ಈ ಕೃತಿಯಲ್ಲಿ ಲಘು ವಿನೋದಭರಿತ ಲವಲವಿಕೆಯ ಬರೆವಣಿಗೆ ಇದೆ; ಸುಬ್ರಾಯ ಚೊಕ್ಕಾಡಿ


‘ಈ ಕೃತಿಯಲ್ಲಿರುವ ಅನೇಕ ಘಟನೆಗಳನ್ನು ನಮ್ಮಲ್ಲೂ ಕಂಡವ, ಎದುರಿಸಿದವ ನಾನು. ಹಾಗಾಗಿಯೇ ನಿಮ್ಮ ಈ ಕೃತಿಯು ನನಗೆ ಆಪ್ತವೆನಿಸಿತು. ಇದರಲ್ಲಿ ನನ್ನನ್ನೇ ಕಂಡಂತಾಯಿತು’ ಎನ್ನುತ್ತಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ. ಅವರು ಮೇದಿನಿ ಕೆಸವಿನಮನೆ ಅವರ ‘ಮಿಸ್ಸಿನ ಡೈರಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಪ್ರಿಯ ಮೇದಿನೀ ಟೀಚ,

ನಿಮ್ಮ ಮಿಸ್ಸಿನ ಡೈರಿಯನ್ನು ಒಂಚೂರೂ ಮಿಸ್ ಮಾಡದೆ ಓದಿ ಮುಗಿಸಿದೆ. ಅದಕ್ಕೆ ಮುಖ್ಯ ಕಾರಣ ನಿಮ್ಮ ಲಘು ವಿನೋದಭರಿತ ಲವಲವಿಕೆಯ ಬರೆವಣಿಗೆ.

ಸಾಮಾನ್ಯವಾಗಿ ಇಂತಹ ಡೈರಿಗಳು ಜಡವಾಗಿ ವರದಿಯ ರೂಪದಲ್ಲಿರುತ್ತದೆ. ತನ್ನ ವೃತ್ತಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ತಾನು ಎದುರಿಸಿದ ಬಗೆಯ ವೈಭವೀಕರಣ ಇತ್ಯಾದಿಗಳು, ಅಂಕೆ ಸಂಖ್ಯೆಗಳು, ಮಕ್ಕಳಿಗೆ, ಮಕ್ಕಳ ಮನೆಯವರಿಗೆ ಧಾರಾಳ ಉಪದೇಶಗಳು, ಮೊದಲಾದ ಅನೇಕ ಮಾಹಿತಿಗಳಿಂದ ಇವು ತುಂಬಿ ತುಳುಕುತ್ತಿರುತ್ತವೆ. ಆದರೆ ನಿಮ್ಮ ಈ ಬರೆಹವು ಅದಕ್ಕಿಂತ ತೀರಾ ಭಿನ್ನವಾಗಿದೆ. ಮಕ್ಕಳ ಜಾಣವೆನ್ನುವ ಮುಗ್ಧ ಪ್ರತಿಕ್ರಿಯೆಗಳು, ಅದಕ್ಕೆ ತಾನು ಸಾವಧಾನದಿಂದ ಪ್ರತಿಕ್ರಿಯಿಸಿದ ರೀತಿ, ನಡುವೆ ಎದುರಾಗುವ ಅನೇಕ ಎಡವಟ್ಟುಗಳನ್ನು ಸಲೀಸಾಗಿ ಎದುರಿಸಿದ ರೀತಿ..ಇವೆಲ್ಲವುಗಳ ಮೂಲಕವೇ ಮಕ್ಕಳಿಗೆ ಕಲಿಸಿಕೊಡಬೇಕಾದ್ದನ್ನು ಪರೋಕ್ಷವಾಗಿ ಮಕ್ಕಳಿಗೆ ನೀವು ಮನದಟ್ಟಾಗಿಸಿದ ರೀತಿ ವಿಶಿಷ್ಟವೂ ಅನುಕರಣೀಯವೂ ಆದುದು. ನಿಮ್ಮಂತಹ ಒಬ್ಬ ಟೀಚ(ಮಿಸ್ ಅಲ್ಲ!ನಮ್ಮ ಕಡೆಗೆ ಮಿಸ್ ಅನ್ನೋದು ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ. ಟೀಚ ಅನ್ನೋದು ಸರಕಾರಿ ಕನ್ನಡ ಮೀಡಿಯಂ ಶಾಲೆಯಲ್ಲಿ!) ರಾಜ್ಯದ ಎಲ್ಲಾ ಶಾಲೆಯಲ್ಲೂ ಇದ್ದರೆ ಎಷ್ಟು ಚಂದ ಅಂತ ನನಗೆ ಇದನ್ನೋದುವಾಗ ಅನಿಸಿದ್ದು ನಿಜ.

ಇದನ್ನು ಓದ್ತಿರುವಾಗ ಅನೇಕ ವಿಧಗಳಲ್ಲಿ ನನ್ನ ಕಥೆಯನ್ನೇ ಓದ್ತಿರೋ ಹಾಗನಿಸಿತು. ಯಾಕೆಂದರೆ ನಾನೂ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನಾಗಿ ವೃತ್ತಿ ಆರಂಭಿಸಿ ಬಹು ಉಪಾಧ್ಯಾಯರಿರುವ ಹೈಯರ್ ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯನಾಗಿ, ನನ್ನ 39 ವರ್ಷಗಳ ವೃತ್ತಿಯನ್ನು ಪೂರ್ಣಗೊಳಿಸಿದವನು. ನಡುವೆ ಕಾಲೇಜು ಅಧ್ಯಾಪಕನಾಗುವ ಅವಕಾಶ ಬಂದರೂ ಒಪ್ಪಿಕೊಳ್ಳದೆ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗಿನ ಒಡನಾಟವನ್ನೇ ಆಯ್ಕೆ ಮಾಡಿಕೊಂಡವನು. ಇಲ್ಲಿರುವ ರೀತಿಯ ಅನೇಕ ಘಟನೆಗಳನ್ನು ನಮ್ಮಲ್ಲೂ ಕಂಡವ, ಎದುರಿಸಿದವ ನಾನು. ಹಾಗಾಗಿಯೇ ನಿಮ್ಮ ಈ ಕೃತಿಯು ನನಗೆ ಆಪ್ತವೆನಿಸಿತು. ಇದರಲ್ಲಿ ನನ್ನನ್ನೇ ಕಂಡಂತಾಯಿತು.!

ಹೇನುಗಳೆಂಬ ಮಾಯಾಮೃಗ, ಮಿಸ್ಸಿನ ಕನ್ನಡಿಯೇ ಮಕ್ಕಳು, ಹಚ್ಚೇವು ಕನ್ನಡದ ದೀಪ, ನಮ್ಮತನ, ಅನ್ನಬ್ರಹ್ಮ, ಅಂಗಡಿಯ ಮೋಹ, ಮಿಸ್ಸಿನ ಬ್ಯಾಗಿನ ಮೋಹ, ಅಡುಗೆ ಮನೆಯಲ್ಲಿ, ಪ್ರವಾಸವೆಂಬ ಮಾಯಾಲೋಕ, ಶಿಕ್ಷೆ, ಭಯ ಪ್ರೀತಿ, ಟೋಟೋ ಎಂಬ ತುಂಟ ಬೆಕ್ಕು, ನಿಮ್ಮ ಪ್ರೇಮದ ಪರಿಯ..ಮೊದಲಾದ ಅಧ್ಯಾಯಗಳು ನನಗೆ ತುಂಬಾ ಇಷ್ಟವಾದವು. ನಿಮಗಿರುವ ಸೆನ್ಸ್ ಆಫ್ ಹ್ಯೂಮರ್ ನಿಮ್ಮ ಗಂಡನಿಗೂ(ಪತಿದೇವರು!) ಇರುವುದನ್ನು ನೋಡಿ ಇನ್ನೂ ಖುಶಿಯಾಯಿತು. ಆಗುಂಬೆಯಲ್ಲಿ ಮಂಗ ಮರಿ ಮಂಗದ ತಲೆಯ ಹೇನನ್ನು ತೆಗೆಯುವ ಹಾಗೂ ನಿಮ್ಮ ನಾಯಿಮರಿಗಳ ಸಾಕಣೆ ಕುರಿತಾದ ಅವರ ಪ್ರತಿಕ್ರಿಯೆ ಅದಕ್ಕೆ ಸಾಕ್ಷಿಗಳಾಗಿವೆ.

ರಕ್ಕಸರಿಗೆ ಬಾಲ್ಯವಿಲ್ಲ. ಅಥವಾ ಅದನ್ನೇ ತಿರುಗಿಸಿ ಹೇಳುವುದಾದರೆ ಬಾಲ್ಯವಿಲ್ಲದವರು ರಕ್ಕಸರಾಗ್ತಾರೆ. ಮುಗ್ಧತೆ, ಕುತೂಹಲ, ಬೆರಗು, ಕಲ್ಪಕತೆ, ..ಎಲ್ಲವನ್ನು ಒಳಗೊಂಡ ಬಾಲ್ಯವನ್ನು ಬಲಿಷ್ಟವಾಗಿಸುವ, ಬೆಳೆಸುವ, ಪೋಷಿಸುವ ..ಆ ಮೂಲಕ ಉತ್ತಮ ಬದುಕನ್ನು ಕಟ್ಟಬಲ್ಲ ಸೂಕ್ತ ವ್ಯಕ್ತಿಗಳೆಂದರೆ ಪ್ರಾಥಮಿಕ ಶಾಲೆಗಳ ಶಿಕ್ಷಕರೇ. ಆ ಕಾರ್ಯವನ್ನು ನೀವು ನಿಷ್ಠೆಯಿಂದ ಮಾಡಿರುವುದನ್ನು ನೋಡಿದರೆ ತುಂಬಾ ಸಂತೋಷವಾಗ್ತದೆ. ನಮ್ಮ ಮಕ್ಕಳ ಭವಿಷ್ಯದ ಆಶಾಕಿರಣ ನೀವು, ನಿಮ್ಮಂಥವರು.

ಇದು, ಮಕ್ಕಳ ಹಾಗೂ ವೃತ್ತಿಯ ಕುರಿತಾದ ಪ್ರೀತಿ ಹಾಗೂ ನಿಷ್ಠೆಯಿಂದ ದುಡಿದ ಶಿಕ್ಷಕಿಯೊಬ್ಬರ ಅನುಭವ ಕಥನ. ಹಾಗೂ ಎಲ್ಲ ಶಿಕ್ಷಕ, ಶಿಕ್ಷಕಿಯರಿಗೂ ಮಾದರಿಯಾಗಬಲ್ಲ ಅನುಭವ ಕಥನ. ಎಲ್ಲ ಶಾಲೆಗಳಿಗೂ ಈ ಪುಸ್ತಕವು ಸಿಗುವಂತಾಗಬೇಕು ಎಂಬುದು ನನ್ನ ಆಸೆ. ನಿಮ್ಮಿಂದ ಇಂತಹ ಅನುಭವ ಕಥನಗಳು ಇನ್ನೂ ಬರುತ್ತಿರಲಿ ಎಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

ನಮಸ್ಕಾರ,
ಸುಬ್ರಾಯ ಚೊಕ್ಕಾಡಿ.

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...