ಶ್ರೀರಾಮ ದಿವಾಣರು (ಜನನ 1974) ಶಾಲಾ ದಿನಗಳಿಂದಲೇ ಸಾಹಿತ್ಯದ ಪ್ರೀತಿ ಬೆಳೆಸಿಕೊಂಡದವರು. ಸ್ವತಃ ಕವಿತೆ, ಚುಟುಕು, ಲೇಖನಗಳನ್ನು ಬರೆಯುತಿದ್ದ ಶ್ರೀರಾಮ ದಿವಾಣರು 'ಕಾಸರಗೋಡು ದರ್ಪಣ’ ಎಂಬ ಸಾಹಿತ್ಯಕ ಮಾಸ ಪತ್ರಿಕೆಯನ್ನು ಸಂಪಾದಕ ಪ್ರಕಾಶಕರಾಗಿ ಗಣಪತಿ ದಿವಾಣ ಹಾಗೂ ಅಣ್ಣ ರವಿರಾಜ ದಿವಾಣ ಇವರ ಸಹಕಾರದಿಂದ ಕೆಲವು ಕಾಲ ನಡೆಸಿದ್ದರು. ನಂತರ ಪೂರ್ಣಾವಧಿ ಪತ್ರಿಕಾ ವರದಿಗಾರರಾಗಿ ವಿವಿಧ ಪತ್ರಿಕೆಗಳಲ್ಲಿ ದುಡಿದರಲ್ಲದೆ, 'ಕರಾವಳಿ ರಿಪೋರ್ಟರ್' ಎಂಬ ಪತ್ರಿಕೆಯನ್ನೂ ನಡೆಸಿದ್ದುಂಟು. ಉಡುಪಿಯಲ್ಲಿ ಕೇಬಲ್ ಟಿವಿ ನ್ಯೂಸ್ ಛಾನೆಲ್ (ಉಡುಪಿ ವಾರ್ತೆ) ಆರಂಭಿಸಿದ್ದು ಅವರ ಹೆಗ್ಗಳಿಕೆ. ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ದಿವಾಣರು ಈಗ 'ಉಡುಪಿ ಬಿಟ್ಸ್ ಡಾಟ್ ಇನ್' ಎಂಬ ಅಂತರ್ಜಾಲದ ಸುದ್ದಿವಾಹಿನಿಯನ್ನು ನಡೆಸುತ್ತಿದ್ದಾರೆ. ಶ್ರೀರಾಮ ದಿವಾಣರು ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲೆಗಾಗಿ ತಮ್ಮ ತಂದೆ, ಸಾಹಿತಿ - ಪತ್ರಕರ್ತ ಗಣಪತಿ ದಿವಾಣರ ಕುರಿತು ಕೃತಿಯನ್ನು ಬರೆದುಕೊಟ್ಟಿದ್ದಾರೆ.