ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರರಾಗಿರುವ ಯು.ಪಿ.ಪುರಾಣಿಕ ಅವರು ಮೂಲತಃ ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದವರಾದರೂ, ಬೆಂಗಳೂರಿನಲ್ಲಿ ನೆಲೆಸಿದವರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕರು ಹಾಗೂ ದಿ ಬೆಂಗಳೂರು ಸಿಟಿ ಕೋ -ಆಪರೇಟಿವ್ ಬ್ಯಾಂಕ್ ನ ವೃತ್ತಿಪರ ನಿರ್ದೇಶಕರು. ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ ವಿಚಾರಗಳಲ್ಲಿ ಸುಮಾರು ಒಂದು ಸಾವಿರ ಅಂಕಣ ಲೇಖನಗಳನ್ನು ಕನ್ನಡದಲ್ಲಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೇ ವೇಳೆ ಬ್ಯಾಂಕಿಂಗ್ ಹಾಗೂ ಹಣಕಾಸು ತಜ್ಞರಾಗಿ ಚಂದನ ಟಿವಿ ಹಾಗೂ ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮವನ್ನೂ ನಡೆಸುತ್ತಿದ್ದರು.
ಪುರಾಣಿಕ ಅವರು ಕನ್ನಡದಲ್ಲಿ ಸರಳ ಸುಂದರ ಹಾಗೂ ಸ್ಪಷ್ಟ ಬರವಣಿಗೆಯಿಂದಾಗಿ ಲಕ್ಷಾಂತರ ಕನ್ನಡಿಗರ ಜೀವನದಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ’ಪ್ರಜಾವಾಣಿ ಪತ್ರಿಕೆ’ಯಲ್ಲಿ ಪ್ರಾರಂಭವಾದ ಇವರ ಪ್ರಶ್ನೋತ್ತರ ಮಾಲಿಕೆ ಅಪಾರ ಓದುಗರ ಮೆಚ್ಚುಗೆ ಗಳಿಸಿತ್ತು.
ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾಸಿತ್ತು. ಬೆಂಗಳೂರಿನಲ್ಲಿ ನಡೆದ ಅಖಿಲ ಹವ್ಕಕ ವಿಶ್ವ ಸಮ್ಮೇಳನದಲ್ಲಿ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
2022ರ ಜನವರಿ 6ರಂದು ನಿಧನರಾದರು.
ಕೃತಿಗಳು: ಹಣಕಾಸು ಹಿತೈಷಿ, ಯಾರಿಗೆ ಬೇಡ ದುಡ್ಡು!?, ವಿಶ್ವಗುರು ಶ್ರೀ ರಾಘವೇಂದ್ರರು, ಉಳಿತಾಯದ ಉಪಾಯಗಳು