ಭಕ್ತಿಯ ನೆಪದಲ್ಲಿ

Author : ಲಕ್ಷ್ಮೀಶ ತೋಳ್ಪಾಡಿ

Pages 108

₹ 100.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಅಧ್ಯಾತ್ಮದ ನೆಲೆಯಲ್ಲಿ ಇಹದ ಗೊಡವೆಗಳನ್ನು ಪರಿಶೀಲಿಸುವ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಭಕ್ತಿಯ ಕುರಿತು ಹರಿಸಿದ ಚಿಂತನೆಗಳ ಮೊತ್ತ ಈ ಕೃತಿ. ಯಾವ ಸಂಬಂಧವನ್ನೂ ಕೆಡಿಸದೇ ಉಳಿಸುತ್ತಾ ಬೆಳೆಸುತ್ತಾ ಹೋಗುವುದೇ ಭಕ್ತಿ ಎನ್ನುವ ಅವರ ಮಾತು ಬಹಳ ವಿಶಿಷ್ಟವಾದುದು. ಅಮೆರಿಕ ಪ್ರವಾಸದ ವಿವರಗಳು, ರಾಮಾನುಜ, ಕನಕದಾಸರ ಬಗೆಗಿನ ಭಿನ್ನ ವಿವರಗಳಿಂದ ಕಂಗೊಳಿಸುತ್ತದೆ ಗ್ರಂಥ. 

....ಬದುಕಿನಲ್ಲಿ ಅಗಲುವಿಕೆ ಅನಿವಾರ್ಯವೆನ್ನಬಹುದು. ಅಥವಾ ಬದುಕೆಂದರೆ ಆಗಲಿ ಎನ್ನಬಹುದು. ಹೊಕ್ಕುಳ ಬಳ್ಳಿ ತುಂಡರಿಸಿ ಮಗು ಬೇರ್ಪಡಲೇಬೇಕು. ಬೇರ್ಪಟ್ಟು ತನ್ನ ಪ್ರತ್ಯೇಕ ಅಸ್ತಿತ್ವವನ್ನೂ, ಅದರ ಯಾತನೆಯನ್ನೂ ಅನುಭವಿಸಲೇಬೇಕು. ಯಾತನೆಯ ಕಾರಣದಿಂದಲೇ ಈ ಅನುಭವವು ಸಂದೇಹಾಸ್ಪದವಾಗಿಯೂ ಪ್ರಶ್ನಾರ್ಹವಾಗಿಯೂ, ಜಿಜ್ಞಾಸೆಗೆ ಯೋಗ್ಯವಾಗಿಯೂ ಕಾಣಿಸುವುದು, ಅಗಲಿಕೆಯ ನೋವು ತೀವ್ರವಾದಂತೆ ತಾನು ಯಾವುದರಿಂದ ಆಗಲಿ ಬಂದೆನೋ ಅದರ ನೆನಪೂ ಅಷ್ಟೇ ತೀವ್ರವಾಗಿ ಮೇಲೇಳುವುದು, ಇದೊಂದು ಸೋಜಿಗ! ಅಗಲಿಕೆಯ ನೋವು ಆಗಲಿ ಬಂದುದರ ನೆನಪನ್ನು ಉದ್ದುದ್ದಗೊಳಿಸುವ ಸೋಜಿಗ! ನಮ್ಮೊಳಗೇ ನಡೆಯುವ ಈ ಸೋಜಿಗವನ್ನು 'ಭಕ್ತಿ' ಎನ್ನುವೆವು’ ಎನ್ನುತ್ತಾರೆ ಲಕ್ಷ್ಮೀಶ ತೋಳ್ವಾಡಿ

About the Author

ಲಕ್ಷ್ಮೀಶ ತೋಳ್ಪಾಡಿ

ಲಕ್ಷ್ಮೀಶ ತೋಳ್ವಾಡಿ ಕೃಷಿಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನ, ಉತ್ತುಬಿತ್ತು ಗೇಯುವ ಕಾಯಕ. ಆಡುಭಾಷೆ ತುಳು. ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದರು. ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ  ಅವರ ಒಡನಾಟ ಸಿಕ್ಕಿತ್ತು. ಭಕ್ತಿ-ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ತೀವ್ರಗೊಂಡು ಶಿವಮೊಗ್ಗಕ್ಕೆ ತೆರಳಿದಾಗ ಅಲ್ಲಿ ಸತ್ಯಕಾಮರ ಒಡನಾಟ ದಕ್ಕಿತು. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು ಕೆಲಕಾಲ ಇವರನ್ನು ಕೈಹಿಡಿದು ನಡೆಸಿತು. ಬುದ್ಧ, ಗಾಂಧಿಯವರ ಮಧ್ಯಮ ...

READ MORE

Reviews

ಲಕ್ಷ್ಮೀಶ ತೋಳ್ಳಾಡಿಯವರ ಭಕ್ತಿ ಮೀಮಾಂಸೆ

ಮಹಾಯುದ್ಧಕ್ಕೆ ಮುನ್ನ ಮತ್ತು ಭಕ್ತಿಯ ನೆಪದಲ್ಲಿ - ಲಕ್ಷ್ಮೀಶ ತೋಳ್ಪಾಡಿಯವರ ಎರಡು ಪುಸ್ತಕಗಳು, 'ಮಹಾಯುದ್ದಕ್ಕೆ ಮುನ್ನ' ಮಹಾಯುದ್ದಕ್ಕೆ ಮುನ್ನ 42 ಪುಟಗಳ ಪುಟ್ಟಕೃತಿ. 1980ರಲ್ಲಿ 'ಭಕ್ತಿಯ ನೆಪದಲ್ಲಿ' 91 ಪುಟಗಳ ಇನ್ನೊಂದು ಪುಸ್ತಕ. (2017)ಈ ಪುಸ್ತಕದಲ್ಲಿ ಭಕ್ತಿ ಮೀಮಾಂಸೆಯ ಜೊತೆಗೆ ತೋಳ್ಪಾಡಿಯವರ ಅಮೇರಿಕ ಪ್ರವಾಸದ ನೆನಪುಗಳ ನಿರೂಪಣೆಯೂ ಒಗ್ಗೂಡಿದೆ. ಈ ಎರಡೂ ಪುಸ್ತಕಗಳನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ.  ಎರಡೂ ಕೃತಿಗಳು ಒಂದರ್ಥದಲ್ಲಿ ಒಂದೇ ಕೃತಿಯಾಗಿದೆ. ಯಾಕೆಂದರೆ ಈ ಎರಡೂ ಕೃತಿಗಳ ತಾತ್ವಿಕ ಭಿತ್ತಿ ಒಂದೇ ಆಗಿದ್ದು ಅದು ಭಕ್ತಿಯಾಗಿದೆ. ಹಾಗಾಗಿ ಇದನ್ನು ಪ್ರತ್ಯ-ಪ್ರತ್ಯೇಕವಾಗಿ ನೋಡದೆ ತೋಳ್ಪಾಡಿಯವರ ಇಂಗಿತದಲ್ಲೇ ಹೇಳುವುದಾದರೆ ಅದ್ವೈತವಾಗಿಯೇ ನೋಡಿ, ಇದನ್ನು ಪರಿಚಯಿಸುವ ಪ್ರಯತ್ನವನ್ನು ಈ ಪುಟ್ಟಟಿಪ್ಪಣಿಯಲ್ಲಿ ಮಾಡಲಾಗಿದೆ. 

ಜನಪದ ಕಥೆಗಳಲ್ಲಿ ಬರುವ ರಾಕ್ಷಸನ ಪ್ರಾಣ ಏಳು ಸಮುದ್ರ ದಾಟಿ ಏಳು ಉಪ್ಪರಿಗೆಯ ಮೇಲಿರುವ ಪಂಚವರ್ಣದ ಗಿಳಿಯ ಕೊಕ್ಕಿನಲ್ಲಿರುವಂತೆ ತೋಳ್ಳಾಡಿಯವರ ಮಾತು ಮತ್ತು ಬರಹಗಳ ಪ್ರಾಣಶಕ್ತಿಯಿರುವುದು ನಾವು ಸೀದಾ-ಸಾದಾ ಎಂದು ಭಾವಿಸಿದ ಪದಗಳನ್ನು, ಘಟನೆಗಳನ್ನು ಒಡೆದು ಹೊಸದಾಗಿ ತೋರಿಸಿ ಅವುಗಳಲ್ಲಿರುವ ಅನೇಕ ಅರ್ಥ ಸಾಧ್ಯತೆಗಳನ್ನು ತಟ್ಟನೆ ಹೊಳೆಯಿಸುವುದರಲ್ಲಿ. ಇದು ಸಮಕಾಲೀನ ಕನ್ನಡ ವಾಙ್ಮಯದಲ್ಲಿ ಲಕ್ಷ್ಮೀಶರಿಗೇ ಒಲಿದಿರುವ ವಿಶಿಷ್ಟವಾದ ಶಕ್ತಿ, ಅಂದರೆ ತೋಳ್ಳಾಡಿಯವರು ಓದುಗನಲ್ಲೇ ಹೊಸ ಪ್ರಶ್ನೆಗಳು ಸ್ಫೋಟಗೊಳ್ಳುವಂತೆಯೂ ಹಾಗೂ ಹೊಸ ಅರ್ಥಗಳು ಸ್ಪುರಣೆಗೊಳ್ಳುವಂತೆಯೂ ಮಾಡಬಲ್ಲರು. ಈ ಮಾತಿಗೆ ಸೂಕ್ತವಾದ ನಿದರ್ಶನ 'ಭಕ್ತಿಯ ನೆಪದಲ್ಲಿ ಪುಸ್ತಿಕೆಯಲ್ಲಿ ಬರುವ 'ತಾಳಮದ್ದಲೆ- ಭಕ್ತಿಯ ಅನುಸಂಧಾನ ಎಂಬ ಲೇಖನದಲ್ಲೇ ಒದಗುತ್ತದೆ. ತಾಳಮದ್ದಲೆಯ ಬಗ್ಗೆ ಬರೆಯುತ್ತ ತೋಳಾಡಿಯವರು ಸೇಡಿಯಾಪು ಅವರು ಈ ಕಲೆಯನ್ನು ವಿವರಿಸಲು ಬಳಸಿದ ‘ಲುಪ್ತ ನಾಟ್ಯ' ಎಂಬ ವಿಮರ್ಶೆಯ ಮಾತನ್ನು ನೆನಪು ಮಾಡಿಕೊಳ್ಳುತ್ತಾರೆ. ಜೊತೆಗೆ ಈ ಲುಪ್ತ' ಎಂಬ ಒಂದು ಪದದಿಂದ ಭಾರತೀಯ ಯುಗಧರ್ಮದ ಕಲನೆಗಳಿಗೆ ಜಿಗಿಯುತ್ತಾರೆ. ಕೃತಯುಗದಲ್ಲಿ ಧರ್ಮ ನಾಲ್ಲೂ ಪಾದಗಳನ್ನು ಆಧರಿಸಿ ನಿಂತಿರುವುದನ್ನು 'ನಿರುಮ್ಮಳ ಸ್ಥಿತಿ'ಎಂದು ಕರೆಯುವ ಲಕ್ಷೀಶರು ತ್ರೇತಾಯುಗದಲ್ಲಿ ಒಂದು ಪಾದ ಕಳಚಿಹೋಗುವುದನ್ನು ಆಳವಾಗಿ ಧ್ಯಾನಿಸಿ ಕಳಚಿಕೊಳ್ಳುವುದೇ (ಲುಪ್ತವಾಗುವುದೆ) ಧರ್ಮವಲ್ಲವೇ ಎಂದು ಪರಿಭಾವಿಸಿ ಮರ್ಮಬೇಧಕವಾದ ಪ್ರಶ್ನೆಯನ್ನು ಎಸೆಯುತ್ತಾರೆ. ದ್ವಾಪರದಲ್ಲಿ ಎರಡು ಪಾದಗಳು ಕಳಚುವುದನ್ನು ದ್ವಂದ್ವ ಧರ್ಮ-ಸಂಕಟ, ಸಂಕಟ; ವಿದ್ರೋಹ ಎಂದು ಕಾರಣೀಕದ ಮಾತುಗಳಂತೆ ನುಡಿಯುತ್ತ ಇದು ಎರಡು ಕಾಲಲ್ಲಿ ನಡೆಯುತ್ತ ತಾನು ಎದ್ದು ನಿಂತವನೆನ್ನುವ ಮನುಷ್ಯನ ಭ್ರಮೆಯ ಪಾಡೂ ಹೌದು ಎಂದೆನ್ನುತ ಭಗವದ್ಗೀತೆಯಿಂದ ತೊಡಗಿ ಮನುಷ್ಯ ತಾನು ಸ್ವತಂತ್ರ ಎಂದು ಆಧುನಿಕತೆಯ ಕಾಲದಲ್ಲಿ ಹುಸಿ ಭಾವಿಸಿ ತಾನೇ ಒಂದು ಬೃಹತ್ ಹುಸಿಯಾಗಿರುವಲ್ಲಿಯವರೆಗೆ ತನ್ನ ಚಿಂತನೆಯ ಮಿಂಚು ಹಾಯಿಸಬಲ್ಲರು.

ಕಲಿಯುಗಕ್ಕೆ ಬರುತ್ತ ಧರ್ಮದ ಒಕಾಲು ನಡಿಗೆಯನ್ನು ವಿವರಿಸುತ್ತ ಒಂದು ಕಾಲು ಹೊಂದಿರುವ ಅಂಗಹೀನನಾಗಿರುವ ಅ-ಸಹಾಯ ಮನುಷ್ಯನಿಗೆ ಒಂದು ಊರುಗೋಲಾದರೂ ಬೇಕು. ಈ ಲೋಕದಲ್ಲಿ ಅಂತಹ ಒಂದು ನೆರವು 'ಭಕ್ತಿ' ಎಂಬ ಊರುಗೋಲು ಎಂದು ಜನರ ನಿತ್ಯದ ಬವಣೆಗೆ ತಂಪನ್ನೆರೆಯುತಾರೆ. ತೋಳಾಡಿಯವರು ಈ ಎರಡೂ ಕೃತಿಗಳಲ್ಲಿ ಕುಂತಿ ಕೃಷ್ಣನನ್ನು ಸ್ತುತಿಸುವ ಘಟನೆಯನ್ನು ಉದಾಹರಿಸುತ್ತ 'ಸಜ್ಜನರೆಂದರೆ ಭಗವಂತನ ಮಾತಿಗೆ ಒಂದು ರೂಪಾಂತರವನ್ನು ಒದಗಿಸುವವರು' ಎಂದೆನ್ನುತ್ತಾರೆ. ಇದೇ ಮಾತನ್ನು ಲಕ್ಷ್ಮೀಶ ತೋಳ್ಪಾಡಿಯವರನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಮೀಮಾಂಸಕರೆಂದರೆ ಲೋಕೋತ್ತರ ಘಟನೆಗಳಿಗೂ ಲೌಕಿಕಾಲೌಕಿಕ ವಿದ್ಯಮಾನಗಳಿಗೂ ಸಂಬಂಧವನ್ನೂ, ಅರ್ಥವಿದೂರವನೂ  ಒದಗಿಸುವವರು ಎಂದು ನಾವು ಭಕ್ತಿಯ ನೆಪದಲ್ಲಿ ಭಾವಿಸಬಹುದೇ.? ಈ ಅವಳಿ ಕೃತಿಗಳಲ್ಲಿ ಲಕ್ಷ್ಮಿಶರು ಮಾಡುವ ಚಿಂತನೆಯನ್ನು ಒಪ್ಪುವವರೂ ಇರಬಹುದು. ಒಪ್ಪದಿರುವವರೂ ಇರಬಹುದು. ಆದರೆ ಅವರು ಚಿಂತನೆಯನ್ನು ನಡೆಸುವ ರೀತಿಯನ್ನು ಯಾರೂ ನಿರಾಕರಿಸಲಾರರು. ದಿನನಿತ್ಯದ ಸಂಗತಿಗಳಿಗೆ ಫಿಲಾಸಫಿಕಲ್ ಸ್ಪರ್ಷ ಕೊಡುವುದೆಂದರೆ ಇದೇ ಅಲ್ಲವೇ..? ಲಕ್ಷ್ಮೀಶ ತೋಳ್ಪಾಡಿಯವರ ಈ ಪುಸ್ತಕಗಳಲ್ಲಿ ಮತ್ತೆ ಮತ್ತೆ ಕಂಡು ಬರುವ ಕೆಲವು ತತ್ವಜ್ಞಾನೀಯ ಝಲಕ್‌ಗಳನ್ನು ಇಲ್ಲಿ ಮರುಮಂಡಿಸಿದ್ದೇನೆ. ಯಾಕೆಂದರೆ ತಮ್ಮ ಕೃತಿಗಳಲ್ಲಿ ಇಂತಹ ಅರ್ಥ ಚಮತ್ಕೃತಿಗಳನ್ನು ಮಾಡುವುದರಲ್ಲಿ ಅವರು ಪಾರಂಗತರು ಎಂಬ ಕಾರಣಕ್ಕಾಗಿ, ಕನ್ನಡದ 'ಹೊಳೆಯುವುದು' ಎಂಬ ಪದ ನಿಜಕ್ಕೂ ಫಳಫಳ ಹೊಳೆಯುವುದು ತೋಳಾಡಿಯವರ ಇಂತಹ ಕಾಣೆಗಳಿಂದ. ಕರ್ಣನ ಬಗ್ಗೆ ಬರೆಯುತ್ತ ಲಕ್ಷ್ಮೀಶ ತೋಳ್ಳಾಡಿಯವರು ನಿಡುಸುಯ್ಯುವುದು ಹೀಗೆ, “ಸೂರ್ಯಕಾಣದಿದ್ದರೆ, ಮೋಡ ಮುಸುಕಿದ್ದರೆ 'ದುರ್ದಿನ' ಎನ್ನುತ್ತಾರೆ. ಸೂರ್ಯ ಪ್ರಖರವಾಗಿ ಕಂಡ ದಿನವೇ ತಾಯಿ-ಮಗುವಿಗೆ ದುರ್ದಿನವಾಗಬೇಕೆ.? ಕರ್ಣನ ಬಳಿಗೆ ಕುಂತಿ ಕೃಷ್ಣನ ಸೂಚನೆಯಂತೆ ಬಂದು 'ತೊಟ್ಟಂಬನ್ನು ಮರಳಿ ತೊಡದಿರು ಮಗನೇ, ಇಟ್ಟಗುರಿಯನ್ನು ಮತ್ತೊಮ್ಮೆ ಬದಲಿಸದಿರು' ಎಂಬ ಬೇಡಿಕೆಗಳನ್ನು ಮುಂದಿಡುವ ಸಂದರ್ಭದಲ್ಲಿ ತೋಳ್ಪಾಡಿಯವರು ಹೇಳುವ “ನೀನು ನನ್ನ ಬಿಟ್ಟುಕೊಟ್ಟಲ್ಲಿಂದ, ಬಿಟ್ಟುಕೊಡುವುದು ನನಗೆ ಬೆನ್ನಿಗಂಟಿದೆ ತಾಯೇ” ಎಂಬ ಮಾತು ಹೃದಯವನ್ನು ಹಿಂಡಿ ಬಿಡುತ್ತದೆ.

ಈ ಮಾತುಗಳನ್ನು ವ್ಯಾಸರ ಕರ್ಣ, ಪಂಪನ ಕರ್ಣ ಹೇಳಿದ್ದಾನೋ ಇಲ್ಲವೋ, ತೋಳ್ಳಾಡಿಯವರ ಕರ್ಣನಂತೂ ಇದನ್ನು ಹೇಳಿಬಿಟ್ಟು ಓದುಗರ ಎದೆಭಾರವನ್ನು ಇನ್ನಷ್ಟು ಹೆಚ್ಚಿಸುತ್ತಾನೆ. ಜಗತ್ತಿನ ಕ್ಲಾಸಿಕ್‌ಗಳ ಇತಿಹಾಸದಲ್ಲಿ ಪ್ರಾಯಃ ಭರತಖಂಡದ ರಾಮಾಯಣ ಮತ್ತು ಮಹಾಭಾರತಗಳೆಂಬ ಕಾವ್ಯಗಳು ದೇವರನ್ನು ಮಾನವೀಕರಣಗೊಳಿಸಿದುದನ್ನು ತೋಳ್ಪಾಡಿಯವರು ಮಂಡಿಸುವ ಪರಿ ಅನನ್ಯವಾಗಿದೆ. “ವಾಸ-ವಾಲ್ಮೀಕಿ, ಬದುಕಿನ ಜಟಿಲ ನಡೆಗಳನ್ನು ಚಿತ್ರಿಸಿ, ಅದರ ನಡುವೆ ದೇವರನು. ತಂದು ನಿಲ್ಲಿಸಿದ್ದಾರೆ. 'ಅವತಾರ'ವೆನ್ನಿಸಿದರೂ ದೇವರು ಮನುಷ್ಯನಾಗಬೇಕು. ಈ ಭವದಲ್ಲಿ; ಮನುಷ್ಯ ಪಡುವ ಎಲ್ಲ ಪರಿಭವಗಳನ್ನೂ ಅನುಭವಿಸಬೇಕು. ತನ್ನನ್ನು ಸ್ತುತಿ ಮಾಡುವ ದೇವತೆಗಳ ಮುಂದೆ, 'ನಾನು ರಾಮ; ನಾನು ಮನುಷ್ಯ: ನಾನು ದಶರಥನ ಮಗ' ಎನ್ನುವಷ್ಟರ ಮಟ್ಟಿಗೆ ಮನುಷ್ಯನಾಗಬೇಕು. ಆದರೂ ಅವನು ದೇವರು. ಅವನು ಕೇವಲ ಮನುಷ್ಯನಲ್ಲ. ಅವನಿಗೆ ಇನ್ನೊಂದು ಮುಖ ಇದ್ದೇ ಇದೆ. ಇವೆಲ್ಲವನ್ನೂ ನೋಡಿದರೆ 'ಭಕ್ತಿ' ಎಂದರೆ; ಮನುಷ್ಯನಾಗಿ ಇದೆಲ್ಲವನ್ನೂ ಅನುಭವಿಸುತ್ತಿರುವ ದೇವರ ಅವಸ್ಥೆ ಎನಿಸುತ್ತದೆ.” ಈ ಮಾತಿನ ಮೂಲಕ ತೋಳಾಡಿಯವರು ಗಹನವಾದ ಅದೈತವನ್ನು ಸರಳವಾದ ಮಾತುಗಳಲ್ಲಿ ವಿವರಿಸುತ್ತಾರೆ ಮತ್ತು ಭಕ್ತಿಯೇ ಜೀವ-ದೇವವನ್ನು ಜೋಡಿಸುವ ಸೂಕ್ಷಾ ತಿಸೂಕ್ಷ್ಮ ತಂತು ಎಂಬುದನ್ನೂ ವಿಷದೀಕರಿಸುತ್ತಾರೆ. ನಮ್ಮ ಈ ಜೀವಜಗತ್ತಿನಲ್ಲಿ ಹಲವನ್ನು ವಿವರಿಸಬಹುದು. ಇನ್ನು ಹಲವನ್ನು ಅನುಭವಿಸಬಹುದು. ಇನ್ನೂ ಹಲವನ್ನು ಅನುಭವಿಸಿ ವಿವರಿಸಲೂಬಹುದು. ಆದರೆ ತೋಳ್ಳಾಡಿಯವರ ಈ ಪುಸ್ತಕಗಳು ಮತ್ತು ಇವುಗಳ ಕೇಂದ್ರ ಸಂಗತಿಯಾಗಿರುವ 'ಭಕ್ತಿ' ಅನುಭವಿಸುವುದಕ್ಕಷ್ಟೇ ಇದೆ. ವಿವರಿಸುವುದಕ್ಕಲ್ಲ.

-ಡಾ. ನಿತ್ಯಾನಂದ ಬಿ.ಶೆಟ್ಟಿ 

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜೂನ್ 2018)

Related Books