‘ಅಂಗುಲಿಮಾಲ’ ಬಿಗ್ ಆ್ಯಕ್ಷನ್ ಮೂವಿ ನೋಡಿದ ದಟ್ಟ ಅನುಭವಗಳ ಒಂದು ಕ್ಲಿಷ್ಟ ಕಲಾತ್ಮಕ ಕಥನ


'ಅಂಗುಲಿಮಾಲ' - ಒಂದು ರೋಚಕ ಹೆಸರು. ಕ್ರಿಸ್ತಪೂರ್ವದ ಬುದ್ಧನ ಕಾಲಘಟ್ಟದಲ್ಲಿ ಸಂಚಲನ ಸೃಷ್ಟಿಸಿದ, ಚರಿತ್ರೆಯ ಭಾಗವಾಗಿರುವ ವ್ಯಕ್ತಿ. ಅವನ ಜೀವನ ಒಂದು ರೀತಿಯಲ್ಲಿ ವಿಕ್ಷಿಪ್ತ! ಆತನ ಚೆರಿತ್ರೆಯ ಪುಟಗಳ ಒಂದು ಕೋನದಲ್ಲಿ ಆತ ಭಯಂಕರ, ಕ್ರೂರಿ, ಅಸಹ್ಯ, ಕೊಲೆಗಡುಕ! ಇನ್ನೊಂದು, ಆತ ಮತ್ತು ಆತನ ಕುಟುಂಬ ಬಡತನದ ಬೇಗೆಯಲ್ಲು ಸುಸಂಸ್ಕೃತವಾಗಿತ್ತು" ಎನ್ನುತ್ತಾರೆ ಎಂ.ಜವರಾಜ್. ಅವರು ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರು ನಿರೂಪಿಸಿರುವ ಅಂಗುಲಿಮಾಲ ಕುಂದೂರು ತಿಮ್ಮಯ್ಯನವರ ಆತ್ಮಕಥನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಗುರುಪ್ರಸಾದ್ ಕಂಟಲಗೆರೆ ಈ ತಲೆಮಾರಿನ ಅತ್ಯಂತ ಕ್ರಿಯಾಶೀಲ ಬರಹಗಾರ. ನಾನು ಗಮನಿಸಿದಂತೆ ಅವರ ಕಥೆಗಳು ಸಮುದಾಯ, ಕೇರಿ, ಜಾತಿ, ಧರ್ಮ, ವ್ಯಕ್ತಿಯನ್ನು ಮೀರಿದ ಸೃಜನಶೀಲ ಬರಹಗಳು. ಸೃಜನಶೀಲ ಬರಹಗಳಲ್ಲದೆ 'ಟ್ರಂಕು ತಟ್ಟೆ' ಅವರ ಒಂದು ಸಂಕ್ಷಿಪ್ತ ಅನುಭವ ಕಥನ. ಈಗೊಂದು ಅಂಥದೇ ಅನುಭವದ ಆತ್ಮಕಥನ 'ಅಂಗುಲಿಮಾಲ' ನಮ್ಮ ಮುಂದಿದೆ.

'ಅಂಗುಲಿಮಾಲ' - ಒಂದು ರೋಚಕ ಹೆಸರು. ಕ್ರಿಸ್ತಪೂರ್ವದ ಬುದ್ಧನ ಕಾಲಘಟ್ಟದಲ್ಲಿ ಸಂಚಲನ ಸೃಷ್ಟಿಸಿದ, ಚರಿತ್ರೆಯ ಭಾಗವಾಗಿರುವ ವ್ಯಕ್ತಿ. ಅವನ ಜೀವನ ಒಂದು ರೀತಿಯಲ್ಲಿ ವಿಕ್ಷಿಪ್ತ! ಆತನ ಚರಿತ್ರೆಯ ಪುಟಗಳ ಒಂದು ಕೋನದಲ್ಲಿ ಆತ ಭಯಂಕರ, ಕ್ರೂರಿ, ಅಸಹ್ಯ, ಕೊಲೆಗಡುಕ! ಇನ್ನೊಂದು, ಆತ ಮತ್ತು ಆತನ ಕುಟುಂಬ ಬಡತನದ ಬೇಗೆಯಲ್ಲು ಸುಸಂಸ್ಕೃತವಾಗಿತ್ತು. ಅವನ ಯೌವ್ವನದ ಕಾಲಘಟ್ಟದಲ್ಲಿ ಊಳಿಗಮಾನ್ಯ ವ್ಯವಸ್ಥೆಯಂಥ ಯಜಮಾನಿಕೆ ಪ್ರವೃತ್ತಿಗಳು ಹೆಚ್ಚಾಗಿತ್ತು. ಆ ಪ್ರವೃತ್ತಿಗಳು ಆತನ ಊರನ್ನು ಆಳುತ್ತಿದ್ದವು. ಈ ಆಳ್ವಿಕೆ ಆತನ ಮೇಲೆ ಪರಿಣಾಮಕಾರಿ ಆಘಾತ ಉಂಟು ಮಾಡಿತ್ತು.

ಒಡಹುಟ್ಟಿದವಳನ್ನು ಹರಿದು ತಿಂದಿತ್ತು. ಇದನ್ನು ಪ್ರಶ್ನಿಸಿದ್ದ ಕಾರಣಕ್ಕೆ ಇಡೀ ಕುಟುಂಬ ದೌರ್ಜನ್ಯಕ್ಕೀಡಾಗುತ್ತದೆ. ದುಡಿಮೆ ಇಲ್ಲವಾಗುತ್ತದೆ. ಬದುಕು ಹಸಿಯುತ್ತದೆ. ದೇಹ ಕುಗ್ಗುತ್ತದೆ. ನೀರು ನೆರಳು ಹಸಿವಿನ ದಾಹದಿಂದ ಕೆಂಗೆಡುತ್ತದೆ. ತಮಗಾದ ಅನ್ಯಾಯದ ವಿರುದ್ಧ ಸಿಟ್ಟು ಸೆಡವು ಮನೆ ಮಾಡುತ್ತದೆ. ಇಂಥ ದಬ್ಬಾಳಿಕೆ ದೌರ್ಜನ್ಯ ಎಸಗುವವರಿಗೆ ಕಂಟಕನಾಗಿ ಅವನ ಮೂಲ ಹೆಸರೇ ಅಳಿದು ಅಂಗುಲಿಮಾಲನಾಗಿ ರೂಪಾಂತರಗೊಂಡು ಕಟುಕನಾಗುತ್ತಾನೆ. ಈತರ ರೂಪಾಂತರಗೊಂಡ ಅಂಗುಲಿಮಾಲನ ಮೇಲೆ ಯಾವುದೋ ಒಂದಿನ ಬುದ್ಧನ ಬೆಳಕು ಬೀಳುತ್ತದೆ. ಆ ಬೆಳಕಿನ ಪ್ರಭೆಯಲ್ಲಿ ಎಲ್ಲವನ್ನೂ ಸ್ವೀಕರಿಸುವಂಥ ಮಾಗಿದ ವ್ಯಕ್ತಿತ್ವವೊಂದು ಹೊಸ ರೂಪ ಪಡೆಯುತ್ತದೆ. ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ.

ಸದ್ಯ ಗುರುಪ್ರಸಾದ್ ಕಂಟಲಗೆರೆ ನಿರೂಪಿಸಿರುವ 'ಅಂಗುಲಿಮಾಲ' ಕುಂದೂರು ತಿಮ್ಮಯ್ಯ ಅವರ ಜೀವನ ವೃತ್ತಾಂತವನ್ನು ತಿಳಿಸುವ ಆತ್ಮಕಥನವಾಗಿದೆ. ಈ ಆತ್ಮಕಥನದುದ್ದಕ್ಕು ಬುದ್ಧನ ಬೆಳಕಿದೆ. ಗಾಂಧಿಯ ಚಿಂತನೆಗಳಿವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ದಟ್ಟ ಪ್ರಭಾವದ ವಿವರವನ್ನು ಒದಗಿಸುತ್ತದೆ.

ಭಾರತೀಯ ಸಮಾಜವಾದದ ಚಿಂತಕರಾದ ರಾಮಮನೋಹರ ಲೋಹಿಯಾ "ವ್ಯಕ್ತಿಯನ್ನು ದಬ್ಬಾಳಿಕೆ ವಿರುದ್ಧ ಕೆಲವು ಸಲ ಯಾರ ಬೆಂಬಲವೂ ಇಲ್ಲದೇ ಸ್ವತಃ ತಾನೊಬ್ಬನೇ ಹೋರಾಟ ನಡೆಸಲು ಸಮರ್ಥನಾಗುವಂತೆ ಸಜ್ಜುಗೊಳಿಸುವುದು ಮತ್ತು ಸಶಕ್ತನನ್ನಾಗಿಸುವುದು ಮಹಾತ್ಮ ಗಾಂಧೀಜಿಯವರ ಜೀವನ‌ ಮತ್ತು ಹೋರಾಟದ ಮಹೋನ್ನತ ಗುಣವಾಗಿತ್ತು ' ಎಂಬ ಅಭಿಪ್ರಾಯ, ಕುಂದೂರು ತಿಮ್ಮಯ್ಯನವರ ಹೋರಾಟದ ಕೆಲವು ಘಟ್ಟಗಳು ಇದಕ್ಕೆ ದ್ಯೂತಕವಾಗಿ ಹಲವು ಮಜಲುಗಳಲ್ಲಿ ಕಂಡು ಬರುತ್ತದೆ.

ಹಾಗೆ ಮೇಲ್ಕಾಣಿಸಿರುವ ಕ್ರಿಸ್ತಪೂರ್ವದ ಅಂಗುಲಿಮಾಲನ ರೋಚಕ ಬದುಕಿನಷ್ಟೇ ತೀಕ್ಷ್ಣವಾಗಿ ತಿಮ್ಮಯ್ಯನವರ ಈ ಅನುಭವ ಕಥನ ಓದುಗನನ್ನು ತಲ್ಲಣಗೊಳಿಸುತ್ತದೆ.

ಅನುಭವ ಕಥನಕ್ಕು ಆತ್ಮಕಥನಕ್ಕು ವ್ಯತ್ಯಾಸವಿದೆ. ಅನುಭವ ಕಥನಗಳು ಆಯಾ ಕಾಲಘಟ್ಟದ ವಿವರಗಳನ್ನು ಒದಗಿಸುತ್ತವುದಲ್ಲದೆ ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನವನ್ನು ಭಾಗಶಃ ಪ್ರಸ್ತುತಪಡಿಸಿದರೆ ಆತ್ಮಕಥನಗಳು ಹಸಿಹಸಿಯಾಗಿ ಇದ್ದದ್ದು ಇದ್ದ ಹಾಗೆ ತನ್ನನ್ನು ತಾನು ಸಮಾಜದೆದುರು ಬೆತ್ತಲಾಗಿಸಿಕೊಂಡ ಪ್ರಾಮಾಣಿಕ ದಾಖಲು. ಅದು 'ನನ್ನ ಜೀವನ ತೆರೆದ ಪುಸ್ತಕ ಇದ್ದ ಹಾಗೆ' ಅಂತಾರಲ್ಲ ಆತರದ ಪರಿಪೂರ್ಣತೆ. ಕುವೆಂಪು, ಲಂಕೇಶ್, ಅನಂತಮೂರ್ತಿ, ಕಾರ್ನಾಡ್, ಕಾರಂತ ತರಹದ ಅನೇಕರ ಆತ್ಮಕಥನಗಳೂ ಇವೆ. ಆದರೆ ಮಹಾತ್ಮ ಗಾಂಧೀಜಿ ಅವರ ಆತ್ಮಕಥನ 'ನನ್ನ ಸತ್ಯಾನ್ವೇಷಣೆ' ಬೆಂಕಿಕೆಂಡದಿಂದ ಎದ್ದು ಬಂದ ಕಾದ ಕಬ್ಬಿಣದ ಸಲಾಕೆಯಂತಿದೆ. ಸುಡುವ ಕೆಂಡದೊಳಗೆ ಸತ್ಯದ ಠೇಂಕಾರದಂತಿದೆ. ಇದು ಓದುಗನನ್ನು ಬಿಟ್ಟೂ ಬಿಡದೆ ಸುಡುತ್ತದೆ. ಕಾಡುತ್ತದೆ. ಇದು ಅವರೇ ಬರೆದುಕೊಂಡ ಆತ್ಮಕಥೆ. ಒಂದು ಆತ್ಮಕಥೆ ಹೇಗಿರಬೇಕು ಎಂಬುದಕ್ಕೆ ಗಾಂಧಿಯ 'ನನ್ನ ಸತ್ಯಾನ್ವೇಷಣೆ" ಮಾದರಿಯಾಗಿದೆ.

ಪತ್ರಕರ್ತ ಗಂಗಾಧರ ಕುಷ್ಠಗಿ ನಿರೂಪಣೆಯ ಸಿ.ಹೆಚ್.ಹನುಮಂತರಾಯರ 'ವಕೀಲರೊಬ್ಬರ ವಗೈರೆಗಳು' ಎಂಬುದೊಂದು ಅನುಭವ ಕಥನವಿದೆ. ಇದು ಲಂಕೇಶ್ ಪತ್ರಿಕೆಯಲ್ಲಿ ನಿರಂತರವಾಗಿ ಸುಮಾರು ಎರಡು ವರ್ಷ ಪ್ರಕಟವಾಯ್ತು. ಈ ಕಥನ ಓದ್ತಾ ಓದ್ತಾ ಪ್ರತೀವಾರ ಪತ್ರಿಕೆಗಾಗಿ ಕಾಯುವಂತೆ ಮಾಡುತ್ತಿತ್ತು. ಅಷ್ಟು ರೋಚಕವಾಗಿತ್ತು. ಅವರ ಕಣ್ಣ ಮುಂದೆ ನಡೆಯುವ ಘಟನಾವಳಿಗಳನ್ನು ಓದುತ್ತಿದ್ದರೆ ಬೆವರಿಳಿಯುತ್ತದೆ. ನಕ್ಸಲ್, ನಕ್ಸಲ್ಬರಿ, ನಕ್ಸಲಿಸಂ, ಗದ್ದರ್ ಹೋರಾಟ, ವಿವಿ ಪ್ರೊಫೆಷರ್ ಗಳ ಮೇಲಿನ ಕ್ರೈಂ ಅಡಿಯಲ್ಲಿ ಅವರನ್ನು ಬೂಟಲ್ಲಿ ತುಳಿಯುವ ದೃಶ್ಯ - ಈ ಎಲ್ಲ ಕಥನದ ರೋಚಕತೆ ನನ್ನನ್ನು ತೀವ್ರವಾಗಿ ಕಾಡಿ - 'ವಕೀಲರೊಬ್ಬರ ವಗೈರೆಗಳು' ಅನುಭವ ಕಥನ ಓದ್ತಾ ಓದ್ತಾ ಮೈ ಜುಂ ಅನ್ನುತ್ತೆ. ಒಂದು ಬಿಗ್ ಆ್ಯಕ್ಷನ್ ಮೂವಿ ನೋಡ್ತ ಇದಿನೇನೊ ಅನ್ನಿಸ್ತಿದೆ' ಅಂತ ಒಂದು ಸಾಲಿನ ನನ್ನ ಅಭಿಪ್ರಾಯವನ್ನು ಪತ್ರಿಕೆಗೆ ಪತ್ರಿಸಿದ್ದೆ. 'ಲಂಕೇಶ್ ಪತ್ರಿಕೆ' ನನ್ನ ಪತ್ರದ ಅಭಿಪ್ರಾಯವನ್ನು 'ಓದುಗರ ಪತ್ರ'ದ ಕಾಲಂ ನ ಹೆಂಡಿಂಗ್ ನಲ್ಲೆ ಹಾಕಿ ನನ್ನನ್ನು ಪುಳಕಗೊಳಿಸಿತ್ತು.

ಇವತ್ತು ಗುರುಪ್ರಸಾದ್ ಕಂಟಗೆರೆ ನಿರೂಪಣೆಯ 'ಅಂಗುಲಿಮಾಲ' ಓದ್ತಾ ಓದ್ತಾ ಮೈ ಜುಂ ಅಂತು. ಮುಂದುವರಿದು ಅಂಥದ್ದೇ ಅಭಿಪ್ರಾಯ ನೆನಪಿಗೆ ಬಂತು ಎಂಬುದು ಈ ಅನುಭವ ಕಥನದ ವೈಶಿಷ್ಟ್ಯ!

ಈ 'ಅಂಗುಲಿಮಾಲ' ಕುಂದೂರನ್ನು ಕೇಂದ್ರವಾಗಿರಿಸಿಕೊಂಡು ರಚಿತವಾದ ಸಂಕ್ಷಿಪ್ತ ವಿವರಗಳುಳ್ಳ ಭಾಗಶಃ ತುಮಕೂರು ಜಿಲ್ಲೆಯ ವ್ಯಾಪ್ತಿಯೊಳಗೆ ದಸಂಸ ಹೋರಾಟದ ದಿಕ್ಕುದೆಸೆಗಳನ್ನು ತೆರೆದಿಡುವ, ಒಂದು ಬಿಗ್ ಆ್ಯಕ್ಷನ್ ಮೂವೀ ತರಹದ, ಓದುಗನ ಕಣ್ಣು ಎದೆಗೆ ನಾಟುವ ಒಂದು ಸಂಘರ್ಷಮಯ ಕಥನ ಕೃತಿ.

ತನ್ನ 'ಹಟ್ಟಿ'ಯ ಬದುಕಿನೊಂದಿಗೆ ತಳುಕು ಹಾಕಿಕೊಂಡು ಸಾಗುವ ಈ ಕಥನ ಭೂಗತ ಲೋಕದ ಬದುಕಿನೊಳಗೆ ಅಕಸ್ಮಿಕವಾಗಿ ನುಸುಳಿ ಅದರ ಒಳಸುಳಿ ಅರಿವಿಗೆ ಬಂದ ತಕ್ಷಣ ಅಚಾನಕ್ ಎಚ್ಚೆತ್ತುಕೊಂಡು ಸಮಾಜಮುಖಿ ಹೋರಾಟದತ್ತ ಮುಖ ಮಾಡುವ ಒಂದು ಟರ್ನಿಂಗ್ ಪಾಯಿಂಟ್ ಇದೆ. ಇದು ಅವರ ಬದುಕಿನ ಲೆಕ್ಕಾಚಾರವನ್ನು ಅಳೆದು ತೂಗುತ್ತದೆ.

ಮಹಾತ್ಮ ಗಾಂಧೀಜೀಗು ಮುನ್ನ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಿ ಹೋರಾಡಲು ಮನೆಯೊಳಗಿದ್ದ ಗಣೇಶನನ್ನು ಸಾರ್ವಜನಿಕವಾಗಿ ತರುತ್ತಾರೆ. ಗಣೇಶನ ಮೆರವಣಿಗೆ ತೀವ್ರ ಸ್ವರೂಪ ಪಡೆಯುತ್ತದೆ. ನಂತರ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ. ಹಾಗೆ ಭಾರತದೊಳಗಿದ್ದ ಜಾತಿಯ ವಿಷಬೇರಿನ ಮೇಲ್ವರ್ಗದವರ ವಿರುದ್ಧ ದಲಿತರನ್ನು ಒಗ್ಗೂಡಿಸಲು ಬಾಬಾಸಾಹೇಬ್ ಅಂಬೇಡ್ಕರ್ ಅನುಸರಿಸಿದ ಚೌಡಳ್ಳಿ ಕೆರೆ ಪ್ರವೇಶದ ಸ್ಪೂರ್ತಿಯ ಸೆಲೆ. ಇವಿಷ್ಟು, ಕುಂದೂರಿನ ಸುತ್ತಾಮುತ್ತಾ ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿದ್ದ ಗಣೇಶೋತ್ಸವ ಮತ್ತು ಅಲ್ಲಿನ ಕೆರೆ ಪ್ರವೇಶ ಕುಂದೂರು ತಿಮ್ಮಯ್ಯನವರ ದಸಂಸ ಹೋರಾಟದ ಭಾಗವಾಗಿ ಯಶಸ್ಸು ಕಾಣುವುದು 'ಅಂಗುಮಾಲ' ಕಥನದ ಬಹುಮುಖ್ಯ ಅಧ್ಯಾಯ.

ಕುಂದೂರು ತಿಮ್ಮಯ್ಯನವರು ಮೇಲ್ಜಾತಿಯವರಿಗೆ ಹೇಗೆ ಸಿಂಹವಾಗಿದ್ದರೆಂದರೆ ಒಂದು ಸನ್ನಿವೇಶದಲ್ಲಿ ಕೊಲೆ ಸಂಚು ನಡೆದಿರುತ್ತದೆ. ಅದು ಹೇಗಿದೆ ಎಂದರೆ ಇನ್ನೇನು ಅವರ ಮೇಲೆ ಸೈಜುಗಲ್ಲು ಎತ್ತಾಕಬೇಕು ಅಂದೇ ಅವರ ಕೊನೆಯಾಗಬೇಕಿತ್ತು. ಅಂತ ಸನ್ನಿವೇಶ ಓದುವಾಗ ಮೈ ಜುಂ ಎನ್ನುತ್ತದೆ. ಮೇಲ್ವರ್ಗದವರ ಉಪಟಳ, ಸಂಚು, ಅಧಿಕಾರಿ ವರ್ಗದ ಹಿಕ್ಮತ್ತು, ರಾಜಕೀಯ ಮಸಲತ್ತು ಇವುಗಳನ್ನು ಬಹಳ ಜಾಣ್ಮೆಯಿಂದ ಎದುರಿಸುವ ತಿಮ್ಮಯ್ಯ ತುಮಕೂರು ಜಿಲ್ಲೆಯ ದಸಂಸ ಹೋರಾಟಕ್ಕೆ ಹೊಸ ಭಾಷ್ಯ ಬರೆಯುತ್ತಾರೆ. ಅದು ವಿವಿಧ ಜಿಲ್ಲೆಗಳ ದಸಂಸ ಚಳುವಳಿಗಳ ಮೇಲೂ ಪರಿಣಾಮ ಬೀರುತ್ತದೆ.

ಹಲವು ಅಂತರ್ಜಾತಿ ಪ್ರೇಮ ಪ್ರಕರಣದ ಇತ್ಯರ್ಥದಲ್ಲಿ ತಿಮ್ಮಯ್ಯನವರ ಪಾತ್ರ ದೊಡ್ಡದು. ಮೇಲ್ವರ್ಗದ ಹೆಣ್ಣು ಮಗಳು ಜೀತದವನನ್ನು ಒಲಿಯುವ ಅಥವಾ ಅನೈತಿಕ ಸಂಬಂಧದಲ್ಲಿ ಘಟಿಸುವ ಘಟನೆಗಳು ಹಾಗು ದಲಿತರ ಭೂಮಿಯನ್ನು ಕಸಿದುಕೊಂಡು ದಬ್ಬಾಳಿಕೆ ಮಾಡುವ ಮೇಲ್ವರ್ಗದವರ ಬಲವನ್ನು ಕಾನೂನಾತ್ಮಕವಾಗಿಯೇ ನಿವಾಳಿಸುವಲ್ಲಿ ನಿಪುಣ.

ಹೋರಾಟವೆಂದರೆ ಬರೀ ಲೀಡರ್ ಆಗೊದಲ್ಲ. ಎಷ್ಟೋ ವಿಚಾರಗಳು ಆಳುವ ವರ್ಗಕ್ಕೆ ಗೊತ್ತೇ ಇರುವುದಿಲ್ಲ. ಆಳುವವರಿಗೆ ಸೂಕ್ಷ್ಮತೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಎಸ್ಸಿಎಸ್ಟಿಗೆ ಬೋರ‌್ವೆಲ್ ವಿಚಾರ. ಆಗ ಬೋರ್ ಕೊರೆಸಲು, ಅದು ಅಪ್ರೂವಲ್ ಆಗಲು ಕೆಲವು ನಿಯಮಗಳಿದ್ದವು. ಈ ನಿಯಮಗಳಿಂದ ದಲಿತರು ಸೌಲಭ್ಯ ವಂಚಿತರಾಗುತ್ತಿದ್ದರು. ಒಂದು ಬೋರ್ ವೆಲ್ ಕೊರೆಸಲು ಇಂತಿಷ್ಟು ಅಡಿ ದೂರವಿರಬೇಕು. ದಲಿತರು ಯಾರೇ ಅರ್ಜಿ ಹಾಕಿದರು ಪಕ್ಕದ ಮೇಲ್ಜಾತಿ ಹೊಲದಲ್ಲಿ ಬೋರ್ ಇದೆ. ಇದರಿಂದ ಅಡಿ ಅಂತರದ ನಿಯಮದ ಕಾರಣ ಸಿಗದಾಗಿರುತ್ತಿತ್ತು. ಇದನ್ನು ಎಸ್ಸಿ ಎಸ್ಟಿ ಛೇರ್ಮನ್ ಕೆ.ಬಿ. ಶಾಣಪ್ಪನವರಿಗೆ ವಿವರಿಸಿದಾಗ ಸರ್ಕಾರ ಮುತುವರ್ಜಿ ವಹಿಸಿ ಯೋಜನೆಯ ನಿಯಮಾವಳಿಯನ್ನೆ ಬದಲಿಸುತ್ತದೆ. ಇವರ ಒಂದು ಸಮಯೋಚಿತ ಮಾತು ಇಡೀ ರಾಜ್ಯಕ್ಕೇ ಅನ್ವಯ ಆಗುವಂತೆ ಮಾಡಿದ್ದು ತಿಮ್ಮಯ್ಯನವರ ವಿವೇಕ. ಇಂಥ ವಿವೇಕ ವ್ಯವಸ್ಥೆಯನ್ನು ಎಚ್ಚರಿಸುವುದಲ್ಲದೆ ಬಹುಕಾಲ ಉಳಿಯುವಂತ ಹೋರಾಟಗಳು ನಡೆಯಬೇಕಿದೆ.

'ಅಂಗುಲಿಮಾಲ' ಎಂಬ ಆತ್ಮಕಥನ ಈಗಾಗಲೇ ಹಲವು ಕವಲುಗಳಾಗಿ ವಿಘಟನೆಗೊಂಡು ಊರಿಗೊಬ್ಬ ಕೇರಿಗೊಬ್ಬ ಗಲ್ಲಿಗೊಬ್ಬ ಲೀಡರ್ ಹುಟ್ಟಿಕೊಂಡು ದಲಿತರನ್ನು, ಅವರ ಆಶಯಗಳನ್ನು, ಕನಸುಗಳನ್ನು ದಿಕ್ಕಾಪಾಲು ಮಾಡಿರುವ ಇವತ್ತಿನ ವಿಘಟಿತ ದಸಂಸಕ್ಕೆ ಒಂದು ಚಿಕಿತ್ಸಕ ಕೃತಿಯಾಗಿದೆ. ಹಾಗೆ ಇವತ್ತಿನ "ಸ್ವಯಂ ಘೋಷಿತ ದಸಂಸ ಲೀಡರ್" ಗಳು ಓದಲೇಬೇಕಾದ ಆತ್ಮಕಥನ ಇದಾಗಿದೆ. ಹಾಗೆ ಹೋರಾಟದ ಅನೇಕ ದಟ್ಟ ವಿವರಗಳು ಈ ಆತ್ಮಕಥನದುದ್ದಕ್ಕು ಇವೆ. ಈ ಕಾರಣಕ್ಕೆ 'ಅಂಗುಲಿಮಾಲ' ಪ್ರಸ್ತುತ ಜನಮುಖಿ ಹೋರಾಟದ ಮನಸ್ಸುಗಳಿಗೆ ಒಂದು ಮಹತ್ವದ ಕೃತಿಯಾಗಿದೆ.

ಈ ಆತ್ಮಕಥನದೊಳಗೆ ತಿಮ್ಮಯ್ಯನವರಿಗೆ ಬೆನ್ನೆಲುಬಾಗಿ ಬಿಕೆ, ಕೇಬಿ, ದೇವನೂರು, ತರಹದ ಅನೇಕ ಮನಸ್ಸುಗಳು ದಸಂಸ ಕಟ್ಟಲು ನೀರೆರೆಯುತ್ತವೆ. ಹೊಲೆಯ ಮಾದಿಗರ ನಡುವೆ ವಿವಾಹವೇರ್ಪಡುತ್ತವೆ. ಅದಕ್ಕೆ ಕೆಬಿ ವಿವಾಹವೇ ಅಡಿಪಾಯವಾಗುತ್ತದೆ. ಕುತೂಹಲಕಾರಿಯಾದ ಇಂಥ ನೂರಾರು ಸನ್ನಿವೇಶಗಳು ಪ್ರಕರಣಗಳು ಕಥನದುದ್ದಕ್ಕು ಗಮನ ಸೆಳೆಯುತ್ತವೆ.

ಈ ಆತ್ಮಕಥನದ ನಿರೂಪಣಾ ಭಾಷೆ ಸೊಗಸಾಗಿದೆ. ಒಬ್ಬ ಲೇಖಕ ತನ್ನದಲ್ಲದ ಅನುಭವವನ್ನು ತನ್ನದೇ ಎನ್ನುವಂತೆ ಕಟ್ಟಿಕೊಡುವ ಸನ್ನಿವೇಶದ ಚಿತ್ರಣ ಕಲಾತ್ಮಕವಾಗಿದೆ. ಈ ಕಲಾತ್ಮಕ ಭಾಷಾ ಸೊಗಡು ಇಡೀ ಕಥನವನ್ನು ಹೊತ್ತು ತಿರುಗುತ್ತದೆ. ಬದುಕಿನ ಬಹುಮುಖ್ಯ ಘಟ್ಟವನ್ನು ತಲುಪಿರುವ ಕುಂದೂರು ತಿಮ್ಮಯ್ಯ, ಪ್ರಧಾನ ಕುಂದೂರು ಸೇರಿದಂತೆ ಸುತ್ತಮುತ್ತಲ ಊರುಕೇರಿಗಳು ಮತ್ತು ತುಮಕೂರು ಜಿಲ್ಲಾ ದಸಂಸ ಹೋರಾಟದ ಹಾನೆಸ್ಟ್ ಲೆಜೆಂಡ್.

ಈ ಕಥನದ ಆರಂಭ ಮತ್ತು ಅಂತ್ಯದ ಪುಟಗಳಲ್ಲಿ ಕುಂದೂರು ತಿಮ್ಮಯ್ಯನವರ ಹೋರಾಟ ಮತ್ತು ವ್ಯಕ್ತಿಗತವಾದ ಹಲವು ಮಹತ್ವದ ಚಿತ್ರಪಟಗಳಿವೆ. ಇವು ಆ ಕಾಲಘಟ್ಟದ ಒಟ್ಟು ಚಿತ್ರಣವನ್ನು ನೆನಪಿಸುತ್ತವೆ.

MORE FEATURES

ಹೆಣ್ಣಿಗೆ ಭಿನ್ನ ದೇಹವಿರುವುದರಿಂದಲೇ ಅವಳ ಅನುಭವ ಲೋಕವೂ ಭಿನ್ನ ಮುನ್ನುಡಿ

01-04-2025 ಬೆಂಗಳೂರು

"ಸ್ತ್ರೀ ಅಸ್ಮಿತೆಯ ಸಂಕಥನವನ್ನು ಆಧುನಿಕ ಕನ್ನಡ ಮಹಿಳಾ ಕಥಾ ಸಾಹಿತ್ಯವನ್ನು ಅನುಲಕ್ಷಿಸಿ ಇಲ್ಲಿ ಕಟ್ಟಲಾಗಿದೆ. ಕಥ...

ಎಲ್ಲವನ್ನೂ ಓದಬೇಕು, ಏನು ಬೇಕು ಅದನ್ನು ತೆಗೆದುಕೊಳ್ಳಬೇಕು

01-04-2025 ಬೆಂಗಳೂರು

“ಒಬ್ಬ ಲೇಖಕನ ಸಮಗ್ರ ಸಾಹಿತ್ಯ ಒಂದೆಡೆ ಲಭ್ಯವಿರುವುದು ಮತ್ತು ಬೇಕಿದ್ದನ್ನು ಬೇಕಾದಾಗ ಓದಬಹುದಾದುದು ಸಮಗ್ರದಲ್ಲ...

ಶಾರೀರಿಕ ಕಾಮದ ಬಗ್ಗೆ ಒಂದು ಸಾಲು ಇಲ್ಲದ ಕೃತಿ

01-04-2025 ಬೆಂಗಳೂರು

“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು...