ರಂಜನಾ ನಾಯಕ ಅವರು ಹುಟ್ಟಿದ್ದು 21-01-1949 ಧಾರವಾಡದಲ್ಲಿ. ಎಂ.ಎಸ್ಸಿ ಪದವೀಧರೆಯಾದ ಅವರು ‘ಕೈದಿಗಳು, ಕಾಲಿನಡಿಯಲ್ಲಿ ಮೋಡ, ಪ್ರೀತಿ ಆವಿಯಾಗುವ ಮುನ್ನ’ ಎಂಬ ಕಾವ್ಯ ಸಂಕಲನಗಳು, ‘ತೆರೆ ಸರಿದಾಗ’ – ನಾಟಕ, ‘ಭಾಗೀರಥಿ ಬಾಯಿ ಪುರಾಣಿಕ’ ಹಾಗೂ ‘ಗೀತಾ ಕುಲಕರ್ಣಿ’ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ.
ಪ್ರಸಿದ್ಧ ಸ್ತ್ರೀವಾದಿ ಲೇಖಕಿ, ಧಾರವಾಡದ ಹಿರಿಯಕ್ಕ ಗೀತಾ ಕುಲಕರ್ಣಿ ಅವರ ಬದುಕು ಬರಹಗಳ ಕುರಿತಾದ ಕೃತಿಯನ್ನು ರಚಿಸಿರುವ ಶ್ರೀಮತಿ ರಂಜನಾ ನಾಯಕ ಅವರು ಗೀತಾ ಕುಲಕರ್ಣಿಯವರ ಮಗಳು ಹಾಗೂ ಸಂಘಟನೆಯಲ್ಲೂ, ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಪ್ರತಿಭಾವಂತ ಲೇಖಕಿ. ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಿಕ ಮಾನವಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾದ ಅರವಿಂದ ನಾಯಕರ ಕೈಹಿಡಿದು ಬೆಳಗಾವಿಯಲ್ಲಿ ನೆಲೆಸಿರುವ ರಂಜನಾ ನಾಯಕರು ಅಲ್ಲಿ ಕನ್ನಡ ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯ ಸಂವರ್ಧನೆಗಾಗಿ ಹಲವಾರು ಸಂಘಟನೆಗಳನ್ನು ಕಟ್ಟಿದ್ದಾರೆ.
ಅವರಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಹಾಗೂ ಇತರ ಬಹುಮಾನಗಳು ಸಂದಿವೆ.