“ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಸಂಕಲನದಲ್ಲಿ ನಿದರ್ಶನಗಳಿವೆ. ‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ” ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಗೋಪಾಲ ಕೃಷ್ಣ ಕುಂಟಿನಿ. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ ‘ಡೂಡಲ್ ಕತೆಗಳು’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ...
ಸ್ನೇಹಿತೆ ಪೂರ್ಣಿಮಾ ಮಾಳಗಿಮನಿ ‘ಡೂಡಲ್ ಕತೆ’ಗಳನ್ನು ಬರೆದಿದ್ದಾರೆ. ಡೂಡಲಿಂಗ್ ಎನ್ನುವುದು ಸೃಜನಶೀಲ ಚಿಂತನೆಯನ್ನು, ಮಾಸುವ ಒಂದು ಕಲೆ. ಈ ಸಂಕಲನದಲ್ಲಿ ಬರುವ ಅಷ್ಟೂ ಕತೆಗಳು ಒಂದು ರೀತಿಯಲ್ಲಿ ಜೀವನದ ಬೃಹತ್ ಕ್ಯಾನ್ವಾಸ್ ಮೇಲೆ ನಾವಿಡುವ ಒಂದೊಂದು ಹೆಜ್ಜೆಯೂ ಮತ್ತೆ ತಿದ್ದಲಾಗದ ಡೂಡಲ್ ಮಾದರಿಯ ಚದುರಿದ ಚಿತ್ರಗಳಾಗಿಬಿಡುತ್ತವೆ ಎನ್ನುವುದನ್ನೇ ಹೇಳಿದಂತಿವೆ. ಆದರೆ ಎಲ್ಲಾ ಚಿತ್ರಗಳೂ ಒಂದಕ್ಕೊಂದು ಅಂಟಿಕೊಂಡು ಮತ್ತೊಂದು ಅರ್ಥವನ್ನು ಹುಟ್ಟಿಸಿ ಓದುಗನ ತಾದಾತ್ಮ್ಯವನ್ನು ಬಯಸುವಂತೆ ಮಾಡುತ್ತಿವೆ. ಹಾಗಾಗಿ ಇಲ್ಲಿನ ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ.
ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ. ಸೆಳೆದರಷ್ಟೇ ಸಾಕೇ, ಕತೆ ನಮ್ಮಲ್ಲಿ ಬಹುಕಾಲ ಉಳಿಯಬೇಡವೇ? ಅದನ್ನೂ ಅವರು ಕತೆಯ ಪಾತ್ರಗಳ ಮೂಲಕ ಉಳಿಸಿಕೊಟ್ಟಿದ್ದಾರೆ. ಒಬ್ಬಳು ಪಾರವ್ವ, ಒಂದು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಹೋಗುವ ಸೈಕಲ್ಲು, ಮನೆಗೆಲಸದವಳಿಗೆ ಮನೆಯ ಕಸದ ಬುಟ್ಟಿಯಲ್ಲಿ ಸಿಗುವ ಕಾಂಡೋಮ್... ಹೀಗೇ ಕತೆಯ ಆಗುಹೋಗುಗಳೇ ಕತೆಯನ್ನು ಓದುಗರಲ್ಲಿ ಉಳಿಸಿಕೊಳ್ಳುತ್ತವೆ.
ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಸಂಕಲನದಲ್ಲಿ ನಿದರ್ಶನಗಳಿವೆ. ‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ. ಭ್ರಮಾಧೀನ ಜಗತ್ತಿನ ಪ್ರತಿನಿಧಿಯಾದ ಹೆಣ್ಮಗಳು ಆ ಭ್ರಮೆಯನ್ನು ಹೊತ್ತುಕೊಂಡೇ ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲಕ್ಕೆ ಕಾರಣವಾಗಿದ್ದು, ಕೊನೆಗೂ ಬದುಕು ಭ್ರಮೆಯೇ ಎಂದು ವಿವರಿಸುತ್ತಾ ಕತೆಯಲ್ಲಿ ಭ್ರಮೆ ಕರಗಿಸುತ್ತಾರೆ. “ಇಷ್ಟೊಂದು ಬೆಳಕಿದ್ದರೆ ರಾತ್ರಿ ನಿದ್ದೆ ಬರುವುದೋ ಇಲ್ಲವೋ ಎಂದು ಯೋಚಿಸುತ್ತಿದ್ದವಳಿಗೆ ಆ ಕಿಟಕಿಯ ಮೇಲೆ ನೆರಳು ಬಿದ್ದಂತೆಲ್ಲಾ ತನ್ನ ಪ್ರತಿಬಿಂಬ ಕಾಣಿಸಿತು" ಎನ್ನುವುದರಿಂದ ಹಿಡಿದು, ತಾನಾಗಿಯೇ ಒಳಗೆ ಹೋಗಿ ಕುಳಿತುಕೊಂಡು, “ಆ ಮೇಲಿರೋ ಕಿಟಕಿಯಿಂದ ನನ್ನ ರೂಮಲ್ಲಿ ತುಂಬಾ ಜನ ಬಂದು ಬಂದು ಸೇರ್ಕೋತಾ ಇದಾರೆ. ಅದನ್ನು ಮುಚ್ಚಬೇಕು, ಇನ್ನಷ್ಟು ಟ್ರಂಕ್‌ಗಳು ಇದ್ರೆ ಕೊಡಿ, ಪ್ಲೀಸ್" ಎಂದು ಬಡಬಡಿಸಿದಳು, ಎನ್ನುವವರೆಗೂ ಈ ಭ್ರಮಾಲೋಕದ ಚಿತ್ರಣಗಳಿವೆ.
“ರನ್" ಎಂಬ ಕತೆಯಲ್ಲಿ ಪ್ರೀತಿ ಮತ್ತು ವಂಚನೆಯ ಕತೆ ಇದೆ. ಎಲ್ಲರೂ ಈ ರೀತಿಯ ಕತೆ ಬರೆದುಬಿಡಬಹುದು. ಆದರೆ ಪೂರ್ಣಿಮಾ ಕತೆಯಲ್ಲಿ ಬೇರೆಯೇ ಒಂದು ಸ್ವಾದವಿದೆ. ಓಟ ಬದುಕಿನ ಆಚೆಗೆ ಇದೆ. ಪ್ರೇಮದ ಹೊರ ವರ್ತುಲಕ್ಕೆ, ಜೀವದ ಗೆರೆಯ ದೂರಕ್ಕೆ ಎಂದು ಕತೆಗಾರ್ತಿ ತೋರಿಸುತ್ತಾರೆ. ಕೊನೆಗೂ ಓಟ ಅಂದರೆ ಇರುವುದರಿಂದ ಕಳಚಿಕೊಳ್ಳುವುದೇ ಅಲ್ಲವೇ ಎಂಬ ಸತ್ಯವನ್ನು ಪ್ರತಿಪಾದಿಸುತ್ತಾರೆ. ‘ರಾಜಿಯ ಲೋಲಾಕುಗಳು’ ಕತೆಯಲ್ಲಿ ಒಂದು ಸರಳ ಪ್ರೀತಿ ಮತ್ತು ಒಂದು ಜೊತೆ ಲೋಲಾಕುಗಳಿವೆ. ಆ ಲೋಲಾಕುಗಳು ಎಳೆ ಪ್ರೀತಿಗೂ, ಕಳ್ಳತನಕ್ಕೂ ಕಾರಣವಾಗಿ ಒಂದು ಮನೆಯನ್ನೂ, ಮೂರು ಮನಸ್ಸುಗಳನ್ನೂ ಆಕ್ರಮಿಸುತ್ತವೆ. ಕೊನೆಯಲ್ಲಿ ಲೋಲಾಕುಗಳು ತೊನೆಯುವಂತೆ ಇಬ್ಬರ ಪ್ರೀತಿಯೂ ತೊನೆದು ಸುಮ್ಮನಾಗುತ್ತದೆ. ಪ್ರತಿಮಾ ಮಾದರಿಯ ಕಥಾನಕಕ್ಕೆ ರಾಜಿಯ ಲೋಲಾಕು ಆಪ್ತ ಉದಾಹರಣೆ.
‘ಶರದೃತು’ ಎಂಬ ಕತೆಯಲ್ಲಿ ಮನುಷ್ಯ ಸಂಬಂಧದ ಅನುಲೋಮ ವಿಲೋಮಗಳಿವೆ. ಮನುಷ್ಯನ ಈಗೋ ಕೇಂದ್ರದಲ್ಲಿ ಸುತ್ತುತ್ತಾ ಮತ್ತೆ ಅಲ್ಲಿಗೆ ಬಂದು ನಿಲ್ಲುತ್ತದೆ.‘ವುಮನೈಸರ್’ ಮನುಷ್ಯ ಸಂಬಂಧಗಳು ಹೇಗೆ ಸಮಾಜದಲ್ಲಿ ವ್ಯಕ್ತಿ ಸ್ತರಗಳನ್ನು ನಿರ್ಮಿಸುತ್ತವೆ, ಅಸಲಿ ವ್ಯಕ್ತಿತ್ವಗಳ ಖುಲಾಸೆಯಾದಾಗ ಹೇಗೆ ಆಘಾತಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತದೆ.‘ಕೆಂಪು ನೈಟಿ’ ಕತೆಯ ಪಾರವ್ವ ಬಹಳ ಪ್ರತಿಭಾವಂತೆ. ಅವಳ ವಿದ್ವತ್ ಮತ್ತು ಜಾಣ್ಮೆಗೆ ಎಲ್ಲರೂ ತಲೆದೂಗುವವರೇ. ಆದರೆ ಅವಳೊಳಗಿನ ಹೆಣ್ತನವನ್ನು ಮಾತ್ರ ಅವಳೇ ಮೆಚ್ಚಿಕೊಳ್ಳಬೇಕು. ಮದುವೆ ಮನೆಯಲ್ಲಿ ಕೆಂಪು ನೈಟಿ ಹಾಕಿಕೊಂಡು, ಆಭರಣ ತೊಟ್ಟುಕೊಂಡು, ವ್ಯಾನಿಟಿ ಬ್ಯಾಗ್ ಹೆಗಲಿಗೆ ತೂಗು ಹಾಕಿಕೊಂಡು, ಕನ್ನಡಿ ಮುಂದೆ ನಿಂತುಕೊಂಡು... ಅದು ಯಾವುದೂ ಅವಳದ್ದಲ್ಲ, ಕೆಂಪು ನೈಟಿಯೂ, ಆಭರಣವೂ, ಕನ್ನಡಿಯೂ... ಯೌವನವೂ ಕೂಡಾ!
‘ಜೀವದಾನ’ ಕತೆಯ ಹುಡುಗನಿಗೆ ಬಂಧುಗಳಿಲ್ಲ. ಮನೆಯಲ್ಲಿ ಅಮ್ಮ ಒಂಟಿ, ಅಪ್ಪನೂ ಒಂಟಿ. ಈ ಒಂಟಿಗಳ ನಡುವೆ ಮಗನೂ ಒಂಟಿ. ಅಸ್ವಸ್ಥ ಮನೆ ಮತ್ತು ಮನಸ್ಸು. ಇದರ ಮೂಲ ಹೇಳುವುದು ಸೂಳೆಮನೆಯ ಅಜ್ಜಿ. ತನ್ನ ಹುಟ್ಟಿನ ಮೂಲ ಗೊತ್ತಾದ ಮೇಲೆ ಊರು ತೊರೆಯಬೇಕಾದರೂ ತೊರೆಯದೇ ಬರಬೇಕಾದ ಕೆಟ್ಟ ಸ್ಥಿತಿ. ವಾಪಸ್ಸು ಬಂದಾಗ ಅಪ್ಪನನ್ನು ಬದುಕಿಸಲು ಅಮ್ಮ ಮಗನನ್ನೇ ಋಣಸಂದಾಯಕ್ಕೆ ಒಡ್ಡುತ್ತಾಳೆ!
ಇಂಥ ಅನೇಕ ಸೆಲೆಗಳನ್ನು ಕತೆಗಾರ್ತಿ ಬಿಡಿಸುತ್ತಾ ಹೋಗುತ್ತಾರೆ. ಕತೆಗಳ ರಹಸ್ಯಗರ್ಭಗಳಲ್ಲಿ ಅವುಗಳನ್ನು ಮತ್ತೆ ಮತ್ತೆ ಹುದುಗಿಸಿಡುತ್ತಾರೆ. “ನೆನಪಿಗೆ ಜಿನುಗಿ, ಸ್ಪರ್ಶಕೆ ನಲುಗಿ, ಬಿರಿವ ಎರಡೇ ಪಕಳೆಗಳು" ಎಂದು ಒಂದೆಡೆ ಅವರೇ ಬರೆದುಕೊಂಡಂತೆ, ಈ ಕತೆಗಳು ಓದುಗರನ್ನು ನೆನಪಲ್ಲಿ ಜಿನುಗಿಸಿ, ಸ್ಪರ್ಶದಲ್ಲಿ ನಲುಗಿಸಿ, ಬಿರಿಯುವಂತೆ ಮಾಡಿ ಹೋಗುತ್ತವೆ. “I would like to say that, I haven’t sold my soul; merely licensed it" ಎಂಬಂತೆ ಡೂಡಲ್ ಕತೆಗಳ ಒಂದೊಂದು ಪಾತ್ರಗಳೂ ಕತೆಯ ಹೂರಣವನ್ನು ನಮ್ಮ ಕಲ್ಪನೆಯ ಲೋಕದಾಚೆಗೂ, ಲೋಕದ ಸುತ್ತಲೂ ತಿರುಗಿಸಿ ಬಿಟ್ಟು ಬಿಡುತ್ತವೆ!
***
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.