ಸಾಹಿತಿ ಸೂರ್ಯನಾಥ ಕಾಮತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ತಂದೆ ಉಪೇಂದ್ರಕಾಮತ್, ತಾಯಿ ಪದ್ಮಾವತಮ್ಮ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸ್ನಾತಕೋತ್ತರ ಪದವಿ ಗಳಿಕೆ. ಪ್ರಾಧ್ಯಾಪಕ, ಸಂಶೋಧಕ, ಇತಿಹಾಸ ಅವರ ಆಸಕ್ತಿಯ ಕ್ಷೇತ್ರಗಳು. ‘TULUVA IN VIJAYANAGAR TIMES’ ಅವರ ಪಿಎಚ್.ಡಿ. ಪ್ರಬಂಧ. ಉತ್ಥಾನ ಪತ್ರಿಕೆಯ ಸಹ ಸಂಪಾದಕರಾಗಿ, ಪ್ರಜಾವಾಣಿ ಸಹ ಸಂಪಾದಕರಾಗಿದ್ದರು.
‘ಕರ್ನಾಟಕದ ಇತಿಹಾಸ ಮಂಜರಿ, ಕರ್ನಾಟಕದ ವೀರರಾಣಿಯರು, ವಿಜಯನಗರ ಕಥೆಗಳು, ಕೆಳದಿಯ ಚೆನ್ನಮ್ಮಾಜಿ, ವೀರರಾಣಿ ಅಬ್ಬಕ್ಕ’ ಅವರ ಪ್ರಮುಖ ಕೃತಿಗಳು. ಥೇಮ್ಸ್‌ನಿಂದ ಗಂಗೆಗೆ, ಈಸಿ ಜೈಸಿದರು (ಸಾಮಾಜಿಕ) ; ಕೃಷ್ಣದೇವರಾಯ, ಮುಳ್ಳಿನಹಾದಿ (ಐತಿಹಾಸಿಕ) - ಅವರ ಕಾದಂಬರಿಗಳು. ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಅವರ ಜೀವಮಾನ ಕೃತಿ ಎಂದರೆ ತಪ್ಪಾಗಲಾರದು. ಸಮಗ್ರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ವಿವರ ಹಾಗೂ 850 ಯೋಧರ ಸಂಗ್ರಾಮದ ಪ್ರತ್ಯಕ್ಷ ದರ್ಶಿಗಳ ಸ್ಮೃತಿ ಈ ಕೃತಿಯಲ್ಲಿ ದಾಖಲಿಸಿರುವುದು ಒಂದು ದಾಖಲೆ. ಸ್ವಾತಂತ್ರ್ಯ ಹೋರಾಟದ ಹಲವು ಮುಖಗಳು ಅವರ ವೈಚಾರಿಕ ಪ್ರಬಂಧ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನ ಪ್ರಶಸ್ತಿ, ತುಳು ಅಕಾಡಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.