ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಣ್ಯ ಕೊಡುಗೆ ನೀಡಿರುವ ವರದರಾಜರು ಹುಟ್ಟಿದ್ದು ( ಜನನ: 12-08-1917) ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳದಲ್ಲಿ. ತಂದೆ ರಾಜೇರಾಯರು, ತಾಯಿ ಗೋದಾವರಿಬಾಯಿ. ರಂ.ಶ್ರೀ. ಮುಗಳಿಯವರು ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು. ಪ್ರಾರಂಭಿಕ ಶಿಕ್ಷಣ ಮುದ್ದೇ ಬಿಹಾಳದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಗದಗದಲ್ಲಿ ಪೂರೈಸಿದರು. ಆನಂತರ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜು ಸೇರಿದರು. 1943ರಲ್ಲಿ ಬಿ.ಎ. (ಆನರ್ಸ್) ಪದವಿ ನಂತರದಲ್ಲಿ ಎಂ.ಎ. ಹಾಗೂ ಬಿ.ಟಿ. ಪದವಿ ಪಡೆದರು.
1969ರಲ್ಲಿ ‘ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು. ಬಿ.ಎ. (ಆನರ್ಸ್) ಪದವಿಯ ನಂತರ ಕೆಲಕಾಲ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಎಂ.ಎ. ಪದವಿ ನಂತರ ಹಾವೇರಿಯಲ್ಲಿ ಅಧ್ಯಾಪಕರ ಹುದ್ದೆಗೆ ಸೇರಿದರು. ನಂತರ ಬಾಸೆಲ್ ಮಿಷನ್ ಜ್ಯೂ. ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಚಾರ‍್ಯರಾಗಿ 1967ರಲ್ಲಿ ನಿವೃತ್ತಿ ಹೊಂದಿದರು.
ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಅವರು ‘ವರುಣಕುಂಜ’ ಚಟುವಟಿಕೆಗಳ ಕೇಂದ್ರವಾಗಿದ್ದರು. ಜ್ಯೂ. ಬಿ.ಎ.ನಲ್ಲಿದ್ದಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಸ್ಥಾನ’ ಎಂಬ ಪ್ರಬಂಧಕ್ಕೆ ಬಹುಮಾನ ಪಡೆದಿದ್ದರು. ಅವರ ಹಲವಾರು ಸಣ್ಣಕಥೆಗಳು, ಪ್ರಬಂಧಗಳು ಜೀವನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.
ಅವರ ಕಥಾಸಂಕಲನ-ಫಲ ಸಂಚಯ, ಚಂದ್ರ-ತಾರೆ, ಬಾಗಿಲು ತೆರೆದಿತ್ತು, ದಯಾಸಾಗರ, ದೀಪವೊಂದು, ನಿನಗೊಂದು ಮಾತು. ನಾಟಕ-ಬಾಡಿಗೆಯ ಮನೆ, ಅಮೃತಮತಿ, ದೀಪಾವಳಿ, ಇದ್ದು ಜಯಿಸಬೇಕು, ಕಂದನ ಕಾದುಕೊ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಇತಿ-ಶ್ರೀ, ಕ್ರೂರ ಹಂಬಲ, ಅಂದಿನ ವಸಂತ ತಲೆಕೆಳಕಾಗಿ ನಿಂತ ಎಂಬ ಕಾದಂಬರಿಗಳನ್ನೂ ರಚಿಸಿದ್ದಾರೆ. ಸಾಹಸ ಜೀವಿಗಳು, ಜನಪದ ಕಥೆಗಳು, ರಾಜೇಂದ್ರ ಪ್ರಸಾದ, ಹೋರಾಟದ ವೀರರು, ಕಿಟಲ್, ಸಾಹಿತಿಗಳೊಡನೆ ಸರಸ ಮುಂತಾದ ಜೀವನ ಚರಿತ್ರೆಯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಮ.ಗು. ಹಂದ್ರಾಳ, ಇತಿಹಾಸಮತ್ತು ಸಂಸ್ಕೃತಿ, ದೇಶ ಮತ್ತು ಜನರು, ಆಲೂರು ವೆಂಕಟರಾಯರ ಅಪ್ರಕಟಿತ ಲೇಖನಗಳ ಸಂಕಲನ ಸೇರಿ ಸುಮಾರು 54 ಕೃತಿಗಳು ಪ್ರಕಟಗೊಂಡಿವೆ. ಮಕ್ಕಳ ವಿಶ್ವಕೋಶ ಜ್ಞಾನಗಂಗೋತ್ರಿ ಸಹಾಯಕ ಸಂಪಾದಕರಾಗಿ, ಧಾರವಾಡ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ, ಇಂಡಿಯಾ ಗೆಜೆಟಿಯರ್ ಭಾಷಾಂತರದ ಕಾರ್ಯ ನಿರ್ವಾಹಕ ನಿರ್ದೇಶಕರೂ ಆಗಿದ್ದರು. ಧಾರವಾಡದಲ್ಲಿ ಕಥೆಗಾರರ ಸಮ್ಮೇಳನ, ಬೆಳಗಾವಿ ಜಾನಪದ ಸಮ್ಮೇಳನ, ಹಾಗೂ ಆಲೂರು ವೆಂಕಟರಾಯರ ಶತಮಾನೋತ್ಸವಗಳ ರೂವಾರಿಗಳಾಗಿದ್ದರು. 1965 ರಲ್ಲಿ ಕಾರವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕಥಾಗೋಷ್ಠಿ ಅಧ್ಯಕ್ಷತೆ. ಧಾರವಾಡದಲ್ಲಿ ನಡೆದ ಮಕ್ಕಳ ಸಾಹಿತ್ಯ ಅಕಾಡಮಿಯ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿ -ಗೌರವಗಳು ಸಂದಿವೆ. 10-10-1993 ರಂದು ನಿಧನರಾದರು.