ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ತಾಳ್ತಜೆ ವಸಂತಕುಮಾರ ವಿಮರ್ಶೆ ಹಾಗೂ ಸಾಂಸ್ಕೃತಿಕ ಸಂಶೋಧನೆಯಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಈಗಿನ ಕೇರಳದ ಕಾಸರಗೋಡಿನ ತಾಳ್ತಜೆಯವರಾದ ಅವರು ಜನಿಸಿದ್ದು 1948 ಡಿಸೆಂಬರ 27ರಂದು. ಸ್ನಾತಕೋತ್ತರ ಪದವಿ (ಎಂಎ ಕನ್ನಡ) ಪಡೆದಿರುವ ಅವರು ಸಿದ್ಧಪಡಿಸಿದ ’ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ಸದ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ.
ಹರಿಹರನ ರಗಳೆಗಳು, ಸಿಂಗಾರ, ಆಯ್ದ ಲೇಖನಗಳು (ವಿಮರ್ಶೆ), ದಾಸಸಾಹಿತ್ಯ, ಹಣತೆಗೆ ಹನಿ ಎಣ್ಣೆ (ಸಾಂಸ್ಕೃತಿಕ ಸಂಶೋಧನೆ), ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಶಿವರಾಮ ಕಾರಂತ (ಜೀವನ ಚರಿತ್ರೆ) ಅವರ ಪ್ರಕಟಿತ ಕೃತಿಗಳು.
ಕವಿ ಅರವಿಂದ ನಾಡಕರ್ಣಿ ಅವರ ಸಾಹಿತ್ಯ ಕುರಿತ ’ಬೇರು-ಬಿಳಲು’ ಹಾಗೂ ಜನಪರ ನಿಲುವು, ಸೋಪಾನ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಸಂಶೋಧನ ರಂಗ, ಸಾರಸ, ಸಾಂಸ್ಕೃತಿಕ ಸಂಶೋಧನೆ, ಮುತ್ತಿನ ಸತ್ತಿಗೆ ಅವರ ಸಂಶೋಧನಾತ್ಮಕ ಕೃತಿಗಳು. ಅವರ ’ಬೌದ್ದಾಯನ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಗೊರೂರು ಸಾಹಿತ್ಯ ಪ್ರಶಸ್ತಿ ಸಂದಿವೆ.