ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು.
ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ಇಪ್ಪತ್ತು ಕಾದಂಬರಿಗಳನ್ನು ಪ್ರಕಟಿಸಿದರು.
ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ.
ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ಕಾದಂಬರಿಗೆ, ದೇವರಾಜ ಬಹದ್ದೂರ್ ಪ್ರಶಸ್ತಿ 'ಸಮಸ್ಯೆಯ ಮಗು' ಕಥಾಸಂಕಲನಕ್ಕೆ ಲಭಿಸಿದೆ. ತ್ರಿ
ತ್ರಿವೇಣಿ ಕಾದಂಬರಿಯ ಸೃಷ್ಟಿಯಲ್ಲಿ ಮನಶ್ಯಾಸ್ತ್ರದ ತಿಳುವಳಿಕೆಯನ್ನು ಉದ್ದೇಶಪೂರ್ವಕವಾಗಿ ಬಳಸಲು ಪ್ರಯತ್ನಿಸಿದ್ದಾರೆ. ಮನಶಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೇತ್ರವಾಗುವ ಮುನ್ನವೇ ತ್ರಿವೇಣಿಯವರು ಮನುಷ್ಯನ ಮನಸ್ಸನ್ನು ಅರ್ಥಮಾಡಿಕೊಂಡು ತಮ್ಮ ಕಾದಂಬರಿಯಲ್ಲಿ ಪಾತ್ರಗಳ ಸ್ವಭಾವ ನಡೆ ನುಡಿಗಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪಾತ್ರಗಳನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸಿದರು. ತ್ರಿವೇಣಿಯವರ ‘ಬೆಕ್ಕಿನ ಕಣ್ಣು, ಮತ್ತು ‘ಶರಪಂಜರ, ಎರಡು ಮುಖ್ಯವಾದ ಮನೋವೈಜ್ಞಾನಿಕ ಕಾದಂಬರಿಯಾಗಿವೆ. ಮುಖ್ಯವಾಗಿ ಗಂಡು ಹೆಣ್ಣಿನ ಸಹಜೀವನದ ಶ್ರೀಮಂತಿಕೆಯನ್ನು ಮತ್ತೆಮತ್ತೆ ಚಿತ್ರಿಸುತ್ತಾರೆ. ಪುರುಷನ ಪ್ರೇಮ, ತಾಯ್ತನದ ಹಿಗ್ಗು, ಇವನ್ನು ಹೆಣ್ಣು ಎಷ್ಟರ ಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುತ್ತಾರೆ.
ತ್ರಿವೇಣಿ ಅವರು 19 ಜುಲೈ1963 ರಂದು ನಿಧನರಾದರು.