About the Author

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು.

ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ನಿರ್ಣಯ ಮುಂತಾದ ಕಥೆಗಳು ರಾಜ್ಯದ ವಿವಿಧ ಪತ್ರಿಕೆಗಳ ಸ್ಪರ್ಧೆಯಲ್ಲಿ ಬಹಮಾನಗಳಿಸಿವೆ. ಸಣ್ಣ ಕಥೆಗಳಂತೆ ಹಲವಾರು ಹಾಸ್ಯ ಲೇಖನಗಳನ್ನೂ ಬರೆದಿದ್ದು ಇವು ಪ್ರಜಾಮತ, ಸುಧಾ, ಸಂಯುಕ್ತ ಕರ್ನಾಟಕ, ಕಸ್ತೂರಿ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ರೂಪವತಿ ಭಾರ್ಯ ಶತ್ರು, ದುನಿಯಾ ಗೋಲ ಹೈ, ನಮಸ್ಕಾರ ಅಪಾಯದ ಸಂಕೇತ, ಉಳಿತಾಯ ಪ್ರಯಾಸ ಮುಂತಾದ ಹಾಸ್ಯ ಲೇಖನಗಳು. ಪತ್ರಿಕೆಗಳಿಗೆ ಆಗಾಗ್ಗೆ ಬರೆಯುತ್ತಿದ್ದ ರಸವತ್ತಾದ ಅಪರಾಧಿ ವರದಿ ಲೇಖನಗಳು. ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಭಯಾನಕ, ರಹಸ್ಯಮಯ, ಮೈನವಿರೇಳಿಸುವ ಘಟನೆಗಳನ್ನು ಸತ್ಯಕ್ಕೆ ಧಕ್ಕೆ ಬರದಂತೆ, ಪೊಲೀಸ್ ಇಲಾಖೆಯ ಅವಕೃಪೆಗೂ ಒಳಗಾಗದಂತೆ ಬರೆಯುವಲ್ಲಿ ಸಿದ್ಧಹಸ್ತರೆನಿಸಿದ್ದು,  ಕೆಲವು ಪತ್ರಿಕೆಯ ಸಂಪಾದಕರುಗಳು ಇಂಥ ಲೇಖನಗಳನ್ನು ಬರೆಯಲು ಆಹ್ವಾನಿಸುತ್ತಿದ್ದರು.

ಜೈಲಿನ ಕಥೆಗಳನ್ನು ಆಧರಿಸಿ ‘ಸುಧಾ’ ವಾರಪತ್ರಿಕೆಗೆ ಬರೆದ ‘ಮೃತ್ಯುವಿಗೆ ಮುತ್ತಿಟ್ಟವರು’ ಲೇಖನ ಮಾಲೆಯು ಇವರಿಗೆ ಹೆಸರು ತಂದುಕೊಟ್ಟ ಸಾಹಿತ್ಯ ಪ್ರಕಾರವಾಗಿತ್ತು. ಪತ್ತೇದಾರಿ ಕಾದಂಬರಿ ಕ್ಷೇತ್ರ. 1979ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’, ‘ಅಗ್ನಿ ಪರ್ವತ’ ಮುಂತಾದ 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹಲವು ಬಗೆಯ ಸಾಧನೆಗಳನ್ನು ಮಾಡಿದ್ದ ಸುದರ್ಶನ ದೇಸಾಯಿಯವರಿಗೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ 2012ರ ಜುಲೈ 31 ರಂದು ನಿಧನರಾದರು.

ಸುದರ್ಶನ ದೇಸಾಯಿ

(14 Jan 1945-31 Jul 2012)