ತಮ್ಮ ವೈಚಾರಿಕ ಬರೆಹಗಳಿಂದ ಹೆಸರುವಾಸಿಯಾಗಿದ್ದ ಸಾಹಿತಿ-ವಾಗ್ಮಿ ರವಿ ರಾ.ಅಂಚನ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪುಪಾದೂರು ಮಡಂತೋಟದವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುಂಬೈನ ಅಂಧೇರಿಯ ನಿವಾಸಿಯಾಗಿದ್ದರು. ರಿಲಾಯನ್ಸ್ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ, ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು.
ವೈಚಾರಿಕ ಚಿಂತನೆಗಳಿಂದ ಕನ್ನಡ ನಾಡಿನ ಸಾಹಿತಿಗಳನ್ನು ಚಿಂತನೆಗೆ ಹಚ್ಚಿವಂತೆ ಮಾಡುವ ಲೇಖಕರಾಗಿದ್ದರು. ’ಯಕ್ಷರಂಗ’ ಅವರ ಮೊದಲ ಕೃತಿ. ಅವರು ಸುಮಾರು 21ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮಾಯಂದಲ್, ಕಲ್ಲುರ್ಟಿ ಅವರ ಇಂಗ್ಲಿಷ್ ಕೃತಿಗಳು. ಇವರ ಒಂದು ಕೃತಿ ಮರಾಠಿ ಅನುವಾದ ಗೊಂಡಿದೆ. ಮೂರು ಸಂಪಾದಿತ ಕೃತಿಗಳಾದರೆ ಉಳಿದವರು ಸಂಶೋಧನಾ ಮತ್ತು ಅಂಕಣ ಬರಹಗಳ ಕೃತಿಗಳಾಗಿವೆ.
ರವಿ ರಾ.ಅಂಚನ್ ಅವರ `ಊಳಿಗಮಾನ್ಯ ವ್ಯವಸ್ಥೆಗೆ ಸಿಡಿದ ಮಾಯಂದಲ್’, ’ತುಳುವರ ಯುಗ ಯಾತ್ರೆ’, ’ಮಹಾನಗರದಲ್ಲಿ ನಾಗಾರಾಧನೆ-ಔಚಿತ್ಯ ಪ್ರಜ್ಞೆ’, `ಸಾಮಾಜಿಕ ಕ್ರಾಂತಿ ಜೋತಿ-ಜೋತಿಟಾ ಫುಲೆ' ಮತ್ತು ’ಕಾನೂನು ಕ್ರಾಂತಿಯ ಕೈವಾರಿ-ರಾಜರ್ಷಿ ಶಾಹೂ ಛತ್ರಪತಿ' ಕೃತಿ, 'ತುಳುವರ ಯುಗಯಾತ್ರೆ' ಅವರ ಕೃತಿಗಳು.
ತುಳು-ಕನ್ನಡದ ಸೇವೆಗೈದು, ಸಾಮಾಜಿಕ, ಶೈಕ್ಷಣಿಕ ಸಂಘಸಂಸ್ಥೆಗಳು ಹಾಗೂ ಸಾಹಿತ್ಯ ಲೋಕಕ್ಕೆ ಅಮೂಲ್ಯ ಸೇವೆ ಸಲ್ಲಿಸಿ ವಿಧಿವಶರಾಗಿದ್ದ ರವಿ ಅಂಚನ್‌ರ ಪತ್ನಿ ಪ್ರಸಿದ್ಧ ಲೇಖಕಿ, ಶೈಲಜಾ ರವಿ ಅಂಚನ್ ಅವರ ವಾರ್ಷಿಕ ಸ್ಮರಣಾರ್ಥ ಶೈಲಜಾ ಅಂಚನ್ ಫೌಂಡೇಶನ್ ಆರಂಭಿಸಿದ್ದರು.
ವಿ. ರಾ. ಅಂಚನ್ ಅವರು ೬೧ ವಯಸ್ಸಿನಲ್ಲಿ 2017ಅಕ್ಟೋಬರ್ 28 ರಂದು ಹೃದಯಾಘಾತದಿಂದ ನಿಧನರಾದರು.