ಸಾಮಾನ್ಯರಾದ ನಮಗೆ ದೂರದಿಂದ ಕಾಣುವ ರಾಜಕಾರಣ ಮತ್ತು ನಾವೇ ಅದರೊಳಗೆ ಕಾಲಿಟ್ಟಾಗ ಅನುಭವಿಸುವ ಮತ್ತು ಅದರೊಳಗೆ ಮಿಳಿತವಾಗಿಬಿಟ್ಟರೆ ಅಲ್ಲಿಂದ ನಾವು ಇತರರಿಗೆ ಕಾಣುವ ಬಗೆ - ಇವೆಲ್ಲವುಗಳನ್ನು ಸೂಕ್ಷ್ಮವಾಗಿ ತೋರಿಸುತ್ತದೆ "ಶಿವಗಾಮಿ ಬದಲಾದಳೆ (ರೆ)?" ಎನ್ನುವ ಕಥೆ. ಈ ಕಥೆಯನ್ನೋದುತ್ತಿರುವಾಗ ಥಟ್ಟನೆ ಇತ್ತೀಚಿಗೆ ಪದೇಪದೇ ಸೋಶಿಯಲ್ ಮೀಡಿಯಾದಲ್ಲಿ ನಡೆವ ವಿವಿಧ ಜಾತಿಗಳ ಮೇಲಿನ ಜಗಳಗಳು, ಪೋಸ್ಟುಗಳು ನೆನಪಾಗಿ ನಗು ಉಕ್ಕಿತು ಎನ್ನುತ್ತಾರೆ ಲೇಖಕಿ ತೇಜಸ್ವಿನಿ ಹೆಗಡೆ. ಅವರು ಲೇಖಕ ಕೆ. ಸತ್ಯನಾರಾಯಣ ಅವರ ಮನುಷ್ಯರು ಬದಲಾಗುವರೆ? ಕೃತಿಯ ಬಗೆಗೆ ಬರೆದ ಲೇಖನ ನಿಮ್ಮ ಓದಿಗಾಗಿ..
"ಕಥೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಜಗತ್ತಿಗೆ ಬರುತ್ತದಷ್ಟೆ."
"ಕತೆ ಇರುವುದೇ ಮನುಷ್ಯನ ಬದುಕಿನಲ್ಲಿ ಏನಾದರೂ ಹುಳುಕು, ಊನ ಇದೆ ಎಂದು ತೋರಿಸಲು ತಾನೇ?"
ಕೆ. ಸತ್ಯನಾರಾಯಣ ಅವರ "ಮನುಷ್ಯರು ಬದಲಾಗುವರೆ?" ಕಥಾಸಂಕಲನದಲ್ಲಿ ಬರುವ ಮೇಲಿನ ಸಾಲುಗಳು ಇಡೀ ಸಂಕಲನದ ಒಟ್ಟೂ ಪರಿಕಲ್ಪನೆಗೆ ಇಂಬುಕೊಡುವಂತಿದೆ.
ನಮ್ಮ ಸಮಾಜದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮನುಷ್ಯನ ವರ್ತನೆ, ಸಂವಹನ, ಪೂರ್ವಾಗ್ರಹ ಪೀಡಿತ ನಿರ್ಧಾರ, ನಿರ್ಣಯ, ಇದಮಿತ್ಥಂ ಎಂದು ಮಿತಿ ಹಾಕಿ ಬಿಡುವ ಮನೋಭಾವ - ಹೀಗೆ ಒಂದು ಮುಖದ ಹಲವಾರು ಭಾವಗಳನ್ನು ಸೋಸಿ ನೀಡುವ… ಆ ಮೂಲಕ ನಮ್ಮೊಳಗಿನ ಊನಕ್ಕೆ, ಹುಳುಕಿಗೆ ಕನ್ನಡಿಯನ್ನು ಹಿಡಿದು, ನಾವು ಬದಲಾಗುತ್ತೇವೆಯೇ? ಎಂದು ನಮಗೇ ನಾವು ಪ್ರಶ್ನೆಗಳನ್ನೆಸೆದುಕೊಳ್ಳುವಂತೆ ಮಾಡುವ ಹಲವು ಕಥೆಗಳನ್ನು ಹೊಂದಿದೆ ಈ ಸಂಕಲನ.
ಪ್ರಸ್ತುತ ಸಂಕಲನದಲ್ಲಿ ಒಟ್ಟೂ 15 ಕಥೆಗಳಿದ್ದು, ಕಥಾ ವಸ್ತುಗಳು ಮತ್ತು ಅವುಗಳನ್ನು ನಿರೂಪಿಸಿದ ರೀತಿ ಬಹಳ ವಿಭಿನ್ನವಾಗಿವೆ. ಆದರೆ, ಇವುಗಳಲ್ಲಿ ಕೆಲವೊಂದಿಷ್ಟು ಕಥೆಯ ಆಕಾರ, ಪ್ರಕಾರಗಳಿಗೆ ಸಂಪೂರ್ಣ ಹೊಂದಿಲ್ಲದಂಥವು, ಅಂದರೆ ಲೇಖಕರ ಸ್ವಗತವೋ, ಲಹರಿಯೋ ಇಲ್ಲ ಯಾವುದೋ ಒಂದು ಸೂಕ್ಷ್ಮ ಉದ್ದೇಶವನ್ನು ಪ್ರಖರವಾಗಿ ಪ್ರತಿಪಾದಿಸಲು ಅಧ್ಯಯನ ಮಾಡಿ ಕೊಟ್ಟ ಟಿಪ್ಪಣಿಯೋ ಎಂಬಂತಹ ಬರಹಗಳನ್ನೂ ಕಾಣಬಹುದು. ಉದಾಹರಣೆಗೆ: ಆನಂದರಾಮು ಮತ್ತು ಜೇಮ್ಸ್ ಮೇನರ್, ನಾಲ್ವಡಿಯವರ ವಿವೇಚನೆ - ಎಂಬೆರಡು ಕಥೆಗಳು. ಇತಿಹಾಸವನ್ನು ಹೇಗೆ ಓದಬೇಕು, ಅರಿಯಬೇಕು ಎಂಬುದನ್ನು ತೋರಿಸಿಕೊಡಲೋಸುಗ, ಮೈಸೂರು ರಾಜರು ಮತ್ತು ವಿಶ್ವೇಶ್ವರಯ್ಯನವರ ನಡುವಿನ ಸೊಗಸಾದ ಬಂಧದದ, ಸಣ್ಣ ತಕರಾರಿನ ಮತ್ತು ಆಗ ನಡೆದ ಕೆಲವು ರಹಸ್ಯಮಯ ರಾಜಕೀಯತೆಯ ಕ್ಲುಪ್ತ ಅನಾವರಣವನ್ನು ಈ ಎರಡು ಬರಹಗಳಲ್ಲಿ ಕಾಣುತ್ತೇವೆ.
ಇನ್ನು ಇಲ್ಲಿಯ ಕಥೆಗಳ ವಿಶಿಷ್ಟತೆ ಏನಂದರೆ… ಅವು ಯಾವುದೇ ಕಥಾ ಚೌಕಟ್ಟಿನೊಳಗೆ ಬಂಧಿಸದೇ ವಿಶಿಷ್ಟ ರೀತಿಯ ನಿರೂಪಣಾ ಶೈಲಿಯನ್ನು, ಸಂಪೂರ್ಣ ಮುಕ್ತ ಭಾವವನ್ನು ಪ್ರತಿಪಾದಿಸುವಂಥವು. ಹೆಣ್ಣು-ಗಂಡು, ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣು.. ಇವರ ನಡುವಿನ ಸಂಬಂಧಗಳನ್ನು ತೋರುವ ಕಥೆಗಳಾಗಿ ಮಾತ್ರ ನಿಲ್ಲದೇ ಈ ಎಲ್ಲ ಪರಿಧಿಯನ್ನು ಮೀರಿ ಮನುಷ್ಯ-ಮನುಷ್ಯನ ನಡುವಿನ ವ್ಯವಹಾರ, ಬಂಧವನ್ನು ಎತ್ತಿ ಹಿಡಿದಿವೆ ಎಂದೆನ್ನಿಸಿತು.
ಇಲ್ಲಿನ ಸುಮಾರು ಕಥೆಗಳಲ್ಲಿ ಒಂದು ಸಮಾನ ಅಂಶವನ್ನು ಗುರುತಿಸಬಹುದು. ಅದೇ ‘ಸಾವಿನ’ ಪರಿಕಲ್ಪನೆ! ಇಲ್ಲಿ ಸಾವು ಎಂದರೆ ಕೇವಲ ಭೌತಿಕ ದೇಹದ ಸಾವು ಮಾತ್ರವಲ್ಲ; ಒಂದು ಸಂಬಂಧದ, ಅನುಭವದ, ಸ್ನೇಹದ, ತಪ್ಪು ಅಭಿಪ್ರಾಯದ, ನಂಬಿಕೆಯ, ಮೂಢತೆಯ - ಹೀಗೆ ಇವೆಲ್ಲವುಗಳ ಅಂತ್ಯವೂ ಆಗಿರುವಂಥದ್ದು.
ಉದಾಹರಣೆಗೆ ಈ ಸಂಕಲನದಲ್ಲಿ ಬರುವ "ಹನುಮಂತಾಚಾರ್ ಉಯಿಲು" ಎಂಬ ಕಥೆಯಲ್ಲಿ ಬರುವ ಈ ಸಾಲು...
"ಸಿಗದ ಬಿಡುಗಡೆಗೆ ಹೋಲಿಸಿದರೆ ಎದುರಾಗುವ ಸಾವೇ ಸುಲಭ ಎಂದು ನನಗನಿಸುತ್ತೆ. ಬದುಕುವುದು, ನಿತ್ಯವೂ ಬದುಕುವುದು, ಬದುಕುತ್ತಾ ಹೋಗುವುದೇ ಸಹಜವಾದದ್ದು. ಮನುಷ್ಯ ಹುಟ್ಟುವುದೇ ಬದುಕುವುದಕ್ಕೆ, ಬದುಕುತ್ತಾ ಹೋಗುವುದಕ್ಕೆ. ಸಾವೆನ್ನುವುದು ಬದುಕು ಇಷ್ಟವಾಗದವರು, ಬದುಕಿನ ಬಗ್ಗೆ ಅಸೂಯೆ ಪಡುವವರು ನೀಡುವ ಶಾಪ..." - ಇದು ನನ್ನನ್ನು ಬಹಳವಾಗಿ ಸೆಳೆಯಿತು. ಇಡೀ ಕಥೆಯೇ ಒಂದು ಪ್ರತಿಮಾತ್ಮಕ ರೀತಿಯಲ್ಲಿ ಬಂದಿದ್ದು, ನಮ್ಮ ಪ್ರಸ್ತುತ ಸಮಾಜದಲ್ಲಿ ವಿವಿಧ ಸ್ತರಗಳಲ್ಲಿರುವ ಮುಖವಾಡಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ಕಥೆಯನ್ನೋದಿ ಮುಗಿಸಿದಾಗ ಒಂದು ಪ್ರಶ್ನೆ ನನ್ನ ಮನಸ್ಸಲ್ಲಿ ಮೂಡಿತು.... ‘ಬದುಕಿದ್ದಷ್ಟೂ ಹೊತ್ತು ಮನುಷ್ಯ ನೆರೆ-ಕೆರೆಯವರ, ಆಪ್ತೇಷ್ಟರ, ಸ್ನೇಹಿತರ ಪೂರ್ವ ನಿರ್ಧಾರಿತ ಸ್ಕ್ರಿಪ್ಟಿಗೆ ಕುಣಿಯುವುದು, ನಟಿಸುವುದೇ ಬದುಕೇ? ಸಾವೆಂದರೆ ಈ ಎಲ್ಲ ಸಂಕೋಲೆಗಳಿಂದ ವಿಮುಕ್ತಿ... ಇದನ್ನು ಬದುಕಿರುವಾಗಲೂ ಸಾಧಿಸಬಹುದು, ಹೊಸ ಹುಟ್ಟನ್ನು ಏಕ ಜನ್ಮದಲ್ಲೇ ಪಡೆಯಬಹುದಲ್ಲವೇ?’
‘ಹನಿ ಟ್ರಾಪ್’ ಎನ್ನುವ ಕಥೆ ‘ದೇಶ ಪ್ರೇಮ’ದ ಕುರಿತು ಹಲವು ಆಯಾಮಗಳನ್ನು, ಉನ್ನತ ರಾಜಕೀಯ ಮಟ್ಟದಲ್ಲಿ ಅದು ಬದಲಾವಣೆಗೆ ಒಳಪಡುವ ರೀತಿಯನ್ನು ತೋರಿತು. ಸಾಮಾನ್ಯರಾದ ನಮಗೆ ದೇಶ ಪ್ರೇಮದ ಪರಿಭಾಷೆ ಒಂದೇ ರೀತಿಯಲ್ಲಿರುತ್ತದೆ. ಆದರೆ ಆಳುವ ಸರ್ಕಾರ, ಅದರ ವಿದೇಶಾಂಗ ನೀತಿ ಯಾವ ರೀತಿಯ ಒತ್ತಡಕ್ಕೆ, ರಾಜತಾಂತ್ರಿಕ ಅನಿವಾರ್ಯತೆಗೆ ರೂಪಾಂತರಗೊಳ್ಳಬಹುದು ಎಂಬುದರ ಝಲಕ್ ಸಿಗುತ್ತದೆ.
ಸಾಮಾನ್ಯರಾದ ನಮಗೆ ದೂರದಿಂದ ಕಾಣುವ ರಾಜಕಾರಣ ಮತ್ತು ನಾವೇ ಅದರೊಳಗೆ ಕಾಲಿಟ್ಟಾಗ ಅನುಭವಿಸುವ ಮತ್ತು ಅದರೊಳಗೆ ಮಿಳಿತವಾಗಿಬಿಟ್ಟರೆ ಅಲ್ಲಿಂದ ನಾವು ಇತರರಿಗೆ ಕಾಣುವ ಬಗೆ - ಇವೆಲ್ಲವುಗಳನ್ನು ಸೂಕ್ಷ್ಮವಾಗಿ ತೋರಿಸುತ್ತದೆ "ಶಿವಗಾಮಿ ಬದಲಾದಳೆ (ರೆ)?" ಎನ್ನುವ ಕಥೆ. ಈ ಕಥೆಯನ್ನೋದುತ್ತಿರುವಾಗ ಥಟ್ಟನೆ ಇತ್ತೀಚಿಗೆ ಪದೇಪದೇ ಸೋಶಿಯಲ್ ಮೀಡಿಯಾದಲ್ಲಿ ನಡೆವ ವಿವಿಧ ಜಾತಿಗಳ ಮೇಲಿನ ಜಗಳಗಳು, ಪೋಸ್ಟುಗಳು ನೆನಪಾಗಿ ನಗು ಉಕ್ಕಿತು.
‘ಪುನರ್ಮುದ್ರಣ’ ಎಂಬ ಕಥೆಯಲ್ಲಿ ಬರುವ ಪಾತ್ರವೊಂದರ ಮಾತು - "Facts, Facts ಅಂತೀರಿ. Factsಅಲ್ಲಪ್ಪ, ಮುಖ್ಯವಾದದ್ದು Truth. Facts ಹೇಳಿ ಕೂಡ ಸತ್ಯವನ್ನು ಮುಚ್ಚಿಡಬಹುದು, ಮುಚ್ಚಿಡ್ತೇವೆ. ಗೊತ್ತಾ.” ಪ್ರಸ್ತುತ ಕಾಲಘಟ್ಟದಲ್ಲಿ ಇತಿಹಾಸ ಕೊಡುವ ಅನೇಕ ಫ್ಯಾಕ್ಟ್ಸ್ ಗಳನ್ನು ಪುನರ್ ಪರಿಶೀಲಿಸಲು ಪ್ರೇರೇಪಿಸುವಂತಿದೆ.
ಮೇಲೆ ಉಲ್ಲೇಖಿಸಿದ ಕಥೆಗಳಲ್ಲದೇ, Rock ಮದಾಂಗಳು, ಫೋಟೋ ವಲಸೆ, ಒಂದು ಭೋಜನ ಮೀಮಾಂಸೆ - ಈ ಕಥೆಗಳೂ ತಮ್ಮ ವಿನೂತನ ಕಥಾ ವಸ್ತು ಮತ್ತು ಶೈಲಿಯಿಂದ ಇಷ್ಟವಾದವು.
"ಜೀವನ ನೇರವಾಗಿದೆ, ಸರಳವಾಗಿದೆ. ಅನಗತ್ಯವಾಗಿ ಸಂಕೀರ್ಣ ಮಾಡಿಕೊಳ್ಳಬೇಡಿ. ಜೀವನ ಸಂಕೀರ್ಣವಾಗೋಕ್ಕೆ ಕಾರಣ ಸಮಸ್ಯೆಯ ಸಂಕೀರ್ಣತೆಯಲ್ಲ. ನಮ್ಮ ನಮ್ಮ ಅಹಂಕಾರ. ಇದು ಗಂಡು-ಹೆಣ್ಣಿನ ಸಂಬಂಧಕ್ಕೂ ಅನ್ವಯಿಸುತ್ತದೆ. ದೇಶ-ದೇಶಗಳ ನಡುವಿನ ಸಂಬಂಧಕ್ಕೂ ಕೂಡ ಅನ್ವಯಿಸುತ್ತದೆ." - ಕಥೆಯೊಂದರಲ್ಲಿ ಬರುವ ಈ ಸಾಲು ಗಾಢವಾಗಿ ಚಿಂತನೆಗೆ ನಮ್ಮನ್ನು ಎಳೆಯುವಂತಿದೆ.
ಕೆ.ಸತ್ಯನಾರಾಯಣ ಅವರ ಪ್ರಸ್ತುತ ಸಂಕಲನವು ಅವರ ಈ ಮೊದಲಿನ ಪುಸ್ತಕಗಳ/ಬರಹಗಳ ಶೈಲಿಗಿಂತ ವಿಭಿನ್ನವಾಗಿದ್ದು, ಓದುಗರಿಗೆ ಹಲವು ರೀತಿಯ ಹೊಸ ಹೊಳಹನ್ನು ನೀಡುವಂತಿದೆ.
- ತೇಜಸ್ವಿನಿ ಹೆಗಡೆ
ತೇಜಸ್ವಿನಿ ಹೆಗಡೆ ಅವರ ಲೇಖಕ ಪರಿಚಯ..
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.