ಮೂಲತಃ ವಿಜಯಪುರ ಜಿಲ್ಲೆಯ ಸಿದ್ದಪ್ಪ ಶಾಪೇಟಿ (ಎಸ್.ಬಿ.ಶಾಪೇಟಿ) ಅವರು ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಉಚ್ಛ ಶಿಕ್ಷಣ ಪಡೆದು ಅಲ್ಲಿಯೇ ಅಧ್ಯಾಪಕರಾದರು. ಇವರ ಕರ್ತವ್ಯ ದಕ್ಷತೆಯನ್ನು ಕಂಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ, ಇವರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಮಂತ್ರಿಸಿದಾಗ ಶಾಪೇಟಿ ಅವರು ಧಾರವಾಡಕ್ಕೆ ಬಂದು ನೆಲೆಸಬೇಕಾಯಿತು. ನಂತರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಯಾಗಿ ನೇಮಕ ಗೊಂಡು, ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಕಾರಣರಾದರು.ಅವರ ಕರ್ತವ್ಯನಿಷ್ಠೆ ಹಾಗೂ ಶಿಸ್ತು ಬದ್ಧ ಜೀವನವನ್ನುತಮ್ಮದೇ ಆದ ಆತ್ಮಕಥೆ-‘ಮೌನ ಮಾತನಾಡಿತು’ ಕೃತಿಯಲ್ಲಿ ಉಲ್ಲೇಖಿಸಿದ್ದು, ಇತರರಿಗೂ ಮಾದರಿಯಾಗಿದೆ.
ಬಾಲ್ಯದ ನೆನಪುಗಳು, ಕೊಲ್ಹಾಪುರ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ಹಾಗೂ ಸ್ನೇಹಸುಧೆ ಹೀಗೆ ಮೂರು ವಿಭಾಗಗಳಲ್ಲಿ ತಮ್ಮ ಜೀವನದ ಮಹತ್ವದ ಕ್ಷಣ,ವ್ಯಕ್ತಿ, ಘಟನೆ-ಸನ್ನಿವೇಶವನ್ನು ಸ್ಮರಿಸಿದ್ದಾರೆ. ಬಾಳಿನ ಸಾರ್ಥಕತೆ ಏನು? ನಿರೀಕ್ಷೆಯಂತೆ ಬಾಳು ಸಾಧ್ಯವಾಯಿತೆ? ಆತ್ಮಸಂತಪ್ತಿ ಇಲ್ಲದಿದ್ದರೂ ತಮಗಾದರೂ ಹಾಗೂ ಇತರರಿಗಾದರೂ ತೃಪ್ತಿಯಾಗುವಂತೆ ಬದುಕಿದೇನೆ? ಇಂತಹ ಪ್ರಶ್ನೆಗಳನ್ನು ಎತ್ತಿಕೊಂಡು ಆತ್ಮಕಥನ ಸಾಗುತ್ತದೆ. ಆತ್ಮಘಾತುಕ ಮನಸ್ಸಿನವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಲೇಖಕರು, ತಮ್ಮ ಆಡಳಿತಾವಧಿಯಲ್ಲಿ ಹಿರಿಯ ಅಧಿಕಾರಿಗಳು ಸಹ ತೀರಾ ಸಣ್ಣ ಮನಸ್ಸಿನವರಂತೆ ವರ್ತಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕ ಆಡಳಿತಾಧಿಕಾರಿಯೊಬ್ಬರ ಪ್ರಾಂಜಲ ಮನಸ್ಸಿನ ಆತ್ಮಕಥನವಿದು.