ಬುದ್ಧನಕಿವಿ : ಅರ್ಥವಿಲ್ಲದ್ದೇ ಅರ್ಥವೂ ಆಗಬಹುದೇನೋ! : ಅಮರೇಶ ನುಗಡೋಣಿ


ದಯಾನಂದ, ನಿಮ್ಮ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ ಎನ್ನುತ್ತಾರೆ ಲೇಖಕ ಅಮರೇಶ ನುಗಡೋಣಿ. ಕತೆಗಾರ ದಯಾನಂದ ಅವರ ಬುದ್ಧನ ಕಿವಿ ಕತಾ ಸಂಕಲನದಲ್ಲಿ ಅವರು ಬರೆದಿರುವ ಹಿನ್ನುಡಿ ಹಾಗೂ ಕತೆಗಾರ ಕೇಶವ ಮಳಗಿ ಅವರ ಮಾತುಗಳು ನಿಮ್ಮ ಓದಿಗಾಗಿ..

ನನ್ನನ್ನೂ ಸೇರಿಸಿಕೊಂಡು ಹಲವರು ತೊಂಬತ್ತರ ದಶಕದಲ್ಲಿ ಹೊಸಬರಾಗಿ ಬರೆಯಲಾರಂಭಿಸಿದ್ದೆವು. ಪ್ರತಿಭಟನೆ, ಹೋರಾಟ, ಚಳವಳಿಯ ಕಾಲ ಸಾಹಿತ್ಯದಲ್ಲಿದ್ದುದು ಮುಗಿದಿತ್ತು. ಜಾಗತೀಕರಣ ಆರಂಭವಾಗಿತ್ತು. ಹೊಸ ಸಾಹಿತ್ಯಕ ಚಳವಳಿ ಆರಂಭವಾಗಬಹುದೆಂದು ಸಾಹಿತ್ಯ-ಸಂಸ್ಕೃತಿ ವಲಯದಲ್ಲಿ ಸಣ್ಣದಾಗಿ ಚರ್ಚೆಗಳಾದವೇ ಹೊರತು ಸೂಚನೆಯೇ ಕಾಣಿಸಲಿಲ್ಲ. ಜಾಗತೀಕರಣ ನಮ್ಮ ಸಮಾಜದಲ್ಲಿ, ಅದರಲ್ಲೂ ನಗರ ಸಮಾಜದಲ್ಲಿ ಹಬ್ಬುತ್ತಿತ್ತು. ಈ ತೊಂಬತ್ತರ ದಶಕದಲ್ಲಿ ನಾವು ಅನೇಕರು ನಮಗೆ ತಿಳಿದಂತೆ ನಮ್ಮ ನಮ್ಮ ಪರಿಸರದ ಅನುಭವಗಳನ್ನು ಕಥಾರೂಪಕ್ಕೆ ತಂದುಕೊಂಡು ಬರೆಯುತ್ತಾ ನಡೆದು ಬಂದೆವು. ಆಗಲೂ ಕಥಾರಚನೆಗೆ ಪ್ರೋತ್ಸಾಹ ನೀಡುವ ಕಥಾಸ್ಪರ್ಧೆಗಳು ಇದ್ದವು. ನಾವು ಒಂದೋ, ಎರಡೋ ಕಥಾಸಂಕಲನ ಪ್ರಕಟಿಸುವುದರಲ್ಲಿ ದಶಕವೇ ಉರುಳಿ ಹೋಗಿತ್ತು. ಇಪ್ಪತ್ತೊಂದನೆಯ ಶತಮಾನ ಕಾಲಿಟ್ಟಿತ್ತು. ಹೊಸ ಸಾಹಿತ್ಯ ಚಳವಳಿಯೇನೂ ಹುಟ್ಟಲಿಲ್ಲ. ಹಿರಿಯ-ಕಿರಿಯರಿಂದ ಸಾಹಿತ್ಯ ರಚನೆಯೇನೂ ನಿಲ್ಲಲಿಲ್ಲ. ಉದಾರೀಕರಣ, ಖಾಸಗೀಕರಣಗಳಿಂದ ನಮ್ಮ ನಗರಸಮಾಜ ಬದಲಾಗುತ್ತಾ ತೀವ್ರಗತಿ ಪಡೆಯತೊಡಗಿತ್ತು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹೊಸತನ ಕಾಣಿಸಿತು. ಇದು ಗ್ರಾಮೀಣ ಪರಿಸರದ ಸ್ವರೂಪವನ್ನೇ ಬದಲಿಸಿತು. ಈ ಬದಲಾವಣೆಯ ಅನುಭವಗಳನ್ನು ಹೊಸ ತಲೆಮಾರಿನ ಕತೆಗಾರರು ತಮ್ಮ ಕಥನಗಳಲ್ಲಿ ತರತೊಡಗಿದರು. ಹಾಗಂತ ಹಳೆಯದನ್ನು ಸಂಪೂರ್ಣವಾಗಿ ಯಾರೂ ಬಿಟ್ಟು ಹೊರಬಂದಿಲ್ಲ. 

ನಿಮ್ಮನ್ನೇ ನೋಡುವುದಾದರೆ ನಿಮ್ಮ ಕತೆಗಳಲ್ಲಿ ಸುನೀತಾ (ತ್ರೀ ಪಾಯಿಂಟ್ ಫೈವ್) ಇದ್ದಾಳೆ. ಜಬೀನಕ್ಕನೂ (ಮಡ್ಲಕ್ಕಿ) ಇದ್ದಾಳೆ. ‘ಬುದ್ಧನಕಿವಿ’ಯಲ್ಲಿ ಇಬ್ಬರಿದ್ದಾರೆ. ಬಷೀರ (ಮುಳ್ಳು) ಇದ್ದಾನೆ. ದಲಿತ ವ್ಯಕ್ತಿಯು (ವಾಸ್ಟ್‌ ಇನ್ ಎ ನೇಮ್), ಲತಾ (ಬೈಬಲ್ ಬಂಪ್) ಕೂಡಾ ಇದ್ದಾಳೆ. ಬಹುಶಃ ಇದಕ್ಕೆ ಕಾರಣ ಗ್ರಾಮೀಣ ಯುವಕ-ಯುವತಿಯರು ಬದಲಾದ ಶಿಕ್ಷಣ ಪಡೆದು, ಹೊಸ ವೃತ್ತಿಯಲ್ಲಿ ತೊಡಗಿ, ನಗರವಾಸಿಗಳಾಗಿರುವುದು. ಹೊಸದನ್ನು ನೆಲೆಗೊಳಿಸುವುದಕ್ಕಿಂತ ಹಳೆಯದನ್ನು ಮರೆಯುವುದು ಕಷ್ಟ. ನೀವು ಗ್ರಾಮೀಣ ಮತ್ತು ನಗರಪ್ರದೇಶಗಳ ಚಿತ್ರಣವನ್ನು ಸಮನಾಗಿ ಮಾಡಬಲ್ಲಿರಾದರೂ ‘ತ್ರೀ ಪಾಯಿಂಟ್ ಫೈವ್’ ಕತೆ ಇಷ್ಟವಾಗುವುದು ಅಲ್ಲಿರುವ ಹೊಸಲೋಕ, ಕಂಪನಿಯೊಳಗಿನ ಲಿಂಗತಾರತಮ್ಯ, ವಿದ್ಯಾವಂತ ಮಹಿಳೆಯ ಅಸಹಾಯಕತೆಯ ಒಳಗೇ ಪ್ರತಿರೋಧದ ಸಾಮರ್ಥ್ಯ ತೋರಿಸುವುದು. ಹಾಗೆ ನೋಡಿದರೆ ಪರಿಸರದ ಚಿತ್ರಣದ ದಟ್ಟವಾಗಿಲ್ಲ. ಆದರೂ ನಗರಕೇಂದ್ರಿತವಾದ ಮಹಿಳೆಯ ತಲ್ಲಣಗಳು ಮನ ತಟ್ಟುತ್ತವೆ. ‘ಮುಳ್ಳು’ ಕತೆಯಲ್ಲಿ ಹಳ್ಳಿಯ ಒಂದು ಬಡಕುಟುಂಬ ಕೇಂದ್ರಿತ ಸಂಕಟಗಳೂ ಇದ್ದು, ದಟ್ಟವಾದ ವಿವರಗಳು ಒಡೆದು ಕಾಣುತ್ತವೆ. ಗಂಡ-ಹೆಂಡತಿ, ಮಕ್ಕಳು (ಬಷೀರ, ಕೈರು, ಗಿಡ್ಡಿ, ಸಲ್ಲೂ, ವಲಿ) ಒಂದು ಕುಟುಂಬವಾಗಿ ಕೂಡ ಕೆಲಸದೊಂದಿಗೆ, ಸಹಜವಾಗಿರುವ ತಾಪತ್ರಯಗಳೊಂದಿಗೆ ಖುಷಿಯಾಗಿಯೇ ಇರುತ್ತಾರೆ. ಎಲ್ಲರೂ ದುಡಿಯುವುದರಿಂದ ನೆಮ್ಮದಿ ಇದ್ದರೂ ಕೈರುಗೆ ಆತಂಕಗಳು ಹೆಚ್ಚು. ಮಗಳ ಮದುವೆಯಾಗಬೇಕು, ಮಕ್ಕಳಿಬ್ಬರು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ, ಈಚೆಗೆ ಬಷೀರ ಕೆಮ್ಮುತ್ತಾನೆ. ಈ ಕತೆಯಲ್ಲಿ ಬರುವ ಒಂದು ಚಿತ್ರಣ: ‘ವಪ್ಪಾರಲ್ಲಿ ಬಿದ್ದಿದ್ದ ಹುಣಸೇಹಣ್ಣಿನ ರಾಶಿಯ ಮಧ್ಯೆ ಗೋಣೀಚೀಲ ಹಾಸಿಕೊಂಡು ಗಿಡ್ಡಿ ಚಚ್ಚಿಕೊಡುತ್ತಿದ್ದ ಹುಣಸೇಹಣ್ಣ ಬಿಡಿಸಿ ತೆಕ್ಕೆ ಮಾಡುತ್ತಿದ್ದ ಕೈರು ಮನಸಲ್ಲಿ ರಾತ್ರಿ ಬಿದ್ದ ಕನಸುಗಳೇ ಹಗಲಲ್ಲೂ ಕುಣೀತಿದ್ದವು.’ ಕತೆಯಲ್ಲಿ ಇಂತಹ ಚಿತ್ರಣ ಜೀವಂತಿಕೆಯ ಸಂಕೇತವಾಗಿವೆ. ಬಷೀರನಿಗೂ ಮಕ್ಕಳ ಚಿಂತೆ. ಕೈರುಗೂ ಮಕ್ಕಳ ಚಿಂತೆ. ಈ ಚಿಂತೆಗಳ ದಿಸೆಯಿಂದ ರಾತ್ರಿ ಕಾಣುವ ಕನಸ್ಸುಗಳು ಹಗಲಿನಲ್ಲಿಯೂ ಮೂಡುತ್ತಿವೆ. ಗಂಡ ಹೆಂಡತಿ ಕಾಣುವ ಕನಸ್ಸುಗಳು ಬರೀ ಕನಸ್ಸುಗಳಾಗಿ ಕರಗಿದರೆ ಅವರಿಗೆ ನೆಮ್ಮದಿ. ಹಾಗಾಗುವ ಲಕ್ಷಣಗಳು ಇಲ್ಲ. ಬಷೀರನ ಸಾವು ಆಗಿಲ್ಲ ನಿಜ. ತಾನು ತಿನ್ನುವ ಮೀನಿನ ಮುಳ್ಳು ಸಾವಿಗೆ ಕಾರಣವಾಗಬಹುದು, ಡಾಕ್ಟರ್ ಹೇಳಿದಂತೆ ಗಂಟಲು ಕ್ಯಾನ್ಸರ್ ಕಾರಣವಾಗಬಹುದು. ಕತೆಯಲ್ಲಿ ಬರುವ ಕನಸುಗಳು ಧ್ವನಿಪೂರ್ಣವಾಗಿವೆ. ಬಷೀರ, ‘ಹಣ್‌ಪಾಡೂ ನಿಜ ಅನ್ನೂ. ಯಾವ್‌ ಯಾವ್‌ ಮೀನಿಗೆ ಯಾವ್‌ ಯಾವ್‌ ಗಾಳ್ವೋ ಯಾರಿಗ್ ಗೊತ್ತು. ಮುಳ್ಳು ನುಂಗುದ್ ಮ್ಯಾಲ್ ತಾನೆ ನಮ್ಗೂ ಗೊತ್ತಾಗದು ನಾವೂ ಗಾಳಕ್ ಬಿದ್ದಿದ್ದೀವಿ ಅಂತ’ ಅಂದುಕೊಳ್ಳುವ ಅನುಭವದ ಮಾತು ಸಂಭವಿಸುವ ದುರಂತಕ್ಕೆ ಸಾಕ್ಷಿಯಾಗುತ್ತದೆ. 

‘ತ್ರೀ ಪಾಯಿಂಟ್ ಫೈವ್’ ಈ ಸಂಕಲನದ ಉತ್ತಮ ಕತೆ. ನನಗೆ ಇಷ್ಟವಾದ ಕತೆ. ಸುನೀತಾ ಆಧುನಿಕ ವಿದ್ಯಾವಂತ ಮಹಿಳೆ. ಮನೆಗೆದ್ದು ಮಾರು ಗೆಲ್ಲುವ ಛಲವಂತಳು. ಗಂಡನನ್ನು ಗೆಲ್ಲಬೇಕು, ಪಿಎಚ್‌ಡಿಯ ಗೈಡ್‌ನನ್ನು ಗೆಲ್ಲಬೇಕು, ಕಂಪೆನಿಯ ಸಿಇಒನನ್ನು ಗೆಲ್ಲಬೇಕು. ಗೆಲ್ಲಲು ವಿದ್ಯಾಬಲ ಬೇಕು ಮತ್ತು ಆತ್ಮಬಲ ಬೇಕು. ಬದುಕಿನ ಉದ್ದಕ್ಕೂ ಲಿಂಗತಾರತಮ್ಯದ ವಿರುದ್ಧ ಹೋರಾಡುತ್ತಾ ದಣಿದು ಗೆಲ್ಲುವ ಸಾಮರ್ಥ್ಯವಿದೆ ಸುನೀತಾಳಲ್ಲಿ. ಸುನೀತಾಳ ಪಕ್ಕದಲ್ಲಿ ಜಬೀನಕ್ಕನನ್ನಿಟ್ಟು ನೋಡಬೇಕೆನಿಸುತ್ತದೆ. ಜಬೀನಕ್ಕ ಬಡವಳು, ಅಲ್ಪಸಂಖ್ಯಾತಳು, ಸರ್ಕಾರದ ಸೌಲತ್ತನ್ನು ಪಡೆಯಲು ಅರ್ಹತೆ ಉಳ್ಳವಳು. ಹಸಿರು ಕಾರ್ಡ್‌ ದೊರೆತರೆ ಹೊಟ್ಟೆಯ ಪಾಡು ನೀಗುತ್ತದೆ. ಸರ್ಕಾರದ ನೌಕರಸ್ಥ ವ್ಯವಸ್ಥೆಯಲ್ಲಿ ಲಂಚ ನೀಡುತ್ತಲೇ ಇದ್ದರೂ ಜಬೀನಕ್ಕನಿಗೆ (ಮಡ್ಳಕ್ಕಿ) ಸರಳವಾಗಿ, ನ್ಯಾಯಯುತವಾಗಿ ಹಸಿರು ಕಾರ್ಡ್‌ ಸಿಗಬೇಕು, ಪ್ರತಿರೋಧ ಒಡ್ಡುವ ಸಾಮರ್ಥ್ಯ ಜಬೀನಕ್ಕನಲ್ಲಿಲ್ಲ. ಜಾತಿ, ಬಡತನ ವ್ಯಕ್ತಿಯನ್ನು ಅಸಹಾಯಕನನ್ನಾಗಿ ಮಾಡುತ್ತದೆ.

ಎಂಬತ್ತರ ದಶಕದಲ್ಲಿ ವಿಜೃಂಭಿಸಿದ ಬಂಡಾಯ- ಪ್ರತಿಭಟನಾ ಕತೆಗಳು ಹಳ್ಳಿ ಕೇಂದ್ರಕ್ಕೆ ಸೀಮಿತವಾಗಿ, ಗೌಡ-ಶಾನುಭೋಗರ ಎದುರು ದಲಿತನ ಸಿಟ್ಟು ತೋರಿಸುವ ಕತೆಗಳು ರಾಶಿ ಬಂದಿವೆ. ಈ ಪರಿ ಬದಲಾದ ಸಮಾಜದಲ್ಲಿ ಅದಕ್ಕನುಗುಣವಾಗಿ ಮುಂದುವರಿಯಬೇಕಾದದ್ದಕ್ಕೆ  ‘ತ್ರೀ ಪಾಯಿಂಟ್ ಫೈವ್’ ಅಂತಹ ಕತೆಗಳ ಜರೂರಿತ್ತು. ಈ ಬಗೆಯ ಮಾದರಿ ಕತೆಗಳು ಹೊಸತಲೆಮಾರಿನವರಲ್ಲಿ ಮುಂದುವರಿದಿವೆ. ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವ ಕತೆಗಳು ವಿರಳವಾಗಿ ಕಂಡುಬರುತ್ತವೆ.

****

ದಯಾನಂದ, ನಿಮ್ಮ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ. ‘ಸರ್ವೈವಲ್‌ ಬೆನಿಫಿಟ್’ ಚಿಕ್ಕ ಕತೆ. ದೊಡ್ಡ ಅರಿವನ್ನು ನೀಡುತ್ತದೆ. ಪ್ರಭುತ್ವವನ್ನು, ಎಲ್ಲ ಬಗೆಯ ಅಧಿಕಾರ ಶಕ್ತಿಗಳನ್ನು ಪ್ರತಿರೋಧಿಸುವ ಶಕ್ತಿ-ಸಾಮರ್ಥ್ಯ ಇರುವುದು ಕಲೆಗೆ; ಸಾಹಿತಿ-ಕಲಾವಿದರಿಗೆ. ಕಲಾ ವ್ಯವಸ್ಥೆಯನ್ನು ದಮನಿಸುವ ಶಕ್ತಿ ಪ್ರಭುತ್ವಕ್ಕಿದೆ. ಪ್ರಭುತ್ವ ಗೆದ್ದರೆ ಕಲೆ - ಸಾಹಿತ್ಯ ಸೋಲುತ್ತದೆ. ಕಲೆ - ಸಾಹಿತ್ಯ ಗೆದ್ದರೆ ಪ್ರಭುತ್ವ ಸೋಲಲೇಬೇಕು. ವರ್ತಮಾನದಲ್ಲಿ ಪ್ರಭುತ್ವ ಗೆಲ್ಲುತ್ತಿದೆ ಎಂಬ ಅನುಮಾನ ನನ್ನದು. ನನಗೆ ಇಲ್ಲಿ ಜಿ. ರಾಜಶೇಖರರ ಮಾತು ನೆನಪಾಗುತ್ತಿದೆ: ‘ಜೀವಹಿಂಸೆಯೇ ಎಲ್ಲೆಡೆ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಸಾಹಿತ್ಯದ ಜೀವಸೆಲೆಯನ್ನು ನಂಬುವುದು ದೇವರಲ್ಲಿ ಶ್ರದ್ಧೆ ಇರಿಸಿಕೊಳ್ಳುವಷ್ಟೇ ಕಷ್ಟಕರವಾಗಿ ಕಾಣುತ್ತದೆ.’

- ಅಮರೇಶ ನುಗಡೋಣಿ

****

ಬುದ್ಧನ ಕಿವಿ : ಪ್ರಯೋಗಕ್ಕೆ ಒಡ್ಡಿಕೊಂಡ ಕತೆಗಳು

ತಮ್ಮ ‘ದೇವರು ಕಚ್ಚಿದ ಸೇಬು’ ಸಂಕಲನದ ಬಳಿಕ ಒಂದು ಸಾವಧಾನದ ಅಂತರದ ನಂತರ ಕಥೆಗಾರ ದಯಾನಂದ ಎರಡನೆಯ ಕೃತಿ ‘ಬುದ್ಧನ ಕಿವಿ’ಯನ್ನು ಪ್ರಕಟಿಸುತ್ತಿದ್ದಾರೆ. ಮೊದಲ ಸಂಕಲನದಲ್ಲಿ ಅವರು ತೋರಿದ್ದ ಕಥನ ಪರಿಣತಿ, ಕಟ್ಟೋಣದ ಕುರಿತು ಅವರಿಗಿರುವ ಎಚ್ಚರಗಳು ಇಲ್ಲಿಯೂ ಮುಂದುವರೆದಿವೆ. ಮಾತ್ರವಲ್ಲ, ಕೆಲವೆಡೆ ಹದವಾಗಿ ನೇರ್ಪುಗೊಂಡಿವೆ. ನೈತಿಕತೆ, ಅಸ್ತಿತ್ವದ ಸಂಕಟ ಮತ್ತು ಸಮಾಜದ ಸೋಗಲಾಡಿತನ ಸೃಷ್ಟಿಸುವ  ತಳಮಳ, ಮನುಷ್ಯ ಸಂಬಂಧಗಳು ಹುಟ್ಟು ಹಾಕುವ ತಾಕಲಾಟ ದಯಾನಂದರ ಒಟ್ಟೂ ಕಥೆಗಳ ಕೇಂದ್ರ ಕಾಳಜಿಯಾಗಿವೆ. 

ಈ ಸಂಕಲನದ ಎದ್ದುಕಾಣುವ ಅಂಶವೆಂದರೆ ನುರಿತ ಕಥೆಗಾರನೊಬ್ಬ ನಿಭಾಯಿಸಬಹುದಾದ ಎಲ್ಲ ರೀತಿಯ ವಸ್ತುಗಳನ್ನೂ ದಯಾನಂದರು ಪ್ರಯೋಗಕ್ಕೆ ಒಡ್ಡಿರುವುದು. ವಸ್ತು ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಅವರು ಕೆಲವೆಡೆ ಕಥನ-ಕೃಪೆಯಿಂದ ಯಶಸ್ವಿಯೂ ಆಗಿದ್ದಾರೆ. ಎರಡು ವಿರುದ್ಧ ಶಕ್ತಿ ಅಥವ ವಿಚಾರಗಳ ತಿಕ್ಕಾಟವನ್ನು ಕೂಡ ಈ ಕಥೆಗಳಲ್ಲಿ ಕಾಣಬಹುದು. ಈ ಸಂಘರ್ಷವು ಸಮಕಾಲೀನವಾಗಿದ್ದಾಗ ಅವನ್ನು ಜತನದಿಂದ ನಿಭಾಯಿಸುವುದು ನಿಜಕ್ಕೂ ಸವಾಲಿನ ಕಸುಬು. ಅದನ್ನು ದಯಾನಂದ ಸರ್ವೈವಲ್‌ ಬೆನಿಫಿಟ್‌ ಕಥೆಯಲ್ಲಿ ವಿಡಂಬನಾತ್ಮಕ ರೂಪಕದ ಮೂಲಕ, ತ್ರಿಪಾಯಿಂಟ್‌ ಫೈವ್‌ ಮತ್ತು ಬುದ್ಧನ ಕಿವಿ, ಬೈಬಲ್‌ ಬಂಪ್‌ ಥರದ ಕಥೆಗಳಲ್ಲಿ ಚಾಕಚಕ್ಯತೆಯ ನಿರೂಪಣೆಯ ಮೂಲಕ ಬಹಳ ಸಹಜವಾಗಿ ಸಾಧಿಸಿರುವುದು ಮೆಚ್ಚುಗೆಯ ಅಂಶವಾಗಿದೆ.  

ದಯಾನಂದ, ‘ಹೇಳುವ ಕಥೆಗಳಿನ್ನೂ ಬಹಳ ಇವೆ’ ಎಂಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.

- ಕೇಶವ ಮಳಗಿ

 

MORE FEATURES

ಗಂಗಪಾಣಿ ಕಾದಂಬರಿ: ಗತದ ಮೌಲ್ಯ ಮತ್ತು ಸದ್ಯದ ಅಪಮೌಲ್ಯಗಳ ಮುಖಾಮುಖಿ

01-07-2024 ಬೆಂಗಳೂರು

‘ಗಂಗಪಾಣಿ’ ಎನ್ನುವುದು ತುಮಕೂರು ಭಾಗದ ಒಂದು ವಿಶಿಷ್ಟ ತೆಂಗಿನ ತಳಿ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ...

ಅಂದಿನ ಕಾಲದ ಮನೆ ಮನೆಯ ಅಜ್ಜಿಯರ ಪ್ರತಿರೂಪ ಈ ‘ಮಲೆನಾಡ ಅಜ್ಜಿ’

01-07-2024 ಬೆಂಗಳೂರು

"ಅಜ್ಜಿ ಮೊಮ್ಮಗಳ ಆ ಪುಟ್ಟ ಪ್ರಪಂಚದಲ್ಲಿ ಏನಿದೆ, ಏನಿಲ್ಲ? ಅಜ್ಜಿ ತನ್ನ ಕೈಂಕರ್ಯಗಳನ್ನು ತಣ್ಣಗೆ ಮಾಡುತ್ತಾ ಮೊಮ್...

ಮೌರ್ಯ ಸಾಮ್ರಾಜ್ಯ ಮರುನಿರ್ಮಾಣದ ಕತೆ

01-07-2024 ಬೆಂಗಳೂರು

ಇತಿಹಾಸಕ್ಕೆ ಕಾದಂಬರಿಯ ಕವಚ ತೊಡಿಸಿರುವ ಹೀಲ್ಡಾ ಸೆಲಿಗ್ಮೆನ್ ಅವರ ಈ ಕೃತಿಯ ವೈಶಿಷ್ಟ್ಯ ನಿಸರ್ಗ ವರ್ಣನೆಯ ಕುರಿತಾಗಿ ಅವ...