About the Author

ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೊಂದು ಗೌರವ ತಂದ ಎಂದೇ ಖ್ಯಾತಿಯ ಸಾಹಿತಿ ಎಸ್.ಎನ್. ಶಿವಸ್ವಾಮಿ (ಸೇಲಂ ನಂಜುಂಡಯ್ಯ ಶಿವಸ್ವಾಮಿ) ಚಿಕ್ಕಬಳ್ಳಾಪುರ ಮೂಲದವರು. ತಂದೆ ಸೇಲಂ ನಂಜುಂಡಯ್ಯ, ತಾಯಿ ಶಾರದಮ್ಮ. ಬೆಂಗಳೂರು  ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವೀಧರರು.ಬರೋಡದ ಕಾಲೇಜೊಂದರಲ್ಲಿ ಝಾಆಲಜಿ ಬೋಧನೆ. ಆದರೆ, ಅಲ್ಲಿಯ ರಾಜಕೀಯದಿಂದ ಬೇಸತ್ತು ಬಂದರು. ಆಲ್‌ ಇಂಡಿಯಾ ರೇಡಿಯೋ. ‘ಫೆಡರಲ್‌ ರಿಪಬ್ಲಿಕ್‌ ಸರ್ವೀಸ್‌ ಕಮೀಷನ್‌’ (ಆಗ ಇದ್ದುದು) ನಿಂದ (1944) ಆಯ್ಕೆಯಾಗಿ ಸಹಾಯಕ ಕಾರ್ಯಕ್ರಮ ಅಧಿಕಾರಿಯಾದರು. ಮದರಾಸಿನ ಆಲ್‌ ಇಂಡಿಯಾ ರೇಡಿಯೊ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸಿದರು.  ಬೀಚಿಯವರ ಸ್ನೇಹ ದೊರೆತ ಮೇಲೆ ಅನೇಕ ಪ್ರಹಸನಗಳನ್ನು ಬರೆಸಿ ಪ್ರಸಾರ ಮಾಡಿದರು. ಮೈಸೂರು ಆಕಾಶವಾಣಿಗೆ ಬಂದಾಗ  ಅ.ನ.ಕೃ, ತ.ರಾ.ಸು. ನಿರಂಜನ, ಚದುರಂಗರ ಸ್ನೇಹ ಲಭ್ಯವಾಗಿತ್ತು. 

ಇವರು ಬರೆದ ನಾಟಕ ‘ಹೃದಯಾಂತರಾಳ. ಮತ್ತೊಂದು ನಾಟಕ “ಎಲ್ಲಿ ನನ್ನ ಕುದುರೆ ಹೋಯಿತು…..” ಇದರಲ್ಲಿ ಕುದುರೆಗಳ ದಾಂಧಲೆಗಳನ್ನೂ ಮಾತಿಲ್ಲದೆ ಶಬ್ದಗಳಲ್ಲೇ ನಿರೂಪಿಸಿದ ನಾಟಕ. ಮುಂಬೈ ಆಕಾಶವಾಣಿಯ ವಾಣಿಜ್ಯ ವಿಭಾಗಕ್ಕೆ ಸೇರ್ಪಡೆಯಾದರು. ಜಾಹೀರಾತಿನ ಕಲ್ಪನೆಯೇ ಇರದಿದ್ದ ಕಾಲದಲ್ಲಿ, ಸರಕುಗಳನ್ನು ಉತ್ಪಾದಿಸುವ ಕಂಪನಿಗಳನ್ನೂ ಸಂಪರ್ಕಿಸಿ, ಜಾಹೀರಾತು ನಿರ್ಮಿಸಿ, ಹಣಕಾಸು ವ್ಯವಹಾರದ ಜವಾಬ್ದಾರಿ ಹೊತ್ತು ರೇಡಿಯೋದಲ್ಲಿ ಅಳವಡಿಸಿದವರಲ್ಲಿ ಮೊದಲಿಗರು.  ದೂರದರ್ಶನ ಕೇಂದ್ರಕ್ಕೆ ಆಹ್ವಾನಿಸಿದಾಗ ಅಲ್ಲೂ ಲಾಭದಾಯಕವಾಗಿ ನಡೆಸಬಹುದೆಂಬುದನ್ನೂ ನಿರೂಪಿಸಿದರು. ಆದರೆ ಕೆಲವರ ಕೈವಾಡದಿಂದ ಕಿರಿಕಿರಿ ಎನಿಸಿ ರಾಜೀನಾಮೆ ನೀಡಿದರು. 

ವಿಕಟವಿನೋದಿನಿ, ನಗುವನಂದ ಮುಂತಾದ ಪತ್ರಿಕೆಗಳಿಗೆ ಖಾಯಂ ಬರಹಗಾರರಾದರು, ‘ಕಥೆಗಾರ’ ಎಂಬ ಪತ್ರಿಕೆಗೆ ‘ತುಂತುರು’ ಎಂಬ ಅಂಕಣವನ್ನು ಪ್ರಾರಂಬಿಸಿ ಪಿ.ಜಿ. ವುಡ್‌ಹೌಸ್‌ರ ಜೀವ್ಸ್‌ನನ್ನು ಜೀವಣ್ಣ ನನಗಾಗಿ ಬರೆದ ಅಂಕಣ ಬಹು ಪ್ರಸಿದ್ಧಿ ಪಡೆಯಿತು. ಇವರ ಮೊದಲ ಹಾಸ್ಯ ಲೇಖನಗಳ ಸಂಕಲನ ‘ಲಕ್ಕವಳ್ಳಿಯಲ್ಲಿ ಲಾಲಿ ಪಾಪ್ಸ್‌’ಗೆ (1949)  ಪುಂಗನೂರು ಪಾಪಯ್ಯ ಎಂಬ ವ್ಯಕ್ತಿಯನ್ನು ಸೃಷ್ಟಿಸಿ ‘ಪಾತಾಳದಲ್ಲಿ ಪಾಪಯ್ಯ’ ಎಂಬ ಅಂಕಣವನ್ನು ಕೊರವಂಜಿಗಾಗಿ ಬರೆದರು.  ಟೈಂಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗಾಗಿ ‘NAMSKARA SAAR’, ಫೀನಿಕ್ಸ್‌ (ಟಿವಿ ವಿಮರ್ಶೆ) ಮತ್ತು ಬೆಂಗಳೂರು ಸನ್‌ಗಾಗಿ ಡೈಲಿ ಕ್ವಿಜ್‌, ಟ್ಯೂನ್‌ ಫುಲ್‌ ಎನ್‌ಕೌಂಟರ್ಸ್ ಮುಂತಾದ ಅಂಕಣಗಳನ್ನು ನಿರ್ವಹಿಸಿದರು. ಲಕ್ಕವಳ್ಳಿಯಲ್ಲಿ ಲಾಲಿಪಾಪ್ಸ್‌ , ಏನೇ ಬರಲಿ ಕಮ್ಮಿ ಇರಲಿ,  ಷಾಕ್‌, ಷಾಕ್‌, ಷಾಕ್,  ಮನೆಯೊಳಗೊಬ್ಬ ಮಿಲ್ಟ್ರಿಮಾಮ,  ಬೂಸಾದಹನ,  ಜಾತ್ರೆಯಲ್ಲಿ ಜಾಗರಣೆ,  ಹಾಸ್ಯಾವತಾರ ಮತ್ತು ಕಡೆಯ ಸಂಕಲನ ಸಿನ್ಸಿನಾಟಿಯಲ್ಲಿ ಕರಿಬೇವಿನ ಸೊಪ್ಪು,  ಮುಂತಾದ ಸಂಕಲನಗಳಲ್ಲಿ ಸೇರಿವೆ.

ಸುಧಾವಾರ ಪತ್ರಿಕೆಯ ಕಾಲಂನಲ್ಲಿ ಇವರು ಬರೆದ ನಗೆಹನಿಗಳು, ಮತ್ತಷ್ಟೂ ಸೇರಿ ‘ನಗೆಮಿಂಚು’, ‘ನಗೆಗೊಂಚಲು’, ‘ನಗೆಮುಗಿಲು’ ಸಂಕಲನಗಳಲ್ಲಿ ಸೇರಿವೆ. ರೇಡಿಯೋಗಾಗಿ ಬರೆದ ನಾಟಕಗಳು-ಹೃದಯಾಂತರಾಳ (ಐದು ನಾಟಕಗಳು), ಶಬ್ದಬ್ರಹ್ಮನ ಶಿರ ಹೋಯಿತ್ತು ಮತ್ತು TNT (ಎಂಟುವರೆ ನಿಮಿಷದ ನಾಟಕ). ಇದಲ್ಲದೆ ‘ಗ್ರ್ಯಾಂಡ್‌ ಸ್ಲಾಮ್‌’ ರಾಷ್ಟ್ರೀಯ ಜಾಲದಲ್ಲಿ ಎಲ್ಲಿ ಭಾಷೆಗಳಲ್ಲೂ ಬಿತ್ತರಗೊಂಡ ವಿಡಂಬನೆಯ ನಾಟಕ, ‘ಮಹಾಸಾಮ್ರಾಜ್ಯ’ (ಐತಿಹಾಸಿಕ) ತೆಲುಗಿನಲ್ಲಿ ಪ್ರಸಾರವಾದ ಜನಪ್ರಿಯ ನಾಟಕ. ‘ಬಿಂದು’ ವೈಜ್ಞಾನಿಕ ಥ್ರಿಲ್ಲರ್ ನಾಟಕ. ನಿಯಾನ್‌ ಲೈಟ್‌ (ನಗೆ ನಾಟಕ). ಹೀಗೆ ಹೊಸತರ ಹುಡುಕಾಟದಲ್ಲೇ ಸದಾ ತೊಡಗಿದ್ದ, ದೇಶ ವಿದೇಶಗಳಲ್ಲಿ ಬಾನುಲಿ ಕುರಿತು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಗೌರವ ಪಡೆದ, ಹಾಸ್ಯಕ್ಕೆ ಮೀಸಲಾದ ‘ಪರಮಾನಂದ ಪ್ರಶಸ್ತಿ’ ಪುರಸ್ಕೃತರು. 2007ರ ಆಗಸ್ಟ್ 13 ರಂದು ನಿಧನರಾದರು. 

ಎಸ್.ಎನ್. ಶಿವಸ್ವಾಮಿ

(09 Feb 1920-13 Aug 2007)