ಪ್ರಸ್ತುತ ಲೋಕಕ್ಕೆ ತಗುಲಿದ ಸೋಂಕಿನ ಮರ್ಮರವನ್ನು ಕಥೆಗಾರ ತುಂಬಾ ಪ್ರಾಮಾಣಿಕವಾಗಿ ಹಾಗೂ ತಾಯಿಯಂಥ ಅಂತಃಕರಣದ ಭಾವುಕ ಕಥೆಗಾರ ತನ್ನೊಡಲಲ್ಲಿ ಏನನ್ನು ಬಚ್ಚಿಟ್ಟುಕೊಳ್ಳದೇ ಪ್ರಾಮಾಣಿಕವಾಗಿ ಕಥೆಯ ಪಾತ್ರವಾಗಿ ಕಥೆಗಳನ್ನು ಓದುಗರ ಎದೆಗೆ ದಾಟಿಸುತ್ತಾರೆ ಎನ್ನುತ್ತಾರೆ ಲೇಖಕ, ಕವಿ ಸುಮಿತ್ ಮೇತ್ರಿ. ಅವರು ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಕೃತಿಯ ಬಗ್ಗೆ ಲೇಖನ ನಿಮ್ಮ ಓದಿಗಾಗಿ..
ಕೃತಿ: ಬೆತ್ತಲೆ ಸಂತ
ಲೇಖಕ: ಇಸ್ಮಾಯಿಲ್ ತಳಕಲ್
ಪುಟ ಸಂಖ್ಯೆ; 96
ಬೆಲೆ: 80
ಮುದ್ರಣ: 2021
ಪ್ರಕಾಶನ: ಕಥನ ಪುಸ್ತಕ
ಗುಲಾಬಿ ಹೂವಿನ ಫ್ರಾಕು:
ಫಕ್ಕನೇ ಕರೆಂಟು ಹೋಗಿ ಕತ್ತಲಾವರಿಸಿ ಬಿಡುವ ಈ ಬದುಕಿನಲ್ಲಿ. ಚಂದಪ್ಪನ ಬೆಳದಿಂಗಳು ಕೆಲವರ ಬದುಕಿನ ಅಂಗಳದಲ್ಲಿ ಯಾವತ್ತೂ ಬೀಳುವುದೇ ಇಲ್ಲ. ಬಕ್ ಬಾರ್ಲು ಬಿದ್ದಿದ್ದ ಬದುಕನ್ನು ಸಣ್ಣಗೆ ಸುಡುತ್ತಾ, ಸುಟ್ಟ ಬೆಳಕಲ್ಲೊಂದಿಷ್ಟು ಭರವಸೆಯ ಕಿರಣ ಹುಡುಕಿ ಹೊರಟಿರುವವರ ಮುಂದೆ ಬರೀ ಕತ್ತಲೆ ಆಕಳಿಸುತ್ತದೆ. ಬದುಕಿನ ನೂರಾರು ಆಸೆಯ ನೀರ್ಗುಳ್ಳೆಗಳು ಕಣ್ಣು ಮುಂದೆ ಒಡೆದು ಹೋಗುವಂತೆ ಕಥೆಗಾರ ಬದುಕಿನ ಒಂದು ಬದಿಯ ನಿರ್ದಯಿ ಲೋಕವನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಪರ್ವಿನ್ ಎಂಬ ತಾಯಿಯ ಹೆಜ್ಜೆಗಳಲ್ಲಿ ಹಸೀನಾ ಎಂಬ ಮಗಳ ಪುಟ್ಟ ಹೆಜ್ಜೆಗಳನ್ನು ಬೆರೆಸುವ ಕಥೆಗಾರ ಓದುಗನ ಕಣ್ಣುಗಳನ್ನು ತೇವ ಮಾಡಿಸುತ್ತಾರೆ. ಇಡೀ ಕಥೆ ಓದಿ ಮುಗಿಯುವಷ್ಟರಲ್ಲಿ ಓದುಗನ ಎದೆಯಲ್ಲಿ ಒಂದು ನಿರ್ಲಿಪ್ತ ಭಾವ ಮೂಡುತ್ತದೆ.
ಬೆತ್ತಲೆ ಸಂತ:
ಬೆತ್ತಲೆಯಾಗುವ ಯೋಗ ಕೂಡಿಬಂದಿರಬೇಕು ಎನ್ನುತ್ತಲೇ ಈ ಕಥನಯೊಳಗಿನ ಕನಸು ಮನಸ್ಸಿನ ತಾಗಲಾಟಕ್ಕೆ ಊರೊಂದನ್ನು ದಾಟಿ ಮತ್ತೊಂದು ಊರಿಗೆ ಹೋಗುತ್ತಿದ್ದಾಗ.... ಪ್ರಪಂಚದ ಪರಿವೆಯೇ ಇಲ್ಲದಂತೆ ಬೇರೆ ಲೋಕದಲ್ಲಿ ಮುಳುಗಿಸುತ್ತಾರೆ. ವಿನಾಕಾರಣ ನನಗೆ ಗುರು ಗೋವಿಂದ ಭಟ್ಟರು, ಶಿಶುನಾಳ ಶರೀಫರು ನೆನಪಾಗುತ್ತಾರೆ ಹಾಗೂ ಧರ್ಮದ ಮಿತಿಯನ್ನು ದಾಟಿ ಮತ್ತೊಂದು ತಿಳುವಳಿಕೆಯ ಅರಿವಿಗೆ ಬರುವಂತೆ ಕಥೆಗಾರ ಓದುಗನನ್ನು ಹಿಡಿದಿಡುತ್ತಾರೆ.
ಮುರಿದ ಕೊಳಲಿನ ನಾದ:
ಈ ಕಥೆ ಓದುತ್ತಾ ಹೋದಂತೆ ಓದುಗನ ಎದಿ ಹೊಕ್ಕು ಹಾಡಾಗಿ ಕಣ್ಣು ತುಂಬಿ ಬರುವಂತೆ ಮಾಡುವ ಕಥೆಗಾರ ತುಟಿ ತುದಿಯಲ್ಲಿ ನಕ್ಕು ಹಗುರಾಗುತ್ತಾನೆ ಎಂದೆನಿಸುತ್ತದೆ.
ರೋಗಗ್ರಸ್ತ:
ಈ ದುರಿತ ಕಾಲಘಟ್ಟದ ದುಗುಡದ ತತ್ತಿಯನ್ನು ಓದುಗನ ಎದೆಯಲ್ಲಿ ಇಡ್ತಾನೆ, ಮನಸ್ಸಿಗೆ ಮುಳ್ಳು ಮೀಟಿದಂತೆ ಕಥೆ ಆವರಿಸಿಕೊಂಡು ಬಿಡುತ್ತದೆ. ನಮ್ಮೂರು ನಮಗೆ ಅಪರಿಚಿತವಾಗುವ ಪರಿಗೆ, "ಕೈಯಾಗಿನ ಚೆರಿಗಿ ಖಾಲಿ ನಗಾಕತ್ತಿತ್ತು" ಎನ್ನುವ ಸಾಲು ಈ ಬದುಕು ಖಾಲಿ ಚೆರಿಗಿ ಅಂಥಾ ಭಾಸವಾಗಿ ಮಾತೇ ಹೊರಡದಂಥೆ ಎದಿಭಾರ ಮಾಡಿಸುತ್ತದೆ. ಕಥೆ ಓದಿ ಮುಗಿಯುವಷ್ಟರಲ್ಲಿ ಓದುಗನ ಚಡಪಡಿಕೆ ನಿಶ್ಯಬ್ದ ಸದ್ದಿನ್ಯಾಗ ಲೀನ ಆಗುತ್ತದೆ.
ಜಸ್ಟೀಸ್ ಫಾರ್ ದುರುಗಿ:
ಹಳ್ಳಿ ಬಡ ಜನರ ಕಥನವನ್ನು ಧಗಧಗಿಸುವ ಕೆಂಡದಂಥೆ ಕಥೆಯಲ್ಲಿ ಹಿಡಿದಿಡುವ ಕಥೆಗಾರನ ಕಥನ ಕ್ರಮದ ತೀವ್ರತೆ ಓದುಗರ ಗಮನ ಸೆಳೆಯುತ್ತದೆ.
ಬೀದಿಗೆ ಬಿದ್ದ ಬೀದಿ, ಚಾಕೊಲೇಟ್:
ಈ ಕಥೆಗಳನ್ನು ಕಥೆ ಮಾಡಲೇಬೇಕು ಎಂಬಂತೆ ಕಥೆಗಾರ ಕಥೆ ಹೆಣೆದಿದ್ದಾರೆ ಎಂದೆನಿಸುತ್ತದೆ.
ಬಹಿಷ್ಕಾರ:
ಕಥೆ ಸ್ವಲ್ಪ ದೀರ್ಘ ಎನ್ನಿಸಿದರೂ ಓದುಗರನ್ನು ಅಷ್ಟೊಂದು ಹಿಡಿದಿಡುವುದಿಲ್ಲ.
*
ಮೊದಲಿನ ಐದು ಕಥೆಗಳು ಒಂದು ತೀವ್ರತರದ ದಾಟಿಯಲ್ಲಿ ದಾಖಲಾದರೆ ಉಳಿದ ಮೂರು ಕಥೆಗಳು ಬೇರೆಯದೇ ದಾಟಿಯಲ್ಲಿ ಕಾಣುತ್ತವೆ. ಮುಂದಿನ ದಿನಮಾನಗಳಲ್ಲಿ ಕೊನೆಯ ಮೂರು ತರಹದ ಕಥೆಗಳ ಕುರಿತು ಇನ್ನಷ್ಟು ಮತ್ತಷ್ಟು ಕಥೆಗಾರ ಎಚ್ಚರಿಕೆ ವಹಿಸಲಿ ಎನ್ನುವ ಸದಾಶಯದೊಂದಿಗೆ...
ಇನ್ನೂ ಈ ಕಥೆಗಾರನ ಹೆಚ್ಚುಗಾರಿಕೆ ಎಂದರೆ...
ಪ್ರಸ್ತುತ ಲೋಕಕ್ಕೆ ತಗುಲಿದ ಸೋಂಕಿನ ಮರ್ಮರವನ್ನು ಕಥೆಗಾರ ತುಂಬಾ ಪ್ರಾಮಾಣಿಕವಾಗಿ ಹಾಗೂ ತಾಯಿಯಂಥ ಅಂತಃಕರಣದ ಭಾವುಕ ಕಥೆಗಾರ ತನ್ನೊಡಲಲ್ಲಿ ಏನನ್ನು ಬಚ್ಚಿಟ್ಟುಕೊಳ್ಳದೇ ಪ್ರಾಮಾಣಿಕವಾಗಿ ಕಥೆಯ ಪಾತ್ರವಾಗಿ ಕಥೆಗಳನ್ನು ಓದುಗರ ಎದೆಗೆ ದಾಟಿಸುತ್ತಾರೆ.
ಒಡಲ ಒಳ ತುಡಿತಗಳನ್ನು ತುಂಬಾ ಪರಿಣಾಮಕಾರಿಯಾಗಿ ಸಂವಹನಕ್ಕೆ ಇಳಿಸುತ್ತಾರೆ. ತಿಳುವಳಿಕೆ ಮೇರೆಗಳನ್ನು ವಿಸ್ತರಿಸುವಂತೆ. ಹೊಸ ಲೋಕದರ್ಶನಕ್ಕೆ ಕಾಲದ, ಬದುಕಿನ ತಲ್ಲಣಗಳನ್ನು ಎಲ್ಲಾ ಚೌಕಟ್ಟುಗಳನ್ನು ಮೀರಿ ಓದುಗರನ್ನು ಅದರಲ್ಲಿ ವಿಶೇಷವಾಗಿ ಸೂಕ್ಷ್ಮ ಓದುಗನಿಗೆ ತಾಗಿಸಿ ಬಿಡುತ್ತಾರೆ.
ಕಥೆಗಾರರ ನಿರೂಪಣೆಯಲ್ಲಿ ಕಥನಗಳು,
ಒಬ್ಬ ಓದುಗ ಕಂಡುಕೊಂಡಂತೆ ಇನ್ನೊಬ್ಬ ಓದುಗ ಕಾಣದಂತೆ ಹಲವು ಬಗೆಯಲ್ಲಿ ಆವರಿಸುತ್ತವೆ. ಕಥೆಗಾರ ಮತ್ತು ಓದುಗರ ಮಧ್ಯೆ ಕಥೆಗಳು ಕೇವಲ ಸೇತುವೆ ಆಗದೆ ಅದನ್ನು ಮೀರಿ ಒಂದು ಬಂಧವನ್ನು ಕಟ್ಟುವಲ್ಲಿ ಕಥೆಗಾರ ಗೆದ್ದಿದ್ದಾರೆ ಎಂದೇ ಹೇಳಬಹುದು. ಅನೇಕ ಕಥೆಗಳಲ್ಲಿ ಕಥನ ಕ್ರಮದ ಕಟ್ಟುವಿಕೆಯನ್ನು ಮೀರುವ ಪರಿ ಕನ್ನಡಿಯಲ್ಲಿ ಬಿಂಬ ಕಂಡಂತೆ ತಮ್ಮ ಕಥನ ಕ್ರಮದ ಚೆಲುವಿನಲ್ಲಿ ಕಾಣಿಸುತ್ತಾರೆ. ಆದರೆ ಯಾವುದೋ ಒಂದು ಪೂರ್ವಾಗ್ರಹ ಪೀಡಿತ ಬೇಲಿಯಲ್ಲಿ ನಿಂತುಕೊಂಡು ಕಥೆಯೊಳಗೆ ದೃಷ್ಟಿ ಹಾಯಿಸಲು ಪ್ರಯತ್ನಿಸಿದರೆ ಆ ಚೆಲುವು ಕಾಣಲು ಸಾಧ್ಯವೇ ಆಗುವುದಿಲ್ಲ.
ಇನ್ನೂ ವಿಶೇಷವಾಗಿ ಗ್ರಾಮೀಣ ಭಾಗದ ಹಾಗೂ ಕಥೆಗಾರ ತಮ್ಮ ಸ್ವಂತ ಸಮುದಾಯದ ತುಮುಲಗಳನ್ನು, ದುಗುಡಗಳನ್ನು ಅನುಭವದ ಕಥನದ ಮೂಲಕ ಒಂದು ಪುಟ್ಟ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
ಅಭಿನಂದನೆಗಳು ನಿಮಗೆ.
ಇಸ್ಮಾಯಿಲ್ ತಳಕಲ್ ಅವರ ಲೇಖಕ ಪರಿಚಯ
ಬೆತ್ತಲೆ ಸಂತ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಸುಮಿತ್ ಮೇತ್ರಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.