ಕ್ರಿಕೆಟ್‌ನಲ್ಲಿ ಅವರ ಕೊಡುಗೆ ಅತ್ಯಂತ ಮಹತ್ತರವಾದದ್ದು


“ಹೆಚ್ಚು ಕಡಿಮೆ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅದರ ವಿಚಾರ ಬರೆಯುವುದೆಂದರೆ ಒಂದು ದೊಡ್ಡ ಪ್ರಬಂಧವೇ ಆಗುತ್ತೆ,” ಎನ್ನುತ್ತಾರೆ ಎಚ್. ಆರ್. ಬಾಪು ಸತ್ಯನಾರಾಯಣ. ಅವರು ಇ. ಆರ್‌. ರಾಮಚಂದ್ರನ್‌ ಅವರ “ಕ್ರಿಕೆಟ್‌ ಜಗತ್ತು” ಕೃತಿಗೆ ಬರೆದ ಮುನ್ನುಡಿ.

ಕ್ರಿಕೆಟ್ ನಮ್ಮ ದೇಶದ ಜನರಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಅದು ಇಲ್ಲದೆ ಬದುಕೇ ವ್ಯರ್ಥ ಅನ್ನುವ ಹಾಗೆ ಆವರಿಸಿ ಬಿಟ್ಟಿದೆ. ಹೆಚ್ಚು ಕಡಿಮೆ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅದರ ವಿಚಾರ ಬರೆಯುವುದೆಂದರೆ ಒಂದು ದೊಡ್ಡ ಪ್ರಬಂಧವೇ ಆಗುತ್ತೆ. ಆದರೂ ಸಂಕ್ಷಿಪ್ತವಾಗಿ ಬರೆಯಲು ಪ್ರಯತ್ನಿಸುತ್ತೇನೆ.

ನನ್ನ ಮತ್ತು ಶ್ರೀ ರಾಮಚಂದ್ರನ್‌ರವರ ಪರಿಚಯ ಬಹಳ ಹಳೆಯದು. ಅವರು ಮತ್ತು ನಾನು ಶ್ರೀ ಕೃಷ್ಣಪ್ರಸಾದ್‌ರವರ ಚುರುಮುರಿ ಬ್ಲಾಗ್‌ನಲ್ಲಿ ಆಗಾಗ್ಗೆ ಬರೆಯುತ್ತಿದ್ದೆವು. ಅದರಲ್ಲಿ ಅವರ ಅನುಭವಗಳನ್ನು ಬರೆಯುತ್ತಿದ್ದರು. ಅಲ್ಲಿ ‘ಅಜ್ಜಿ'ಯ ಮೂಲಕ ಮೊದಲ ಬಾರಿಗೆ ಅನೇಕ ಕುತೂಹಲಭರಿತ ನಿತ್ಯಜೀವನದ ಸತ್ಯಗಳನ್ನು ಹೇಳುತ್ತಿದ್ದುದು ಎಲ್ಲರ ಮನಸ್ಸಿನಲ್ಲಿ ಪ್ರಭಾವ ಬೀರಿತು. ಅಲ್ಲಿಂದ ಪ್ರಾರಂಭವಾದ ಅಜ್ಜಿಯ ವ್ಯಕ್ತಿತ್ವ ಹಾಸ್ಯ ರೂಪದಲ್ಲಿ ಜೀವನದ ಘಟನೆಗಳನ್ನು ವಿವರಿಸುವುದರಲ್ಲಿ ‘ಅಜ್ಜಿ' ಎಲ್ಲರಿಗೂ ಆಪ್ಯಾಯವಾದಳು. ಹೀಗೆ ಅಜ್ಜಿಯ ಪ್ರಹಸನವನ್ನು ಓದಿ ರಾಮಚಂದ್ರನ್‌ರವರನ್ನು ಸಂಪರ್ಕಿಸಿ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದೆ. ಹೀಗೆ ಶುರುವಾದ ಎಲ್ಲಾ ಹಾಸ್ಯ ಪ್ರಸಂಗಗಳನ್ನು ಸೇರಿಸಿ ರಾಮಚಂದ್ರನ್‌ರವರು ಒಂದು ಪುಸ್ತಕವನ್ನು ಬರೆದು ಅದನ್ನು ಬಿಡುಗಡೆ ಮಾಡುವ ಸೌಭಾಗ್ಯ ನನ್ನದಾಗಿತ್ತು.

ಇದಲ್ಲದೆ ರಾಜಕೀಯ ಘಟನೆಗಳು ಮತ್ತು ನಿತ್ಯ ಜೀವನದಲ್ಲಿ ಪತ್ರಿಕೆಗಳಲ್ಲಿ ಬರುವ ಮುಖ್ಯ ಘಟನೆಗಳನ್ನು ನೋಡಿ ಪರಸ್ಪರ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೆವು. ನನಗೆ ಪತ್ರಿಕೆಗಳಲ್ಲಿ ಬರೆಯುವ ಹವ್ಯಾಸ ಇದ್ದುದರಿಂದ ಅವರು ಅದರ ವಿಚಾರವಾಗಿ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಅದಲ್ಲದೆ ಅವರ ಮನೆಗೆ ಹೋಗಿ ಅವರು ಆಹ್ವಾನಿಸಿದ ಸ್ನೇಹಿತರೊಂದಿಗೆ ಸೇರಿ ಮಾತು ಕಥೆ ಮತ್ತು ಹಾಡು ಹೇಳುವ ಪರಿಪಾಠ ಶುರುವಾಯಿತು.

ಹೀಗೆ ನಮ್ಮ ಸ್ನೇಹ ಆತ್ಮೀಯವಾಗಿ ಬೆಳೆದಿದೆ. ‘ಅಜ್ಜಿ' ಪುಸ್ತಕವಾದ ಮೇಲೆ ಅವರಿಗೆ ಅಚ್ಚುಮೆಚ್ಚಿನ ಕ್ರಿಕೆಟ್ ವಿಷಯದ ಬಗ್ಗೆ ಬರೆಯಲು ಶುರುಮಾಡಿದರು. ಬಹುಶಃ ಕ್ರಿಕೆಟ್ ವಿಚಾರವಾಗಿ ಕನ್ನಡದಲ್ಲಿ ನಾನು ಒಳ್ಳೆಯ ಪುಸ್ತಕವನ್ನು ನೋಡಿಲ್ಲ. ರಾಮಚಂದ್ರನ್ ಅವರು ಬರೆದ ಕ್ರಿಕೆಟ್ ದಿಗ್ಗಜರ ವಿಚಾರವಾಗಿ ಅಚ್ಚ ಕನ್ನಡದಲ್ಲಿ ಬರೆದು ನನಗೆ ಕಳುಹಿಸುತ್ತಿದ್ದರು. ಅದನ್ನು ನೋಡಿ ನಾನು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದೆ. ಅವರು ಬರೆಯುವ ರೀತಿ ಮತ್ತು ಒಕ್ಕಣೆಯನ್ನು ನೋಡಿ ಅವರಲ್ಲಿ ಕ್ರಿಕೆಟ್ ವಿಚಾರವಾಗಿ ಒಂದು ಭಂಡಾರವೇ ಇದೆ ಎಂದು ಅನ್ನಿಸಿತು. ಅಷ್ಟು ಸಮಗ್ರವಾಗಿ ಒಬ್ಬೊಬ್ಬ ಕ್ರಿಕೆಟ್ ಆಟಗಾರರ ಬಗ್ಗೆ ಎಲ್ಲಾ ಅಂಕಿ ಅಂಶ ನೋಡಿದಾಗ ನನಗೆ ಆಶ್ಚರ್ಯವಾಯಿತು. ಇಷ್ಟೊಂದು ವಿಚಾರ ಕಲೆಹಾಕಿರುವುದು ನಿಜಕ್ಕೂ ಬಹಳ ಶ್ಲಾಘನೀಯ. ಬಹುಶಃ ಕ್ರಿಕೆಟ್ ಇತಿಹಾಸವನ್ನು ಹಿನ್ನೆಲೆಯಲ್ಲಿ ನೋಡುವಾಗ ಬಹಳ ಕುತೂಹಲ ಸಂಗತಿಗಳು ತಿಳಿದುಬರುತ್ತೆ. ಹೀಗೆ ಶುರುವಾದ ಅವರ ಬರವಣಿಗೆ ಕ್ರಿಕೆಟ್ ಪ್ರಪಂಚದ ಪ್ರಾರಂಭದ ದಿನಗಳಿಂದ ಹಿಡಿದು ಇಲ್ಲಿಯ ತನಕ ಭಾಗವಹಿಸಿದ ಎಲ್ಲರ ವಿಚಾರಗಳನ್ನು ಬರೆದು ಒಂದು ಪುಸ್ತಕರೂಪದಲ್ಲಿ ತರಲು ನಿರ್ಧರಿಸಿರುವುದು ಒಂದು ಮಹತ್ವದ ಕೆಲಸ. ಈಗ ‘ಕ್ರಿಕೆಟ್ ಜಗತ್ತು ಮತ್ತು ಅಲ್ಲಿನ ಅಮೋಘ ಘಳಿಗೆಗಳು' ಅನ್ನುವ ಶೀರ್ಷಿಕೆಯಲ್ಲಿ ಅದನ್ನು ಹೊರತರುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರು ನನಗೆ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನಿರಾಕರಿಸಲಾಗಲಿಲ್ಲ.

ನಮ್ಮ ದೇಶದಲ್ಲಿ ಮೊದಲು ಕ್ರಿಕೆಟ್ ಹೇಗೆ ಶುರುವಾಯಿತು ಎನ್ನುವುದಕ್ಕೆ ಒಂದು ರೋಚಕ ಇತಿಹಾಸವೇ ಇದೆ. ಕ್ರಿಕೆಟ್ ಮೊದಲು ಇಂಗ್ಲೆಂಡಿನಲ್ಲಿ ಶುರುವಾದದ್ದು. ಭಾರತದಲ್ಲಿ ಮೊದಲ ಬಾರಿಗೆ ಬ್ರಿಟನ್ನಿನ ಸೈನಿಕರು ನಮ್ಮ ದೇಶದಲ್ಲಿ ನೆಲೆಸಿದ್ದವರ ಜೊತೆ ಕ್ರಿಕೆಟ್ ಪಂದ್ಯವನ್ನು 1751ರಲ್ಲಿ ಆಡಲು ಶುರುಮಾಡಿದರು. ಅದಾದ ಮೇಲಿನ ಮುಖ್ಯ ಘಟನೆ ಅಂದರೆ ಕಲ್ಕತ್ತದಲ್ಲಿ ಕ್ರಿಕೆಟ್ ಒಕ್ಕೂಟ 1792ರಲ್ಲಿ ಶುರುವಾಯಿತು. ಕಾಲಕ್ರಮೇಣ ಬೊಂಬಾಯಿನಲ್ಲಿ ಬಿಸಿಸಿಐ 1928ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆ ಭಾರತದ ಎಲ್ಲಾ ಪ್ರಾಂತ್ಯಗಳ ಕ್ರಿಕೆಟ್ ಒಕ್ಕೂಟವನ್ನೊಳಗೊಂಡಿದೆ.

1926ರಲ್ಲಿ ಸಿ.ಕೆ. ನಾಯುಡು ಅವರ ಭರ್ಜರಿ ಆಟದಲ್ಲಿ 13 ಬೌಂಡರಿ ಮತ್ತು 11 ಸಿಕ್ಸರ್ ಮೂಲಕ ಒಟ್ಟು 153 ರನ್ ಬಾಂಬೆ ಜಮಖಾನ ಪರ ಹೊಡೆದು ಹೊರ ದೇಶದಿಂದ ಬಂದವರ ಮೇಲೆ ಜಯಸಾಧಿಸಿದ್ದು, ಭಾರತ ದೇಶ ಟೆಸ್ಟ್ ಮ್ಯಾಚ್ ಆಡಲು ಸಮರ್ಥವೆಂದು ಪರಿಗಣಿಸಿತು.

ಅಲ್ಲಿಂದ ಶುರುವಾದ ಆ ದಿಗ್ಗಜರನ್ನೊಳಗೊಂಡು ಕ್ರಿಕೆಟ್ ದಾಪುಗಾಲು ಹಾಕುತ್ತಾ ಬಂದಿದೆ. ಕ್ರಿಕೆಟ್ ಇಂಗ್ಲೆಂಡಿನಿಂದ ಬಂದಿದ್ದರೂ ನಮ್ಮ ದೇಶದಲ್ಲಿ ಅದರ ಪ್ರಭಾವ ಎಷ್ಟರ ಮಟ್ಟಿಗೆ ಹರಡಿದೆ ಎಂದರೆ ಮಕ್ಕಳಿಂದ ಹಿರಿಯರೂ ಸೇರಿ ಮನೆ ಮುಂದೆ, ರಸ್ತೆಗಳಲ್ಲಿ ಆಡುವುದು ಸರ್ವೇಸಾಮಾನ್ಯವಾಗಿದೆ. ವಿಕೆಟ್ಟಿಗೆ ಮೂರು ಕೋಲನ್ನು ನೆಟ್ಟು, ಅಥವ ಗೋಡೆಗೆ ಸೀಮೆ ಸುಣ್ಣ ಇಲ್ಲವೇ ಇದ್ದಲಿನಿಂದ ಬರೆದು ಅವರು ಆಟ ಆಡಿ ಖುಶಿಪಡುವುದನ್ನು ಈಗಲೂ ನೋಡಬಹುದು.

ಹೀಗೆ ಶುರುವಾದ ಟೆಸ್ಟ್ ಪಂದ್ಯಗಳು, ಎಲ್ಲವೂ ತ್ವರಿತ ಗತಿಯಲ್ಲಿ ನಡೆಯಬೇಕೆಂಬ ಕಾಲದ ನಿಯಮದಂತೆ ಒಂದೇ ದಿನ 50 ಓವರ್ನಲ್ಲಿ ಪಂದ್ಯ 5 ಜನವರಿ 1971ರಲ್ಲಿ ಶುರುವಾಯಿತು. ಇದರಲ್ಲಿ ಕೆಂಪು ಬಣ್ಣದ ಬದಲಾಗಿ ಬಿಳಿ ಚೆಂಡನ್ನು ಉಪಯೋಗಿಸುವುದಾಗಿ ನಿರ್ಧಾರವಾಯಿತು. ಮನುಷ್ಯನ ಸ್ವಭಾವವೇ ಹೀಗೆ. ಈ ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ತಕ್ಷಣವೇ ಆಗಬೇಕೆಂಬ ಹಂಬಲ. ಅದಕ್ಕನುಗುಣವಾಗಿ 2003ರಲ್ಲಿ ಟಿ20 ಆಟ ಶುರುವಾಯಿತು. ಇದರಲ್ಲಿ 20 ಓವರ್ನಲ್ಲಿ ಪಂದ್ಯವಾಡುವುದು. ಕ್ರಿಕೆಟ್‌ನ ಇತಿಹಾಸದಲ್ಲಿ ಭಾರತ ತನ್ನ ಬುದ್ಧಿಯಿಂದ ಕ್ರಿಕೆಟ್‌ಗೆ ಕೊಟ್ಟ ಕೊಡುಗೆಯೆಂದರೆ ಐಪಿಎಲ್ - ಅಂದರೆ ‘ಇಂಡಿಯನ್ ಪ್ರೀಮಿಯರ್ ಲೀಗ್'. ಈ ಆಟದ ವೈಶಿಷ್ಟ್ಯ ಏನೆಂದರೆ ಆಟಗಾರರನ್ನು ಅವರ ಸಾಮರ್ಥ್ಯದ ಮೇಲೆ ಲಕ್ಷಗಟ್ಟಲೆ ಅಥವ ಕೋಟಿಗಟ್ಟಲೆ ಹಣವನ್ನು ಕೊಟ್ಟು ಹರಾಜಿನಲ್ಲಿ ಕೊಂಡುಕೊಳ್ಳುವುದು. ಇದರಲ್ಲಿ ಅಂತರರಾಷ್ಟ್ರೀಯ ಆಟಗಾರರೂ ಇರುತ್ತಾರೆ. ಇದರ ಸ್ಪರ್ಧೆ ಆಕರ್ಷಕವಾಗಿರುತ್ತೆ ವೀಕ್ಷಿಸುವವರಿಗೆ.

ಈ ಕಾಲದ ಧರ್ಮದಂತೆ, ಹೆಂಗಸರನ್ನು ಮರೆಯಲು ಸಾಧ್ಯವೇ? ಗಂಡಸರಿಗೆ ಪೈಪೋಟಿ ಇದ್ದಂತೆ, ಎಲ್ಲಾ ಕ್ಷೇತ್ರಗಳಲ್ಲಿ ಸರಿಸಮಾನರಾಗಿ ಸ್ಪರ್ಧಿಸುವಂತೆ ಕ್ರಿಕೆಟ್‌ನಲ್ಲಿ ಅವರ ಕೊಡುಗೆ ಅತ್ಯಂತ ಮಹತ್ತರವಾದದ್ದು.

ಇನ್ನೊಂದು ಗಣನೀಯ ವಿಷಯವೆಂದರೆ ಈ 11 ಮಂದಿಯ ಟೀಮಿನಲ್ಲಿ, ನಮ್ಮ ದೇಶದ ವಿವಿಧ ಪ್ರಾಂತ್ಯಗಳಿಂದ ಮತ್ತು ವಿವಿಧ ಧರ್ಮದವರು ಸೇರಿ ಭಾರತದ ಒಂದೇ ಕುಟುಂಬದವರೆನ್ನುವಂತೆ ಅನ್ಯೋನ್ಯವಾಗಿರುವುದನ್ನು ನೋಡಿದಾಗ ಒಂದು ಅಪೂರ್ವ ಸಂಗಮದ ಅನುಭವವಾಗುತ್ತೆ.

ಇನ್ನು ಪ್ರೇಕ್ಷಕರ ವಿಚಾರಕ್ಕೆ ಬಂದರೆ ಅದೇ ಒಂದು ಬೇರೆ ಲೋಕಕ್ಕೆ ಹೋದಂತೆ ಅನುಭವ. ನಮ್ಮ ದೇಶದ ಜನರು ಕ್ರಿಕೆಟ್ ಪಂದ್ಯವನ್ನು ನೋಡಲು ಲಕ್ಷಗಟ್ಟಲೆ ಜನರು ಬರುತ್ತಾರೆ. ಅವರ ಹುಮ್ಮಸ್ಸು ಹೇಳತೀರದು - ಕೂಗುವುದೇನು, ಕಿರುಚುವುದೇನು- ಮುಖಕ್ಕೆ ನಮ್ಮ ದೇಶದ ಬಾವುಟದ ಬಣ್ಣ ಬಳಿದು ಬೌಂಡರಿ ಅಥವ ಸಿಕ್ಸರ್ ಹೊಡೆದರೆ, ಕೈಯಲ್ಲಿ ಪೋಸ್ಟರ್‌ಗಳನ್ನು ಹಿಡಿದು ಕುಣಿದಾಡುವುದು. ಅದೇ ಒಂದು ಬೇರೆ ಜಗತ್ತೇನೋ ಎನ್ನುವ ಅನುಭವವಾಗುತ್ತೆ. ಇನ್ನು ಭಾರತ ಮತ್ತು ಪಾಕಿಸ್ತಾನ ಆಡಿದರೆ ಅದು ಯಾವ ಯುದ್ಧಕ್ಕೂ ಕಡಿಮೆಯಿಲ್ಲ.

ಈ ಮುನ್ನುಡಿಗೆ ಕಳಶಪ್ರಾಯವಾಗಿ 2024 ವರ್ಷದ ಟಿ20 ವಿಶ್ವ ಕಪ್ ಪಂದ್ಯಗಳಲ್ಲಿ ಭಾರತ ಒಂದು ಪಂದ್ಯವನ್ನೂ ಸೋಲದೆ ಅಂತಿಮ ಆಟದಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಿ ಜಯಭೇರಿ ಹೊಡೆದದ್ದು ಒಂದು ಅಪೂರ್ವ ಸಾಹಸವೆನ್ನಬೇಕು. ಪ್ರೇಕ್ಷಕರ ಹರ್ಷಕ್ಕೆ ಮೇರೆಯೇ ಇರಲಿಲ್ಲ. 13 ವರ್ಷಗಳ ನಂತರ ಬಂದ ಈ ಜಯಕ್ಕೆ ಆಟಗಾರರ ಕಣ್ಣು ತೇವವಾಗಿ ಒಬ್ಬರೊನ್ನಬ್ಬರು ಕಟ್ಟಿಕೊಂಡು ಕುಣಿದಾಡಿದ್ದು ಎಂದಿಗೂ ಮರೆಯಲಾಗದ ದೃಶ್ಯಗಳು.

ಆ ತಂಡ ಮುಂಬೈನಲ್ಲಿ ಬಂದು ಇಳಿದಾಗ, ಅವರು ತೆರೆದ ಬಸ್ಸನಲ್ಲಿ ಹೋದಾಗ, ಲಕ್ಷೋಪಲಕ್ಷ ಅಭಿಮಾನಿಗಳು ರಸ್ತೆಯುದ್ದಕ್ಕೂ ಅವರನ್ನು ಮಳೆಯ ಮಧ್ಯೆ ಸ್ವಾಗತಿಸಿದ್ದನ್ನು ನೋಡಿ ಅದು ಯಾವಾಗಲೂ ಕಣ್ಣಿಗೆ ಕಟ್ಟದ ಹಾಗೆ ಇರುತ್ತೆ.

ಕೊನೆಯ ಮಾತು:
ನಮ್ಮ ಮನೆಯಲ್ಲಿ ನಾವೆಲ್ಲರೂ ಹಾಡಿನ ವಾತಾವರಣದಲ್ಲಿ ಬೆಳೆದವರು. ಹಾಡೆಂದರೆ ಎಲ್ಲರಿಗೂ ಪ್ರೀತಿ. ಹೀಗಾಗಿ ಮೂರು ತರಹ ಕ್ರಿಕೆಟ್ ಪಂದ್ಯವನ್ನು ಸಂಗೀತದ ಭಾಷೆಯಲ್ಲಿ ವರ್ಣಿಸಿದರೆ ಈ ಕೆಳಕಂಡಂತೆ ಹೇಳಬಹುದಲ್ಲವೇ?

ಟೆಸ್ಟ್ ಪಂದ್ಯವನ್ನು ಶಾಸ್ತ್ರೀಯ ಸಂಗೀತಕ್ಕೆ ಹೋಲಿಸಬಹುದು. ಆರೋಹಣ, ಅವರೋಹಣದಿಂದ ಶುರುವಾಗಿ, ನಿಧಾನಗತಿಯಲ್ಲಿ ಆಲಾಪನೆ, ಸಾಹಿತ್ಯ ಸ್ವರಪ್ರಸ್ತಾರವಾಗಿ ರಸಿಕರಿಗೆ ರಸದೌತಣವಿದ್ದಂತೆ ಭಾಸವಾಗುತ್ತೆ.

50 ಓವರ್ನ ಆಟ ಸುಗಮಸಂಗೀತವೆನ್ನಬಹುದು. ಕೇಳುವುದಕ್ಕೆ ಆಹ್ಲಾದಕರ ಮತ್ತು ಆನಂದವನ್ನು ಕೊಡುತ್ತೆ.

20 ಓವರ್ನ ಟಿ 20 ಆಟ ಪಾಪ್- ಮ್ಯೂಸಿಕ್‌ಗೆ ಹೋಲಿಸಬಹುದು. ಶುರುವಿನಿಂದ ಬೌಂಡರಿ ಮತ್ತು ಸಿಕ್ಸರ್‌ಗೆ ಪ್ರಾಧಾನ್ಯ. ನಾವು ಹಿಂದೆ ಕೊಲ್ಟೆ ಮಾಮ ಎಂದು ಕರೆಯುತ್ತಿದ್ದವಲ್ಲ ಹಾಗೆ. ವಿಕೆಟ್ಟಿಗೆ ಬಂದು ಸೀದಾ ಬೋಲಿಂಗನ್ನು ಚಚ್ಚುವುದೇ ಬ್ಯಾಟಿಂಗ್ ಟೀಮಿನ ಕೆಲಸ. ಪಾಪ್ ಮ್ಯೂಸಿಕ್‌ನ ಹಾಗೆ ಹುಡುಗ ಹುಡುಗಿಯರಿಗೆ ಆನಂದವೋ ಆನಂದ.

MORE FEATURES

ಕುಂಟಿನಿಯವರ ಶೈಲಿ ವಿಶಿಷ್ಟ

14-04-2025 ಬೆಂಗಳೂರು

"ಕುಂತಿ ಮತ್ತು ಮಂತ್ರ ಫಲದಿಂದ ಹಿಡಿದು ಗಾಂಧಾರಿಯವರೆಗೂ ವಿಸ್ತಾರವಾದ ಕಥೆ ಮುಂದುವರಿಯುತ್ತದೆ. ಮುಂದೆ ಧೃತಾರಾಷ್ಟ್...

ನಮ್ಮ ಜಗತ್ತು ಸಹಿಸಿಕೊಳ್ಳಬಹುದಾದ ವಿಕಾಸಕ್ಕೆ ಒಂದು ಮಿತಿಯಿದೆ

14-04-2025 ಬೆಂಗಳೂರು

"ಭಾರತದಲ್ಲಿನ ಒಗ್ಗೂಡುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಸ್ಟ್ರೋಏಷ್ಯಾಟಿಕ್ ಪುರುಷರ ಆರಂಭಿಕ ವಲಸೆಯನ್ನು ಹೊರ...

ಕನ್ನಡಿಗರಿಗೆ ಹೊರನಾಡ ಕನ್ನಡಿಗರ ಸಾಹಸಗಾಥೆಯನ್ನು ಪರಿಚಯಿಸಲು ಸಹಾಯಕ

14-04-2025 ಬೆಂಗಳೂರು

"ಕನ್ನಡ ಭಾಷೆ ಸಾಹಿತ್ಯಗಳ ಸಂವರ್ಧನೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: ಕನ್ನಡ ಭಾಷಾ ಕಲಿಕೆ,...