ಸೃಜನ್ ಎಂದೇ ಹೆಸರಾದ ಪಿ. ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನಲ್ಲಿ. ಓದಿದ್ದು ಕೊಪ್ಪಳ, ಸಂಡೂರು ಮತ್ತು ಬಳ್ಳಾರಿಯಲ್ಲಿ.
ಬಿಇ ಸಿವಿಲ್ ಪದವೀಧರರಾದ ಸೃಜನ್ ಸುಮಾರು 15 ವರ್ಷಗಳ ಕಾಲ ಎಂಜಿನಿಯರ್ ಆಗಿ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಳೆತನದಿಂದಲೂ ಕಲೆ,ಸಿನಿಮಾ ಮತ್ತು ಸಾಹಿತ್ಯದ ಕುರಿತು ಒಲವು. 1988ರಿಂದಲೂ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ಇವರು, ಕಾಸರಗೋಡು,ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಕಂಡಿವೆ. ಮುಂಬೈನ ’ಜಿಂದಾಲ್ ಆರ್ಟ ಫೌಂಡೇಶನ್’ ನಡೆಸಿದ ಕಲಾಸ್ಪರ್ಧೆಯಲ್ಲಿ ’ ಅಪನಾ ಆರ್ಟಿಸ್ಟ್’ ಪುರಸ್ಕಾರಕ್ಕೆ ಭಾಜನರಾದ ಸೃಜನ್ ಅವರ 18 ಕಲಾಕೃತಿಗಳಿಗೆ ಶಾಶ್ವತ ಡಿಸ್‌ಪ್ಲೆ ಗೌರವ ದೊರೆತಿದೆ.
ಅನುವಾದ ಇವರ ಪ್ರಿಯವಾದ ಕೆಲಸ. ಕನ್ನಡದಿಂದ ತೆಲುಗಿಗೆ ಮತ್ತು ತೆಲುಗಿನಿಂದ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ರಾಮಗೋಪಾಲ್ ವರ್ಮ ’ನನ್ನಿಷ್ಟ’,ವೋಡ್ಕಾ ವಿತ್ ವರ್ಮ’,ವೇಂಪಲ್ಲಿ ಷರೀಫರ ’ಜುಮ್ಮಾ’, ಕೆ.ಚಂದ್ರಶೇಖರರಾವ್ ಅವರ ’ನಲ್ಲ ಮಿರಿಯಂ ಚೆಟ್ಟು’ ಕನ್ನಡಕ್ಕೆ ಸಶಕ್ತವಾಗಿ ಅನುವಾದಿದ್ದಾರೆ. ಅಗ್ನಿ ಶ್ರೀಧರ್ ಅವರ ’ಎದೆಗಾರಿಕೆ’, ಜಿ.ಎನ್ ಮೋಹನ್ ಅವರ ’ನನ್ನೊಳಗಿನ ಹಾಡು ಕ್ಯೂಬಾ’ ತೆಲುಗಿಗೆ ಅನುವಾದಿಸಿದ್ದಾರೆ.
5೦೦೦ ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿರುವ ಸೃಜನ್ ’ಭಾವನಾ’ ’ಹೊಸತು, ಮಯೂರ’, ಪ್ರಜಾವಾಣಿ ಉದಯವಾಣಿ ಸೇರಿದಂತೆ ಹಲವು ಕನ್ನಡದ ಪತ್ರಿಕೆಗಳಿಗೆ ಚಿತ್ರಗಳನ್ನು ರಚಿಸುತ್ತಾ ಬಂದಿದ್ದಾರೆ. ನೂರಾರು ಕನ್ನಡದ ಕೃತಿಗಳಿಗೆ ಮುಖಪುಟಗಳನ್ನು ರಚಿಸಿರುವ ಇವರು ನಮ್ಮ ಮಧ್ಯದ ಸೃಜನಶೀಲ ಕಲಾವಿದರು.
ಅನುವಾದಿತ ’ನನ್ನಿಷ್ಟ’ ಕೃತಿಗೆ 2014 ಸಾಲಿನ ಸೇಡಂನ ಅಮ್ಮ ಪ್ರತಿಷ್ಠಾನ ನೀಡುವ ’ಅಮ್ಮ’ ಪ್ರಶಸ್ತಿ ಲಭಿಸಿದೆ. ’ಜುಮ್ಮಾ’ ಕೃತಿಗೆ ೨೦೧೮ ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್-ವಾಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಲಭಿಸಿದೆ.