ಆಡುಭಾಷೆಯ ಸೊಬಗು, ಪ್ರಾದೇಶಿಕತೆ, ಗ್ರಾಮ್ಯ ಪರಿಸರ, ಪ್ರಸ್ತುತ ಸಮಾಜದ ಅವಸ್ಥಾಂತರಗಳ ನೋಟದ ಅನಾವರಣಗಳೇ ಡಾ,ಬಸು ಬೇವಿನಗಿಡದ ಅವರ ಕತೆಯಲ್ಲಿನ ಶಕ್ತಿ ಎಂದು ಓದುಗ ಗುರುತಿಸಬಹುದು. ಈ ಅಂಶಗಳು ಸಂಕಲನದಲ್ಲಿನ ಎಂಟು ಕತೆಗಳನ್ನು ಓದಿದಾಗ ಓದುಗನ ಮನಸಿನಲ್ಲಿ ಸುಳಿದು ಬರುವವು ಎನ್ನುತ್ತಾರೆ ಬರಹಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ. ಅವರು ಬಸು ಬೇವಿನಗಿಡದ ಅವರ ನೆರಳಿಲ್ಲದ ಮರ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..
ಕೃತಿ: ನೆರಳಿಲ್ಲದ ಮರ
ಲೇಖಕ: ಡಾ.ಬಸು ಬೇವಿನಗಿಡದ
ಪ್ರಕಾಶನ: ಪಲ್ಲವ ಪ್ರಕಾಶನ,ಚನ್ನಪಟ್ಟಣ
ಪುಟ: 130
ಬೆಲೆ:140
ಮುದ್ರಣ: 2019
ಇತ್ತೀಚೆಗಷ್ಟೆ ತಮ್ಮ “ಓಡಿ ಹೋದ ಹುಡುಗ” ಮಕ್ಕಳ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ದೇಶಕರು ಹಾಗೂ ನಾಡಿನ ಖ್ಯಾತ ಸಾಹಿತಿಗಳು ಆದಂತಹ ಡಾ. ಬಸು ಬೇವಿನಗಿಡದ ಅವರ ಐದನೆಯ ಕಥಾಸಂಕಲನವೇ “ನೆರಳಿಲ್ಲದ ಮರ”.
ತಮ್ಮ ಸಾಹಿತ್ಯಕ್ಕಾಗಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ ಹಾಗೂ ಉಗುಳುಬುಟ್ಟಿ ಕಥಾ ಸಂಕಲನಗಳು ಇಗಾಗಲೇ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ ಕಥಾಸಂಕಲನಗಳೇ. ಇವುಗಳ ಜೊತೆಗೆ ಶ್ರೀಯುತರು “ಕನಸು” ಹಾಗೂ “ಇಳೆಯ ಅರ್ಥ” ಎಂಬ ಎರಡು ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಪ್ರಸ್ತುತ “ನೆರಳಿಲ್ಲದ ಮರ” ಕಥಾ ಸಂಕಲನದಲ್ಲಿನ ಒಟ್ಟು ಎಂಟು ಕತೆಗಳು ತಮ್ಮ ವಿಷಯ ವಸ್ತುವಿನ ವೈವಿಧ್ಯತೆಯಿಂದ ಓದುಗರನ್ನು ಕ್ಷಣ ಮಾತ್ರದಲ್ಲಿಯೇ ಸೆಳೆದು ಓದುಗನಿಂದ ಓದಿಸಿಕೊಂಡು ನೂತನ ಅನುಭೂತಿಯನ್ನು ನೀಡುವಂತಹ ಕತೆಗಳಾಗಿವೆ. ಮಾರುಕಟ್ಟೆಯ ಭಾಷೆ ಕತೆಯನ್ನು ಹೊರತು ಪಡಿಸಿ ಬಹುತೇಕ ಕತೆಗಳು ಗ್ರಾಮ್ಯ ಸೊಗಡನ್ನು ಹೊಂದಿ ಬದಲಾಗುತ್ತಿರುವ ಗ್ರಾಮೀಣ ಸಮಾಜದ ವಿವಿಧ ಆಯಾಮಗಳ ಒಳ ಹೊರಗನ್ನು ಕಟ್ಟಿ ಕೊಡುತ್ತವೆ. ಕತೆಗಳನ್ನು ಓದುತ್ತಾ ಹೋದಂತೆ ಗ್ರಾಮ್ಯ ಜೀವನದಲ್ಲಿ ಆದಂತಹ ಪಲ್ಲಟಗಳನ್ನು ಕಾಣುವದಲ್ಲದೆ,ಹಿಂದಿನ ಹಲವಾರು ಮೌಲ್ಯಗಳು ಈಗ ಕಾಣಲು ಸಾಧ್ಯವಿಲ್ಲ ಎಂಬುವ ವಿಷಯ ಕೂಡಲೇ ಓದುಗನ ಗ್ರಹಿಕೆಗೆ ಬರುತ್ತದೆ.
ಆಡುಭಾಷೆಯ ಸೊಬಗು, ಪ್ರಾದೇಶಿಕತೆ, ಗ್ರಾಮ್ಯ ಪರಿಸರ, ಪ್ರಸ್ತುತ ಸಮಾಜದ ಅವಸ್ಥಾಂತರಗಳ ನೋಟದ ಅನಾವರಣಗಳೇ ಡಾ,ಬಸು ಬೇವಿನಗಿಡದ ಅವರ ಕತೆಯಲ್ಲಿನ ಶಕ್ತಿ ಎಂದು ಓದುಗ ಗುರುತಿಸಬಹುದು. ಈ ಅಂಶಗಳು ಸಂಕಲನದಲ್ಲಿನ ಎಂಟು ಕತೆಗಳನ್ನು ಓದಿದಾಗ ಓದುಗನ ಮನಸಿನಲ್ಲಿ ಸುಳಿದು ಬರುವವು.
ಕಥಾ ಸಂಕಲನದ ಶೀರ್ಷಿಕೆ ಹೊತ್ತ “ನೆರಳಿಲ್ಲದ ಮರ” ಮಾವ ಹಾಗೂ ಸೋದರಳಿಯನ ಸಂಘರ್ಷದ ಹೂರಣವೇ ಕಥಾವಸ್ತು. “ತಂದಿ ಸತ್ರೂ ಸ್ವಾದರಮಾವ ಇರಬೇಕು” ಅನ್ನುವ ಹಳ್ಳಿಯ ಮಾತು ಕತೆ ಓದುವಾಗ ಸವಕಲು ನಾಣ್ಯವಾಗಿ ಅಳಿಯ ನಾಗರಾಜನ ಮೇಲೆ ಶಂಕ್ರಪ್ಪನು ತೋರುವ ಅಹಂಮಿಕೆಯಿAದ ಆ ಮಾತು ಸುಳ್ಳೆಂದು ತೋರುವುದು. ಅಳ್ಳೆದೆಯ ಹಾಗೂ ಮೃದು ಸ್ವಭಾವದ ನಾಗರಾಜನ ತಂದೆ ತೀರಿಕೊಂಡಾಗ ಅವನ ತಾಯಿ ತಮ್ಮ ಶಂಕ್ರಪ್ಪನನ್ನು ಕರೆಸಿಕೊಳ್ಳುವುದು, ತಾನೇ ಅವನ ಮದುವೆ ಮಾಡಿಸಿ ಹೆಂಡತಿಯ ಹೆರಿಗೆಯನು ಮಾಡಿಸುವ ಅವಳು ಶಂಕರಪ್ಪನ ಸಹಾಯದೊಂದಿಗೆ ಮಕ್ಕಳನ್ನು ನೆಲೆ ನಿಲ್ಲುವಂತೆ ಮಾಡುವಳು. ಇದರಲ್ಲಿ ಶಂಕ್ರಪ್ಪನ ಪಾತ್ರವೂ ಇದೆ. ಹಾಗೆಂದÀ ಮಾತ್ರಕ್ಕೆ ಎಲ್ಲವೂ ತನ್ನಿಂದಲೇ ಆಗಿದೇ ಎನ್ನುವ ಶಂಕ್ರಪ್ಪನ ಧೋರಣೆ ಬದಲಾದ ಅವನ ಮನಸ್ಥಿತಿ ತೋರುವದಲ್ಲದೆ ಸಮಾಜದ ಕೆಟ್ಟ ವ್ಯಕ್ತಿಯ ಪ್ರತಿನಿಧಿಯಾಗಿ ಕಾಣುತ್ತಾನೆ. ಅಲ್ಲದೆ ನಾಗರಾಜನಿಗೆ ಕೆಲಸ ಸಿಕ್ಕ ಮೇಲೆ ಆತ ದೀಪಾಳನ್ನು ಮದುವೆಯಾಗಿದ್ದಕ್ಕೆ ಅವರಮ್ಮ ಸಿಟ್ಟಾಗುವುದು ಬಹುಶ ಇಂದಿನ ಕಾಲಘಟ್ಟದಲ್ಲಿ ಕಂಡುಬರುವ ಬಹಿರಂಗ ಗುಟ್ಟು. ಹೊಸದಾಗಿ ಹೊಲ ಕೊಳ್ಳಲು ನಾಗರಾಜ ಹಣ ಕೊಟ್ಟರೂ ಅಕ್ಕ, ಮಗ ಹಾಗೂ ಮಗಳು ತನ್ನ ಪರವಾಗಿ ಮಾತನಾಡಿಕೊಳ್ಳುವಂತೆ ಮಾಡಿ ಶಂಕ್ರಪ್ಪ ನಾಗರಾಜ ಹೊಲದ ಬಗ್ಗೆ ಮಾತಾಡಿದಾಗ ಅವನಿಗೆ ಕೋಪದಿಂದ ಮಾತಾಡಿ ಆತನನ್ನು ತಾನೇ ದೊಡ್ಡವ ಮಾಡಿದ್ದೇನೆ ಎನ್ನುತ್ತಾನೆ ಶಂಕ್ರಪ್ಪ. ಅಲ್ಲದೆ ಏನೂ ಕೊಡುವದಿಲ್ಲ ಎನ್ನುವ ಅರ್ಥದಲ್ಲಿ ಮಾತಾಡುವ ಆತನ ರೀತಿ ನಿಜಕ್ಕೂ ಮಾನವನೆದೆಯಲ್ಲಿ ಬೀಜ ಬಿಡುವ ಅತಿಯಾಸೆಯೇ ಅನ್ನಬೇಕು. ಹೆಂಡತಿ ದೀಪಾಳ ಮಾತು ಮನಸಿಗೆ ಹಾಕಿಕೊಳ್ಳದೆ ಹಣದ ಸಹಾಯ ಮಾಡಿದ ನಾಗರಾಜನಿಗೆ ಮಾವನ ಮಾತುಗಳಂತೂ ಮರ್ಮಾಘಾತ ನೀಡುವಂತಹವು. “ಸೂಜಿಮೊನೆಗೆ ಹತ್ತುವಷ್ಟು ಮಣ್ಣ ಸೈತ ಅವರು ನಿನಗ ನಾಳೆ ಕೊಡಂಗಿಲ್ಲ” ಅನ್ನುವ ಅವಳ ಮಾತು ನಿಜವಾಗಿ ಧ್ವನಿಸುತ್ತದೆ. ಈ ಮದ್ಯೆ ಹಳೆಯ ಗೆಳತಿ ಸುಶೀಲಾ ಭೇಟಿಯಾಗಿ ತನ್ನ ಮುಂದೆ ಶಂಕ್ರಪ್ಪ ಆ ರೀತಿ ಮಾತಾಡಲಿ ಎನ್ನುವ ಧೈರ್ಯ ತನಗೆ ಬಂದಿತೇ ಎನ್ನುವ ನಾಗರಾಜನ ಮನದ ದ್ವಂದ್ವ ಓದುಗನ ಮನಕ್ಕೆ ಗೋಚರವಾಗುತ್ತದೆ.
ಮಾದೇವನೆಂಬ ಸ್ಥಿತಪ್ರಜ್ಞ ಮನಸಿನ ಟೇಲರ್‌ನ ಕತೆಯಾದ “ತುಳುಕಿ ಹೋಗಿತ್ತ” ದಲ್ಲಿ ಹಳೆಯ ಹಾಗೂ ಹೊಸ ತಲೆಮಾರುಗಳು ವ್ಯಕ್ತಿಗಳ ನಡುವಿನ ಭಾವನೆಗಳ ತಾಕಲಾಟಗಳನ್ನು ಮಾರ್ಮಿಕವಾಗಿ ವಿವರಿಸುವ ಕತೆ. ಹಲವು ದಶಕಗಳಿಂದಲೂ ತುಂಬಾ ಸಮಯಪ್ರಜ್ಞೆಯಿಂದ ಬಟ್ಟೆಗಳನ್ನು ಹೊಲಿದು ಕೊಡುವ ಮಾದೇವ ಕಾರಣಾಂತರಗಳಿAದ ಅಂಗಡಿ ತೆರೆಯದೆ ಹೇಳಿದ ಸಮಯಕ್ಕೆ ಬಟ್ಟೆ ನೀಡದಿರುವ ಪ್ರಸಂಗದಿAದ ತೆರದುಕೊಳ್ಳುವ ಕತೆ ಆತನಿರುವ ಅಂಗಡಿ ರಸ್ತೆ ಅಗಲಿಕರಣದಲ್ಲಿ ಹೋಗುತ್ತಿದ್ದರೂ ಈಶ್ವರ ದೇವಸ್ಥಾನದಲ್ಲಿ ಭಜನೆ ಮಾಡುತ್ತಾ ಕುಳಿತ ಆತನ ಬರುವಿಕೆಗೆ ಹಾಗೂ ಮಾತನಾಡಲು ಕಾಯುತ್ತಾ ಕೂಡುವದೊಂದಿಗೆ ಕತೆ ಅಂತ್ಯವಾಗುತ್ತದೆ. ಈ ಮದ್ಯೆ ಮಕ್ಕಳು ರೆಡಿಮೇಡ್ ಬಟ್ಟೆ ಅಂಗಡಿ ಹಾಕೋಣವೆಂದಾಗ ಹಿಂದೇಟು ಹಾಕಿದಾಗ ಅವನಿಗೆ ಗೊತ್ತಿಲ್ಲದೆ ರೆಡಿಮೇಡ್ ಬಟ್ಟೆ ಅಂಗಡಿಯನ್ನು ಆತನ ಮಗ ತೆರೆದು ಇಂದಿನ ಯುವ ಮನಸಿನ ಮನಸ್ಥಿತಿಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ ಕತೆಗಾರರು.
“ಚೂರಾದ ಚಂದ್ರ” ಕತೆಯಲ್ಲಿನ ಚನ್ನಪ್ಪ ಹುಂಬ, ಕೋಪಿಷ್ಟನಾದರೂ ಕಲಾದಗಿ ಮಾಸ್ತರ್ ಕೊಲೆ ಸಂಬAಧ ಊರುಬಿಟ್ಟು ಹೋದಾಗ ಮಗನ ಬರುವಿಕೆಗಾಗಿ ಹಂಬಲಿಸುವ ತಾಯಿ ರುದ್ರವ್ವಳ ಕರುಳಿನ ಕೂಗು ಓದುಗನ ಎದೆಯಲ್ಲಿ ಅವಳ ಪುತ್ರ ವಾತ್ಸಲ್ಯದ ಚಿಲುಮೆಯನ್ನು ಉಕ್ಕೇರಿಸುವಂತೆ ಮಾಡುತ್ತದೆ. ಅಲ್ಪ ಸ್ವಲ್ಪ ಮಾತಾಡುವ ಹೆಂಡತಿ ನೀಲವ್ವಳಿಗೆ ಯಾವದೋ ಸಿಟ್ಟಿನ ಸಂದರ್ಭದಲ್ಲಿ ಅವಳ ಕೊರಳಿಗೆ ಕಟ್ಟಿಗೆ ಎಸೆದು ಅವಳು ಶಾಶ್ವತವಾಗಿ ಮೂಗಿಯಾಗುವಂತೆ ಮಾಡಿದ ಅವನಿಗೆ ದೇವರು ಸರಿಯಾದ ಶಿಕ್ಷೆ ನೀಡಿದ್ದಾನೆ ಎನ್ನುವ ಜನಗಳ ಮಾತುಗಳಿಗೆ ರುದ್ರವ್ವಳ ಹೆತ್ತ ಕರುಳು ಒಪ್ಪುವದಿಲ್ಲ. ಹಿರಿಯ ಮಗ ಗಿರಿಯಪ್ಪ ತಮ್ಮ ಚನ್ನಪ್ಪನನ್ನು ಹುಡುಕಿಸಿದೆ ಇರುವುದು ಅವಳ ಸಿಟ್ಟಿಗೆ ಕಾರಣವಾಗುತ್ತದೆ. ಬೇರೆ ಬೇರೆ ಪಕ್ಷದಲ್ಲಿದ್ದರೇನಾಯಿತು ಎಷ್ಟೋ ಜನ ಅಣ್ಣ ತಮ್ಮಂದಿರು ಬೇರೆ ಪಕ್ಷದಲ್ಲಿದ್ದರೂ ಅನ್ಯೋನ್ಯತೆಯಿಂದ ಇಲ್ಲವೆ ಎಂದು ಪ್ರಶ್ನಿಸುವ ಅವಳ ಪ್ರಶ್ನೆಗೆ ಉತ್ತರಿಸುವರಾರು. ಕತೆಯುದ್ದಕ್ಕೂ ಮಗನ ಆಗಮನಕ್ಕಾಗಿ ಪ್ರಲಾಪಿಸುವ ರುದ್ರವ್ವಳ ಮಾತೃ ಹೃದಯದ ಆಲಾಪದ ಕತೆಯಾಗಿ ಚೂರಾದ ಚಂದ್ರ ಸಂಕಲನದಲ್ಲಿ ಮತ್ತೊಂದು ಓದುಗನ ಮನಸಿನಾಳಕೆ ಇಳಿಯುವ ಕತೆ.
“ಜರಿ ರುಮಾಲು” ಪಕ್ಕಾ ಗ್ರಾಮ್ಯ ಸೊಗಡಿನ ಶಿವಲಿಂಗಪ್ಪ ಶಿಬಾರಗಟ್ಟಿ ಎಂಬ ಬಯಲಾಟದ ಕಲಾವಿದನ ಕತೆಯಾಗಿ ತನ್ನ ಭಾಷಾ ಪ್ರೌಢತೆಯಿಂದ ಸೆಳೆಯುತ್ತದೆ. ರಿಕಾಮಿ ತಿರುಗುತ್ತಿದ್ದ ಶಿವಲಿಂಗಪ್ಪ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ನಾಕೈದ ಸಲ ಫೇಲ್ ಆದ್ರೂ ಪಾಸಾದವರಿಗಿಂತ ಜಾಸ್ತಿ ಕಳಾ ಅವನ ಮ್ಯಾಲ ಇತ್ತು ಎನ್ನುವದರಲ್ಲಿ ಅಥವಾ ಫೇಲಾದ್ರೂ ನಗುತ್ತಿದ್ದ ಅವನಿಗೆ ಕಾರಣ ಕೇಳಿದ್ರ “ನಾ ಫೇಲ್ ಅಕ್ಕೇನಿ ಅಂತ ಮೊದಲ ಗೊತ್ತಿತ್ತ. ಅದು ಸುಳ್ಳಾಗಲಿಲ್ಲ ಅಂತ ಖುಷಿಯಾಗೇತಿ" ಅನ್ನುವ ಅವನಿಗೆ ಅದು ಅವನ ಜೀವನ ಪ್ರೀತಿ ಎನ್ನಬೇಕೋ ಅಥವಾ ಬೇಜವಬ್ದಾರಿ ಎನ್ನಬೇಕೋ ಎಂಬುವದಕ್ಕೆ ಯಾರು ತಾನೇಉತ್ತರ ಕೊಟ್ಟಾರು. ಕಾಲೇಜ ಕಟ್ಟಿ ಹತ್ತದ ಅವನಿಗೆ ತಂದೆ ಬಯ್ದಾಗ ಹೊಲಾನು ಬ್ಯಾಡ, ಮನಿನೂ ಬ್ಯಾಡ ಎಂದು ಸೋದರಮಾವನ ಊರು ಬೈಲಹೊಂಗಲಕ್ಕೆ ಹೋಗುವದು, ಅಲ್ಲಿ ಸಂಗ್ಯಾ ಬಾಳ್ಯಾ ನಾಟಕದ ತಾಲೀಮು ನೋಡಿ ತಾನು ಸಂಗ್ಯಾನ ಪಾತ್ರ ಮಾಡ್ತಿನಿ ಅಂದಾಗ “ಡೈಲಾಗ ಬಂದ್ರ ನಾಟಕ ಬಂದಾಗಲ್ಲ. ಪ್ರೀತಿ ಪ್ರೇಮ ತಿಳ್ಕೊಂಡ ಭಾವನಾ ಬರಬೇಕಾಗತದ. ಮದಲ ನೀ ಯಾರನ್ನಾರ ಪ್ರೀತಿ ಮಾಡು ಗೊತ್ತಾಗತದ” ಎಂದು ಮಾಸ್ತರ್ ಅಂದಾಗ ಸೋದರಮಾವನ ಮಗಳು ಲಲಿತಾಳನ್ನು ಮೆಚ್ವಿಸಲು ಹೋಗುವುದು, ಅವಳು ಅವನನ್ನು ಮೆಚ್ಚದೆ ಮಾಸ್ತರನನ್ನು ಮೆಚ್ವಿದ ಬಗ್ಗೆ ಹೇಳಿ ಅವನನ್ನೆ ಮದುವೆಯಾಗುವದಾಗಿ ತಿಳಿಸುವದು. ಕೊನೆಗೆ ಆ ಮಾಸ್ತರ್ ಯಾರ ಜೊತೆಯೋ ಓಡಿಹೋದಾಗ ಲಲಿತಾ ಶಿವಲಿಂಗಪ್ಪನನ್ನೆ ಮದುವೆಯಾಗುವದಾಗಿ ತಂದೆಯೊಡನೆ ಹಠ ಹಿಡಿದು ಮದುವೆಯಾಗುತ್ತಾಳೆ.
ಶಿವಲಿಂಗಪ್ಪ ಮಾತ್ರ ತಂಡ ಕಟ್ಟಿಕೊಂಡು ನಾಟಕ ಮಾಡುವುದು ಮುಂದುವರೆದಾಗ ಅವನ ಬಗ್ಗೆ ಸದಾಭಿಪ್ರಾಯ ಹೊಂದಿದ ಹೆಣ್ಣುಮಗಳು ಲಲಿತಾ. ಓಡಿ ಹೋದ ಮಾಸ್ತರ್‌ನನ್ನು ಕರೆತಂದು ನಾಟಕವಾ ಡಲು ಶುರು ಮಾಡಿದಾಗ ಮಕ್ಕಳು ಹೊಲ ಮನೆ ಮಾರಿದಿ ಎನ್ನುತ್ತಾ ಮನೆಯಿಂದ ಶಿವಲಿಂಗಪ್ಪನನ್ನು ಹೊರಗೆ ಹಾಕುವಂತಹ ಪ್ರಸಂಗಗಳು ಬಹುಶ ಹಲವಾರು ಗ್ರಾಮಗಳಲ್ಲಿ ವಾಸ್ತವವಾಗಿ ಜರುಗಿರುವದನ್ನು ಪತ್ರಿಕೆಯಲ್ಲಿ ಓದಿದುಂಟು. ಹೀಗೆ ಈ ಕತೆಯಲ್ಲಿ ವಾಸ್ತವ ಘಟನೆಗಳಿಗೆ ಕಥೆಯ ಮಾಂತ್ರಿಕ ಸ್ಪರ್ಶವನ್ನು ಓದುಗ ಕಾಣಬಹುದು.
“ಮಾರುಕಟ್ಟೆಯ ಭಾಷೆ” ಕಥೆಯು ವಿಭಿನ್ನವಾಗಿದ್ದು, ಕಥಾಸಂಕಲನದಲ್ಲಿಯೇ ಇತರ ಕತೆಗಳಿಗಿಂತ ವಿಶಿಷ್ಟ ವಿಷಯವಸ್ತು ಹಾಗೂ ನಿರೂಪಣೆಯಿಂದ ಹೊಸತನದಿಂದ ಕೂಡಿ ವಿಶೇಷ ಕತೆಯಾಗಿ ಕಾಣುತ್ತದೆ. ಲತಾ ಹಾಗೂ ಲಲಿತಾ ಎಂಬ ಇಬ್ಬರ ಆತ್ಮೀಯ ಗೆಳತಿಯರ ಕತೆಯಿದು. ಅವರಿಬ್ಬರ ಮಾರುಕಟ್ಟೆ ಭಾಷೆ ಎಂಬ ವಿಷಯಕ್ಕೆ ರಾಜ್ಯಮಟ್ಟದ ಬಹುಮಾನ ಬರುವದಲ್ಲದೆ ಯುನಿವರ್ಸಿಟಿ ಕ್ಯಾಂಪಸ್ನಲ್ಲಿ ನಡೆಯುವ ಅನೇಕ ರಸ ಪ್ರಸಂಗಗಳು ಈ ಕತೆಯಲ್ಲಿ ಹಾಸು ಹೊಕ್ಕಾಗಿವೆ. ಎಸ್ಸೆಸೆಲ್ಸಿಯಲ್ಲಿ ಸಾಕಷ್ಟು ಸಲ ಡುಮ್ಕಿ ಹೊಡೆದು ಕೊನೆಗೂ ಪಾಸಾದ ವಿಜಯ ಕೊನೆಗೂ ಸಗಟು ತರಕಾರಿ ಮಾರಾಟಕ್ಕೆ ಇಳಿಯುವುದು. ಲಲಿತಾಳೊಂದಿಗೆ ಮದುವೆ, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವುದು, ಸಿಂಡಿಕೇಟ್ ಸದಸ್ಯನಾಗುವದು ಹೀಗೆ ಕತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಲತಾಳು ಬಸವರಾಜನನ್ನು ಪ್ರೀತಿಸಿದರೂ ಆತನ ನಡವಳಿಕೆಯಿಂದ ದೂರಾಗುವದು, ಆಪ್ತ ಸ್ನೇಹಿತೆಯರಲ್ಲಿ ಸಂಶಯದ ಹೊಗೆ ಹೀಗೆ ಕತೆಯಲ್ಲಿ ಡ್ರಾಮಾಟಿಕ್ ಅಂಶಗಳು ಹಾಗೂ ಅತಿ ಸೂಕ್ಷ್ಮ ವಿವರಗಳು ಓದುಗನಿಗೆ ಮೆಚ್ಚುಗೆಯಾಗುತ್ತವೆ.
“ತೆರಣಿಯ ಹುಳು” ಕತೆಯು ಇಂದಿಗೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ ಕತೆಯಾಗಿದ್ದು, ರುದ್ರಪ್ಪ, ಪುಂಡಲೀಕನAತಹ ವ್ಯಕ್ತಿಗಳನ್ನು ಕಾಣಲು ಸಾಧ್ಯ ಎಂಬುವುದನ್ನು ಕತೆಗಾರರು ತುಂಬಾ ಹಾಸ್ಯ ಪ್ರಸಂಗಗಳೊAದಿಗೆ ಕಟ್ಟಿಕೊಟ್ಟಿದ್ದಾರೆ. ಓದುಗರಿಗೆ ಪುಂಡಲೀಕ ಮಾಡುವ ಕೃತ್ಯಗಳು ಕೆಲವೊಮ್ಮೆ ನಗೆಯುಕ್ಕಿಸಿದರೂ ಆತನಿಗೆ ನೀಡುವ ಶಿಕ್ಷೆಗಳಿಂದ ಆತನ ಪಡುವ ಗೋಳು ಯಾರಿಗೂ ಬೇಡ. ಸಾಯಂಕಾಲ ಹಳ್ಳಿಯಲ್ಲಿ ಬಯಲು ಬಹಿರ್ದೆಸೆಗೆ ಹೋಗುವ ಮಹಿಳೆಯರನ್ನು ಬೆನ್ನತ್ತಿ ಹೋಗಿ ಅವರಿಂದ ಪೆಟ್ಟು ತಿನ್ನುವ ಪುಂಡಲೀಕ ಹಲವಾರು ಹಳ್ಳಿಯಲ್ಲಿ ಕಾಣ ಸಿಗುವ ಪುಂಡರ ಪ್ರತಿನಿಧಿಯಂತೆ ಕಾಣುತ್ತಾನೆ. ಕೊನೆಗೂ ಹಾಗೂ ಹೀಗೂ ಮಾಸ್ತರ್ ಅಗಿ ಬಂದ ಆತ ಶಾಲೆಯ ಮಕ್ಕಳಿಗೆ ನಾಲಿಗೆಯಿಂದ ಮೂಗನ್ನು ಮುಟ್ಟಿಸುವ ಆಟದಿಂದ ಮತ್ತೇ ಸುದ್ದಿಗೆ ಬರುವುದು ನಿಜಕ್ಕೂ ಆತ ತನ್ನ ಚಾಳಿ ಬಿಡದಿರುವ ಪ್ರತೀಕವೇ. ಆತನಿರುವ ಶಾಲೆಯಲ್ಲಿ ಕಟ್ಟಿದ ಹೊಸ ಶೌಚಾಲಯ ಉದ್ಘಾಟನೆಯನ್ನು ಆತ ಹಿಂದೆ ಹೊಡೆತ ತಿಂದ ಕಮಲವ್ವಳೆ ಅದ್ಯಕ್ಷೆಯಾಗಿ ಸಮಾರಂಭದಲ್ಲಿ ಇರುವುದು ವಿಶೇಷವೆನಿಸುತ್ತದೆ. ಯಾಕೆಂದರೆ, ಆಕೆ ಪುಂಡಲೀಕನಿಗೆ ಕಲ್ಲು ಎಸೆದವಳೆ ಆಗಿದ್ದವಳು. ಅಲ್ಲದೆ ಕಾರ್ಯಕ್ರಮದಲ್ಲಿ ಕಲ್ಲು ಎಸೆದ ಕಾರಣವನ್ನು ಹೇಳಿ ಆತನನ್ನು ತಬ್ಬಿಬ್ಬುಗೊಳಿಸುವುದು ಓದುಗನಲ್ಲಿ ಆತನ ಬಗ್ಗೆ ಅಯ್ಯೋ ಎನಿಸದಿರದು.
ಈ ಸಂಕಲನದ ಉತ್ತಮ ಕತೆಗಳಲ್ಲಿ ಒಂದಾಗಿರುವ “ಮರವಿದ್ದು ಫಲವೇನು” ಕಥೆಯಲ್ಲಿ ಬರುವ ಪಾರಕ್ಕ ಮಾವಿನ ಕಾಯಿ ಇಳಿಸುವ, ಅವುಗಳನ್ನು ಬಟ್ಟಿ ಹಾಕಿ ಹಣ್ಣು ಮಾಡುವ ಕಾಯಕದಲ್ಲಿ ನಿಪುಣೆಯಾಗಿದ್ದರೂ ಒಂದು ಹಣ್ಣನ್ನು ತಿನ್ನದ ಅವಳ ಸ್ವಾಭಾವ ವಿಚಿತ್ರವೆನಿಸಿದರೂ ಕೊನೆಯಲ್ಲಿ ಅವಳು ಅದಕ್ಕೆ ಹೇಳುವ ಕಾರಣ ಕೇಳಿ ಓದುಗರ ಮನ ತುಡಿಯದೆ ಇರದು. ಕಾಲಿಲ್ಲದ ಮಗಳು ಗೌರಿ ಮಾವಿನ ಹಣ್ಣು ಕೇಳಿ ಅದನ್ನು ಯಾರು ಕೊಡದೆ ಇದ್ದಾಗ ಹಣ್ಣು ಹಣ್ಣು ಎಂದೆ ಕೊನೆಯುಸಿರು ಬಿಡುವ ಮಗಳ ಆ ಚಿತ್ರ ಪಾರಕ್ಕ ಜೀವನದಲ್ಲಿ ಮಾವಿನಹಣ್ಣನ್ನು ಮುಟ್ಟದ ಸ್ಥಿತಿ ತಂದ ವ್ಯಕ್ತಿಗಳ ಬಗ್ಗೆ ಓದುಗನಲ್ಲಿ ಕೋಪ ಬರಿಸುವದಂತೂ ಸುಳ್ಳಲ್ಲ. ಸಣ್ಣ ವಯಸ್ಸಿನಲ್ಲಿ ಗಂಡ ಸತ್ತರೂ ಹಾದಿಗೆ ಬಿದ್ದ ಸಂಸಾರವನ್ನು ಒಂದು ದಂಡೆಗೆ ತಂದ ಪಾರಕ್ಕ ನಿಜಕ್ಕೂ ಇಂತಹ ಪರಿಸ್ಥಿತಿ ಎದುರಿಸುವ ಎಷ್ಟೋ ಮಹಿಳೆಯರಿಗೆ ಮಾದರಿಯಾಗಿ ತೋರಿಸುವಲ್ಲಿ ಕತೆಗಾರರು ಗೆದ್ದಿದ್ದಾರೆ. ಚೂಟಿಯಾದ ಮಗ ಪರಮೇಶಿಯನ್ನು ಎಂತಹದೆ ಪರಿಸ್ಥಿತಿಯಲ್ಲಿ ಓದಿಸಬೇಕೆಂಬ ಅವಳ ಛಲ ಎಲ್ಲರಿಗೂ ಸ್ಪೂರ್ತಿಯಾಗುವಂತದು. ಜೊತೆಗೆ ಮಾವಿನ ಮರದೊಂದಗಿನ ಕೆಲಸ ಮಾಡುವ ಪಾರಕ್ಕ ಮಾವಿನಹಣ್ಣನ್ನು ತಿನ್ನದಂತಹ ಪರಿಸ್ಥಿತಿ ನಿರ್ಮಾಣವಾಗಿ ಮರವಿದ್ದು ಫಲವೇನು ಎಂಬ ಕತೆ ಶೀರ್ಷಿಕೆ ತುಂಬಾ ಧ್ವನಿಪೂರ್ಣವೆನಿಸುತ್ತದೆ.
ಗಿರವಿ ಅಡಿವೆವ್ವಳ ಕತೆ “ಅರಗಿನ ಮನೆ”ಯಲ್ಲಿ ಇದೆ. ಅವಳ ಲೇವಾದೇವಿ, ಗಿರವಿ ವ್ಯವಹಾರದಿಂದ ಹಳ್ಳಿಯಲ್ಲಿ ಹಲವಾರು ಕುಟುಂಬಗಳು, ಹೆಣ್ಣುಮಕ್ಕಳು ಸಂಕಟಕ್ಕೆ ಒಳಗಾಗಿರುವ ಚಿತ್ರಣವನ್ನು ಚಿತ್ರಕ ಶಕ್ತಿಯಿಂದ ಕಟ್ಟಿಕೊಟ್ಟಿದ್ದಾರೆ ಕತೆಗಾರರು. ಆವಲ ಕಾಯಕದಿಂದ ಅವಳು ಹಾಗೂ ಅವಳ ಗಂಡ ಎಂದ ಸಾಯುವರು ಎಂದು ಬಯಸುವ, ಶಪಿಸುವ ಮಟ್ಟಕ್ಕೆ ಅವರಿದ್ದಾರೆಂದರೆ ಅವಳ ಕಿರುಕುಳದ ಆಳವುÀ ಅರ್ಥವಾದಿತು. ಆ ಕಾರಣದಿಂದಲೇ ಆಕೆಯ ಗಂಡ ಕೊಲೆಯಾಗುವುದು, ತದನಂತರ ಆಕೆಯನ್ನು ಅವಲ ಮೈದುನರು ಮನೆಯಿಂದ ಹೊರಗೆ ಹಾಕಿದಾಗ ಬಡತನದ ಜೀವನವನ್ನು ಅವಳು ನಡೆಸುವುದು “ಮೇಲೆರಿದವನು ಇಳಿಯಲೇಬೇಕು” ಎಂಬ ಕಟು ವಾಸ್ತವದ ಚಿತ್ರಣದ ಹೆಣಿಕೆಯಲ್ಲಿ ಕತೆಗಾರರ ಕುಸುರಿ ಕೆಲಸ ಎದ್ದು ಕಾಣುತ್ತದೆ.
ಹೀಗೆ ಸಂಕಲನದಲ್ಲಿನ ಎಂಟು ಕತೆಗಳಲ್ಲಿ ಭಾಷೆಯ ನಿಖರತೆ, ಪಾತ್ರಗಳ ಪೋಷಣೆ, ಅತಿ ಸೂಕ್ಷö್ಮ ಅಂಶಗಳ ಚಿತ್ರಣ ಹಾಗೂ ಚಮತ್ಕಾರಿಕ ನಿರೂಪಣಾ ಶೈಲಿಯು ಕತೆಗಳ ಒಟ್ಟಂದಕ್ಕೆ ಮೆರುಗನ್ನು ನೀಡುವಲ್ಲಿ ಡಾ. ಬಸು ಬೇವಿನಗಿಡದ ಅವರು ಯಶಸ್ವಿಯಾಗಿದ್ದು, ಕತೆಗಳಲ್ಲಿನ ಶಿವಲಿಂಗಪ್ಪ, ರುದ್ರವ್ವ, ಪಾರಕ್ಕ, ಅಡಿವೆವ್ವ, ಮಹಾದೇವ, ಪುಂಡಲಿಕನAತಹ ಪಾತ್ರಗಳು ಓದುಗನ ಮನಸಿಗೆ ಇಳದು ಬಹಳಷ್ಟು ದಿನ ಕಾಡುತ್ತವೆ. ಇಂತಹ ಉತ್ತಮ ಕಥಾಸಂಕಲನ ನೀಡಿದ ಡಾ. ಬಸು ಬೇವಿನಗಿಡದ ಅವರಿಗೆ ಅಭಿನಂದನೆಗಳು.
-ಮಲ್ಲಿಕಾರ್ಜುನ ಶೆಲ್ಲಿಕೇರಿ
ಪರಿಚಯ: ಮಲ್ಲಿಕಾರ್ಜುನ ಶೆಲ್ಲಿಕೇರಿ, ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಯಂಡಿಗೇರಿ ಗ್ರಾಮದವರು, ಮೂಲತಃ ೧೯೯೮ ರ ಕೆ.ಎ.ಎಸ್. ಬ್ಯಾಚಿನ ಹಿರಿಯ ಅಧಿಕಾರಿಯಾಗಿದ್ದು, ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆಯಲ್ಲಿ ಸಿ.ಎ.ಓ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ.
ಬಸು ಬೇವಿನಗಿಡದ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
"ನನಗೆ ತುಂಬಾ ಇಷ್ಟವಾದ ಕತೆ ಮ್ಯಾಜಿಕ್ ಸೌಟು. ಇದರಲ್ಲಿ ಕೆಲಸದಾಕೆಯ ಕೈ ರುಚಿ ನೀಡುವ ನೆಮ್ಮದಿಗಾಗಿ ಹಂಬಲಿಸುವ ಕುಟ...
“ಎಲ್ಲದಕ್ಕಿಂತ ಮುಖ್ಯವಾಗಿ ಇವೆಲ್ಲ ಕಾದಂಬರಿಯ ಮುಖ್ಯ ಕಥಾನಕಕ್ಕೆ ಪೂರಕ ಅಂಶಗಳಾಗಿ ಬಂದುಹೋಗುವುದರಿಂದ, ಓದುಗರಿಗೆ...
"ಕರಾವಳಿಯ ಘಟನೆಯಲ್ಲಿ ಶಿಕ್ಷಕಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ತಮಗೆ ಕಲಿಸಿದ ಗ...
©2024 Book Brahma Private Limited.