ಮಲೆನಾಡಿಗರ ಹೆಮ್ಮೆಯ ನಡೆದಾಡುವ ಶಬ್ದಕೋಶ ಎಂದೇ ಪ್ರಖ್ಯಾತರಾದವರು ನಿಟ್ಟೂರಿನ ಶಾಂತಾರಾಮ ಪ್ರಭು. 37 ವರ್ಷ ಇಂಗ್ಲಿಷ್ ಉಪನ್ಯಾಸಕರಾಗಿದ್ದು, ನಿಟ್ಟೂರು ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದಾ ಕ್ರಿಯಾಶೀಲರು,ನಿಗರ್ವಿಗಳು ಹಾಗು ನಿರಂತರ ಅಧ್ಯಯನ ಶೀಲರಾದ ಅವರು ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ಯಕ್ಷ ಗಾನ ಕ್ಷೇತ್ರದಲ್ಲಿ ಕೊಡಲ್ಪಡುವ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದ್ದು, ಯಕ್ಷ ಸ್ವರ್ಣ,ಯಕ್ಷ ವಶಿಷ್ಟ ಹಾಗು ಉಡುಪಿಯ ಕಲಾರಂಗ ಸಂಸ್ಥೆ ನೀಡಿದ 'ಪೆರ್ಲ ಕೃಷ್ಣಭಟ್' ಪ್ರಶಸ್ತಿಗಳು ಪ್ರಮುಖವಾದವು. ತಮ್ಮ ಪೂರ್ಣ ಜೀವನವನ್ನು ಸಾಹಿತ್ಯದ ಅಧ್ಯಯನ ಹಾಗು ಯಕ್ಷ ಗಾನ ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕೃಷಿ ಇಂಜಿನಿಯರಿಂಗ್ ಪಾರಿಭಾಷಿಕ ಶಬ್ದಕೋಶ’, `ಎ. ಎನ್. ಮೂರ್ತಿರಾವ್’, ‘ಊರು ಕಂಡಂತೆ ಅನಂತಮೂರ್ತಿ’ ಅವರ ಪ್ರಮುಖ ಕೃತಿಗಳು.