ನಾನು ಸಹ ನೆನೆಯುತ್ತಾ ಅವನ ಪಕ್ಕವೆ ನಿಂತಿರುವ ಹಾಗೆ.
ಶೇಕ್ಸ್‌ಪಿಯರ್ ನ ಸ್ವಪ್ನನೌಕೆˌ ಮಾರನಾಯಕನ ದೃಷ್ಟಾಂತ, ಸುಲ್ತಾನ್ ಟಿಪ್ಪೂ, ಮಂಟೇಸ್ವಾಮಿ ಕಥಾ ಪ್ರಸಂಗ, ಮದುರೆ ಕಾಂಡ, ಮಾತೃಕೆ, ಮಲ್ಲಮ್ಮನ ಮನೆ ಹೋಟ್ಲು ಎಲ್ಲ ನಾಟಕಗಳು 'ಈಗ ಇದ್ದವರಿಗೆ, ಸತ್ತವರಿಗೆ ಮತ್ತು ಮುಂದೆ ಹುಟ್ಟುವವರಿಗೂ ಇಷ್ಟವಾಗುತ್ತವೆ.'
ಎಚ್.ಎಸ್. ಶಿವಪ್ರಕಾಶ ರವರ ಬರಹಗಳನ್ನು ಇನ್ನೂ ಹೆಚ್ಚು ಹೆಚ್ಚು ಓದುವ ಉತ್ಸಾಹದೊಂದಿಗೆ ನಮಸ್ಕಾರ.
- ಮಹಾಂತೇಶ ಹೊದ್ಲೂರ, ಬಾಗಲಕೋಟ
“ಕಥಾ ಬರಹವನ್ನು ಧ್ಯಾನದಂತೆ ತಾಳ್ಮೆ ಮತ್ತು ಶ್ರದ್ಧೆಯಿಂದ ಮಾಡಿ ಮಹತ್ವದ ಕಥೆಗಳನ್ನು ರಚಿಸಿದ ನಾಯಕ ಅವರ ಕಥೆಗಳಲ...
“ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸ...
“ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ...
©2025 Book Brahma Private Limited.