“ಕಾದಂಬರಿಯ ಪ್ರತೀ ಅಧ್ಯಾಯದ ಆರಂಭ ಮತ್ತು ಅಂತ್ಯವು ಸಾಮಾನ್ಯ ಓದುಗನನ್ನು ಸೆಳೆಯುವಂತೆ ಮಾಡಲಾಗಿದೆ. ಇದು ತ್ವಬ್‌ರ ಹೆಗ್ಗಳಿಕೆಯಾಗಿದೆ,” ಎನ್ನುತ್ತಾರೆ ಹಂಝ ಮಲಾರ್. ಅವರು ತ್ವಯ್ಯಿಬ್ ಸುರಿಬೈಲ್ ಅವರ “ಸಾಮ್ರಾಟ” ಕೃತಿಗೆ ಬರೆದ ಮುನ್ನುಡಿ.
2024ರ ಜೂನ್ 3ರಂದು ಕೊಣಾಜೆ ಸಮೀಪದ ಮುಡಿಪು ಸರಕಾರಿ ಕಾಲೇಜಿನ ಉಪನ್ಯಾಸಕ ಹೈದರ್ ಕೆ. ಫೋನ್ ಕರೆ ಮಾಡಿ ನಮ್ಮ ಕಾಲೇಜಿನ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ ತ್ವಯಿಬ್ ಕಾದಂಬರಿಯೊಂದನ್ನು ಬರೆದಿದ್ದು, ಓದಿ ಅಭಿಪ್ರಾಯ ತಿಳಿಸಬಹುದಾ? ಎಂದು ಕೇಳಿದರು. ನನಗೆ ಇಲ್ಲ ಎನ್ನಲಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿ ತ್ವಯಿಬ್ ಕರೆ ಮಾಡಿ ತಾನು ಬರೆದ 'ಸಾಮ್ರಾಟ' ಕಾದಂಬರಿಯ ಟೈಪ್ ಮಾಡಿದ ಪ್ರತಿಯನ್ನು ಕೊಟ್ಟರು. ತಿಂಗಳ ಬಳಿಕ ಓದಿ ಮುಗಿಸಿದ್ದೆ. ಹಾಗೇ ನನ್ನ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ ಒಂದಷ್ಟು ಸಲಹೆ ನೀಡಿದ್ದೆ. 2025ರ ಜನವರಿ 14ರಂದು ಮತ್ತೆ ಕರೆ ಮಾಡಿದ ತ್ವಯ್ಯಬ್ ತಾವು ಈ ಕೃತಿಗೆ ಮುನ್ನುಡಿ ಬರೆದುಕೊಡಿ ಎಂದು ಕೇಳಿಕೊಂಡಾಗಲೂ ನನಗೆ ಆಗಲ್ಲ ಎನ್ನಲಾಗಲಿಲ್ಲ. ನಾನು ಮುನ್ನುಡಿ ಬರೆಯಬೇಕಾದರೆ ಮತ್ತೊಮ್ಮೆ ಆ ಕಾದಂಬರಿಯನ್ನು ಓದಬೇಕಾಗಿದೆ ಎಂದರೆ. ಅದೇ ದಿನ ತ್ವಯಿಬ್ ಕಾದಂಬರಿಯ ಟೈಪ್ ಮಾಡಿದ ಪ್ರತಿಯನ್ನು ತಂದು ಕೊಟ್ಟರು. ಮೊದಲ ಓದಿನಲ್ಲಿ ಅಕ್ಷರ ತಿದ್ದುಪಡಿ, ವಾಕ್ಯ ರಚನೆ, ಕಾದಂಬರಿಯ ಪಾತ್ರಗಳ ಹೆಸರು ಇತ್ಯಾದಿಯ ಬಗ್ಗೆ ಹೆಚ್ಚು ಗಮನಹರಿಸಿದ್ದೆ. ಎರಡನೇ ಓದಿನಲ್ಲಿ ನಾನು ಸೂಚಿಸಿದ ಸಲಹೆಯನ್ನು ತ್ವಯಿಬ್ ಪರಿಗಣಿಸಿದ್ದಾರೆಯೇ ಎಂದು ಗಮನಿಸುತ್ತಾ ಹೋದೆ. ಓದುತ್ತಲೇ ತ್ವಯ್ಯಬ್ ನನ್ನ ಸಲಹೆ, ಸೂಚನೆಗಳನ್ನು ಪಾಲಿಸಿರುವುದನ್ನು ತಿಳಿದುಕೊಂಡೆ. ಸಂತೋಷವೂ ಆಯಿತು.
ಅಂದಹಾಗೆ ಕೊಣಾಜೆ ಸಮೀಪದ ಮುಡಿಪು ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ತ್ವಯಿಬ್ ಬಂಟ್ವಾಳ ತಾಲೂಕಿನ ಸುರಿಬೈಲ್ ನಿವಾಸಿ.
ಮನೆಯಲ್ಲಿ ಸಾಹಿತ್ಯದ ಗಂಧಗಾಳಿ ಇಲ್ಲ. ತಂದೆ ವೃತ್ತಿಯಲ್ಲಿ ಚಾಲಕ. ತಾಯಿ ಗೃಹಿಣಿ. ಮನೆಯಲ್ಲಿ ಸಾಹಿತ್ಯಕ್ಕೆ ಪೂರಕ ವಾತಾವರಣವಿದೆ. ಅಂದರೆ ತನ್ನ ತಂದೆ ತಂದುಕೊಡುತ್ತಿದ್ದ ಪತ್ರಿಕೆಗಳು, ಇಸ್ಲಾಮಿಕ್ ಕೃತಿಗಳನ್ನು ಓದುತ್ತಲೇ ಅದರಿಂದ ಪ್ರಭಾವಿತನಾದ ತ್ವಯ್ಯಬ್ ಬರೆಯಲು ಆಸಕ್ತಿ ವಹಿಸಿದರು. ಹಾಗೇ ತನ್ನ 19ರ ಹರೆಯದಲ್ಲೇ ಕಾದಂಬರಿಯೊಂದನ್ನು ಬರೆದು ಮುಗಿಸಿದ್ದಾರೆ. ಸಾಮಾನ್ಯವಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಾಗ ಕವನ, ಚುಟುಕು, ಹನಿಗವನ, ಸಣ್ಣಕತೆ ಬರೆಯುವುದು ಸಹಜ. ಆದರೆ ತ್ವಯಿಬ್ ಮೊದಲ ಯತ್ನದಲ್ಲೇ ಕಾದಂಬರಿಯನ್ನು ಬರೆದಿರುವುದು ಅಚ್ಚರಿಯ ಸಂಗತಿ.
ಸಾಮಾನ್ಯವಾಗಿ ಕರಾವಳಿಯ ಮುಸ್ಲಿಂ ಬರಹಗಾರರು ಮುಸ್ಲಿಂ ಸಂವೇದನೆಯ ವಸ್ತುಗಳನ್ನು ಆಧರಿಸಿ ಸಾಹಿತ್ಯ ರಚಿಸುತ್ತಾರೆ. ಆದರೆ, ಯುವ ಲೇಖಕ ತ್ವಯಿಬ್ ಅದಕ್ಕೆ ಭಿನ್ನವಾಗಿದ್ದಾರೆ. ಇತರ ಕೃತಿಗಳ ಓದಿನ ತಕ್ಷಣದ ಪ್ರಭಾವವೋ ಏನೋ? ಚಾರಿತ್ರಿಕ ವಸ್ತುವನ್ನು ಆಧರಿಸಿ ಕಾದಂಬರಿ ಬರೆದಿದ್ದಾರೆ.
ಈ ಕಾದಂಬರಿಯು ಫ್ಯಾಂಟಸಿಯಿಂದ ಕೂಡಿದೆ. ಪ್ರಕೃತಿಯ ವರ್ಣನೆ ದಟ್ಟವಾಗಿದೆ. ಹದಿಹರೆಯಕ್ಕೆ ಪೂರಕ ಎಂಬಂತೆ ಪ್ರೀತಿ-ಪ್ರೇಮದ ಸ್ಪರ್ಶವಿದೆ. ಯುದ್ಧದ ಭೀಕರತೆಯಿದೆ. ತಕ್ಕಡಿಯಲ್ಲಿ ತೂಕ ಹಾಕಿದಂತೆ ಸೋಲು-ಗೆಲುವನ್ನು ಸಮಾನವಾಗಿ ಕಾಣುವ ಪ್ರಯತ್ನ ಮಾಡಲಾಗಿದೆ. ರಾಜ-ರಾಣಿಯರ ಮಾನವೀಯ ಮುಖವೂ ಇದೆ. ಕೆಲವು ಕಡೆ ಪಾತ್ರಗಳ ಮೂಲಕ ಹೇಳಬಹುದಾದ ಸಂಗತಿಗಳನ್ನು ತ್ವಯಿಬ್ ಸ್ವತಃ ಹೇಳಿಕೊಂಡಿದ್ದರೂ ಕೂಡ ಕಾದಂಬರಿಯ ಪ್ರತೀ ಅಧ್ಯಾಯದ ಆರಂಭ ಮತ್ತು ಅಂತ್ಯವು ಸಾಮಾನ್ಯ ಓದುಗನನ್ನು ಸೆಳೆಯುವಂತೆ ಮಾಡಲಾಗಿದೆ. ಇದು ತ್ವಬ್‌ರ ಹೆಗ್ಗಳಿಕೆಯಾಗಿದೆ. ಇಲ್ಲಿನ ಪಾತ್ರಧಾರಿಗಳ ಹೆಸರು ಒಂದಷ್ಟು ಗೊಂದಲಕ್ಕೆ ಆಸ್ಪದ ಕೊಟ್ಟಂತೆ ಇದ್ದರೂ ಕೂಡ ತದೇಕ ಚಿತ್ತದಿಂದ ಓದಿದರೆ ಗೊಂದಲ ನಿವಾರಣೆಯಾಗಬಹುದು.
ಇದೀಗ ತ್ವಯ್ಯಬ್‌ಗೆ ಕೇವಲ 20 ಹರೆಯ. ತಾನು ಬರೆದ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಹೊರತರುವಾಸೆ. ತನ್ನಾಸೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ, ಉಪನ್ಯಾಸಕ ಹೈದರ್ ಕೆ. ಅವರ ಬಳಿ ವ್ಯಕ್ತಪಡಿಸಿದಾಗ ಅವರು ಇಲ್ಲ ಎನ್ನಲಿಲ್ಲ. ನಿರಾಶೆಗೊಳಿಸಲಿಲ್ಲ. ಅವರು ಹುರಿದುಂಬಿಸಿದ. ಪ್ರೋತ್ಸಾಹದ ಮಾತುಗಳನ್ನಾಡಿದ ಪರಿಣಾಮ ಈ ಕಾದಂಬರಿಯು ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಸಾಹಿತ್ಯದಲ್ಲಿ ಅಪಾರ ಒಲವು ಇರುವ ತ್ವಯಿಬ್ ಈ ಕ್ಷೇತ್ರದಲ್ಲಿ ಮಿಂಚಲಿ ಎಂದು ಹಾರೈಸುವೆ.
"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂ...
"ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆ...
"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸ...
©2025 Book Brahma Private Limited.