About the Author

ವಿದ್ವಾಂಸ ವೃಷಭೇಂದ್ರ ಸ್ವಾಮಿ ಅವರು ಜನಿಸಿದ್ದು 1928ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ (ತಾ) ಎಂ.ಬಿ. ಅಯ್ಯನಹಳ್ಳಿಯಲ್ಲಿ. ಸೊನ್ನದ ಮಠದ ಮನೆತನದಲ್ಲಿ ಹುಟ್ಟಿದ ಅವರು ಕಾನಾಮಡುಗು, ಕೊಟ್ಟೂರುಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಆನಂತರ ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು. ಡಾ. ಆರ್. ಸಿ. ಹಿರೇಮಠ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದಲ್ಲಿ ’ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭುದೇವ’ ಎಂಬ ವಿಷಯದ ಮೇಲೆ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್.ಡಿ ಪಡೆದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ವೀರಶೈವ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು 1961ರಿಂದ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪಠ್ಯಪುಸ್ತಕ ನಿರ್ದೇಶಕರಾಗಿ ಮತ್ತು ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಅವರು 1989ರಲ್ಲಿ ನಿವೃತ್ತರಾದರು. ಕುವೆಂಪು ಅವರ ಪ್ರಿಯ ಶಿಷ್ಯರಲ್ಲಿ ಒಬ್ಬರಾಗಿದ್ದ ವೃಷಭೇಂದ್ರಸ್ವಾಮಿ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರು 25 ಜನವರಿ 2015 ರಂದು ಧಾರವಾಡದಲ್ಲಿ ನಿಧನರಾದರು.

ಅವರ ನಿಧನರಾದ ಸಂದರ್ಭದಲ್ಲಿ ಪತ್ರಕರ್ತ-ಲೇಖಕ ಜಗದೀಶ್ ಕೊಪ್ಪ ಅವರು ’ಕನ್ನಡ ಸಾಹಿತ್ಯ ಲೋಕ ಕಂಡ ಕೆಲವೇ ಕೆಲವು ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾದ ಡಾ.ವೃಷಭೇಂದ್ರಸ್ವಾಮಿಯವರ ಬಾಯಲ್ಲಿ, ಪಂಪ ಮಹಾಭಾರತ, ಜನ್ನನ ಯಶೋಧರ ಚರಿತೆ, ರತ್ನಾಕರ ವರ್ಣಿಯ ’ಭರತೇಶ ವೈಭವ, ಇಂತಹ ಹಳೆಗನ್ನಡ ಮಹಾಕಾವ್ಯಗಳನ್ನು ಕೇಳುವುದರಿಂದ ಆಗುತ್ತಿದ್ದ ಸಂತೋಷ ಅವರ್ಣೀಯವಾದುದು.  1984ರಲ್ಲಿ ಮಂಗಳೂರು ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ  ಕನ್ನಡ ಕಾವ್ಯ ಕಮ್ಮಟದಲ್ಲಿ  ವೃಷಭೇಂದ್ರ ಸ್ವಾಮಿಯವರು  ಮಾಡಿದ ಪಂಪನ ’ನೀಲಾಂಜನೆಯ ನೃತ್ಯ’ ಎಂಬ ಕಾವ್ಯದ ಒಂದು ಪಾಠ ಇನ್ನೂ ನನ್ನ ಸ್ಮೃತಿಯಲ್ಲಿ ಹಸಿರಾಗಿದೆ. ಅದೇ ರೀತಿ ಕಲ್ಬುರ್ಗಿಯವರ ರನ್ನನ ಗಧಾಯುದ್ಧ, ರಾಘವಾಂಕನ ಹರಿಶ್ಚಂದ್ರಕಾವ್ಯ, ಹರಿಹರನ ರಗಳೆ ಇವುಗಳನ್ನು ಕೇಳುವುದು ಕೂಡ  ಆನಂದದಾಯಕ ಸಂಗತಿ’ ಎಂದು ಬರೆದಿದ್ದರು.

ಕೊಪ್ಪ ಅವರು ತಮ್ಮ ಭೂಮಿಗೀತ ಬ್ಲಾಗಿನಲ್ಲಿ ವೃಷಭೇಂದ್ರಸ್ವಾಮಿ ಅವರನ್ನು ಕುರಿತು ’ಸದಾ ಮಾತು ಮತ್ತು ಎದೆ ತುಂಬಾ ಉತ್ಕಟ ಪ್ರೀತಿಯನ್ನು ತುಂಬಿಕೊಂಡಿದ್ದ ವೃಷಭೇಂದ್ರಸ್ವಾಮಿಯವರದು, ಮರಗಳು ಮತ್ತು ಕಲ್ಲುಗಳನ್ನೂ ಸಹ ಮಾತಿಗೆಳೆಯುವ ಪ್ರವೃತ್ತಿ. ಸಂಜೆಯ ವೇಳೆ ಎಡಗೈಲಿ ಪುಟ್ಟ ರೇಡಿಯೋ ಹಿಡಿದುಕೊಂಡು ವಾಕ್ ಮಾಡುತ್ತಾ, ರಸ್ತೆಯಲ್ಲಿ ಎದುರಾಗುವ ಪುಟ್ಟ ಮಕ್ಕಳನ್ನು ಮಾತನಾಡಿಸುತ್ತಾ, ಬಲಗೈಯನ್ನು ಪ್ಯಾಂಟಿನ ಜೋಬಿನೊಳಗೆ ತೂರಿಸಿ ಚಾಕಲೇಟ್ ನೀಡುತ್ತಾ ಹೋಗುವುದು ಅವರ ದಿನ ನಿತ್ಯದ ಕಾಯಕವಾಗಿತ್ತು. ಹಾಗಾಗಿ ಅವರು ಧಾರವಾಡದ ಕಲ್ಯಾಣಗರ ಬಡಾವಣೆಯ ಮಕ್ಖಳ ಪಾಲಿಗೆ ಚಾಕಲೇಟ್ ತಾತ, ರೇಡಿಯೋ ಅಜ್ಜ ಎಲ್ಲಾ ಆಗಿದ್ದರು’ ಎಂದು ಮೆಲುಕು ಹಾಕಿದ್ದರು.
ಕುವೆಂಪು, ನನ್ನ ದಿನಚರಿಯ ಕನ್ನಡಿಯಲ್ಲಿ, ತರಗತಿಯಲ್ಲಿ ಕುವೆಂಪು, ಬರೆಯುವ ದಾರಿ, ತೋಂಟದ ಸಿದ್ಧಲಿಂಗೇಶ್ವರ ಚರಿತ್ರೆ, ತ್ರಿವಿಧ ಕ್ರಾಂತಿಮೂರ್ತಿ ಸೇರಿದಂತೆ 18ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. ಕುವೆಂಪು ವಿಶ್ವ ವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್‌ಗೆ ನೀಡಿ ಗೌರವಿಸಿತ್ತು.

ಎಸ್.ಎಂ. ವೃಷಭೇಂದ್ರಸ್ವಾಮಿ